ಭ್ರಷ್ಟಾಚಾರದ ವಿರುದ್ಧ ಸದಾ ಸಮರ ಸಾರುತ್ತಿರುವ, ಭ್ರಷ್ಟಾಚಾರಿಗಳಿಗೆ ಸಿಂಹಸ್ವಪ್ನವಾಗಿರುವ ಸಂತೋಷ್ ಹೆಗ್ಡೆ

0

ಪುತ್ತೂರು: ಭ್ರಷ್ಟಾಚಾರದ ವಿರುದ್ಧ ಸಮರ ಮುಂದುವರಿಸುತ್ತಿರುವ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ, ಕರ್ನಾಟಕದ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆಯವರು ಜನವರಿ 6ರಂದು ಪುತ್ತೂರಿಗೆ ಭೇಟಿ ನೀಡಲಿದ್ದಾರೆ. `ಭ್ರಷ್ಟಾಚಾರ ಮುಕ್ತ ಪುತ್ತೂರು ತಾಲೂಕು’ ನಿರ್ಮಾಣಕ್ಕಾಗಿ ಅಭಿಯಾನ ನಡೆಸುತ್ತಿರುವ ಸುದ್ದಿ ಬಿಡುಗಡೆ ಸಮೂಹ ಸಂಸ್ಥೆಯ ನೇತೃತ್ವದಲ್ಲಿ ಪುತ್ತೂರು ಪುರಭವನದಲ್ಲಿ ಜ.6ರಂದು ಅಪರಾಹ್ನ 2.30ರಿಂದ ಸಂಜೆ 5ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಎನ್. ಸಂತೋಷ್ ಹೆಗ್ಡೆಯವರು ಭ್ರಷ್ಟಾಚಾರದ ವಿರುದ್ಧದ ಹೋರಾಟ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಇರುವ ವಿಧಾನಗಳ ಕುರಿತು ಮಾಹಿತಿ ನೀಡಿ, ಸಂವಾದ ನಡೆಸಲಿದ್ದಾರೆ. ತಾಲೂಕಿನ ಪ್ರಮುಖ ಸಂಘ ಸಂಸ್ಥೆಗಳು ಮತ್ತು ಜಾತಿ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಮತ್ತು ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಜ.6ರಂದು ಬೆಳಿಗ್ಗೆ ಸುದ್ದಿ ಸಮೂಹ ಸಂಸ್ಥೆಗಳ ನೇತೃತ್ವದಲ್ಲಿ ಸುಳ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಂತೋಷ್ ಹೆಗ್ಡೆಯವರು ಭಾಗವಹಿಸಲಿದ್ದಾರೆ. ಸುಳ್ಯ ಮತ್ತು ಪುತ್ತೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಂತೋಷ್ ಹೆಗ್ಡೆಯವರು ಭ್ರಷ್ಟಾಚಾರದ ವಿರುದ್ಧದ ಫಲಕ ಬಿಡುಗಡೆಗೊಳಿಸಲಿದ್ದಾರೆ.

ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಪರಿಚಯ; ನಿಟ್ಟೆ ಸಂತೋಷ್ ಹೆಗ್ಡೆಯವರು ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದವರು. ಭಾರತದ ಸಾಲಿಸಿಟರ್ ಜನರಲ್ ಹುದ್ದೆಯನ್ನೂ ಸಮರ್ಥವಾಗಿ ನಿರ್ವಹಿಸಿದವರು. ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರಾಗಿ ಕಾರ್ಯ ನಿರ್ವಹಿಸಿದವರು. ಈ ಅವಧಿಯಲ್ಲಿ ಭ್ರಷ್ಟಾಚಾರಿಗಳಿಗೆ ಸಿಂಹಸ್ವಪ್ನವಾದವರು. ಲೋಕಸಭೆಯ ಸಭಾಪತಿಯಾಗಿದ್ದ ನ್ಯಾಯಮೂರ್ತಿ ಕೆ. ಎಸ್. ಹೆಗ್ಡೆ ಹಾಗೂ ಅವರ ಪತ್ನಿ ಮೀನಾಕ್ಷಿ ಹೆಗ್ಡೆ ದಂಪತಿಯ ಪುತ್ರರಾಗಿ ಕರ್ನಾಟಕದ ಉಡುಪಿ ಜಿಲ್ಲೆಯ ನಿಟ್ಟೆಯಲ್ಲಿ 1940ರ ಜೂನ್ 16ರಂದು ಜನಿಸಿದ ಸಂತೋಷ್ ಹೆಗ್ಡೆಯವರು ತಮ್ಮ ಆರಂಭಿಕ ಶಿಕ್ಷಣವನ್ನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಹಾಗೂ ಮದ್ರಾಸಿನಲ್ಲಿರುವ ಮದ್ರಾಸ್ ಕ್ರಿಶ್ಚಿಯನ್ ಕಾಲೇಜುಗಳಲ್ಲಿ ಪಡೆದವರು. ಬೆಂಗಳೂರಿನ ಸಂತ ಜೋಸೆಫ್ ಕಾಲೇಜ್‌ನಲ್ಲಿ ತಮ್ಮ ಇಂಟರ್ಮೀಡಿಯೆಟ್ ಪರೀಕ್ಷೆಯನ್ನು ಸಂಪೂರ್ಣಗೊಳಿಸಿದ ಇವರು ಸೆಂಟ್ರಲ್ ಕಾಲೇಜಿನಿಂದ ಬಿಎಸ್ಸಿ ಪದವಿ ಪಡೆದರು. ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಸಂತೋಷ್ ಹೆಗ್ಡೆಯವರು 1965ರಲ್ಲಿ ಕಾನೂನು ಪದವಿ ಪಡೆದರು. 1966ರ ಜನವರಿಯಲ್ಲಿ ವಕೀಲರಾಗಿ ಕಾರ್ಯ ನಿರ್ವಹಣೆ ಆರಂಭಿಸಿದ ಇವರು 1984ರ ಮೇ ತಿಂಗಳಲ್ಲಿ ಹಿರಿಯ ವಕೀಲರಾಗಿ ನಿಯೋಜಿಸಲ್ಪಟ್ಟರು. 1984ರ ಫೆಬ್ರವರಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಅಡ್ವೊಕೇಟ್ ಜನರಲ್ ಆಗಿ ನೇಮಿಸಲ್ಪಟ್ಟರು. 1988ರ ಆಗಸ್ಟ್‌ವರೆಗೂ ಅವರು ಆ ಸ್ಥಾನದಲ್ಲಿದ್ದರು. 1989ರ ಡಿಸೆಂಬರ್‌ನಿಂದ 1990ರ ನವೆಂಬರ್‌ವರೆಗೆ ಅವರು ಭಾರತ ಒಕ್ಕೂಟದ ಹೆಚ್ಚುವರಿ ಸಾಲಿಸಿಟರ್ ಜನರಲ್ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದರು. 25-04-1998ರಂದು ಭಾರತದ ಸಾಲಿಸಿಟರ್ ಜನರಲ್ ಆಗಿ ಅವರು ಮರು ನೇಮಿಸಲ್ಪಟ್ಟರು. 08-01-1999ರಂದು ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ನೇಮಿಸಲ್ಪಟ್ಟರು. 2005ರ ಜೂನ್‌ನಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯೂರ್ತಿಯಾಗಿ ಕಾರ್ಯ ನಿರ್ವಹಿಸಿ ಅವರು ನಿವೃತ್ತಿ ಹೊಂದಿದರು. 2005ರಲ್ಲಿ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದ ವತಿಯಿಂದ ಕಾನೂನು ಪದವಿಯ ಗೌರವಾರ್ಥ ಡಾಕ್ಟರೇಟ್ ಪ್ರದಾನ ಮಾಡಲಾಗಿತ್ತು. ನವದೆಹಲಿಯಲ್ಲಿರುವ ದೂರಸಂಪರ್ಕ ವಿವಾದದ ಫೈಸಲಾತಿ ಅಪೀಲು ಸ್ವೀಕರಿಸುವ ನ್ಯಾಯಮಂಡಳಿಯ ಅಧ್ಯಕ್ಷರಾಗಿ ಒಂದು ಅವಧಿಗೆ ಅವರು ಕಾರ್ಯನಿರ್ವಹಿಸಿದ್ದರು. 2006ರ ಆಗಸ್ಟ್ 3ರಂದು ಕರ್ನಾಟಕ ರಾಜ್ಯದ ಲೋಕಾಯುಕ್ತರಾಗಿ ಕಾರ್ಯ ನಿರ್ವಹಣೆ ಆರಂಭಿಸಿದ ಸಂತೋಷ್ ಹೆಗ್ಡೆಯವರು 2011ರ ಆಗಸ್ಟ್ 02ರಂದು ನಿವೃತ್ತಿ ಹೊಂದಿದರು. ಬಳ್ಳಾರಿಯಲ್ಲಿನ ಗಣಿಗಳಲ್ಲಿ ಕಂಡುಬಂದ ಪ್ರಮುಖ ಕ್ರಮಬಾಹಿರತೆಗಳನ್ನು ಇವರು ಬಹಿರಂಗಪಡಿಸಿದ್ದರು. ಓಬಳಾಪುರಂ ಮೈನಿಂಗ್ ಕಂಪನಿಯ ಸ್ವಾಮ್ಯತ್ವದಲ್ಲಿರುವ ಹಾಗೂ ಕರ್ನಾಟಕ ಸರ್ಕಾರದಲ್ಲಿ ಮಂತ್ರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಕೆಲವರ ಮಾಲೀಕತ್ವದ ಗಣಿಗಳೂ ಇವುಗಳಲ್ಲಿ ಸೇರಿದ್ದವು. ಬಳ್ಳಾರಿಯಲ್ಲಿನ ಕಬ್ಬಿಣದ ಅದಿರಿನ ಗಣಿಗಾರಿಕೆಯಲ್ಲಿ ನಡೆಯುತ್ತಿರುವ ಪ್ರಮುಖ ಉಲ್ಲಂಘನೆಗಳು ಮತ್ತು ಅಮೂಲಾಗ್ರವಾದ ಭ್ರಷ್ಟಾಚಾರಗಳನ್ನು ಇವರು ಬಯಲು ಮಾಡಿದ್ದರು. ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಸಚಿವರಾಗಿದ್ದ ಜನಾರ್ದನ ರೆಡ್ಡಿಯವರು ಜೈಲು ಸೇರುವಂತಾಗಿತ್ತು. ಬೇಲೆಕೇರಿ ಬಂದರು ಹಗರಣವನ್ನೂ ಬಯಲು ಮಾಡಿದ್ದರು. ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಸಚಿವರಾಗಿದ್ದ ಜನಾರ್ದನ ರೆಡ್ಡಿಯವರು ಜೈಲು ಸೇರುವಂತಾಗಿತ್ತು. ಭ್ರಷ್ಟರು ಜೈಲು ಸೇರುವಂತೆ ಮಾಡಿ ಕ್ರಾಂತಿ ಉಂಟು ಮಾಡಿದ್ದ ಎನ್. ಸಂತೋಷ್ ಹೆಗ್ಡೆಯವರು ತನ್ನ ನಿವೃತ್ತಿಯ ನಂತರವೂ ನಿರಂತರವಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆಯವರ ನೇತೃತ್ವದಲ್ಲಿ ನಡದ ಹೋರಾಟದ ಮುಂಚೂಣಿಯಲ್ಲಿದ್ದ ಸಂತೋಷ್ ಹೆಗ್ಡೆಯವರು ಶಾಲಾ ಕಾಲೇಜುಗಳಿಗೆ ನಿರಂತರವಾಗಿ ಭೇಟಿ ನೀಡಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ. ಇದೀಗ ಸುದ್ದಿ ಬಳಗದ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಅವರು ಕೈ ಜೋಡಿಸಿದ್ದಾರೆ.

ಪುತ್ತೂರು ತಾಲೂಕಿನ ಪ್ರಮುಖ ಸಂಘ ಸಂಸ್ಥೆಗಳು ಮತ್ತು ಜಾತಿ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಮತ್ತು ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಜ.6ರಂದು ಬೆಳಿಗ್ಗೆ ಸುದ್ದಿ ಸಮೂಹ ಸಂಸ್ಥೆಗಳ ನೇತೃತ್ವದಲ್ಲಿ ಸುಳ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಂತೋಷ್ ಹೆಗ್ಡೆಯವರು ಭಾಗವಹಿಸಲಿದ್ದಾರೆ.

ಜ.6: ಭ್ರಷ್ಟಾಚಾರ ವಿರೋಧಿ ಫಲಕ ಬಿಡುಗಡೆ – ಜ.10 ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ಲಂಚ, ಭ್ರಷ್ಟಾಚಾರದ ಬಹಿಷ್ಕಾರ (ದಹನ)-ಉತ್ತಮ ಸೇವೆಗೆ ಪುರಸ್ಕಾರ

LEAVE A REPLY

Please enter your comment!
Please enter your name here