ಚರ್ಚೆಗೀಡಾದ ಗ್ರಾ.ಪಂ.ನ ಆಕ್ಷೇಪಣಾ, ನಿರಾಪೇಕ್ಷಣಾ ನಿರ್ಣಯಗಳು!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • 34 ನೆಕ್ಕಿಲಾಡಿ ಗ್ರಾ.ಪಂ. ಗ್ರಾಮ ಸಭೆ

ಉಪ್ಪಿನಂಗಡಿ: ಬೊಳಂತಿಲ ಹೊಸ ಕಾಲನಿಯಲ್ಲಿ ಪೆಟ್ರೋಲ್ ಪಂಪ್‌ವೊಂದರ ಕಾಮಗಾರಿ ನಡೆಯುತ್ತಿದೆ. ಇಲ್ಲಿ ಪೆಟ್ರೋಲ್ ಪಂಪ್ ನಿರ್ಮಾಣವಾದರೆ ಸುಮಾರು ೩೫ ಮನೆಗಳಿಗೆ ತೊಂದರೆಯಾಗುತ್ತದೆ ಎಂದು ೩೪ ನೆಕ್ಕಿಲಾಡಿ ಗ್ರಾ.ಪಂ. ಆಡಳಿತ ಮಂಡಳಿ ಕಳೆದ ಮಾರ್ಚ್ ತಿಂಗಳಲ್ಲಿ ಪೆಟ್ರೋಲ್ ಪಂಪ್ ನಿರ್ಮಾಣಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನಿರ್ಣಯ ತೆಗೆದುಕೊಂಡಿತ್ತು. ಆದರೆ ಬಳಿಕ ಅದೇ ಆಡಳಿತ ಮಂಡಳಿ ಜುಲೈ ತಿಂಗಳ ಸಾಮಾನ್ಯ ಸಭೆಯಲ್ಲಿ ಪೆಟ್ರೋಲ್ ಪಂಪ್‌ಗೆ ನಿರಾಪೇಕ್ಷಣಾ ಪತ್ರ ನೀಡುವ ಕುರಿತು ನಿರ್ಣಯ ಕೈಗೊಂಡಿದೆ. ಗ್ರಾ.ಪಂ. ಸದಸ್ಯರ ಈ ನಡೆಯು ಸಂಶಯಕ್ಕೆ ಕಾರಣವಾಗಿದ್ದು, ಈ ರೀತಿಯ ನಿರ್ಣಯಗಳಿಗೆ ಕಾರಣವೇನೆಂಬ ಎಂಬ ಪ್ರಶ್ನೆ ೩೪ ನೆಕ್ಕಿಲಾಡಿ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಕೇಳಿ ಬಂತು.

ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಎನ್. ಅವರ ಅಧ್ಯಕ್ಷತೆಯಲ್ಲಿ ಜ.೫ರಂದು ೩೪ ನೆಕ್ಕಿಲಾಡಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಗ್ರಾ.ಪಂ.ನ ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥ ಖಲಂದರ್ ಶಾಫಿ, ಈ ಹಿಂದೆ ಸರಕಾರ ನೀಡಿದ ಮನೆ ನಿವೇಶನದಲ್ಲಿ ಈ ಪೆಟ್ರೋಲ್ ಪಂಪ್ ಆಗುತ್ತಿದೆ. ಸರಕಾರ ಮನೆ ನಿವೇಶನಕ್ಕೆಂದು ನೀಡಿದ ನಾಲ್ಕು ಆರ್‌ಟಿಸಿಗಳನ್ನು ಇಲ್ಲಿ ವಾಣಿಜ್ಯ ಭೂಪರಿವರ್ತನೆ ಮಾಡಿ ಪೆಟ್ರೋಲ್ ಪಂಪ್ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಲೋಕೋಪಯೋಗಿ ಇಲಾಖೆಯ ರಸ್ತೆ ಮಾರ್ಜಿನ್‌ನಲ್ಲೇ ಈ ಕಟ್ಟಡದ ಫಿಲ್ಲರ್ ಬರುತ್ತಿದೆ. ಅಲ್ಲದೇ, ಇದು ಹಲವು ಮನೆಗಳಿರುವ ಕಾಲನಿಯಾಗಿದೆ. ಇಲ್ಲಿ ಪೆಟ್ರೋಲ್ ಪಂಪ್ ಆದರೆ ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗಲಿದೆ ಎಂದು ಆರೋಪಿಸಿದರು.


ಈ ಸಂದರ್ಭ ಗ್ರಾಮಸ್ಥ ಇಸ್ಮಾಯೀಲ್ ಅವರು ಮಾತನಾಡಿ ಕಾನೂನಾತ್ಮಕವಾಗಿಯೇ ಈ ಪೆಟ್ರೋಲ್ ಪಂಪ್ ರಚನೆಯಾಗುತ್ತಿದೆ. ಎಲ್ಲಾ ಇಲಾಖೆಗಳ ಎನ್‌ಒಸಿ ನೀಡಿಯೇ ಗ್ರಾ.ಪಂ.ನಿಂದ ಪರವಾನಿಗೆ ಪಡೆಯಲಾಗಿದೆ ಎಂದರು.

ಅಧ್ಯಕ್ಷ ಪ್ರಶಾಂತ್ ಮಾತನಾಡಿ, ಇದಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಎನ್‌ಒಸಿ ಸೇರಿದಂತೆ ಇವರು ನೀಡಿದ ದಾಖಲೆ ಕಾನೂನು ಬದ್ಧವಾಗಿದ್ದ ಕಾರಣ ಇದಕ್ಕೆ ಗ್ರಾ.ಪಂ. ವತಿಯಿಂದ ಪರವಾನಿಗೆ ನೀಡಲಾಗಿದೆ. ಕಳೆದ ಮಾರ್ಚ್‌ನಲ್ಲಿ ಇಲ್ಲಿ ಪೆಟ್ರೋಲ್ ಪಂಪ್ ನಿರ್ಮಾಣವಾದರೆ ಅಲ್ಲಿನ ಸುತ್ತಮುತ್ತಲಿನ ಮನೆಗಳವರಿಗೆ ತೊಂದರೆಯಾಗಬಹುದೆಂದ ಕಾರಣದಿಂದ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಬಳಿಕ ಅಲ್ಲಿನ ಮನೆಗಳವರನ್ನು ವಿಚಾರಿಸಿದಾಗ ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ತಿಳಿಯಿತು. ಆದ್ದರಿಂದ ಜುಲೈನಲ್ಲಿ ಪೆಟ್ರೋಲ್ ಪಂಪ್‌ಗೆ ನಿರಾಪೇಕ್ಷಣ ಪತ್ರ ನೀಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಮಜಾಯಿಸಿ ನೀಡಿದರಲ್ಲದೆ, ರಸ್ತೆ ಮಾರ್ಜಿನ್ ಅತಿಕ್ರಮಣವಾಗುವುದಿದ್ದಲ್ಲಿ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಆಗ ಖಲಂದರ್ ಶಾಫಿ ಮಾತನಾಡಿ, ಅಲ್ಲಿನ ನಿವಾಸಿಗಳೇ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಗ್ರಾ.ಪಂ.ಗೆ ದೂರು ನೀಡುತ್ತಾರೆ ಎಂದಾಗ, ಆ ಬಗ್ಗೆ ಮತ್ತೆ ಪರಿಶೀಲಿಸಿಸೋಣ ಎಂದು ಅಧ್ಯಕ್ಷರು ತಿಳಿಸಿದರು.

ಗ್ರಾಮಸ್ಥ ಜತೀಂದ್ರ ಶೆಟ್ಟಿ ಮಾತನಾಡಿ, ಮೈಂದಡ್ಕ ಮೈದಾನವನ್ನು ಗ್ರಾ.ಪಂ. ಹಾಳುಗೆಡವಿದ ಬಗ್ಗೆ ನಾನು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದೆ. ಆದಕ್ಕೆ ಪಿಡಿಒ ಪರವಾಗಿ ವಾದಮಂಡಿಸಿದ್ದಕ್ಕಾಗಿ ನ್ಯಾಯವಾದಿಯ ಫೀಸು ೧೦ ಸಾವಿರವನ್ನು ಗ್ರಾ.ಪಂ.ನಿಂದ ತೆಗೆಯಲಾಗಿದೆ. ಗ್ರಾ.ಪಂ.ನಲ್ಲಿ ಅಕ್ರಮಗಳು ನಡೆದಾಗ ಅದನ್ನು ಪ್ರಶ್ನಿಸಿ ಇನ್ನಷ್ಟು ಕಾನೂನು ಹೋರಾಟವನ್ನು ನಾನು ಮಾಡುತ್ತೇನೆ. ಆಗೆಲ್ಲಾ ಖರ್ಚಾಗುವ ಹಣವನ್ನು ಗ್ರಾ.ಪಂ.ನ ನಿಧಿಯಿಂದ ತೆಗೆಯುವುದು ಎಷ್ಟು ಸರಿ. ಇದಕ್ಕೆ ನನ್ನ ಆಕ್ಷೇಪಣೆ ಇದೆ. ಗ್ರಾ.ಪಂ.ನ ನಿಧಿ ಎಲ್ಲಾ ಗ್ರಾಮಸ್ಥರಿಗೆ ಸೇರಿದ್ದು. ಇದು ಗ್ರಾಮದ ಅಭಿವೃದ್ಧಿಗೆ ಬಳಕೆಯಾಗಬೇಕು. ಅಭಿವೃದ್ಧಿ ಕಾರ್ಯಕ್ಕೆ ನನ್ನ ಬೆಂಬಲವಿದೆ. ಆದರೆ ನೀವು ಎಡವಟ್ಟುಗಳನ್ನು ಮಾಡಿಕೊಂಡು ಅದಕ್ಕೆ ಕಾನೂನು ಹೋರಾಟಕ್ಕೆ ಗ್ರಾಮ ಪಂಚಾಯತ್ ನಿಧಿಯನ್ನು ದುರುಪಯೋಗಪಡಿಸುವುದು ಸರಿಯಲ್ಲ ಎಂದರು.

ಇದಕ್ಕೆ ಉತ್ತರ ನೀಡಿದ ಅಧ್ಯಕ್ಷ ಪ್ರಶಾಂತ್, ಪಿಡಿಒ ಸರಕಾರಿ ನೌಕರ. ಇದು ಅವರ ವೈಯಕ್ತಿಕ ವ್ಯಾಜ್ಯವಲ್ಲ. ಗ್ರಾಮಕ್ಕೆ ಸಂಬಂಧಿಸಿದ್ದು, ಆದ ಕಾರಣ ಅವರಿಗೆ ನ್ಯಾಯವಾದಿಯ ಖರ್ಚನ್ನು ಭರಿಸಲು ಗ್ರಾ.ಪಂ. ನಿಧಿಯನ್ನು ಬಳಕೆ ಮಾಡಲಾಗಿದೆ ಎಂದರು. ಈ ಬಗ್ಗೆ ಪರ ವಿರೋಧ ಚರ್ಚೆಗಳಾದಾಗ ಕೊನೆಗೇ ಸರಕಾರಿ ಅಧಿಕಾರಿಗೆ ಸರಕಾರಿ ವಕೀಲರನ್ನು ನೇಮಿಸಬೇಕು ಎಂಬ ಸುತ್ತೋಲೆ ಇದೆ. ಅದರಂತೆ ಮುನ್ನಡೆಯಿರಿ ಎಂದು ಗ್ರಾಮಸ್ಥ ಅಸ್ಕರ್ ಅಲಿ ಹೇಳಿದರು. ಬಳಿಕ ಈ ಚರ್ಚೆಗೆ ತೆರೆ ಬಿತ್ತು.

ಗ್ರಾ.ಪಂ.ನ ಈಗಿನ ಆಡಳಿತ ಮಂಡಳಿ ಅಧಿಕಾರ ಪಡೆದ ಬಳಿಕ ವ್ಯಾಪಾರ ಪರವಾನಿಗೆಯನ್ನು ಮನಸ್ಸೋ ಇಚ್ಚೇ ಏರಿಸಿದೆ. ೩೦೦ ರೂಪಾಯಿ ತೆರಿಗೆ ಕಟ್ಟುತ್ತಿದ್ದ ಅಂಗಡಿಗಳವರು ಈಗ ೧೦೦೦ ರೂಪಾಯಿ ಕಟ್ಟುವಂತಾಗಿದೆ. ಯಾವ ಮಾನದಂಡದಲ್ಲಿ ಈ ರೀತಿ ತೆರಿಗೆ ಏರಿಸಲಾಗಿದೆ. ಇದಕ್ಕಾಗಿ ಬೈಲಾ ಮಾಡಿ ಅದಕ್ಕೆ ಜಿ.ಪಂ.ನಿಂದ ಅನುಮೋದನೆ ಪಡೆಯಲಾಗಿದೆಯೇ ಎಂದು ಖಲಂದರ್ ಶಾಫಿ ಸ್ಪಷ್ಟನೆ ಕೇಳಿದರು. ಇದನ್ನು ಬೆಂಬಲಿಸಿ ಮಾತನಾಡಿದ ಅಸ್ಕರ್ ಅಲಿ, ಅಬ್ದುರ್ರಹ್ಮಾನ್ ಯುನಿಕ್, ರೂಪೇಶ್ ರೈ ಅವರು, ತೆರಿಗೆ ಪರಿಷ್ಕರಣೆ ಮಾಡುವಾಗ ಕೆಲವೊಂದು ಮಾನದಂಡಗಳನ್ನು ನೀಡಿ ಸರಕಾರ ಸುತ್ತೋಲೆ ಹೊರಡಿಸಿದೆ. ಅದರಂತೆ ಶೇ.೨೫ರಷ್ಟು ಮಾತ್ರ ಏರಿಕೆ ಮಾಡಬಹುದು. ಆದರೆ ಇಲ್ಲಿ ಅದು ನಡೆದಿಲ್ಲ ಎಂದರು. ಅದಕ್ಕೆ ಸ್ಪಷ್ಟನೆ ನೀಡಿದ ಅಧ್ಯಕ್ಷ ಪ್ರಶಾಂತ್ ಎನ್., ಹಲವು ವರ್ಷಗಳಿಂದ ಗ್ರಾಮದಲ್ಲಿ ತೆರಿಗೆ ಪರಿಷ್ಕರಿಸಿರಲಿಲ್ಲ. ಆದ್ದರಿಂದ ಈ ರೀತಿ ಮಾಡಲಾಗಿದೆ ಎಂದರು. ಆದರೆ ಇದಕ್ಕೆ ಹಲವು ವಿರೋಧಗಳು ಸಭೆಯಲ್ಲಿ ವ್ಯಕ್ತವಾದವು. ಈ ಸಂದರ್ಭ ಮಾತನಾಡಿದ ಅನಿ ಮಿನೇಜಸ್, ನೀವು ತೆರಿಗೆ ವಿಧಿಸುವಾಗ ತಾರತಮ್ಯ ನೀತಿ ಅನುಸರಿಸಿದ್ದೀರಿ. ಕೆಲವರಿಗೆ ದೊಡ್ಡ ಮೊತ್ತದ ತೆರಿಗೆ ಹಾಕಿದರೆ, ಅದೇ ಸ್ವರೂಪದ ಕೆಲವರ ಅಂಗಡಿಗೆ ಕಡಿಮೆ ಮೊತ್ತದ ತೆರಿಗೆ ವಿಧಿಸಿದ್ದೀರಿ ಎಂದು ಗಂಭೀರ ಆರೋಪ ಮಾಡಿದರು. ಈ ರೀತಿ ಆಗಿಲ್ಲ ಎಂದು ಅಧ್ಯಕ್ಷ ಹಾಗೂ ಪಿಡಿಒ ಅವರು ಸ್ಪಷ್ಟನೆ ನೀಡಿದಾಗ, ಮಾತು ಮುಂದುವರಿಸಿದ ಅನಿ ಮಿನೇಜಸ್ ಅವರು, ನಿಮ್ಮ ಕಡತವನ್ನು ತನ್ನಿ. ನಾನು ದಾಖಲೆ ನೀಡಬೇಕಾ ಎಂದು ಮರು ಪ್ರಶ್ನಿಸಿದಾಗ ಅಧ್ಯಕ್ಷರು ಹಾಗೂ ಪಿಡಿಒ ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿ ಮೌನವಾದರು. ಕೊನೆಗೇ ಮುಂದಕ್ಕೆ ಶೇ.೨೫ರಷ್ಟು ತೆರಿಗೆಯನ್ನು ಮಾತ್ರ ವಿಧಿಸಬೇಕು ಎಂದು ಗ್ರಾಮಸ್ಥರು ಸೂಚಿಸಿದಾಗ, ಅದಕ್ಕೆ ಒಪ್ಪಿಗೆ ನೀಡಲಾಯಿತು. ೩೦೦ ರೂಪಾಯಿ ತೆರಿಗೆ ಕಟ್ಟುತ್ತಿದ್ದ ನಮ್ಮ ಅಂಗಡಿಯಿಂದ ಈಗ ೧೦೦೦ ರೂಪಾಯಿ ತೆರಿಗೆ ವಸೂಲು ಮಾಡಲಾಗಿದೆ. ಅದನ್ನು ವಾಪಸ್ ಕೊಡುತ್ತೀರಾ ಎಂದು ಶಬೀರ್ ಅಹಮ್ಮದ್ ಅವರು ಇದೇ ಸಂದರ್ಭ ಪ್ರಶ್ನಿಸಿದರು.

ಆಶಾ ಕಾರ್ಯಕರ್ತೆಯರು ತಿಂಗಳಿಗೆ ಎರಡು ಬಾರಿ ಪ್ರತಿ ಮನೆಗೆ ಭೇಟಿ ನೀಡಬೇಕು ಎಂದು ಹೇಳಿದಾಗ ತಾಳೆಹಿತ್ಲುವಿನಲ್ಲಿ ನನ್ನ ಮನೆಯಿದ್ದು, ನನ್ನ ಮನೆಗೆ ಆಶಾ ಕಾರ್ಯಕರ್ತೆಯರು ಬರುತ್ತಿಲ್ಲ. ಕೋವಿಡ್ ರೋಗಿಯ ಸಾಮೀಪ್ಯದಿಂದಾಗಿ ನಾನು ಕೊರಂಟೈನ್‌ನಲ್ಲಿದ್ದಾಗಲೂ ಆಶಾ ಕಾರ್ಯಕರ್ತೆ ಭೇಟಿ ನೀಡಿಲ್ಲ. ಜಂತು ಹುಳದ ಮಾತ್ರೆ ಸೇರಿದಂತೆ ಆರೋಗ್ಯ ಇಲಾಖೆಯಿಂದ ನೀಡಲಾಗುವ ಯಾವುದೇ ಸೇವೆಯನ್ನು ಆಶಾ ಕಾರ್ಯಕರ್ತೆ ನನಗೆ ನೀಡಿಲ್ಲ ಎಂದು ಆರೋಪಿಸಿದರು. ಈ ಸಂದರ್ಭ ಆಶಾ ಕಾರ್ಯಕರ್ತೆ ಬಬಿತಾ ಮಿನೇಜಸ್ ಆವೇಶಭರಿತರಾಗಿ ಮಾತನಾಡಿ ಅಲ್ಲಿ ನಾಯಿ ಇದೆ. ಅದಕ್ಕೆ ಹೋಗುತ್ತಿಲ್ಲ ಎಂದರಲ್ಲದೆ, ಸಭೆಯಲ್ಲಿ ಬೊಬ್ಬೆ ಹೊಡೆದು ಮಾತನಾಡತೊಡಗಿದರು. ಇದನ್ನು ಇತರ ಗ್ರಾಮಸ್ಥರು ವಿರೋಧಿಸಿ, ಅವರು ಅವರ ಸಮಸ್ಯೆಯನ್ನು ಅಧಿಕಾರಿಗಳಲ್ಲಿ ಹೇಳಿದ್ದು. ಗ್ರಾಮ ಸಭೆ ಅದಕ್ಕಂತಲೇ ಇರುವುದು. ನೀವು ಮಾತನಾಡುವುದಿದ್ದರೆ ನಿಮ್ಮ ಮೀಟಿಂಗ್‌ನಲ್ಲಿ ನಿಮ್ಮ ಅಧಿಕಾರಿಯಲ್ಲಿ ಮಾತನಾಡಿ. ನಮಗೆ ಇದಕ್ಕೆ ಅಧಿಕಾರಿ ಉತ್ತರ ಕೊಡಬೇಕು ಎಂದರು. ಈ ಸಂದರ್ಭ ಸಭೆಯಲ್ಲಿ ಗದ್ದಲವುಂಟಾದಾಗ ಪೊಲೀಸರು ಮಧ್ಯಪ್ರವೇಶ ಮಾಡಿ ಆಶಾ ಕಾರ್ಯಕರ್ತೆಯನ್ನು ಕುಳಿತುಕೊಳ್ಳುವಂತೆ ಮಾಡಬೇಕಾಯಿತು.

ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯರು ಇದ್ದಾರೆ ಅಂತ ಹೇಳುತ್ತೀರಿ. ಆದರೆ ಅಲ್ಲಿ ಸ್ಕ್ಯಾನಿಂಗ್ ಮೆಷಿನ್, ಎಕ್ಸ್‌ರೇ ಯಂತ್ರಗಳು ಇಲ್ಲ. ಅವುಗಳಿಗೆ ನಾವು ಪುತ್ತೂರು ಸರಕಾರಿ ಆಸ್ಪತ್ರೆಗೆ ಹೋಗುವ ಪರಿಸ್ಥಿತಿ. ಆದ್ದರಿಂದ ಇಲ್ಲಿ ತಜ್ಞ ವೈದ್ಯರು ಇದ್ದು ಏನು ಪ್ರಯೋಜನ ಎಂದು ಅಬ್ದುರ್ರಹ್ಮಾನ್ ಯುನಿಕ್ ಹೇಳಿದರು. ಖಲಂದರ್ ಶಾಫಿ ಮಾತನಾಡಿ, ಇದು ಬೆಟ್ಟ ಗುಡ್ಡಗಳಿಂದ ಆವೃತವಾದ ಗ್ರಾಮಾಂತರ ಪ್ರದೇಶ. ಇಲ್ಲಿನ ಆಸ್ಪತ್ರೆಗಳಲ್ಲಿ ಹಾವು ಕಡಿತಕ್ಕೆ ವಾಕ್ಸಿನ್ ಲಭ್ಯವಿಲ್ಲ. ನಾವು ಇದಕ್ಕಾಗಿ ನಗರ ಪ್ರದೇಶಕ್ಕೆ ತೆರಳಬೇಕು. ಆದ್ದರಿಂದ ಸ್ಥಳೀಯ ಆಸ್ಪತ್ರೆಗಳಲ್ಲೇ ಹಾವು ಕಡಿತಕ್ಕೆ ಲಸಿಕೆ ಲಭ್ಯವಾಗುವಂತೆ ಮಾಡಬೇಕು ಎಂದರು. ಇದನ್ನು ಗ್ರಾಮಸ್ಥರು ಬೆಂಬಲಿಸಿದರು.

ವಿದ್ಯುತ್ ಬಿಲ್ ಕಟ್ಟಲು ನೆಕ್ಕಿಲಾಡಿಯಲ್ಲಿ ಅಥವಾ ಉಪ್ಪಿನಂಗಡಿಯಲ್ಲಿ ಎಟಿಪಿ ಯಂತ್ರವನ್ನು ಮೆಸ್ಕಾಂ ವ್ಯವಸ್ಥೆ ಮಾಡಬೇಕು ಎಂದು ಅಬ್ದುರ್ರಹ್ಮಾನ್ ಯುನಿಕ್ ಹೇಳಿದಾಗ ಉತ್ತರಿಸಿದ ಮೆಸ್ಕಾಂ ಎಇ ರಾಜೇಶ್ ಅವರು, ಇಲ್ಲಿ ವಿದ್ಯುತ್ ಉಪಕೇಂದ್ರವಾದರೆ, ಅದರ ವ್ಯವಸ್ಥೆ ಕಲ್ಪಿಸಲು ಸಾಧ್ಯ. ಈಗಾಗಲೇ ಕರ್ವೇಲ್‌ನಲ್ಲಿ ವಿದ್ಯುತ್ ಉಪಕೇಂದ್ರಕ್ಕೆ ಜಾಗ ಗುರುತಿಸಲಾಗಿದ್ದು, ಅದು ಪ್ರಸ್ತಾವನೆಯ ಹಂತದಲ್ಲಿದೆ ಎಂದರು.

ಗ್ರಾಮಸ್ಥೆ ಬಬಿತಾ ಮಿನೇಜಸ್ ಮಾತನಾಡಿ ನಮ್ಮ ಮನೆ ಬಳಿ ವಿದ್ಯುತ್ ಕಂಬವೊಂದರಲ್ಲಿ ದಿನದ ೨೪ ಗಂಟೆಯೂ ದಾರಿ ದೀಪ ಉರಿಯುತ್ತಾ ಇರುತ್ತೆ ಎಂದು ಆರೋಪ ವ್ಯಕ್ತಪಡಿಸಿದರು. ಆಗ ಗ್ರಾಮಸ್ಥ ನವಾಝ್ ಕರ್ವೇಲು ಮಾತನಾಡಿ, ಹಾಗೆ ಹಗಲು ದಾರಿ ದೀಪ ಉರಿಯುವುದು ಕಂಡರೆ ನೀವು ಅದನ್ನು ಆಫ್ ಮಾಡಿ. ಅದು ನಿಮ್ಮ ಸಾಮಾಜಿಕ ಜವಾಬ್ದಾರಿ ಎಂದರು. ಇದು ಇವರಿಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಕೊನೆಗೇ ಹಲವು ಕಂಬಗಳಿಗೆ ಒಂದೇ ಕಡೆ ಸ್ವಿಚ್‌ಗಳನ್ನು ಮಾಡಿ ಇಂತಹ ಸಮಸ್ಯೆಯನ್ನು ಪರಿಹರಿಸುವ ಭರವಸೆ ಅಧ್ಯಕ್ಷರಿಂದ ದೊರೆತಾಗ, ಈ ಬಗ್ಗೆಗಿನ ಚರ್ಚೆಗೆ ತೆರೆ ಬಿತ್ತು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಮಯದಲ್ಲಿ ಗ್ರಾ.ಪಂ. ಕೇಂದ್ರ ಸ್ಥಾನಕ್ಕೆ ಪ್ರವೇಶ (ಅಂಡರ್‌ಪಾಸ್) ಮಾಡಿಕೊಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆಯುವುದು. ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸಲು ಸರಕಾರಕ್ಕೆ ಪತ್ರ ಬರೆಯುವುದು ಸೇರಿದಂತೆ ಹಲವು ನಿರ್ಣಯಗಳನ್ನು ಈ ಸಂದರ್ಭ ಕೈಗೊಳ್ಳಲಾಯಿತು.

ನಮಿತಾ, ಶ್ರೀಲಕ್ಷ್ಮೀ, ಸುಜಾತ, ಕೃಷ್ಣ, ಭರತೇಶ್, ತಿರುಪತಿ ಎನ್. ಭರಮಣ್ಣನವರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಸ್ವಪ್ನ, ಸದಸ್ಯರಾದ ವಿಜಯಕುಮಾರ್, ಹರೀಶ್ ಡಿ., ಕೆ. ರಮೇಶ್ ನಾಕ್, ವೇದಾವತಿ, ಸುಜಾತ ಆರ್. ರೈ, ತುಳಸಿ, ರತ್ನಾವತಿ, ಗೀತಾ ಉಪಸ್ಥಿತರಿದ್ದರು.

ನೋಡಲ್ ಅಧಿಕಾರಿಯಾಗಿದ್ದ ಮೆಸ್ಕಾಂ ಗ್ರಾಮಾಂತರ ಪುತ್ತೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ವಸಂತ ಕುಮಾರ್ ಸಭೆಯನ್ನು ಮುನ್ನಡೆಸಿದರು. ಗ್ರಾ.ಪಂ. ಪಿಡಿಒ ಕುಮಾರಯ್ಯ ಸ್ವಾಗತಿಸಿ, ಲೆಕ್ಕಪತ್ರ ಮಂಡಿಸಿದರು. ಸಿಬ್ಬಂದಿಗಳಾದ ಸುಶೀಲಾ, ವಸಂತಿ, ಸುಶೀಲಾ, ಚಿತ್ರಾ ಸಹಕರಿಸಿದರು.

ಗ್ರಾಮಸಭೆಯಲ್ಲಿ ಗ್ರಾಮಸ್ಥ ಮಾತನಾಡಬೇಕೋ ಮತದಾರ ಮಾತನಾಡಬೇಕೋ ಎಂಬ ಬಗ್ಗೆ ನನಗೆ ಸರಿಯಾದ ಸ್ಪಷ್ಟನೆ ಇನ್ನೂ ಸಿಕ್ಕಿಲ್ಲ. ತೆರಿಗೆ ಕಟ್ಟುವ ಗ್ರಾಮಸ್ಥ ಯಾಕೆ ಮಾತನಾಡುವ ಹಕ್ಕಿಲ್ಲ. ಇಲ್ಲಿ ನಿಮ್ಮ ನಿಲುವನ್ನು ಸ್ಪಷ್ಟಪಡಿಸಿ ಎಂದು ಜತೀಂದ್ರ ಶೆಟ್ಟಿ ಗ್ರಾಮ ಸಭೆಯಲ್ಲಿ ಪ್ರಶ್ನಿಸಿದರು. ಆಗ ಅಧ್ಯಕ್ಷ ಪ್ರಶಾಂತ್ ಅವರು ಉತ್ತರ ನೀಡಿ ಪಂಚಾಯತ್ ರಾಜ್ ಕಾಯ್ದೆಯಲ್ಲಿ ಮತದಾರ ಮಾತನಾಡಬೇಕು ಎಂದಿದೆ ಎಂದರು. ಆಗ ಜತೀಂದ್ರ ಶೆಟ್ಟಿ ನೀವಿನ್ನೂ ಕಾಯ್ದೆಯೊಳಗೆ ಏನಿದೆ ಎಂದು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದರು. ಆಗ ಪಿಡಿಒ ಅವರು ಗ್ರಾಮಸ್ಥರು ಸಭೆಯಲ್ಲಿ ಬಂದು ಕುಳಿತುಕೊಳ್ಳಬಹುದು. ಆದರೆ ಮಾತನಾಡುವಂತಿಲ್ಲ ಎಂದರು. ಈ ಬಗ್ಗೆ ಸುದೀರ್ಘ ಚರ್ಚೆಗಳು ನಡೆದವು. ಕೊನೆಗೆ ಜತೀಂದ್ರ ಶೆಟ್ಟಿಯವರು ಗ್ರಾಮಸ್ಥನಿಗೆ ಗ್ರಾಮ ಸಭೆಯಲ್ಲಿ ತನ್ನ ಸಮಸ್ಯೆಯನ್ನು ಹೇಳಲು ಹಕ್ಕು ನೀಡಬೇಕು. ಈ ಬಗ್ಗೆ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದರು. ಆಗ ಗ್ರಾಮಸ್ಥರು ಇದನ್ನು ಗ್ರಾ.ಪಂ. ಸೇರಿದಂತೆ ನಾವೆಲ್ಲಾ ಬೆಂಬಲಿಸೋಣ ಎನ್ನುವ ಮೂಲಕ ಈ ಚರ್ಚೆಗೆ ತೆರೆ ಎಳೆಯಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.