ಕಿಲ್ಲೆ ಬದುಕು, ಬರಹ, ಅರ್ಥಗಾರಿಕೆ ವಿಚಾರಗೋಷ್ಠಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಕಿಲ್ಲೆಯವರದ್ದು ಸರ್ವೋದಯ, ಸಮನ್ವಯ, ಸಮತೋಲನದ ಹಾದಿ – ಪ್ರೊ. ಬಿ.ಎ. ವಿವೇಕ್ ರೈ
  • ಕಿಲ್ಲೆಯವರು ಆತ್ಮಸಂತೃಪ್ತಿ ಮತ್ತು ಅಧ್ಯಾತ್ಮದ ಕಡೆಗೆ ಗಮನ ಹರಿಸಿದ್ದರು -ವಿ.ಬಿ. ಅರ್ತಿಕಜೆ
  • ಕಿಲ್ಲೆಯವರು ಉತ್ಕ್ರಾಂತಿಯ ಮೇಲೆ ನಂಬಿಕೆಯಿರಿಸಿದ್ದರು – ಡಾ| ವರದರಾಜ್ ಚಂದ್ರಗಿರಿ
  • ಕಿಲ್ಲೆ ತುಳು ಸಾಹಿತ್ಯಗಳು ತುಳುನಾಡನ್ನು ಸುತ್ತಿಸಿ ಬರುತ್ತವೆ – ಡಾ| ತುಕರಾಮ ಪೂಜಾರಿ
  • ಕಿಲ್ಲೆಯವರ ಕರ್ಣನ ಪಾತ್ರ ಕಣ್ಣೀರು ಬರಿಸುತ್ತಿತ್ತು – ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ

ಪುತ್ತೂರು: ಕಿಲ್ಲೆಯವರು ಗಾಂಧಿವಾದಿಯಾಗಿ ಗಾಂಧಿತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪರಿಣಾಕಾರಿಯಾದ ಕೆಲಸ ನಿರ್ವಹಿಸಿದ್ದಾರೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ ರೈ ಹೇಳಿದರು. ಸ್ವಾತಂತ್ರ್ಯ ಅಮೃತಮಹೋತ್ಸವ, ಸ್ವಾತಂತ್ರ್ಯ ಹೋರಾಟಗಾರ ದೇಶಭಕ್ತ ಎನ್.ಎಸ್. ಕಿಲ್ಲೆ 120ನೇ ಜನ್ಮವರ್ಷಾಚರಣೆ, ಕಿಲ್ಲೆ ಮಹಾದ್ವಾರ ಲೋಕಾರ್ಪಣೆ ಅಂಗವಾಗಿ ಜ. 1 ರಂದು ಇಲ್ಲಿನ ಪುರಭವನದಲ್ಲಿ ನಡೆದ `ಕಿಲ್ಲೆ ಬದುಕು, ಬರಹ, ಅರ್ಥಗಾರಿಕೆ’ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗಾಂಧಿವಾದಿಯಾಗಿ ಗಾಂಧಿತತ್ವವನ್ನು ತುಳುಭಾಷೆಯಲ್ಲಿ ಬರೆದು ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಗಾಂಧಿತತ್ವವನ್ನು ಅನುಸರಿಸಬೇಕೆಂಬ ಆಶಯ ಕಿಲ್ಲೆಯವರಲ್ಲಿತ್ತು. ಹಳ್ಳಿಯ ಬದುಕಿನ ನೈಜಚಿತ್ರಣವನ್ನು ತನ್ನ ಸಾಹಿತ್ಯಗಳಲ್ಲಿ ಕೊಟ್ಟವರು. ಗಾಂಧಿತತ್ವದ ಮೇಲೆ ನಂಬಿಕೆಯಿರಿಸಿದ್ದ ಕಿಲ್ಲೆಯವರು ಸರ್ವೊದಯ ಪತ್ರಿಕೆ ನಡೆಸಿದರು. ಜನರ ಮಧ್ಯೆ ಮಾಧ್ಯಮವಾಗಿ ಪತ್ರಿಕೋದ್ಯಮವನ್ನು ಬಳಸಿಕೊಂಡರು. ಈ ದಿಶೆಯಲ್ಲಿ ಕಿಲ್ಲೆಯವರು ಒಂದು ಜಾತಿಯಲ್ಲಿ ಹುಟ್ಟಿದರೂ ಸರ್ವ ಸಮಾಜಕ್ಕೆ ಬೇಕಾದ ವ್ಯಕ್ತಿಯಾಗಿ ಪರಿವರ್ತನೆ ಹೊಂದಿದವರು. ಸರ್ವೋದಯ, ಸಮನ್ವಯ ಮತ್ತು ಸಮತೋಲನದ ಹಾದಿಯನ್ನು ನಾವೆಲ್ಲಾ ಅನುಸರಿಸಬೇಕಾಗಿದೆ ಎಂದು ಅವರು ಹೇಳಿದರು.

`ಕಿಲ್ಲೆ ಕನ್ನಡ ಬರಹ’ ವಿಷಯದಲ್ಲಿ ಮಾತನಾಡಿದ ವಿಶ್ರಾಂತ ಪ್ರಾಧ್ಯಾಪಕ, ಹಿರಿಯ ಸಾಹಿತಿ ವಿ.ಬಿ. ಅರ್ತಿಕಜೆಯವರು `ಕಿಲ್ಲೆಯವರಿಗೆ ಗಾಂಧೀಜಿಯವರ ಮೇಲೆ ಅಸಾಧಾರಣ ಭಕ್ತಿ ಗೌರವವಿತ್ತು. ಆತ್ಮಸಂತೃಪ್ತಿ ಮತ್ತು ಅಧ್ಯಾತ್ಮದ ಕಡೆಗೆ ಗಮನಹರಿಸಿದ್ದರು. ಸಹಜ ಪ್ರಾಸಗಳಿಂದ ಕವಿತೆಗಳನ್ನು ರಚಿಸಿ ಸಮಾಜಕ್ಕೆ ಅರ್ಥವಾಗುವ ರೀತಿಯಲ್ಲಿ ನೀಡಿದ್ದರು. `ಭಾರತದ ಕರ್ಣ’ ಕಥಾನಕದಲ್ಲಿ ಅವರಿಗೆ ಕರ್ಣ ಪ್ರಸನ್ನನಾಗಿರುವ ರೀತಿಯಲ್ಲಿ ಬರೆದಿದ್ದಾರೆ. ಕಿಲ್ಲೆಯವರ ಜೀವನವೂ ಕರ್ಣನಂತೆಯೇ ನಡೆದಿರುವುದು ಬಹಳ ವಿಶೇಷವಾಗಿದೆ’ ಎಂದರು.

`ಕಿಲ್ಲೆ ಬದುಕು’ ವಿಷಯದಲ್ಲಿ ಮಾತನಾಡಿದ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ್ ಚಂದ್ರಗಿರಿಯವರು `70-100 ವರ್ಷಗಳ ಹಿಂದೆ ಬದುಕಿದ ವ್ಯಕ್ತಿಯೋರ್ವರ ಬದುಕು ಇಂದಿನ ಕಾಲಕ್ಕೆ ಯಾಕೆ ಮುಖ್ಯ? ಮತ್ತು ಹೇಗೆ ಮುಖ್ಯ ಎಂಬುದನ್ನು ತಿಳಿದುಕೊಂಡು ಕಿಲ್ಲೆಯವರನ್ನು ನಮ್ಮವರನ್ನಾಗಿ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು. 3 ದಶಕಗಳಲ್ಲಿ ಅವರ ಒಟ್ಟು ಬದುಕಿನ ನಾಲ್ಕು ಸಿದ್ದಾಂತಗಳು ಈ ಕಾಲಕ್ಕೆ ಅತ್ಯಂತ ಪ್ರಸ್ತುತವೆನಿಸುತ್ತವೆ. ಕಿಲ್ಲೆಯವರು ಕ್ರಾಂತಿಯ ಬದಲಾಗಿ ಉತ್ಕ್ರಾಂತಿ ಅಥವಾ ವಿಕಾಸವನ್ನು ಬಲವಾಗಿ ನಂಬಿದ್ದರು. ಅವರ ಅನೇಕ ಸಮಾಜಪರ ಚಳುವಳಿಗಳು ಇದಕ್ಕೆ ನಿದರ್ಶನಗಳಾಗಿವೆ. ಉತ್ಕ್ರಾಂತಿಯ ಮೂಲಕವೇ ದೇಶದಲ್ಲಿ ಬದಲಾವಣೆ ಸಾಧ್ಯ ಎಂದು ಕಿಲ್ಲೆಯವರು ಹೇಳಿದ್ದರು. ಎರಡನೆಯದ್ದಾಗಿ ಕಿಲ್ಲೆಯವರ ಸರಳ ಜೀವನ. ಶ್ರೀಮಂತರಾಗುವ ಎಲ್ಲಾ ಅವಕಾಶಗಳನ್ನು ನಿರಾಕರಿಸಿ ಅವರು ಸರಳ ಜೀವನ ನಡೆಸಿದವರು. ಆದರೆ ಸಮಾಜಕ್ಕೆ ದಾನ ನೀಡುವ ವಿಚಾರದಲ್ಲಿ ಎಂದೂ ಜಿಪುಣತನ ತೋರಿಸಿದವರಲ್ಲ. ಮೂರನೆಯದ್ದಾಗಿ ಅವರು ಸಾರ್ವಜನಿಕ ಬದುಕಿನ ಜೊತೆಗೆ ಸಾಹಿತ್ಯ ಬದುಕನ್ನು ಜೊತೆಜೊತೆಯಾಗಿ ತೆಗೆದುಕೊಂಡು ಹೋದ ರೀತಿ ಅತ್ಯಂತ ಪ್ರಸ್ತುತ. ನೈತಿಕತೆಯ ವಿಚಾರದಲ್ಲೂ ಕಿಲ್ಲೆಯವರ ಬದುಕು ಈ ಕಾಲಕ್ಕೆ ಅತ್ಯಂತ ಪ್ರಸ್ತುತ ಎಂದು ಡಾ. ಚಂದ್ರಗಿರಿ ಹೇಳಿದರು.

`ಕಿಲ್ಲೆ ತುಳು ಬರಹ’ ವಿಷಯದಲ್ಲಿ ವಿಚಾರ ಮಂಡಿಸಿದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ| ತುಕರಾಮ ಪೂಜಾರಿಯವರು ಮಾತನಾಡಿ `ಕಿಲ್ಲೆಯವರ ತುಳು ಸಾಹಿತ್ಯಗಳು ಒಮ್ಮೆ ತುಳುನಾಡನ್ನು ಸುತ್ತಿ ಬಂದಷ್ಟು ಅನುಭವ ಧಾರೆ ಎರೆಯುತ್ತವೆ. ಅವರ ಎಲ್ಲಾ ಸಾಹಿತ್ಯಗಳಲ್ಲಿಯೂ ತುಳುನಾಡಿನ ನಾಗ ಮತ್ತು ನಾಗಬ್ರಹ್ಮನ ಬಗ್ಗೆ ಅತ್ಯಂತ ಭಕ್ತಿಯಿಂದ ಬರೆದಿದ್ದಾರೆ. ತುಳು ಕೃಷಿ ಸಂಸ್ಕೃತಿಯನ್ನೂ ಅತ್ಯಂತ ಮಾರ್ಮಿಕವಾಗಿ ಬಣ್ಣಿಸಿದ್ದಾರೆ’ ಎಂದರು.

`ಕಿಲ್ಲೆ ಅರ್ಥಗಾರಿಕೆ’ ವಿಷಯದಲ್ಲಿ ವಿಚಾರ ಮಂಡಿಸಿದ ಕರ್ನಾಟಕ ಜಾನಪದ ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ ‘ಯಕ್ಷಗಾನದಲ್ಲಿ ಕಿಲ್ಲೆಯವರು ನಾಯಕ ಮತ್ತು ಪ್ರತಿನಾಯಕ ಎರಡೂ ಪಾತ್ರವನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದವರು. ಶ್ರೇಣಿಯಂತಹ ವಿದ್ವಾಂಸ ಕಲಾವಿದರೇ ಕಿಲ್ಲೆಯವರ ಅರ್ಥಗಾರಿಕೆಯನ್ನು ಮೆಚ್ಚಿದ್ದರು. ಕಿಲ್ಲೆಯವರಿಗೆ ವೀರರಸ ಎಂದರೆ ಪ್ರಿಯವಾಗಿತ್ತು. ಕವಿಭೂಷಣ ಕೆ.ಪಿ. ವೆಂಕಪ್ಪ ಶೆಟ್ಟರ ನಂಟು ಇಟ್ಟುಕೊಂಡಿದ್ದ ಕಿಲ್ಲೆಯವರು ತನ್ನ ರಾಜಕೀಯ ಸಾಮಾಜಿಕ ಬದುಕಿನಲ್ಲಿ ಎಷ್ಟೇ ಒತ್ತಡವಿದ್ದರೂ ಅರ್ಥಗಾರಿಕೆಯನ್ನು ಅಷ್ಟೇ ಸೊಗಸಾಗಿ ನಿರ್ವಹಿಸುತ್ತಿದ್ದರು. ಸಂಸ್ಕೃತ ಸಾಹಿತ್ಯವನ್ನು ತಿಳಿದುಕೊಂಡ ಮೇಲಂತೂ ಕಿಲ್ಲೆಯವರ ಅರ್ಥಗಾರಿಕೆ ಪಕ್ವವಾಗಿತ್ತು. ಅವರ ಕರ್ಣನ ಪಾತ್ರವನ್ನು ಕೇಳಿ ಪ್ರೇಕ್ಷಕರು ಕಣ್ಣೀರು ಸುರಿಸಿದ್ದ ಸನ್ನಿವೇಶಗಳು ಅನೇಕ ಬಾರಿ ನಡೆದಿವೆ. ಕೆಲವೊಮ್ಮೆ ಕರ್ಣ ಯಾರು ಕಿಲ್ಲೆಯವರು ಯಾರು ಎಂದು ತಿಳಿಯದಷ್ಟು ರೀತಿಯಲ್ಲಿ ಕಿಲ್ಲೆಯವರ ಕರ್ಣನ ಅರ್ಥಗಾರಿಕೆ ನಡೆಯುತ್ತಿತ್ತು. ಯಾವುದೇ ಪಾತ್ರದಲ್ಲಾದರೂ ಅವರು ತಲ್ಲೀನತೆಯಿಂದ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದರು ಎಂದರು.

ಕಿಲ್ಲೆಯವರ ಸೋದರಳಿಯ, ಕಿಲ್ಲೆ ಪ್ರತಿಷ್ಠಾನದ ಅಧ್ಯಕ್ಷ ಕಡಮಜಲು ಸುಭಾಸ್ ರೈ ಸ್ವಾಗತಿಸಿದರು. ಸದಸ್ಯ ಮುಂಡಾಳಗುತ್ತು ಮೋಹನ ಆಳ್ವ ನಿರೂಪಿಸಿದರು. ಉಪಾಧ್ಯಕ್ಷ ಬೆದ್ರುಮಾರ್ ಜೈಶಂಕರ ರೈ ಶಾಲು, ಸ್ಮರಣಿಕೆ ನೀಡಿ ಗೌರವಿಸಿದರು.

ಕಿಲ್ಲೆಯವರ ಕವಿತೆಗಳನ್ನು ಪಠ್ಯಪುಸ್ತಕಕ್ಕೆ ಅಳವಡಿಸಬೇಕು
ಮುಂದಿನ ಯುವಜನಾಂಗ ಕಿಲ್ಲೆಯವರ ಸಿದ್ದಾಂತಗಳಿಂದ ಪ್ರಯೋಜನ ಪಡೆಯಬೇಕಾದರೆ ಅವರು ಬರೆದಿರುವ ಒಂದೆರಡು ಕವಿತೆಗಳನ್ನಾದರೂ ಪಠ್ಯಪುಸ್ತಕಗಳಲ್ಲಿ ಅಳವಡಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಪ್ರೊ. ವಿ.ಬಿ. ಅರ್ತಿಕಜೆ ಹೇಳಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.