ಪ್ರೇರಣಾ, ಸಿ.ಎಲ್.ಸಿಯಿಂದ ವಿದ್ಯಾರ್ಥಿನಿಗೆ ಕೃತಕ ಕೈ ಜೋಡಣೆ ಸಮಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

  • ಬದುಕು ಕೊಡುವ ಕಾಯಕ ಶ್ರೇಷ್ಟತೆಯ ದಾನದಲ್ಲೊಂದಾಗಿದೆ-ಮಠಂದೂರು

ಫುತ್ತೂರು: ರಾಷ್ಟ್ರಕವಿ ಕುವೆಂಪು ಹೇಳಿದಂತೆ ಮೊದಲು ನೀನು ಮಾನವನಾಗು ಎಂಬಂತೆ ಸಮಾಜದಲ್ಲಿನ ದೀನರು, ದಲಿತರು, ವಿಕಲಚೇತನರು, ಅಸಹಾಯಕರು ಇವರುಗಳಿಗೆ ಜೀವನಕ್ಕೆ ಪೂರಕವಾಗಿ ವಾತಾವರಣ ನಿರ್ಮಾಣ ಮಾಡುತ್ತಾ ಅವರುಗಳಿಗೆ ಬದುಕು ಕೊಡುವ ಕಾಯಕ ಮಾಡುವುದು ಶ್ರೇಷ್ಟತೆಯುಳ್ಳ ದಾನವಾಗಿದೆ ಮಾತ್ರವಲ್ಲದೆ ಇಂದಿನ ಈ ಕಾರ್ಯಕ್ರಮ ಇತರರಿಗೂ ಪ್ರೇರಣೆಯಾಗಿದೆ ಎಂದು ಶಾಸಕ ಸಂಜೀವ ಮಠಂದೂರುರವರು ಹೇಳಿದರು.

ಪ್ರೇರಣಾ ತಂಡ ಪುತ್ತೂರು ಹಾಗೂ ಮಾಯಿದೆ ದೇವುಸ್ ಚರ್ಚ್ ವ್ಯಾಪ್ತಿಯಡಿ ಕಾರ್ಯನಿರ್ವಹಿಸುತ್ತಿರುವ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ(ಸಿ.ಎಲ್.ಸಿ) ಇದರ ಜಂಟಿ ಆಶ್ರಯದಲ್ಲಿ ಜ.೧ ರಂದು ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಜರಗಿದ ದರ್ಬೆ ಸಂತ ಫಿಲೋಮಿನಾ ಪ್ರೌಢಶಾಲೆಯ ಒಂಭತ್ತನೇ ತರಗತಿಯ ಫಲಾನುಭವಿ ವಿದ್ಯಾರ್ಥಿನಿ ಪೂರ್ಣಿಮರವರಿಗೆ ಕೃತಕ ಕೈ ಜೋಡಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಜ್ಯ ಸರಕಾರದ ಹಾಗೂ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಅನುದಾನದಡಿಯಲ್ಲಿ ದಿವ್ಯಾಂಗ ಚೇತನರಿಗೆ ಮೂರು ಚಕ್ರದ ವಾಹನ, ಕೈ-ಕಾಲು ಇಲ್ಲದವರಿಗೆ ಕೃತಕ ಕೈ-ಕಾಲು ಜೋಡಣೆ, ಕಿವಿ ಶ್ರವಣ ಸಾಮಾಗ್ರಿಗಳು ಹೀಗೆ ಸುಮಾರು ೨೬ ಮಂದಿಗೆ ನೀಡುತ್ತಾ ಬಂದಿದ್ದೇವೆ. ಈಗಾಗಲೇ ಫಲಾನುಭವಿ ವಿದ್ಯಾರ್ಥಿನಿ ಪೂರ್ಣಿಮಾರವರಿಗೆ ಕೃತಕ ಕೈಯನ್ನು ಜೋಡಿಸುವ ಮೂಲಕ ಎರಡು ಕೈಗಳಲ್ಲಿ ನಮಸ್ಕಾರ ಮಾಡುವ ಹಾಗೆ ಮಾಡುವ ಮೂಲಕ ಧನ್ಯತಾ ಭಾವವನ್ನು ತೋರಿಸಿಕೊಟ್ಟಿರುವ ಸಂಘಟಕರ ಪ್ರಯತ್ನವನ್ನು ಶ್ಲಾಘಿಸಲೇಬೇಕಾಗಿದೆ ಮಾತ್ರವಲ್ಲದೆ ಇಂತಹ ಕಾರ್ಯಗಳು ಸಮಾಜಕ್ಕೆ ಮತ್ತೊಬ್ಬರಿಗೆ ಪ್ರೇರಣೆಯಾಗಲಿ ಎಂದರು.

ದೇವರು ಮೆಚ್ಚುವಂತಹ ಕಾರ್ಯವಾಗಿದೆ-ವಂ|ಲಾರೆನ್ಸ್ ಮಸ್ಕರೇನ್ಹಸ್:
ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಮಾತನಾಡಿ, ಕಷ್ಟದಲ್ಲಿರುವವರಿಗೆ ನೆರವು ನೀಡುವ ಮೂಲಕ ಅವರಲ್ಲಿ ದೇವರನ್ನು ಕಾಣು ಎಂಬುದಾಗಿ ಪವಿತ್ರ ಬೈಬಲ್ ಹೇಳುತ್ತದೆ. ಅದರಂತೆ ಪ್ರೇರಣಾ ತಂಡ ಹಾಗೂ ಸಿಎಲ್‌ಸಿ ಸಂಸ್ಥೆಯು ಓರ್ವ ಫಲಾನುಭವಿ ವಿದ್ಯಾರ್ಥಿನಿಗೆ ಅಗತ್ಯ ನೆರವು ನೀಡುವ ಮೂಲಕ ವಿದ್ಯಾರ್ಥಿನಿಯ ಬಾಳಿಗೆ ಸಂಜೀವಿನಿಯಾಗಿದ್ದಾರೆ ಮಾತ್ರವಲ್ಲ ದೇವರು ಮೆಚ್ಚುವಂತಹ ಕಾರ್ಯವನ್ನು ಸಂಘಟಕರು ವರ್ಷದ ಆರಂಭದಲ್ಲಿಯೇ ಮಾಡಿ ತೋರಿಸಿದ್ದಾರೆ. ಕೃತಕ ಕೈಯ ಫಲಾನುಭವಿ ವಿದ್ಯಾರ್ಥಿನಿಯ ಬಾಳು ಹಣತೆಯಂತೆ ನಿತ್ಯ ಪ್ರಜ್ವಲಿಸಲಿ ಎಂದು ಹೇಳಿದರು.

ನೆರವೀಯುವ ಮೂಲಕ ಮಾನವೀಯತೆಯ ಅನಾವರಣವಾಗಿದೆ-ಲೋಕೇಶ್ ಸಿ:
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್‌ರವರು ಮಾತನಾಡಿ, ನೊಂದ ಜೀವ ನಮ್ಮದೆಂಬ ಭಾವ ಬಂದಾಗ ಸ್ಪಂದಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಂಘಟಕರು ಪೂರ್ಣಿಮಾ ಎಂಬ ಬಾಲಕಿಗೆ ಕೃತಕ ಕೈ ಜೋಡಣೆಗೆ ನೆರವೀಯುವ ಮೂಲಕ ಮಾನವೀಯತೆಯನ್ನು ತೋರಿಸಿಕೊಟ್ಟಿದ್ದಾರೆ ಮಾತ್ರವಲ್ಲದೆ ಇಂತಹ ಅಪೂರ್ವ ಕಾರ್ಯಕ್ರಮಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ಮನೆ ಮನೆ ಭೇಟಿ ಸಂದರ್ಭದಲ್ಲಿ ಕೆಲವೊಂದು ಮನೆಗಳಲ್ಲಿ ಮನ ಕಲಕುವ ಸನ್ನಿವೇಶಗಳನ್ನು ನಾನು ಕಂಡಿರುತ್ತೇನೆ. ಫಲಾನುಭವಿ ವಿದ್ಯಾರ್ಥಿನಿ ಪೂರ್ಣಿಮಾರವರು ತನಗೆ ಸಹಾಯಹಸ್ತ ಚಾಚಿದವರನ್ನು ಈ ಸಂದರ್ಭದಲ್ಲಿ ಸ್ಮರಿಸಿರುವುದು ಅವಳ ಉತ್ತಮ ಗುಣವಾಗಿದೆ ಎಂದರು.

ಬದುಕು ಕೊಡುವ ಕೈಂಕರ್ಯ ಉತ್ತಮ ಹೆಜ್ಜೆ-ಮೌರಿಸ್ ಮಸ್ಕರೇನ್ಹಸ್:
ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಮಾತನಾಡಿ, ಪ್ರಭು ಯೇಸುಕ್ರಿಸ್ತರ ಬೋಧನೆಯಲ್ಲಿ `ಸೇವೆ’ಗೆ ವಿಶೇಷ ಪ್ರಾಧಾನ್ಯತೆ ನೀಡಲಾಗುತ್ತದೆ. ಸೇವೆ ಮಾಡುವ ಮುಖಾಂತರ ಇತರರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಪವಿತ್ರ ಬೈಬಲ್ ಹೇಳುತ್ತದೆ. ಈ ನಿಟ್ಟಿನಲ್ಲಿ ಪ್ರೇರಣಾ ತಂಡ ಹಾಗೂ ಸಿಎಲ್‌ಸಿ ಸಂಸ್ಥೆ ಪೂರ್ಣಿಮಾರವರಿಗೆ ಬದುಕು ಕೊಡುವ ಕೈಂಕರ್ಯ ಮಾಡುವ ಮೂಲಕ ಉತ್ತಮ ಹೆಜ್ಜೆಯನ್ನಿಟ್ಟಿರುವುದು ಪ್ರಶಂಸನೀಯ ಜೊತೆಗೆ ಶಿಕ್ಷಣದ ಸಂಪೂರ್ಣ ಖರ್ಚು-ವೆಚ್ಚವನ್ನು ನೋಡುತ್ತಿರುವುದು ಕೂಡ ಅಭಿಮಾನದ ಸಂಗತಿಯಾಗಿದೆ. ಜೀವನದಲ್ಲಿ ಏನಾದರೂ ಕಷ್ಟಗಳು ಬಂದಾಗ ಚರ್ಚ್ ಕೂಡ ಸ್ಪಂದಿಸುತ್ತದೆ ಎಂದು ಮೌರಿಸ್‌ರವರು ಪೂರ್ಣಿಮಾರವರಿಗೆ ಭರವಸೆಯ ಮಾತುಗಳನ್ನಾಡಿದರು.

ಎಮಿರೆಟ್ಸ್ ಪುತ್ತೂರಿಯನ್ಸ್ ದುಬೈ ಇದರ ಆಂಟನಿ ಆಗ್ನೇಲ್ ಮಸ್ಕರೇನ್ಹಸ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಫಿಲೋಮಿನಾ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಪ್ರಣತಿ, ಅಲೀನಾ, ತೇಜಸ್ವಿನಿ ರವರು ಪ್ರಾರ್ಥಿಸಿದರು. ಪ್ರೇರಣಾ ತಂಡದ ಮುಖ್ಯಸ್ಥ ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ ಅಧ್ಯಕ್ಷ ಜೋಯೆಲ್ ಜೆ.ಕುಟಿನ್ಹಾ ವಂದಿಸಿ, ಶಿಕ್ಷಕ ಪ್ರಶಾಂತ್ ಪಿ.ಎಲ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.

ರೂ.೧.೭೨ ಲಕ್ಷ ವೆಚ್ಚ…
ಮುಕ್ವೆ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಪ್ರೇರಣಾ ತಂಡದ ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್‌ರವರ ಪತ್ನಿ ಹೆಲೆನ್ ಲೋಬೋರವರು ತನ್ನ ಪತಿಯಲ್ಲಿ, ನೀವು ಎಲ್ಲರಿಗೂ ಸಹಾಯ ಮಾಡುತ್ತೀರಿ, ನಮ್ಮ ಶಾಲೆಯಲ್ಲಿ ಓರ್ವ ಬಡ ಹುಡುಗಿಗೆ ಎಡಗೈ ಇಲ್ಲ. ಅವಳಿಗೆ ಕೃತಕ ಕೈ ಜೋಡಿಸುವ ಮೂಲಕ ಯಾಕೆ ಸಹಾಯ ಮಾಡಬಾರದು ಎಂದಾಗ ಕೂಡಲೇ ಕಾರ್ಯಪ್ರವೃತ್ತರಾದ ಸ್ಟ್ಯಾನಿ ಪ್ರವೀಣ್‌ರವರು ಮೊದಲಿಗೆ ಗಮನಕ್ಕೆ ತಂದದ್ದು ದುಬೈಯಲ್ಲಿರುವ ಉದ್ಯಮಿ ಮೈಕಲ್ ಡಿ’ಸೋಜರವರಿಗೆ. ಮೈಕಲ್ ಡಿ’ಸೋಜರವರು ನೆರವು ನೀಡುತ್ತೇನೆ ಎಂದು ಒಪ್ಪಿಗೆ ಸೂಚಿಸಿದ್ದು ಬಳಿಕ ಪುತ್ತೂರು ಎಮಿರೇಟ್ಸ್ ದುಬೈ ಇದರ ಓಸ್ವಾಲ್ಡ್ ಲೋಬೋರವರೂ ಕೂಡ ಕೈಜೋಡಿಸುತ್ತೇವೆ ಎಂದರು. ಸ್ಟ್ಯಾನಿರವರು ತನ್ನ ಪತ್ನಿ ಜೊತೆ ಪೂರ್ಣಿಮಾರವರನ್ನು ಮಂಗಳೂರಿಗೆ ಐದಾರು ಬಾರಿ ಕರೆದುಕೊಂಡು ಹೋಗಿ ಪೂರ್ಣಿಮಾರವರ ಕೈ ಸಲಕರಣೆಯ ಅಳತೆಯನ್ನು ಮಾಡಲಾಗಿತ್ತು. ಇವರಲ್ಲದೆ ಇತರ ಸಹೃದಯಿ ದಾನಿಗಳಿಂದ ಹಣವನ್ನು ಸಂಗ್ರಹಿಸಿ ಪೂರ್ಣಿಮಾರವರಿಗೆ ರೂ.೧.೭೨ ಲಕ್ಷ ವೆಚ್ಚದ ಕೃತಕ ಕೈ ಜೋಡಣೆಯು ಈಗ ಯಶಸ್ವಿಯಾಗಿ ನೆರವೇರಿದೆ.

ಶಿಕ್ಷಣದ ವೆಚ್ಚ ಭರಿಸುತ್ತೇನೆ..
ಮಂಗಳೂರಿನಲ್ಲಿ ಚಾರ್ಟರ್ಡ್ ಎಕೌಂಟೆಂಟ್ ಆಗಿದ್ದು, ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿಯ ಎಜ್ಯುಕೇರ್ ಯೋಜನೆಯ ಗೌರವಾಧ್ಯಕ್ಷರೂ ಆಗಿರುವ ಆಲ್ವಿನ್ ಹೆನ್ರಿ ರೊಡ್ರಿಗಸ್‌ರವರು ಫಲಾನುಭವಿ ವಿದ್ಯಾರ್ಥಿನಿ ಪೂರ್ಣಿಮಾರವರ ಮುಂದಿನ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ತಾನು ಭರಿಸುವುದಾಗಿ ಈಗಾಗಲೇ ಅವರು ಭರವಸೆ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಫಲಾನುಭವಿ ವಿದ್ಯಾರ್ಥಿನಿ ಪೂರ್ಣಿಮಾರವರಿಗೆ ಸಿಎ ಆಲ್ವಿನ್ ರೊಡ್ರಿಗಸ್‌ರವರ ಅನುಪಸ್ಥಿತಿಯಲ್ಲಿ ಅವರ ಪುತ್ರ ಎಲ್ರೋನ್ ರೊಡ್ರಿಗಸ್‌ರವರು ವಿದ್ಯಾರ್ಥಿನಿ ಪೂರ್ಣಿಮಾರವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು.

ಹಿಂದೆ ೩ ಬಾರಿ…
ಪ್ರೇರಣಾ ತಂಡವು ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್‌ರವರ ನೇತೃತ್ವದಲ್ಲಿ ಸಿಎಲ್‌ಸಿ ಸಂಸ್ಥೆ ಜೊತೆಗೂಡಿ ೨೦೧೪ರಲ್ಲಿ ರೂ.೧.೨೫ ಲಕ್ಷ ವೆಚ್ಚದಲ್ಲಿ ವಿಶೇಷಚೇತನ ಮಕ್ಕಳಿಗೆ ವೀಲ್‌ಚೇರ್ ಹಾಗೂ ೧೪ ವಾಕರ್‌ಗಳ ಕೊಡುಗೆ, ಸುಮಾರು ರೂ.೩ ಲಕ್ಷ ವೆಚ್ಚದಲ್ಲಿ ನಿರಂತರ ಮೂರು ವರ್ಷ ತಾನು ಸೇವೆ ನಿರ್ವಹಿಸುತ್ತಿರುವ ಕುಡಿಪಾಡಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮ, ಕಳೆದ ವರ್ಷ ರೂ.೬೦ ಸಾವಿರ ವೆಚ್ಚದಲ್ಲಿ ನಾಲ್ವರು ವಿಶೇಷಚೇತನ ಮಕ್ಕಳಿಗೆ ಮಂಚ ಹಾಗೂ ಬೆಡ್‌ನ ವ್ಯವಸ್ಥೆಯನ್ನು ಹಮ್ಮಿಕೊಂಡು ಶ್ಲಾಘನೆಗೆ ಪಾತ್ರವಾಗಿತ್ತು.

ಎಲ್ಲರಂತೆ ಬದುಕುವ ಆಶಾಕಿರಣವನ್ನು ಪ್ರೇರಣಾ, ಸಿಎಲ್‌ಸಿ ಸಂಸ್ಥೆ ಕಲ್ಪಿಸಿದೆ…
ಸ್ವಾರ್ಥ ಸಾಧನೆ ಹೆಚ್ಚಾದ ಈ ಸಂದರ್ಭದಲ್ಲಿ ನನಗೆ ಕೃತಕ ಕೈ ಜೋಡಿಸುವ ಮೂಲಕ ಮಾನವೀಯತೆಯನ್ನು ತೋರಿಸಿರುವ ಪ್ರೇರಣಾ ತಂಡದ ಸ್ಟ್ಯಾನಿ ಪ್ರವೀಣ್ ಸರ್ ಹಾಗೂ ಅವರ ಪತ್ನಿ ಹೆಲೆನ್ ಲೋಬೋ ಮೇಡಂರವರಿಗೆ ನಾನು ಮತ್ತು ನನ್ನ ಕುಟುಂಬ ಎಂದಿಗೂ ಚಿರಋಣಿಯಾಗಿದ್ದೇವೆ. ಮುಂದಿನ ನನ್ನ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸುವ ಭರವಸೆಯನ್ನು ನೀಡಿರುವ ಸಿಎ ಆಲ್ವಿನ್ ಸರ್‌ರವರಿಗೂ ನಾನು ಕೃತಜ್ಞತೆಯನ್ನು ಅರ್ಪಿಸುತ್ತಿದ್ದೇನೆ. ನಾನೂ ಕೂಡ ಉತ್ತಮವಾಗಿ ಶಿಕ್ಷಣ ಕಲಿತು ಸಮಾಜದ ಓರ್ವ ಜವಾಬ್ದಾರಿಯುತ ಸೇವೆಗೆ ಸೇರಬೇಕು ಎನ್ನುವ ಆಸೆಯಿದೆ. ಮುಕ್ವೆ ಶಾಲೆಯಲ್ಲಿ ತಾನು ಒಂದರಿಂದ ಎಂಟರವರೆಗೆ ಕಲಿಯುತ್ತಿದ್ದ ಸಂದರ್ಭದಲ್ಲಿ ತಾನೋರ್ವೆ ದಿವ್ಯಾಂಗ ಚೇತನೆ ವಿದ್ಯಾರ್ಥಿನಿ ಎಂಬ ಕೀಳಿರಿಮೆ ತೋರಿಸದೆ ಶಿಕ್ಷಕರು ಹಾಗೂ ಎಲ್ಲರೂ ನನ್ನಲ್ಲಿ ಸದಾ ಸ್ಫೂರ್ತಿಯನ್ನು ತುಂಬಿಸಿದ್ದಾರೆ. ನಾನು ಅನ್ನಿಸಿರಲಿಲ್ಲ, ಇಷ್ಟು ಬೇಗ ನನಗೆ ಕೃತಕ ಕೈ ಜೋಡಣೆಯಾಗುತ್ತದೆ ಎಂದು. ಅಕಾಲ ಭಯಂ ನಿವಾರಣಂ ಎಂಬಂತೆ ಜೀವನದಲ್ಲಿ ಎಲ್ಲರಂತೆ ಬದುಕುವ ಆಶಾಕಿರಣವನ್ನು ಪ್ರೇರಣಾ ತಂಡ ಹಾಗೂ ಸಿಎಲ್‌ಸಿ ಸಂಸ್ಥೆ ದಿಟ್ಟ ಹೆಜ್ಜೆಯಿಟ್ಟಿದೆಪೂರ್ಣಿಮಾ, ಫಲಾನುಭವಿ ವಿದ್ಯಾರ್ಥಿನಿ

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.