ಜ.6: ಭ್ರಷ್ಟಾಚಾರ ವಿರೋಧಿ ಫಲಕ ಬಿಡುಗಡೆ – ಜ.10 ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ಲಂಚ, ಭ್ರಷ್ಟಾಚಾರದ ಬಹಿಷ್ಕಾರ (ದಹನ)-ಉತ್ತಮ ಸೇವೆಗೆ ಪುರಸ್ಕಾರ

0

ರಕಾರಿ ಕಚೇರಿಗಳು ನಮಗಾಗಿ, ನಮ್ಮ ಸೇವೆಗಾಗಿ ನಮ್ಮ ತೆರಿಗೆಯ ಹಣದಲ್ಲಿ ಇರುವುದು. ಅಲ್ಲಿಯ ಸಿಬ್ಬಂದಿಗಳು ಜನಸೇವಕರು ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಹೀಗಿರುವಾಗ ನಮ್ಮ ಕೆಲಸಕ್ಕಾಗಿ ನೇಮಕಗೊಂಡು ನಮ್ಮ ಸೇವೆಗಾಗಿ ಇರುವವರು. ನಮಗೆ (ಜನರಿಗೆ) ಉತ್ತಮ ಕೆಲಸ ಮಾಡಲೇಬೇಕು. ಅವರನ್ನು ಜನಸೇವಕರು, ದೇಶಪ್ರೇಮಿಗಳು ಎಂದು ಗುರುತಿಸಿ ಸನ್ಮಾನಿಸಬೇಕು. ಹಾಗೆಯೇ ಹಣಕ್ಕಾಗಿ ಕೆಲಸ ಮಾಡದೆ, ಪೀಡಿಸಿ ತೊಂದರೆ ಕೊಡುವವರನ್ನು ಲಂಚಕೋರರು, ದರೋಡೆಕೋರರು, ದೇಶದ್ರೋಹಿಗಳು ಎಂದು ಗುರುತಿಸಿ ಬಹಿಷ್ಕರಿಸಬೇಕು ಎಂದು ಕರೆ ನೀಡಿದ್ದೇವೆ. ಕಳೆದ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ತಾಲೂಕಿನ ಎಲ್ಲಾ ಇಲಾಖೆಗಳಲ್ಲಿ ಉತ್ತಮ ಸೇವೆ ನೀಡುವವರನ್ನು ಜನರ ಓಟಿನ ಆಧಾರದಲ್ಲಿ ಗುರುತಿಸಿ ಜನಮೆಚ್ಚಿದ ಅಧಿಕಾರಿಗಳೆಂದು, ಉತ್ತಮ ಸೇವೆ ನೀಡಿದ ಇಲಾಖೆಗಳನ್ನು ಜನ ಮೆಚ್ಚಿದ ಇಲಾಖೆಗಳೆಂದು ಗುರುತಿಸಿ ಗೌರವಿಸಿದ್ದೇವೆ, ಸನ್ಮಾನಿಸಿದ್ದೇವೆ. ಸರಕಾರಿ ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ಸಿಬ್ಬಂದಿ ಕೊರತೆ, ಸವಲತ್ತುಗಳ ಕೊರತೆ ಇದ್ದರೆ ಅದನ್ನು ಸರಿಪಡಿಸಬೇಕು. ಇಲ್ಲದಿದ್ದರೆ ನಮ್ಮ ಸೇವೆಗೆ ತೊಂದರೆ ಎಂದು ಪರಿಗಣಿಸಿ ಸಂಘಸಂಸ್ಥೆಗಳಿಗೆ, ಶಾಸಕರಿಗೆ, ಅಧಿಕಾರಿಗಳಿಗೆ ತಿಳಿಸಿದ್ದೆವು. ಹಾಗೆಯೇ ಅವರು ಉತ್ತಮ ಕೆಲಸ ಮಾಡುವಂತೆ ನೋಡಿಕೊಳ್ಳಲು, ಕೆಲಸ ಮಾಡದಿದ್ದರೆ ಖಂಡಿಸುವುದು, ಶಿಕ್ಷಿಸುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವೂ ಆಗಿದೆ ಎಂಬ ಕಾರಣಕ್ಕೆ ಉತ್ತಮ ಸೇವೆಗೆ ಪುರಸ್ಕಾರ, ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ (ದಹನ) ಎಂಬ ಜನರ ನೇತೃತ್ವದ ಸುದ್ದಿಯ ಜನಾಂದೋಲನ ಪ್ರಾರಂಭವಾಗಿದೆ. ಈ ಆಂದೋಲನದ ಭಾಗವಾಗಿ ಮಧ್ಯವರ್ತಿಗಳ ಹಾವಳಿ ಬಗ್ಗೆ ಜಾಗೃತಿ ಮೂಡಿಸಿದ್ದೇವೆ. ಜನರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ನೇರಸಂಪರ್ಕ ಮತ್ತು ಅಗತ್ಯವುಳ್ಳ ಕೆಲಸಗಳ ಮಾಹಿತಿ ನೀಡುವಂತೆ ಒತ್ತಾಯಿಸಿದ್ದೇವೆ. ಸುದ್ದಿ ಮಾಧ್ಯಮದಿಂದಲೂ ಅಗತ್ಯವುಳ್ಳ ಮಾಹಿತಿ, ನೇರ ಸಂಪರ್ಕ ವ್ಯವಸ್ಥೆ ಮಾಡುತ್ತಿದ್ದೇವೆ.

ಇದು ಜನಾಂದೋಲನವಾಗಿ ಮಾರ್ಪಡಲು 1985ರಲ್ಲಿ ಸುಳ್ಯದಲ್ಲಿ ಲಂಚ ಮತ್ತು ಭ್ರಷ್ಟಾಚಾರದ ಪ್ರತಿಕೃತಿ ದಹನ ಮಾಡಿದಂತೆ ಈ ಸಲವೂ ಲಂಚ, ಭ್ರಷ್ಟಾಚಾರದ ಪ್ರತಿಕೃತಿಯನ್ನು ತಾಲೂಕಿನಾದ್ಯಂತ ಸಂಚರಿಸಿ ಇದೇ ಜನವರಿ 10ರಂದು ಪುತ್ತೂರಿನಲ್ಲಿ ದಹನಗೊಳಿಸಲಿದ್ದೇವೆ. (ಇದು ಯಾರ ವಿರುದ್ಧವೂ ಅಲ್ಲ, ಲಂಚ ಮತ್ತು ಭ್ರಷ್ಟಾಚಾರದ ವಿರುದ್ಧ ಮಾತ್ರ ಆಗಿರುತ್ತದೆ) ಉತ್ತಮ ಸೇವೆಗೆ ಪುರಸ್ಕಾರವನ್ನು ಮಾಡಲಿದ್ದೇವೆ. ಅದಕ್ಕೆ ಮೊದಲು ಇದೇ ಗುರುವಾರ ಜನವರಿ 6ರಂದು ಸುಳ್ಯದಲ್ಲಿ ಬೆಳಿಗ್ಗೆ 10-30ರಿಂದ 1 ಗಂಟೆಯವರೆಗೆ ಲಂಚ, ಭ್ರಷ್ಟಾಚಾರದ ವಿರುದ್ಧ ಜಾಗೃತಿಯನ್ನು ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ಸಂವಾದದ ಮೂಲಕ ನಡೆಸಿಕೊಡಲಿದ್ದಾರೆ. ವಿದ್ಯಾರ್ಥಿಗಳೊಡನೆ, ಸಂಘ ಸಂಸ್ಥೆಗಳೊಡನೆ, ಆಸಕ್ತರೊಡನೆ ಮಾತುಕತೆ ನಡೆಸಲಿದ್ದಾರೆ. ತಮ್ಮ ಅಭಿಪ್ರಾಯ, ಅನುಭವಗಳನ್ನು, ಮುಂದಿನ ಹಾದಿಯನ್ನು ಹಂಚಿಕೊಳ್ಳಲಿದ್ದಾರೆ. ಅದೇ ದಿವಸ ಲಂಚ, ಭ್ರಷ್ಟಾಚಾರ ವಿರುದ್ಧದ ಜನಜಾಗೃತಿಯ ಫಲಕವನ್ನು ಬಿಡುಗಡೆಗೊಳಿಸಲಿದ್ದಾರೆ. ಅಪರಾಹ್ನ 2-30ರಿಂದ 5 ಗಂಟೆಯವರೆಗೆ ಪುತ್ತೂರಿನಲ್ಲಿ ಅದೇ ರೀತಿಯ ಕಾರ್ಯಕ್ರಮ ನಡೆಯಲಿದೆ.

ಜನವರಿ 10ರಂದು ಪುತ್ತೂರಿನಲ್ಲಿ ಲಂಚ, ಭ್ರಷ್ಟಾಚಾರದ ಬಹಿಷ್ಕಾರ (ದಹನ) -ಉತ್ತಮ ಸೇವೆಗೆ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. (ಸುಳ್ಯದಲ್ಲಿ ಬೆಳಿಗ್ಗೆ 10 ಗಂಟೆಗೆ ಜ್ಯೋತಿ ಸರ್ಕಲ್‌ನಿಂದ ಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಯಲಿದೆ. ಬಸ್ ನಿಲ್ದಾಣದ ಬಳಿ ಲಂಚ, ಭ್ರಷ್ಟಾಚಾರದ ಪ್ರತಿಕೃತಿ ದಹನ ನಡೆಸಿ, ನಂತರ ಬಸ್ ನಿಲ್ದಾಣದ ಬಳಿ ಇರುವ ಶಿವಕೃಪಾ ಕಲಾಮಂದಿರದಲ್ಲಿ ಲಂಚ, ಭ್ರಷ್ಟಾಚಾರದ ಬಹಿಷ್ಕಾರ -ಉತ್ತಮ ಸೇವೆಗೆ ಪುರಸ್ಕಾರ ಕಾರ್ಯಕ್ರಮದ ಬಗ್ಗೆ ಸಭೆ ನಡೆಯಲಿದೆ.) ಜನವರಿ 26 ಪ್ರಜಾಪ್ರಭುತ್ವದ ದಿನದವರೆಗೆ ಗ್ರಾಮ, ಗ್ರಾಮಗಳಲ್ಲಿ, ತಾಲೂಕಿನಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವುದು, ಉತ್ತಮ ಸೇವೆಗೆ ಪುರಸ್ಕಾರ ನೀಡುವ ಜನಜಾಗೃತಿಯ ಬಗ್ಗೆಯೂ ಕಾರ್ಯಕ್ರಮ ರೂಪಿಸಲಾಗುವುದು. ಅಂದು ಗ್ರಾಮ, ಗ್ರಾಮಗಳಲ್ಲಿ ಮತ್ತು ತಾಲೂಕಿನಲ್ಲಿ ಮಹಾತ್ಮಗಾಂಧಿಯವರ ಆಶಯದ ಜನಸ್ವಾತಂತ್ರ್ಯದ -ಜನಾಡಳಿತದ ಕಡೆ ನಡಿಗೆ ನಡೆಯಲಿದೆ ಮತ್ತು ಭ್ರಷ್ಟಾಚಾರದ ಬಹಿಷ್ಕಾರ (ದಹನ) – ಉತ್ತಮ ಸೇವೆಗೆ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈ ಕಾರ್ಯಕ್ರಮಗಳು ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕುಗಳಲ್ಲಿ ನಡೆಯಲಿವೆ.

ಈ ಮೇಲಿನ ಎಲ್ಲಾ ಕಾರ್ಯಕ್ರಮಗಳು ಯಾವುದೇ ವ್ಯಕ್ತಿಯ, ಪಕ್ಷದ, ಸರಕಾರದ ವಿರುದ್ಧವಲ್ಲ. ಜನರ ಪರವಾಗಿರುವ ಆಂದೋಲನವಾಗಿರುವುದರಿಂದ ಅದರಲ್ಲಿ ಭಾಗವಹಿಸಿ ಅದರ ನೇತೃತ್ವ ವಹಿಸಿಕೊಳ್ಳಲು ಶಾಸಕರನ್ನು, ಜನಪ್ರತಿನಿಧಿಗಳನ್ನು, ಎಲ್ಲಾ ಪಕ್ಷದವರನ್ನು, ಸಂಘಸಂಸ್ಥೆಗಳನ್ನು, ಸಾರ್ವಜನಿಕರನ್ನು, ವಿದ್ಯಾರ್ಥಿಗಳನ್ನು ಕೇಳಿಕೊಳ್ಳಲಾಗುವುದು. ಸುದ್ದಿ ಮಾಧ್ಯಮವಾಗಿ, ವೇದಿಕೆಯಾಗಿ ಕೆಲಸ ಮಾಡಲು ಇಚ್ಛಿಸುತ್ತದೆ ಎಂದು ತಿಳಿಸಲು ಸಂತೋಷ ಪಡುತ್ತೇವೆ.

ಈ ಜನಾಂದೋಲನವನ್ನು ದ.ಕ. ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ವಿಸ್ತರಿಸಿ ಜ.26ರಂದು ದ.ಕ. ಜಿಲ್ಲೆಯನ್ನು ಲಂಚ ಭ್ರಷ್ಟಾಚಾರ ಮುಕ್ತ ಜಿಲ್ಲೆಯನ್ನಾಗಿ ಘೋಷಿಸುವ ಕಾರ್ಯಕ್ಕೆ ಎಲ್ಲ ಜನರ, ಮಾಧ್ಯಮದವರ ಬೆಂಬಲ ಕೋರುತ್ತಿದ್ದೇವೆ.

 

 

ಭ್ರಷ್ಟಾಚಾರದ ವಿರುದ್ಧ ಸದಾ ಸಮರ ಸಾರುತ್ತಿರುವ, ಭ್ರಷ್ಟಾಚಾರಿಗಳಿಗೆ ಸಿಂಹಸ್ವಪ್ನವಾಗಿರುವ ಸಂತೋಷ್ ಹೆಗ್ಡೆ

 

 

LEAVE A REPLY

Please enter your comment!
Please enter your name here