ಪುತ್ತೂರಿನಲ್ಲಿ ಶೀಘ್ರದಲ್ಲೇ ಬೃಹತ್ ಕೈಗಾರಿಕಾ ಕಾರಿಡಾರ್ – ಪ್ರತಿಷ್ಠಿತ ಉದ್ಯಮಗಳಿಂದ ಕೈಗಾರಿಕೆ ಸ್ಥಾಪನೆ

0

  • ಕಟಾರದಲ್ಲಿ 100 ಎಕ್ರೆ ಜಮೀನು ಗುರುತು
  • ಕೆಲವೇ ದಿನಗಳಲ್ಲಿ ಸರ್ವೆ ಕಾರ್ಯ

ಪುತ್ತೂರು: ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಪುತ್ತೂರಿನ ಸಾವಿರಾರು ಯುವಕ- ಯುವತಿಯರಿಗೆ ಉದ್ಯೋಗ ನೀಡುವ ಉದ್ದೇಶ ಮತ್ತು ಕೈಗಾರಿಕಾಭಿವೃದ್ಧಿಗಾಗಿ ಪುತ್ತೂರಿನಲ್ಲಿ ಬೃಹತ್ ಕೈಗಾರಿಕಾ ಕಾರಿಡಾರ್ ನಿರ್ಮಾಣ ಆಗಲಿದ್ದು, ಪ್ರತಿಷ್ಠಿತ ಉದ್ಯಮಗಳಿಂದ ಕೈಗಾರಿಕಾ ಸ್ಥಾಪನೆಗೆ ಚಿಂತನೆಯು ನಡೆದಿದ್ದು, ಇದಕ್ಕಾಗಿ ಚಿಕ್ಕಮುಡ್ನೂರು ಗ್ರಾಮದ ಕಟಾರ ಎಂಬಲ್ಲಿ 100 ಎಕ್ರೆ ಜಮೀನನ್ನು ಗುರುತಿಸಿದ್ದು ಅದರ ಸರ್ವೆ ಕಾರ್ಯ ಅತೀ ಶೀಘ್ರದಲ್ಲಿ ನಡೆಯಲಿದೆ.

ಕೈಗಾರಿಕಾ ಕಾರಿಡಾರ್ ಅನುಷ್ಠಾನದ ಹೊಣೆಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ವಹಿಸಿಕೊಳ್ಳಲಿದೆ.ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ನಾನಾ ಭಾಗಗಳ ಪ್ರತಿಷ್ಠಿತ ಉದ್ಯಮಗಳು ಪುತ್ತೂರಿನಲ್ಲಿ ಕೈಗಾರಿಕೆ ಸ್ಥಾಪಿಸಲು ಅವಕಾಶ ನೀಡಲಾಗುತ್ತದೆ.ಈ ಮೂಲಕ ಪುತ್ತೂರಿನ ಸಾವಿರಾರು ಯುವಕ-ಯುವತಿಯರಿಗೆ ಉದ್ಯೋಗ ಸಿಗುವ ನಿರೀಕ್ಷೆ ಹೊಂದಲಾಗಿದೆ.

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಭೂಸ್ವಾಧೀನ ವಿಭಾಗದ ಭೂಸ್ವಾಧೀನ ಅಧಿಕಾರಿ ಬಿನೋಯ್‌ರವರು ದ.೪ರಂದು ಪುತ್ತೂರಿಗೆ ಭೇಟಿ ನೀಡಿದ್ದು, ದರ್ಬೆ ಪ್ರವಾಸಿ ಮಂದಿರದಲ್ಲಿ ಶಾಸಕ ಸಂಜೀವ ಮಠಂದೂರು ಜತೆ ಸಮಾಲೋಚನೆ ನಡೆಸಿದರು.ತಹಸೀಲ್ದಾರ್ ರಮೇಶ್ ಬಾಬು, ವಲಯ ಅರಣ್ಯ ಅಧಿಕಾರಿ ಬಿ.ಎಂ.ಕಿರಣ್, ಎಡಿಎಲ್‌ಆರ್ ರಮಾದೇವಿ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.

ಕಟಾರದಲ್ಲಿ ಕಾರಿಡಾರ್: ಚಿಕ್ಕಮುಡ್ನೂರು ಗ್ರಾಮದ ಕಟಾರ ಎಂಬಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣವಾಗಲಿದೆ.ಇದಕ್ಕಾಗಿ ೧೦೦ ಎಕರೆ ಜಮೀನು ಗುರುತಿಸಲಾಗಿದೆ. ಮುಂದಿನ ಹಂತದಲ್ಲಿ ಸರ್ವೆ ಕಾರ್ಯ ನಡೆಯಲಿದೆ.ಈ ಜಮೀನಿನಲ್ಲಿ ಸರಕಾರಿ ಜಾಗದ ಲಭ್ಯತೆಯ ಬಗ್ಗೆ ಪರಿಶೀಲಿಸಲಾಗುತ್ತದೆ.ಖಾಸಗಿ ಜಮೀನು, ಅರಣ್ಯ ಜಮೀನು ಇದೆಯೇ ಎಂಬುದನ್ನೂ ಸಮೀಕ್ಷೆ ಮಾಡಲಾಗುತ್ತದೆ. ೧೦೦ ಎಕರೆ ಜಮೀನು ಸ್ವಾಧೀನಪಡಿಸಿಕೊಂಡರೆ ಮೂಲಸೌಕರ್ಯಕ್ಕೆ ಅದರಲ್ಲಿ ಒಂದಷ್ಟು ಜಮೀನು ಹೋಗುತ್ತದೆ.ಉಳಿದುದನ್ನು ಸೈಟ್ ಮಾಡಿ ಹಂಚಲು ಸಾಧ್ಯವಾಗುತ್ತದೆ ಎಂದು ಬಿನೋಯ್ ಸಭೆಗೆ ತಿಳಿಸಿದರು.ತಾಲೂಕಿನ ಇತರ ಕಡೆ ಕೂಡ ಜಮೀನು ಪರಿಶೀಲಿಸಲಾಗಿದೆ.ಆದರೆ ಕಟಾರದ ಜಮೀನು ಸಮೀಪ ಕುಮಾರಧಾರಾ ನದಿ ಇರುವ ಕಾರಣ ನೀರಿನ ಆಶ್ರಯ ಸುಲಭ.ಈ ಕಾರಣಕ್ಕೆ ಇದನ್ನು ಆಯ್ಕೆ ಮಾಡಲಾಗಿದೆ ಎಂದರು.

ಜಗದೀಶ್ ಶೆಟ್ಟರ್ ಸಚಿವರಾಗಿದ್ದಾಗ ಪುತ್ತೂರಿನಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಾಣ ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದೆ.ಹಾಲಿ ಸಚಿವ ಮುರುಗೇಶ್ ನಿರಾಣಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ.ಅವರು ಒಪ್ಪಿಗೆ ನೀಡಿದ ಮೇಲೆಯೇ ಭೂಸ್ವಾಧೀನಾಧಿಕಾರಿ ಪುತ್ತೂರಿಗೆ ಬಂದಿದ್ದಾರೆ.ಕೆಲವೇ ದಿನಗಳಲ್ಲಿ ಸರ್ವೆ ಕಾರ್ಯ ನಡೆಯಲಿದೆ.10 ದಿನಗಳ ನಂತರ ಇನ್ನೊಂದು ಸಭೆ ನಡೆಯಲಿದೆ.ಕೆಐಎಡಿಬಿಯು ಜಮೀನು ಸ್ವಾಧೀನಕ್ಕೆ ಪಡೆದುಕೊಂಡು ಮೂಲಸೌಕರ್ಯ ಅಭಿವೃದ್ಧಿಪಡಿಸುತ್ತದೆ.ದಕ್ಷಿಣ ಕನ್ನಡ ಮೂಲದ ಕೈಗಾರಿಕೋದ್ಯಮಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.ಇಲ್ಲಿ ಸ್ಥಾಪನೆಯಾಗುವ ಕೈಗಾರಿಕೆಗಳಿಂದ ಪುತ್ತೂರಿನ ಜನರಿಗೆ ಉದ್ಯೋಗ ಸಿಗಲಿದೆ.ತಾಲೂಕಿನ ಅರಿಯಡ್ಕ ಗ್ರಾಮದಲ್ಲಿ 5 ಎಕರೆ ಮತ್ತು ಆರ್ಯಾಪು ಗ್ರಾಮದಲ್ಲಿ 15 ಎಕರೆ ಸ್ಥಳಗಳನ್ನು ಗುರುತಿಸಿ ಸರ್ವೆ ನಡೆಸಲಾಗಿದೆ.ಇಲ್ಲಿ ಸಣ್ಣ ಕೈಗಾರಿಕೆಗಳ ಸ್ಥಾಪನೆ ಸಂಬಂಧ ಕೈಗಾರಿಕಾ ಪ್ರಾಂಗಣ ನಿರ್ಮಿಸಲಾಗುವುದು – ಸಂಜೀವ ಮಠಂದೂರು, ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here