- ರಕ್ತದಾನಕ್ಕಿಂತ ಶ್ರೇಷ್ಠ ದಾನ ಬೇರೊಂದಿಲ್ಲ: ಪ್ರಕಾಶ್ಚಂದ್ರ ರೈ ಕೈಕಾರ
ಪುತ್ತೂರು: ಶ್ರೇಷ್ಠ ದಾನಗಳಲ್ಲಿ ರಕ್ತದಾನ ಕೂಡ ಒಂದಾಗಿದೆ. ರಕ್ತ ಇಲ್ಲದಿದ್ದರೆ ಬದುಕುವು ಅಸಾಧ್ಯ. ಒಂದು ಜೀವಿಯ ಸಾವು ಬದುಕಿನ ಹೋರಾಟದಲ್ಲಿ ರಕ್ತ ಶ್ರೇಷ್ಠ ಪಾತ್ರ ವಹಿಸುತ್ತದೆ. ರಕ್ತದಾನ ಮಾಡುವುದರಿಂದ ಜೀವ ಉಳಿಸಬಹುದಾಗಿದೆ. ಕುಂಬ್ರ ವರ್ತಕರ ಸಂಘ ಆಯೋಜನೆ ಮಾಡಿದಂತಹ ರಕ್ತದಾನ ಶಿಬಿರ ಒಂದು ಒಳ್ಳೆಯ ಕಾರ್ಯಕ್ರಮವಾಗಿದೆ ಎಂದು ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಹೇಳಿದರು.
ಅವರು ಕುಂಬ್ರ ವರ್ತಕರ ಸಂಘದ ಆಶ್ರಯದಲ್ಲಿ ಬ್ಲಡ್ ಹೆಲ್ಪ್ಲೈನ್ ಕರ್ನಾಟಕ ಇದರ ಸಹಭಾಗಿತ್ವದಲ್ಲಿ ಮತ್ತು ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ಬ್ಲಡ್ ಬ್ಕಾಂಕ್ ಮಂಗಳೂರು ಇದರ ಸಹಕಾರದೊಂದಿಗೆ ಕುಂಬ್ರದ ರೈತ ಸಭಾಭವನದಲ್ಲಿ ನ.೨೮ ರಂದು ನಡೆದ ಬೃಹತ್ ರಕ್ತದಾನ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕುಂಬ್ರ ಮಾತೃಶ್ರೀ ಅರ್ಥ್ಮೂವರ್ಸ್ ಮಾಲಕ, ಉದ್ಯಮಿ ಮೋಹನ್ದಾಸ್ ರೈ ಮಾತನಾಡಿ, ಜೀವ ಉಳಿಸುವಲ್ಲಿ ರಕ್ತ ಪ್ರಮುಖ ಪಾತ್ರ ವಹಿಸುತ್ತದೆ. ಅಗತ್ಯ ಬಿದ್ದಾಗ ರಕ್ತದಾನ ಮಾಡಲು ನಾವು ಹಿಂಜರಿಯಬಾರದು ಎಂದು ಹೇಳಿ ಶುಭ ಹಾರೈಸಿದರು. ಮುಕ್ರಂಪಾಡಿ ಆಕರ್ಷಣ್ ಇಂಡಸ್ಟ್ರೀಸ್ ಮಾಲಕ ಕೆ.ಪಿ ಮುಹಮ್ಮದ್ ಸಾದಿಕ್ ಮಾತನಾಡಿ, ಜೀವಿ ಮತ್ತು ಜೀವ ಉಳಿಸುವ ಕೆಲಸ ರಕ್ತದಾನದಿಂದ ನಡೆಯುತ್ತದೆ ಆದ್ದರಿಂದ ನಾವು ರಕ್ತ ಕಂಡರೆ ಓಡುವವರಾಗದೆ ರಕ್ತ ಕೊಡುವವರಾಗಬೇಕು ಎಂದರು. ವರ್ತಕರ ಸಂಘದ ಗೌರವ ಸಲಹೆಗಾರ ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ ಮಾತನಾಡಿ, ರಕ್ತಕ್ಕೆ ಯಾವುದೇ ಜಾತಿ, ಮತ,ಧರ್ಮಗಳಿಲ್ಲ ರಕ್ತ ಎಲ್ಲರನ್ನು ಉಳಿಸುತ್ತದೆ. ರಕ್ತದಾಹ ನೀಗಿಸಲು ವ್ಯಕ್ತಿಯಿಂದ ಮಾತ್ರ ಸಾಧ್ಯವಿದೆ ಆದ್ದರಿಂದ ನಾವೆಲ್ಲರೂ ಸೌಹಾರ್ದತೆಯಿಂದ ಬದುಕಲು ನಮಗೆ ರಕ್ತ ಪಾಠ ಕಲಿಸಿಕೊಡಬೇಕಾಗಿದೆ ಎಂದರು. ಗೌರವ ಸಲಹೆಗಾರ ಚಂದ್ರಕಾಂತ ಶಾಂತಿವನ ಮಾತನಾಡಿ, ಅಗತ್ಯ ಬಿದ್ದಾಗ ಮಾತ್ರ ರಕ್ತದಾನ ಮಾಡುವುದು ಉತ್ತಮ. ಸಂಘ ಸಂಸ್ಥೆಗಳು ರಕ್ತದಾನಿಗಳ ಹೆಸರು,ವಿಳಾಸವನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಮೂಲಕ ಯಾರಿಗೆ ಅಗತ್ಯವಾಗಿ ರಕ್ತದ ಅವಶ್ಯಕತೆ ಇದೆಯೋ ಆ ಸಂದರ್ಭದಲ್ಲಿ ಈ ವ್ಯಕ್ತಿಗಳನ್ನು ಸಂಪರ್ಕಿಸಿ ರಕ್ತ ಕೊಡಿಸುವ ವ್ಯವಸ್ಥೆ ಮಾಡಬೇಕು ಎಂದರು. ಗೌರವ ಸಲಹೆಗಾರ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಮಾತನಾಡಿ, ಕುಂಬ್ರ ವರ್ತಕರ ಸಂಘವು ಸದಾ ಚಟುವಟಿಕೆಯಿಂದ ಕೂಡಿದ ಸಂಘವಾಗಿದೆ. ಹತ್ತು ಹಲವು ಸಮಾಜಮುಖಿ ಕೆಲಸಗಳು ಸಂಘದಿಂದ ನಡೆಯುತ್ತಿದೆ. ರಕ್ತದಾನದಂತಹ ಒಳ್ಳೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ವರ್ತಕ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್ಸುಂದರ್ ರೈ ಕೊಪ್ಪಳ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘ ನಡೆದು ಹಾದಿ ಮತ್ತು ಸಂಘದಿಂದ ನಡೆದ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ವರ್ತಕ ಸಂಘದ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರ ಸಭಾಧ್ಯಕ್ಷತೆ ವಹಿಸಿದ್ದರು. ಸುಮಾರು ೧೮೦ ಕ್ಕೂ ಅಧಿಕ ರಕ್ತದಾನ ಶಿಬಿರಗಳನ್ನು ನಡೆಸಿದ ಬ್ಲಡ್ ಹೆಲ್ಪ್ಲೈನ್ ಕರ್ನಾಟಕ ಇದರ ರಿಯಾಝ್ ಕಣ್ಣೂರ್, ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಮಂಗಳೂರು ಇದರ ವೈದ್ಯಾಧಿಕಾರಿ ಡಾ.ಕರಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವರ್ತಕ ಸಂಘದ ಪ್ರ.ಕಾರ್ಯದರ್ಶಿ ಅಝರ್ ಷಾ ಕುಂಬ್ರ ಸ್ವಾಗತಿಸಿದರು. ಪದ್ಮನಾಭ ಆಚಾರ್ಯ ಪ್ರಾರ್ಥಿಸಿದರು. ಸಂಘದ ಪದಾಧಿಕಾರಿಗಳಾದ ಪುರಂದರ ರೈ ಕೋರಿಕ್ಕಾರ್, ನಾರಾಯಣ ಪೂಜಾರಿ ಕುರಿಕ್ಕಾರ, ಮೆಲ್ವಿನ್ ಮೊಂತೆರೋ, ಉದಯ ಆಚಾರ್ಯ ಕೃಷ್ಣನಗರ, ಜಯರಾಮ ಆಚಾರ್ಯ, ಬಶೀರ್, ಸುಂದರ್ ರೈ ಮಂದಾರ, ಸಂಶುದ್ದೀನ್ ಎ.ಆರ್, ದಿವಾಕರ ಶೆಟ್ಟಿ, ಶರತ್ ರೈ ದೇರ್ಲ ಅತಿಥಿಗಳಿಗೆ ಶಾಲು ಹಾಕಿ ಸ್ವಾಗತಿಸಿದರು. ಭವ್ಯ ರೈ ವಂದಿಸಿದರು. ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ ಕಾರ್ಯಕ್ರಮ ನಿರೂಪಿಸಿದರು. ಪುತ್ತೂರು ಗ್ರಾಮಾಂತರ ಠಾಣಾ ಎಸ್.ಐ.ಉದಯರವಿಯವರು ರಕ್ತದಾನ ಶಿಬಿರಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.
` ವರ್ತಕರ ಸಂಘದಿಂದ ರಕ್ತದಾನ ಶಿಬಿರ ಮಾಡಬೇಕು ಎನ್ನುವ ಯೋಚನೆ ಇತ್ತು ಆ ಯೋಚನೆಗೆ ಎಲ್ಲಾ ವರ್ತಕರು ಮತ್ತು ಗ್ರಾಮಸ್ಥರು ಉತ್ತಮ ರೀತಿಯಲ್ಲಿ ಸಹಕಾರ ನೀಡುವ ಮೂಲಕ ಅದನ್ನು ಸಾಕಾರ ಮಾಡಿದ್ದಾರೆ. ಸಹಕರಿಸಿದವರಿಗೆ ಮತ್ತು ರಕ್ತದಾನ ಮಾಡಿದ ಎಲ್ಲಾ ರಕ್ತದಾನಿಗಳಿಗೂ ಸಂಘದ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ.’ – ಎಸ್.ಮಾಧವ ರೈ ಕುಂಬ್ರ, ಅಧ್ಯಕ್ಷರು ವರ್ತಕರ ಸಂಘ
ಪೊಲೀಸರು,ಮಹಿಳೆಯರು ಸೇರಿದಂತೆ 46 ಮಂದಿ ರಕ್ತದಾನ
ಶಿಬಿರದಲ್ಲಿ ವರ್ತಕ ಸಂಘದ ಪದಾಧಿಕಾರಿಗಳು ಹಾಗೂ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಸಿಬ್ಬಂದಿಗಳಾದ ಕ್ರೈಂ ಎಸ್.ಐ ಅಮೀನ್ ಅಖ್ತರ್ ಮತ್ತು ವಿನೋದ್, ಕುಂಬ್ರ ಅಂಗನವಾಡಿ ಕಾರ್ಯಕರ್ತೆ ಆಶಾಲತಾ ರೈ ಮತ್ತು ಅನುಷಾ ಸೇರಿದಂತೆ ಒಟ್ಟು 46 ಮಂದಿ ರಕ್ತದಾನ ಮಾಡಿದರು. ವರ್ತಕ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಸಹಿತ ಹಲವು ಮಂದಿ ರಕ್ತದಾನ ಮಾಡಿದರು.