ನೆಲ್ಯಾಡಿ: ಕರ್ತವ್ಯಕ್ಕೆ ಅಡ್ಡಿ, ಜೀವಬೆದರಿಕೆ ಆರೋಪ; ಮೆಸ್ಕಾಂ ಜೆಇ ದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

      ಶಿರಾಡಿ ಗ್ರಾ.ಪಂ. ಉಪಾಧ್ಯಕ್ಷ, ಸದಸ್ಯನ ಬಂಧನ, ಜಾಮೀನಿನ ಮೇಲೆ ಬಿಡುಗಡೆ

ನೆಲ್ಯಾಡಿ: ಸಾರ್ವಜನಿಕ ಶೌಚಾಲಯ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ವಿಚಾರದಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವಬೆದರಿಕೆ ಒಡ್ಡಿರುವ ಬಗ್ಗೆ ಮೆಸ್ಕಾಂ ನೆಲ್ಯಾಡಿ ಶಾಖಾ ಜೆಇ ರಮೇಶ್ ಎಂಬವರು ನೀಡಿದ ದೂರಿನ ಮೇರೆಗೆ ಶಿರಾಡಿ ಗ್ರಾ.ಪಂ.ಉಪಾಧ್ಯಕ್ಷ ಕಾರ್ತಿಕೇಯನ್ ಹಾಗೂ ಸದಸ್ಯ ಎಂ.ಕೆ.ಪೌಲೋಸ್‌ರವರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಇಬ್ಬರಿಗೂ ಜಾಮೀನು ಮಂಜೂರುಗೊಳಿಸಿದ್ದು ಇಬ್ಬರೂ ಬಿಡುಗಡೆಯಾಗಿದ್ದಾರೆ.

ಮೆಸ್ಕಾಂನ ನೆಲ್ಯಾಡಿ ಕಾರ್ಯ ಮತ್ತು ಪಾಲನ ಶಾಖೆಯಲ್ಲಿ ಕಿರಿಯ ಇಂಜಿನಿಯರ್ ಆಗಿರುವ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಹಿರೇಮಲ್ಲನ ಹೋಳೆ ಗ್ರಾಮದ ರಮೇಶ ಬಿ.,ಯವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ನ.25ರಂದು ಸಂಜೆ 6 ಗಂಟೆ ವೇಳೆಗೆ ಕರ್ತವ್ಯ ನಿಮಿತ್ತ ಕಡಬ ತಾಲೂಕಿನ ಶಿರಾಡಿ ಗ್ರಾಮದ ಗುಂಡ್ಯ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 75 ರ ಪಕ್ಕದಲ್ಲಿರುವ ಸಾರ್ವಜನಿಕ ಶೌಚಾಲಯ ಕಟ್ಟಡದ ವಿದ್ಯುತ್ ಸಂಪರ್ಕದ ಬಗ್ಗೆ ಪರಿಶೀಲನೆ ನಡೆಸುತ್ತಿರುವ ವೇಳೆ ಶಿರಾಡಿ ಗ್ರಾ.ಪಂ.ಉಪಾಧ್ಯಕ್ಷರಾಗಿರುವ ಕಾರ್ತಿಕೇಯನ್ ಹಾಗೂ ಸದಸ್ಯ ಎಂ.ಕೆ ಪೌಲೋಸ್‌ರವರು ಸ್ಥಳಕ್ಕೆ ಬಂದು ನನ್ನನ್ನು ಹಾಗೂ ನನ್ನ ಜೊತೆಯಲ್ಲಿದ್ದ ಇಲಾಖಾ ಸಿಬ್ಬಂದಿಗಳಾದ ರಜಾಕ್ ಮೌಲಾಸಾಬ ನದಾಫ್ ಮತ್ತು ಅಡಿವೆಪ್ಪ ಮಾದರರವರನ್ನು ಉದ್ದೇಶಿಸಿ ಸಾರ್ವಜನಿಕ ಶೌಚಾಲಯ ಕಟ್ಟಡದ ವಿದ್ಯುತ್ ಸಂಪರ್ಕದ ವಿಚಾರಕ್ಕೆ ಸಂಬಂಧಿಸಿ ಅವಾಚ್ಯ ಶಬ್ದಗಳಿಂದ ಬೈದು ಇಲಾಖಾ ಸಾರ್ವಜನಿಕ ಕರ್ತವ್ಯ ನಿರ್ವಹಿಸದಂತೆ ತಡೆಯೊಡ್ಡಿದ್ದಾರೆ. ಈ ವೇಳೆ ಎಂ.ಕೆ ಪೌಲೋಸ್‌ರವರು ಮೂವರನ್ನು ಜೋರಾಗಿ ದೂರಕ್ಕೆ ತಳ್ಳಿದ್ದು ಕಾರ್ತಿಕೇಯನ್‌ರವರು ನನ್ನ ಶರ್ಟಿನ ಕಾಲರ್ ಪಟ್ಟಿ ಹಿಡಿದು ಎಳೆದಾಡಿ ಕೈಯಿಂದ ಕುತ್ತಿಗೆಗೆ ಹೊಡೆದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರು ನೀಡಿದ್ದರು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 323, 353, 504 ,506ರಂತೆ ಪ್ರಕರಣ ದಾಖಲಾಗಿದೆ.

ಬಂಧನ/ಜಾಮೀನು:
ಮೆಸ್ಕಾಂ ಜೆಇಯವರು ನೀಡಿದ ದೂರಿನ ಮೇರೆಗೆ ಶಿರಾಡಿ ಗ್ರಾ.ಪಂ.ಉಪಾಧ್ಯಕ್ಷ ಕಾರ್ತಿಕೇಯನ್ ಹಾಗೂ ಸದಸ್ಯ ಎಂ.ಕೆ.ಪೌಲೋಸ್‌ರನ್ನು ಉಪ್ಪಿನಂಗಡಿ ಪೊಲೀಸರು ನ.25ರಂದು ರಾತ್ರಿ ಬಂಧಿಸಿ ನ.೨೬ರಂದು ಪುತ್ತೂರು ಕೋರ್ಟ್‌ಗೆ ಹಾಜರುಪಡಿಸಿದ್ದರು. ನ್ಯಾಯಾಲಯ ಇಬ್ಬರಿಗೂ ಜಾಮೀನು ಮಂಜೂರು ಮಾಡಿದ್ದು ಇಬ್ಬರೂ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

ಸುಳ್ಳು ಹೇಳಿ ಏನೂ ಆಗಬೇಕಿಲ್ಲ: ರಮೇಶ್
ಕಾರ್ತಿಕೇಯನ್ ಹಾಗೂ ಎಂ.ಕೆ.ಪೌಲೋಸ್‌ರವರು ಹಲ್ಲೆಗೈದು, ಜೀವ ಬೆದರಿಕೆಯೊಡ್ಡಿರುವುದು ನಿಜ. ಅವರ ವಿರುದ್ಧ ಸುಳ್ಳು ಕೇಸು ದಾಖಲಿಸಿ ಸಾಬೀತುಪಡಿಸುವಂತದ್ದು ಏನೂ ಇಲ್ಲ. ನಾನು ಅವರ ರಾಜಕೀಯ ಪ್ರತಿಸ್ಪರ್ಧಿಯೂ ಅಲ್ಲ ಎಂದು ಮೆಸ್ಕಾಂ ಜೆಇ ರಮೇಶ್‌ರವರು ಸ್ಪಷ್ಟಪಡಿಸಿದ್ದಾರೆ. ಗುಂಡ್ಯಕ್ಕೆ ಹೋಗಿದ್ದ ವೇಳೆ ಸಾರ್ವಜನಿಕ ಶೌಚಾಲಯದ ಕಟ್ಟಡಕ್ಕೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದುಕೊಂಡಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಅವರಲ್ಲಿ ವಿಚಾರಿಸಿದಾಗ ಲೈನ್‌ಮ್ಯಾನ್‌ಗೆ ಕೇಳಿಯೇ ಸಂಪರ್ಕ ಪಡೆದುಕೊಂಡಿದ್ದೇವೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಲೈನ್‌ಮ್ಯಾನ್‌ರನ್ನೇ ಸ್ಥಳಕ್ಕೆ ಕರೆಸಿ ವಿಚಾರಿಸಿದ್ದು ಅವರಿಗೆ ತಿಳಿದೇ ಇರಲಿಲ್ಲ. ಈ ವೇಳೆ ನಮ್ಮೊಳಗೆ ನಡೆದ ಮಾತುಕತೆಯ ವಿಚಾರವನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದ ವೇಳೆ ಅದನ್ನು ಕಾರ್ತಿಕೇಯನ್‌ರವರು ಕಿತ್ತುಕೊಂಡು ಮತ್ತೆ ಬೇರೆಯವರ ಮೂಲಕ ನೀಡಿದ್ದಾರೆ. ನನಗೆ ಹಾಗೂ ಇಲಾಖೆಯ ಸಿಬ್ಬಂದಿಗಳ ಮೇಲೆ ಹಲ್ಲೆಯೂ ನಡೆಸಿ, ಜೀವ ಬೆದರಿಕೆಯೊಡ್ಡಿದ್ದಾರೆ. ಇದು ಮೊಬೈಲ್ ವಿಡಿಯೋದಲ್ಲಿ ದಾಖಲಾಗಿದೆ ಎಂದು ಜೆಇ ರಮೇಶ್‌ರವರು ತಿಳಿಸಿದ್ದಾರೆ.

ಸುಳ್ಳು ಆರೋಪ: ಕಾರ್ತಿಕೇಯನ್
ಮೆಸ್ಕಾಂ ನೆಲ್ಯಾಡಿ ಶಾಖಾ ಜೆಇ ಹಾಗೂ ಇಲಾಖೆಯ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ, ಜೀವ ಬೆದರಿಕೆಯೊಡ್ಡಿರುವ ಆರೋಪ ಸುಳ್ಳು ಎಂದು ಶಿರಾಡಿ ಗ್ರಾ.ಪಂ.ಉಪಾಧ್ಯಕ್ಷ ಕಾರ್ತಿಕೇಯನ್‌ರವರು ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರ ಹಲವು ವರ್ಷಗಳ ಬೇಡಿಕೆಯಂತೆ ಗುಂಡ್ಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಾರ್ವಜನಿಕ ಶೌಚಾಲಯದ ಕಾಮಗಾರಿ ಅಂತಿಮ ಹಂತದಲ್ಲಿದೆ. ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಜನರೇಟರ್ ಬಳಸಿ ಹಾಗೂ ಸ್ಥಳೀಯ ನಿವಾಸಿಯೊಬ್ಬರ ಮನೆಯಿಂದ ವಿದ್ಯುತ್ ಸಂಪರ್ಕ ಪಡೆದುಕೊಂಡು ಕಾಮಗಾರಿ ಮಾಡಲಾಗಿದೆ. ಇದರ ಕ್ಲಿನಿಂಗ್ ಕೆಲಸ ಮಾತ್ರ ಬಾಕಿ ಇದ್ದು ಈ ಹಿನ್ನೆಲೆಯಲ್ಲಿ ಕಟ್ಟಡಕ್ಕೆ ಮೀಟರ್ ಅಳವಡಿಸುವ ಮೊದಲೇ ವಿದ್ಯುತ್ ಸಂಪರ್ಕ ಪಡೆದುಕೊಂಡು ಕೆಲಸ ಮಾಡಲಾಗುತ್ತಿತ್ತು. ಶೌಚಾಲಯವು ನನ್ನ ಅಂಗಡಿಯಿಂದ ೧೦೦ ಮೀ.ದೂರದಲ್ಲಿದ್ದು ಸಂಜೆ ಜನ ಸೇರಿರುವುದನ್ನು ಗಮನಿಸಿ ನಾನು ಅಲ್ಲಿಗೆ ಹೋಗಿದ್ದೇನೆ. ಈ ವೇಳೆ ಜೆಇ ರಮೇಶ್‌ರವರು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದು ಅವರು ಜೆಇ ಎಂದು ತಿಳಿಯದೇ ನಾನು ಅವರ ಕೈಯಿಂದ ಮೊಬೈಲ್ ತೆಗೆದುಕೊಂಡಿದ್ದು ಬಳಿಕ ಅವರು ಜೆಇ ಎಂದು ತಿಳಿದ ಮೇಲೆ ಅವರಿಗೆ ಕೊಟ್ಟಿದ್ದೇನೆ. ಅವರಿಗೆ ಹಾಗೂ ಇಲಾಖೆಯ ಸಿಬ್ಬಂದಿಗಳಿಗೆ ನಾವು ಹಲ್ಲೆ ನಡೆಸಿಲ್ಲ, ಜೀವ ಬೆದರಿಕೆಯೂ ಒಡ್ಡಿಲ್ಲ ಎಂದು ಕಾರ್ತಿಕೇಯನ್‌ರವರು ಸ್ಪಷ್ಟಪಡಿಸಿದ್ದಾರೆ.

ಸತ್ಯಕ್ಕೆ ದೂರವಾದ ವಿಚಾರ: ಎಂ.ಕೆ.ಪೌಲೋಸ್
ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆಯೊಡ್ಡಿದ್ದೇವೆ ಎಂದು ಆರೋಪಿಸಿ ಮೆಸ್ಕಾಂ ಜೆಇ ರಮೇಶ್‌ರವರು ಪೊಲೀಸರಿಗೆ ನೀಡಿರುವ ದೂರು ಸತ್ಯಕ್ಕೆ ದೂರವಾಗಿದೆ ಎಂದು ಶಿರಾಡಿ ಗ್ರಾ.ಪಂ.ಸದಸ್ಯ ಎಂ.ಕೆ.ಪೌಲೋಸ್‌ರವರು ಸ್ಪಷ್ಪಪಡಿಸಿದ್ದಾರೆ. ಗುಂಡ್ಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಾರ್ವಜನಿಕ ಶೌಚಾಲಯಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂಬಂಧ 1 ತಿಂಗಳ ಹಿಂದೆಯೇ ಮೆಸ್ಕಾಂಗೆ ಅರ್ಜಿ ಸಲ್ಲಿಸಿದ್ದೇವೆ. ಈ ನಿಟ್ಟಿನಲ್ಲಿ ಕಟ್ಟಡಕ್ಕೆ ಮೀಟರ್ ಅಳವಡಿಸಲು ಜೆಇ ರಮೇಶ್ ಹಾಗೂ ಗುತ್ತಿಗೆದಾರ ಅಭಿಲಾಷ್‌ರವರು ನ.೨೫ರಂದು ಸಂಜೆ ಸ್ಥಳಕ್ಕೆ ಬಂದಿದ್ದಾರೆ. ಇಂದೇ ಮೀಟರ್ ಅಳವಡಿಸುವ ಬಗ್ಗೆ ಮಾಹಿತಿ ತಿಳಿದು ಪವರ್‌ಮ್ಯಾನ್‌ರವರ ಅನುಮತಿ ಪಡೆದುಕೊಂಡು ಕಟ್ಟಡದ ಕ್ಲೀನಿಂಗ್ ಉದ್ದೇಶಕ್ಕಾಗಿ 1 ದಿನದ ಮಟ್ಟಿಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದೇವೆ. ಇದಕ್ಕೆ ಜೆ.ಇ.ಯವರು ಆಕ್ಷೇಪ ಸೂಚಿಸಿದ್ದರು. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಿರ್ವಹಿಸುತ್ತಿರುವ ಕಾರ್ಮಿಕರ ಗುಡಿಸಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂಬಂಧ ಗ್ರಾ.ಪಂ.ನಿಂದ 1 ಎನ್‌ಒಸಿ ನೀಡಿದ್ದೇವೆ. ಆದರೆ ಅಲ್ಲಿ 25 ರಿಂದ 30 ತಗಡು ಶೀಟ್‌ನ ಗೂಡುಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಅದರ ವಿರುದ್ಧ ಕ್ರಮ ಕೈಗೊಂಡು ಇಲ್ಲಿಗೆ ಬನ್ನಿ ಎಂದು ಜೆಇಯವರಿಗೆ ಹೇಳಿದ್ದೇನೆ. ಇದರ ಹೊರತು ಜೆಇ ಹಾಗೂ ಅವರ ಸಿಬ್ಬಂದಿಗಳಿಗೆ ಹಲ್ಲೆ, ಜೀವ ಬೆದರಿಕೆಯೊಡ್ಡಿಲ್ಲ ಎಂದು ಎಂ.ಕೆ.ಪೌಲೋಸ್ ಹೇಳಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.