ನಗರಸಭೆಯ ಪೌರಾಯುಕ್ತರ ಸಹಿತ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ: ಆರೋಪಿಗಳು ದೋಷಮುಕ್ತ

0

ಪುತ್ತೂರು: 4 ವರ್ಷಗಳ ಹಿಂದೆ ಬಲ್ನಾಡು ಗ್ರಾಮದ ಸುಂಕದಮೂಲೆ ಎಂಬಲ್ಲಿ ಪುತ್ತೂರು ನಗರಸಭಾ ಪೌರಾಯುಕ್ತರ ಮತ್ತು ನಗರಸಭೆಯ ಇತರ ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದ ಆರೋಪಿಗಳಾದ ಸಫಿಯ ಮತ್ತು ಮುಸ್ತಾಫರವರನ್ನು ಪುತ್ತೂರಿನ ಹೆಚ್ಚುವರಿ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
ದಿನಾಂಕ 03-07-2018ರಂದು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ಸುಂಕದಮೂಲೆ ಎಂಬಲ್ಲಿ ನಗರಸಭೆ ಆಶ್ರಯ ನಿವೇಶನಕ್ಕೆ ಮೀಸಲಿಟ್ಟ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಸಿಮೆಂಟ್ ಶೀಟಿನ ಶೆಡ್‌ನ್ನು ತೆರವು ಮಾಡಲು ಪೂರ್ವಾಹ್ನ 11-30 ಗಂಟೆಗೆ ನಗರಸಭೆಯ ಪೌರಾಯುಕ್ತೆ ರೂಪ ಟಿ.ಶೆಟ್ಟಿ, ಅಧಿಕಾರಿಗಳಾದ ಸಹಾಯಕ ಕಾರ್ಯಪಾಲಕ ಅಭಿಯಂತರ ಪುರಂದರ ಕೋಟ್ಯಾನ್, ಕಂದಾಯ ಅಧಿಕಾರಿ ಬಿ. ರಾಮಯ್ಯ ಗೌಡ, ಸಹಾಯಕ ಅಭಿಯಂತರ ಅರುಣ್, ಕಿರಿಯ ಅಭಿಯಂತರ ದಿವಾಕರ್ ಕೆ, ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ ಕೆ, ಶ್ವೇತಾಕಿರಣ್, ತೆರಿಗೆ ವಸೂಲಿದಾರ ರಾಜೇಶ್ ನಾಯ್ಕ್, ಸೀನಿಯರ್ ವಾಲ್ ಮ್ಯಾನ್ ಗಣೇಶ್ ರಾವ್ ಮತ್ತು ನಗರ ಸಭೆಯ ಇತರ ಕಾರ್ಮಿಕರು ಅನಧಿಕೃತ ಶೆಡ್‌ನ್ನು ತೆರವುಗೂಳಿಸಲು ಪ್ರಾರಂಭಿಸುವ ಮುನ್ನ ಶೆಡ್‌ನಲ್ಲಿದ್ದ ಸಫಿಯಾ ಮತ್ತು ಮುಸ್ತಾಫಾರವರನ್ನು ತೆರವು ಮಾಡಲು ಸೂಚಿಸಿ ಸಾಕಷ್ಟು ಕಾಲಾವಕಾಶ ನೀಡಿದರೂ ಅವರು ಅದಕ್ಕೆ ಒಪ್ಪದೇ ಇದ್ದಾಗ ನಗರಸಭೆಯ ವತಿಯಿಂದ ತೆರವು ಮಾಡಲು ಪ್ರಾರಂಭಿಸಿದಾಗ ಸಫಿಯಾ ಮತ್ತು ಮುಸ್ತಾಫರವರು ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿದ್ದಾರೆ ಎಂದು ರೂಪ ಟಿ. ಶೆಟ್ಟಿಯವರು ಸಂಪ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಭಾರತೀಯ ದಂಡ ಸಂಹಿತೆ ಕಲಂ 341, 353, 34 ರನ್ವಯದಂತೆ ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ಪೂರ್ಣಗೊಳಿಸಿದ ಪೊಲೀಸರು ಆರೋಪಿಗಳಾದ ಸಫಿಯಾ ಮತ್ತು ಮುಸ್ತಾಫಾರವರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಮಧ್ಯೆ ಆರೋಪಿಗಳು ಜಾಮೀನು ಪಡೆದುಕೊಂಡಿದ್ದರು.
ನ್ಯಾಯಾಲಯ ಪ್ರಕರಣದ ತನಿಖೆ ಕೈಗೆತ್ತಿಕೊಂಡು 15 ಸಾಕ್ಷಿಗಳನ್ನು ತನಿಖೆ ನಡೆಸಿದ್ದು ಪ್ರಾಸಿಕ್ಯೂಷನ್ ಈ ಪ್ರಕರಣವನ್ನು ಸಂಶಯಾತೀತವಾಗಿ ಸಾಭೀತುಪಡಿಸಲು ವಿಫಲಗೊಂಡಿದೆ ಎಂದು ತಿರ್ಮಾನಿಸಿ ನ್ಯಾಯಾಧೀಶೆ ನಿರ್ಮಲ ಕೆ. ರವರು ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ. ೨ನೇ ಆರೋಪಿ ಮುಸ್ತಾಫ ರವರ ಪರ ವಕೀಲ ಮಹೇಶ್ ಕಜೆ ವಾದಿಸಿದ್ದರು.

LEAVE A REPLY

Please enter your comment!
Please enter your name here