ಕೋಡಿಂಬಾಳ : ಆಸ್ತಿ ವಿಚಾರ, ಅಜ್ಜಿ-ಮೊಮ್ಮಗಳಿಗೆ ಹಲ್ಲೆ

0

ಕಡಬ :ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅಜ್ಜಿ ಮತ್ತು ಮೊಮ್ಮಗಳಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ಕೋಡಿಂಬಾಳದಲ್ಲಿ ನಡೆದಿದ್ದು, ನ್ಯಾಯ ದೊರಕಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ವರಿಷ್ಠಾಧಿಕಾರಿಗೆ ಯುವತಿ ದೂರು ನೀಡಿದ್ದಾರೆ. ತುಳುನಾಡು ರಕ್ಷಣಾ ವೇದಿಕೆಯ ಮೂಲಕ ದೂರು ನೀಡಿದ್ದು ಸಂತ್ರಸ್ತ ಯುವತಿಯ ಮಾವ, ಅತ್ತೆ ಹಾಗೂ ಮಗನ ವಿರುದ್ಧ ಆರೋಪ ಮಾಡಲಾಗಿದೆ. ಅಲ್ಲದೆ ಅಜ್ಜಿ ಮತ್ತು ಮೊಮ್ಮಗಳಿಗೆ ಜಾಗದ ವಿಚಾರಕ್ಕೆ ಸಂಬಂಧಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.

ಯುವತಿ ನೀಡಿದ ದೂರಿನಲ್ಲಿ ಏನಿದೆ? : ನನ್ನ ಅಜ್ಜಿಯವರಿಗೆ 2 ಎಕರೆ 70 ಸೆಂಟ್ಸ್ ಜಾಗ ಇದ್ದು, ಈ ಆಸ್ತಿಯನ್ನು ನನ್ನ ಮೂವರು ಮಾವಂದಿರಿಗೆ ಹಾಗೂ ತನಗೂ ಪಾಲು ಮಾಡಿರುತ್ತಾರೆ. ನನ್ನ ಪಾಲಿನ ಜಾಗ ಅಜ್ಜಿಯ ಹೆಸರಿನಲ್ಲಿ ಇರುತ್ತದೆ. ಜಮೀನಲ್ಲಿ ಮೊಮ್ಮಗಳಿಗೆ ಪಾಲು ಕೊಟ್ಟಿರುವುದಕ್ಕೆ ಮಾವ ಜಾನ್, ಅತ್ತೆ ಜೆನ್ಸಿಯವರು ತಕರಾರು ಮಾಡಿರುತ್ತಾರೆ. ಅಲ್ಲದೆ ನನ್ನ ಅಜ್ಜಿಯವರ ಕುತ್ತಿಗೆಯನ್ನು ಹಿಡಿದು ಕೈಯಿಂದ ಹಲ್ಲೆ ಮಾಡಿರುತ್ತಾರೆ.

ಕಳೆದ ದಿನಾಂಕ 02-01-2022 ರಂದು ಮಧ್ಯಾಹ್ನ ಕಡಬ ತಾಲೂಕು ಕೋಡಿಂಬಾಳ ಚರ್ಚ್ನಿಂದ ಪ್ರಾರ್ಥನೆ ಮುಗಿಸಿ ನಾನು ಹೊರಗಡೆ ಬಂದಾಗ ನನ್ನ ಮಾವ ಜೋನ್, ಅತ್ತೆ ಜೆನ್ಸಿ ಹಾಗೂ ಅವರ ಮಗ ಸ್ಲೇವಿನ್ ನನ್ನನ್ನು ಅಡ್ಡಗಟ್ಟಿ ಮಾವ ಜೋನ್ ನನ್ನನ್ನು ಉದ್ದೇಶಿಸಿ ಅವಾಚ್ಯ ಪದ ಬಳಸಿದ್ದಲ್ಲದೆ ನಿನಗೆ ಅಹಂಕಾರ, ನಿನ್ನನ್ನು ಹಾಗೂ ನಿನ್ನ ಅಜ್ಜಿಯನ್ನು ಕೊಲ್ಲದೆ ಬಿಡುವುದಿಲ್ಲ ಎಂಬುದಾಗಿ ಬೈದು ನನಗೆ ಜೀವ ಬೆದರಿಕೆಯನ್ನು ಹಾಕಿರುತ್ತಾರೆ ಹಾಗೂ ಇವರುಗಳು ಊರಿನಲ್ಲಿ ನನ್ನ ತೇಜೋವಧೆ ಮಾಡುತ್ತಿರುವುದರಿಂದ ನಾನು ಮಾನಸಿಕವಾಗಿ ಕುಗ್ಗಿರುತ್ತೇನೆ.

ಈ ಸಂಬಂಧ ಈ ಹಿಂದೆ ನಾನು ಕಡಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವುದು ನನಗೆ ಮತ್ತಷ್ಟು ಬೇಸರ ತರಿಸಿದೆ. ದಿನಾಂಕ 02-01-2022 ರಂದು ನಾನು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿರುತ್ತದೆ. ಆದರೆ ಈ ಸಂಬಂಧ ಪುತ್ತೂರು ಮಹಿಳಾ ಠಾಣೆ ಪೊಲೀಸರ ಮೌನ ಹಲವಾರು ಸಂಶಯಗಳಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನಾನು ತುಳುನಾಡ ರಕ್ಷಣಾ ವೇದಿಕೆಗೆ ದೂರು ನೀಡಿದ್ದು ಅವರ ಮೂಲಕ ನಾನು ತಮ್ಮಲ್ಲಿ ವಿನಂತಿಸುವುದೇನೆಂದರೆ ನನಗೆ ಹಾಗೂ ನನ್ನ ಅಜ್ಜಿಯವರಿಗೆ ನನ್ನ ಮಾವ ಅತ್ತೆ ಹಾಗೂ ಅವರ ಮಗ ತೊಂದರೆಯನ್ನು ನೀಡುವ ಸಾಧ್ಯತೆ ಇರುವುದರಿಂದ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣದ ಸುತ್ತ: ಅಜ್ಜಿ ಮರಿಯಮ್ಮರೊಂದಿಗೆ ಕಳೆದ 16 ವರ್ಷಗಳಿಂದ ಮೊಮ್ಮಗಳಾದ ಸ್ನೋವಿ ಎಂ. ಥೋಮಸ್ ವಾಸಿಸುತ್ತಿದ್ದು, ಕಡಬದ ಖಾಸಗಿ ಕಾಲೇಜ್ನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ. ಸ್ನೋವಿ ಎಂ. ಥೋಮಸ್ ಒಂದು ವರ್ಷದ ಮಗು ಇರುವಾಗಲೇ ತಾಯಿಯನ್ನು ಕಳೆದುಕೊಂಡಿದ್ದು, ತನ್ನ ಪಾಲನೆ ಪೋಷಣೆಯನ್ನು ಅಜ್ಜಿಯವರು ಮಾಡಿಕೊಂಡು ಬಂದಿರುತ್ತಾರೆ. ಅಲ್ಲದೇ ಸ್ನೋವಿಯ ತಂದೆ ಬೇರೆ ಮದುವೆಯಾಗಿ ಪ್ರತ್ಯೇಕವಾಗಿ ವಾಸವಾಗಿದ್ದು, ಸ್ನೋವಿ ತನ್ನ ಅಜ್ಜಿ ಜೊತೆ ವಾಸ್ತವ್ಯ ಇದ್ದಾಳೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here