ಗೋಳಿತ್ತೊಟ್ಟು ಗ್ರಾಮಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಯಲ್ಲಿ ಅವ್ಯವಹಾರ ಆರೋಪ, ತನಿಖೆಗೆ ಒತ್ತಾಯ

 


ನೆಲ್ಯಾಡಿ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ವಿಚಾರ ಪ್ರಸ್ತಾಪಗೊಂಡು ಚರ್ಚೆ, ಗದ್ದಲ ನಡೆದ ಘಟನೆ ಗೋಳಿತ್ತೊಟ್ಟು ಗ್ರಾಮಸಭೆಯಲ್ಲಿ ನಡೆದಿದೆ. ಸಭೆ ಜ.6ರಂದು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಪಟೇರಿಯವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು. ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಖಾರವರು ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ವರದಿ ಮೇಲಿನ ಚರ್ಚೆಯ ಸಂದರ್ಭದಲ್ಲಿ ವಿಚಾರ ಪ್ರಸ್ತಾಪಿಸಿದ ಗ್ರಾಮಸ್ಥ ಅಬ್ದುಲ್ ಕುಂಞಿ ಕೊಂಕೋಡಿಯವರು, ಗೋಳಿತ್ತೊಟ್ಟು ಗ್ರಾ.ಪಂ.ನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಡೆದ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಕೆಲ ತಿಂಗಳ ಹಿಂದೆ ನ್ಯೂಸ್ ಚಾನೆಲ್‌ವೊಂದರಲ್ಲಿ ಪ್ರಸಾರವಾಗಿದೆ.

ಆದರೆ ಈ ಬಗ್ಗೆ ಅಧ್ಯಕ್ಷರು ಇಲ್ಲಿಯ ತನಕ ಸ್ಪಷ್ಟನೆ ನೀಡಿಲ್ಲ. ಆದ್ದರಿಂದ ಗ್ರಾಮಸಭೆಯಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಹೇಳಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಉಮ್ಮರ್ ಯು.ಕೆ., ಯಶೋಧ ಆಲಂತಾಯ, ಇಸ್ಮಾಯಿಲ್ ಕೋಲ್ಪೆ ಮತ್ತಿತರರು, ಪಿಡಿಒ ವರ್ಗಾವಣೆಗಾಗಿ ಈ ಆರೋಪ ಮಾಡಲಾಗಿದೆಯೇ, ಇಲ್ಲವೇ ನಿಜವಾಗಿ ಅವ್ಯವಹಾರ ನಡೆದಿದೆಯೇ ಎಂದು ಪ್ರಶ್ನಿಸಿದರು. ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಪ್ರಸಾದ್ ಸುಲ್ತಾಜೆಯವರು ಮಾತನಾಡಿ, ಗ್ರಾಮಸ್ಥರ ಆರೋಪಕ್ಕೆ ಆಡಳಿತ ಮಂಡಳಿಯಿಂದ ಉತ್ತರ ನೀಡಬೇಕೆಂದು ಹೇಳಿದರು. ಈ ವೇಳೆ ಮಾತನಾಡಿದ ಅಧ್ಯಕ್ಷ ಜನಾರ್ದನ ಪಟೇರಿಯವರು, ಈ ವಿಚಾರವನ್ನು ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಿಸಿದ ಗ್ರಾಮಸಭೆಯಲ್ಲಿ ಚರ್ಚೆ ಮಾಡುವ ಎಂದರು. ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವುದೇ ಆದಲ್ಲಿ ಲೋಕಾಯುಕ್ತದಿಂದ ತನಿಖೆ ನಡೆಸಲು ನಿರ್ಣಯ ಕೈಗೊಳ್ಳಬೇಕೆಂದು ಅಬ್ದುಲ್‌ಕುಂಞಿ ಹಾಗೂ ಇತರರು ಆಗ್ರಹಿಸಿದರು. ಹಿಂದಿನ ಪಿಡಿಒರವರ ಮೇಲಿನ ಆರೋಪದ ಬಗ್ಗೆ ನನ್ನಲ್ಲಿ ದಾಖಲೆ ಇದೆ ಎಂದು ಗ್ರಾಮಸ್ಥ ದಿನೇಶ್ ಕಲಾಯಿ ಹೇಳಿದರು. ಈ ವೇಳೆ ಮಾತನಾಡಿದ ಮಾರ್ಗದರ್ಶಿ ಅಧಿಕಾರಿ ರೇಖಾರವರು, ಲೋಕಾಯುಕ್ತದಿಂದ ತನಿಖೆಗೆ ಬರೆಯುವ ಬದಲು ಮೇಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುವ ಎಂದರು. ಮತ್ತೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷ ಜನಾರ್ದನ ಪಟೇರಿಯವರು, ಖಾಯಂ ಪಿಡಿಒ ನೇಮಕಕ್ಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಟಿ.ವಿ.ಯಲ್ಲಿ ಬಂದಿರುವುದಕ್ಕೆ ನಾವು ಉತ್ತರ ಕೊಡಲು ಸಾಧ್ಯವಿಲ್ಲ. ಗ್ರಾಮ ಪಂಚಾಯಿತಿಯಲ್ಲಿ ನಡೆದ ಉದ್ಯೋಗ ಖಾತರಿ ಯೋಜನೆ ಕಾಮಗಾರಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಗ್ರಾಮಸ್ಥರು ಕಾಮಗಾರಿಯ ದಾಖಲಾತಿಯ ಪರಿಶೀಲನೆ ಮಾಡಬಹುದು ಎಂದು ಸ್ಪಷ್ಟಪಡಿಸಿದರು.

ಪೂರ್ತಿ ಹಣ ಬಂದಿಲ್ಲ:
ಉದ್ಯೋಗ ಖಾತ್ರಿ ಯೋಜನೆಯಡಿ ತೆಗೆಯಲಾಗಿರುವ ಅಡಿಕೆ ಗುಂಡಿಗೆ ಇನ್ನೂ ಪೂರ್ತಿ ಹಣಬಂದಿಲ್ಲ ಎಂದು ಗ್ರಾಮಸ್ಥೆ ಜಯಂತಿಯವರು ಸಭೆಯ ಗಮನ ಸೆಳೆದರು. ಇದಕ್ಕೆ ಧ್ವನಿಗೂಡಿಸಿದ ಗ್ರಾಮಸ್ಥ ದಿನೇಶ್ ಕಲಾಯಿಯವರು, ತಡವಾಗಿರುವುದಕ್ಕೆ ಕಾರಣವೇನು ? ಎಂದು ಪ್ರಶ್ನಿಸಿ, ಉದ್ಯೋಗ ಖಾತ್ರಿ ಯೋಜನೆಯಡಿ ನಿಜವಾದ ಫಲಾನುಭವಿಗಳಿಗೆ ಕೆಲಸ ಸಿಗುತ್ತಿಲ್ಲ ಎಂದು ಆರೋಪಿಸಿದರು. ಉದ್ಯೋಗಖಾತ್ರಿ ಯೋಜನೆಯಡಿ ಜಯಂತಿಯವರು ನಡೆಸಿದ ಅಡಿಕೆ ಗುಂಡಿ ಕಾಮಗಾರಿಯ ಪರಿಶೀಲನೆ ನಡೆಸಿ, ಕೂಲಿ ಹಣ ಬಾಕಿ ಇದ್ದಲ್ಲಿ ಪಾವತಿಗೆ ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು. ಮುಂದಿನ ಉದ್ಯೋಗ ಖಾತ್ರಿ ಗ್ರಾಮಸಭೆಯ ವೇಳೆಗೆ ಅವರಿಗೆ ಹಣ ಪಾವತಿಯಾಗಬೇಕು ಎಂದು ದಿನೇಶ್ ಕಲಾಯಿ ಹೇಳಿದರು.

ಫಲ್ಸ್ ಪೊಲಿಯೋ ಖರ್ಚಿನ ಬಗ್ಗೆ ಆಕ್ಷೇಪ:
ಫಲ್ಸ್ ಪೊಲಿಯೋ ಕಾರ್ಯಕ್ರಮಕ್ಕೆ ೯೭೭೯ ರೂ.,ಖರ್ಚು ಆಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ನಾಲ್ಕು ಬೂತ್‌ಗೆ ಒಟ್ಟು ೪೮೦೦ ರೂ.,ಮಾತ್ರ ನೀಡಲಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಬ್ಬಂದಿ ಬಾಬು ನಾಯ್ಕ್‌ರವರು, ಉಳಿಕೆ ಮೊತ್ತ ಸ್ಯಾನಿಟೈಸರ್, ಮಾಸ್ಕ್‌ಗೆ ಬಳಕೆಯಾಗಿದೆ ಎಂದರು. ಇದಕ್ಕೆ ಆಕ್ಷೇಪಿಸಿದ ಆರೋಗ್ಯ ಕಾರ್ಯಕರ್ತೆ ಲೀನಾರವರು ಸ್ಯಾನಿಟೈಸರ್, ಮಾಸ್ಕ್ ಪಂಚಾಯತ್‌ನಿಂದ ನೀಡಿಲ್ಲ, ಆರೋಗ್ಯ ಇಲಾಖೆಯಿಂದಲೇ ಬಳಕೆ ಮಾಡಲಾಗಿದೆ ಎಂದರು.

ಮನೆ ತೆರಿಗೆ ಪರಿಷ್ಕರಣೆಗೆ ನಿರ್ಣಯ:
ಈ ಹಿಂದೆ ಮಾಡಿರುವ ಮನೆ ತೆರಿಗೆ ಪರಿಷ್ಕರಣೆ ಅವೈಜ್ಞಾನಿಕವಾಗಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ಕೇಳಿಬಂತು. ವೆಂಕಪ್ಪ ಗೌಡ ಡೆಬ್ಬೇಲಿಯವರು ಮಾತನಾಡಿ, ಸರಕಾರದ ಸುತ್ತೋಲೆಯಂತೆ ಮನೆ ತೆರಿಗೆ ಪರಿಷ್ಕರಣೆ ನಡೆದಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯದರ್ಶಿ ಚಂದ್ರಾವತಿಯವರು, ಆಡಳಿತಾಧಿಕಾರಿ ಅವಧಿಯಲ್ಲಿ ತೆರಿಗೆ ಪರಿಷ್ಕರಣೆ ಮಾಡಲಾಗಿದೆ. ಈ ಕುರಿತು ಪತ್ರಿಕೆ ಪ್ರಕಟಣೆ ನೀಡಲಾಗಿದೆ. ನೋಟಿಸ್ ಬೋರ್ಡ್‌ನಲ್ಲೂ ಹಾಕಲಾಗಿದೆ. ಗ್ರಾಮಸ್ಥರಿಂದ ಯಾವುದೇ ಆಕ್ಷೇಪಣೆ ಬಂದಿರುವುದಿಲ್ಲ ಎಂದರು. ತೆರಿಗೆ ಪರಿಷ್ಕರಣೆ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ಸಿಕ್ಕಿಲ್ಲ, ಉಪಕರವೂ ಸುತ್ತೋಲೆಯಂತೆ ಹಾಕಿಲ್ಲ ಎಂದರು. ಜಯಂತ ಅಂಬರ್ಜೆ, ಸುಭಾಷ್ ಮತ್ತಿತರರು ತೆರಿಗೆ ಪರಿಷ್ಕರಣೆ ಬಗ್ಗೆ ಆಕ್ಷೇಪಿಸಿದರು. ಗ್ರಾಮಸ್ಥರ ಮನವಿಯಂತೆ ಮತ್ತೆ ಮನೆ ತೆರಿಗೆ ಪರಿಷ್ಕರಣೆಗೆ ನಿರ್ಣಯಿಸಲಾಯಿತು.

ಒಂದೇ ಮನೆಗೆ ೪ ಡೋರ್ ನಂಬ್ರ:
ಒಂದೇ ಮನೆಗೆ ಮನೆ ತೆರಿಗೆ ರಶೀದಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಸೇರಿದಂತೆ ಇತರೇ ದಾಖಲೆಗಳಲ್ಲಿ ಬೇರೆ ಬೇರೆ ಡೋರ್ ನಂಬ್ರ ದಾಖಲಾಗಿದೆ. ಇದು ಯಾರಿಂದ ಆಗಿರುವ ತಪ್ಪು, ಇದಕ್ಕೆ ಯಾರು ಹೊಣೆ ಎಂದು ಗ್ರಾಮಸ್ಥ ವೆಂಕಪ್ಪ ಗೌಡರವರು ಪ್ರಶ್ನಿಸಿದರು. ಪಂಚಾಯತ್‌ನವರಿಂದಲೇ ಈ ತಪ್ಪು ಆಗಿದೆ. ಅವರೇ ಸರಿಪಡಿಸಿಕೊಡಬೇಕೆಂಬ ಮಾತು ಕೇಳಿಬಂದಿತು.

ಒಂದೇ ಕಡೆ ಬೀದಿ ದೀಪ:
ಗ್ರಾ.ಪಂ.ವ್ಯಾಪ್ತಿಯಲ್ಲಿ ಒಂದೇ ಕಡೆ ೬ ಬೀದಿ ದೀಪ ಉರಿಯುತ್ತಿದೆ. ಅವಶ್ಯಕತೆ ಇದ್ದಲ್ಲಿ ಸೋಲಾರ್ ಲೈಟ್ ಅಳವಡಿಸಿಲ್ಲ ಎಂದು ಅಬ್ದುಲ್ ಕುಂಞಿಯವರು ಹೇಳಿದರು. ಸೋಲಾರ್ ಲೈಟ್ ಅಳವಡಿಸುವಂತೆ ಅರ್ಜಿ ಸಲ್ಲಿಸಿ ೧ ವರ್ಷವಾದರೂ ಅಳವಡಿಸಿಲ್ಲ ಎಂದು ಶೇಖರ ಗೌಡ ಅನಿಲ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಜನಾರ್ದನ ಪಟೇರಿಯವರು, ಆದ್ಯತೆ ಮೇಲೆ ಸೋಲಾರ್ ಲೈಟ್ ಅಳವಡಿಸಲಾಗಿದೆ. ಮುಂದೆ ಹಾಕಲಾಗುವುದು ಎಂದು ಹೇಳಿದರು.

ರಶೀದಿ ನೀಡಿ:
ಜಾತಿ ಆದಾಯ ಪ್ರಮಾಣಕ್ಕೆ ಸಂಬಂಧಿಸಿ ಗ್ರಾ.ಪಂ.ನಲ್ಲಿ ೯೦ ರೂ.,ಶುಲ್ಕ ತೆಗೆದುಕೊಳ್ಳಲಾಗುತ್ತಿದೆ. ಆದರೆ ಇದಕ್ಕೆ ಯಾವುದೇ ರಶೀದಿ ನೀಡುತ್ತಿಲ್ಲ. ಇದರ ಜಮೆ ವರದಿಯಲ್ಲೂ ಉಲ್ಲೇಖವಾಗಿಲ್ಲ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯದರ್ಶಿ ಚಂದ್ರಾವತಿಯವರು, ಇತರೇ ಜಮೆಯಲ್ಲಿ ಇದನ್ನು ತೋರಿಸಲಾಗಿದೆ ಎಂದರು. ಇನ್ನು ಮುಂದೆ ಇತರೇ ಜಮೆಯ ಬದಲು ಯಾವ ಮೂಲದಿಂದ ಪಂಚಾಯತ್‌ಗೆ ಹಣ ಜಮೆಯಾಗಿದೆ ಎಂದು ಸ್ಪಷ್ಟವಾಗಿ ನಮೂದಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ಸಿಮೆಂಟ್ ದಾಸ್ತಾನಿಗೆ ಆಕ್ಷೇಪ:
ಗ್ರಾಮ ಪಂಚಾಯತ್‌ನ ಗೋಡೌನ್‌ನಲ್ಲಿ ಸಿಮೆಂಟ್ ದಾಸ್ತಾನು ಮಾಡಿರುವ ವಿಚಾರವೂ ಪ್ರಸ್ತಾಪಗೊಂಡಿತು. ಗೋಡೌನ್ ಏಲಂ ಮಾಡಲಾಗಿದೆಯೇ, ಸಿಮೆಂಟ್ ದಾಸ್ತಾನು ಮಾಡಲು ಗುತ್ತಿಗೆದಾರರಿಂದ ಬಾಡಿಗೆ ಪಡೆಯಲಾಗುತ್ತಿದೆಯೇ ಎಂದು ಗ್ರಾಮಸ್ಥ ರಘು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯದರ್ಶಿ ಚಂದ್ರಾವತಿಯವರು, ಗೋಡೌನ್ ಏಲಂ ಮಾಡುವಂತಿಲ್ಲ. ಅಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದ ಸಲಕರಣೆ, ಗ್ರಾಮಕ್ಕೆ ಸಂಬಂಧಿಸಿದ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡವರಿಗೆ ಸಿಮೆಂಟ್ ದಾಸ್ತಾನಿಗೆ ಅವಕಾಶ ನೀಡಲಾಗಿದೆ ಎಂದರು. ಸಿಮೆಂಟ್ ದಾಸ್ತಾನಿಗೆ ಗ್ರಾಮಸ್ಥರಿಂದ ಆಕ್ಷೇಪಣೆಯೂ ವ್ಯಕ್ತವಾಯಿತು. ಬಳಿಕ ಪ್ರತಿಕ್ರಿಯಿಸಿದ ಅಧ್ಯಕ್ಷ ಜನಾರ್ದನಪಟೇರಿಯವರು ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಗುತ್ತಿಗೆದಾರರಿಗೆ ಸಿಮೆಂಟ್ ದಾಸ್ತಾನು ಮಾಡಲು ಅವಕಾಶ ನೀಡಲಾಗಿದೆ. ನಾವು ಸಹಕಾರ ಕೊಡದೇ ಇದ್ದರೆ ಅಭಿವೃದ್ಧಿ ಹೇಗೆ ಎಂದು ಪ್ರಶ್ನಿಸಿದರು.

ಕಂದಾಯ ಅದಾಲತ್‌ಗೆ ನಿರ್ಣಯ:
ಗ್ರಾಮಸಭೆಗೆ ತಹಶೀಲ್ದಾರ್ ಇಲ್ಲವೇ ಉಪತಹಶೀಲ್ದಾರ್ ಬರಬೇಕೆಂದು ಗ್ರಾಮಸ್ಥ ಅಬ್ದುಲ್ ಕುಂಞಿ ಕೊಂಕೋಡಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಾರ್ಗದರ್ಶಿ ಅಧಿಕಾರಿ ರೇಖಾರವರು ಗ್ರಾಮಸಭೆಗೆ ಗ್ರಾಮ ಮಟ್ಟದ ಅಧಿಕಾರಿಗಳು ಮಾತ್ರ ಭಾಗವಹಿಸುತ್ತಾರೆ ಎಂದು ಸ್ಪಷ್ಟಪಡಿಸಿದರು. ಈ ಬಗ್ಗೆ ಚರ್ಚೆ ನಡೆದು ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಬಗ್ಗೆ ಚರ್ಚಿಸಲು ಗೋಳಿತ್ತೊಟ್ಟಿನಲ್ಲಿ ಕಂದಾಯ ಅದಾಲತ್ ನಡೆಸುವಂತೆ ಕಂದಾಯ ಇಲಾಖೆಗೆ ಮನವಿ ಮಾಡಲು ನಿರ್ಣಯಿಸಲಾಯಿತು.

ಕೊಣಾಲು ಪ್ರತ್ಯೇಕ ಗ್ರಾ.ಪಂ.:
ಕೊಣಾಲು ಪ್ರತ್ಯೇಕ ಗ್ರಾಮ ಪಂಚಾಯತ್ ರಚನೆಗೆ ಸಂಬಂಧಿಸಿದಂತೆ ಗ್ರಾಮಸ್ಥ ಇಸ್ಮಾಯಿಲ್ ಕೋಲ್ಪೆರವರ ಪ್ರಶ್ನೆಗೆ ಉತ್ತರಿಸಿದ ಗ್ರಾಮಕರಣಿಕರು, ಗ್ರಾಮ ಪಂಚಾಯತ್‌ಗೆ ಸಂಬಂಧಿಸಿದಂತೆ ಸರಕಾರಿ ಜಾಗ ಗುರುತಿಸಿ ಸರ್ವೆಯರ್ ಗಡಿ ಗುರುತು ಮಾಡಿದ್ದಾರೆ. ನಕ್ಷೆ ಬಂದ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಸ್ಮಶಾನಕ್ಕೆ ಮಂಜೂರಾದ ಜಾಗ ಅತಿಕ್ರಮಣ:
ಕೊಣಾಲು ಗ್ರಾಮದಲ್ಲಿ ಸ್ಮಶಾನಕ್ಕೆ ಮಂಜೂರಾದ ಜಾಗದ ಪೈಕಿ ೪೦ ಸೆಂಟ್ಸ್ ಅತಿಕ್ರಮಣವಾಗಿದೆ. ಅಲ್ಲದೇ ಈ ಜಾಗವನ್ನು ಅಕ್ರಮ ಸಕ್ರಮದಲ್ಲಿ ವ್ಯಕ್ತಿಯೋರ್ವರಿಗೆ ಮತ್ತೆ ಮಂಜೂರು ಮಾಡಲಾಗಿದೆ ಎಂಬ ವಿಚಾರ ಪ್ರಸ್ತಾಪಗೊಂಡು ಚರ್ಚೆ ನಡೆಯಿತು. ಸ್ಮಶಾನಕ್ಕೆ ಜಾಗ ಮೊದಲು ಮಂಜೂರು ಆಗಿರುವುದರಿಂದ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಬಹುದು ಎಂದು ಗ್ರಾಮಕರಣಿಕರು ತಿಳಿಸಿದರು. ಕೊಣಾಲು ಗ್ರಾಮದ ಕೊಂಬ್ಯಾನದಲ್ಲಿ ನಡೆದ ರಸ್ತೆ ದುರಸ್ತಿ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ ಎಂದು ಗ್ರಾಮಸ್ಥ ಕುಶಾಲಪ್ಪ ಆರೋಪಿಸಿದರು. ಗೋಳಿತ್ತೊಟ್ಟಿನಲ್ಲಿ ಪೂರ್ಣ ಪ್ರಮಾಣದ ರಾಷ್ಟ್ರೀಕೃತ ಬ್ಯಾಂಕ್ ಬರಬೇಕೆಂದು ಪ್ರಸಾದ್ ಸುಲ್ತಾಜೆ ಆಗ್ರಹಿಸಿದರು.

ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರ,
ಮೆಸ್ಕಾಂ ನೆಲ್ಯಾಡಿ ಶಾಖಾ ಕಿರಿಯ ಇಂಜಿನಿಯರ್ ರಮೇಶ್, ಗೋಳಿತ್ತೊಟ್ಟು ಪವರ್‌ಮ್ಯಾನ್ ದುರ್ಗಾಸಿಂಗ್, ಕೊಣಾಲು ಅಂಚೆ ಕಚೇರಿಯ ಅಂಚೆಪಾಲಕಿ ರೇವತಿ ಸುಂದರ್, ಗ್ರಾಮಕರಣಿಕೆ ಪ್ರೇಮಾ ಮ್ಯಾಗೇರಿ, ಕೃಷಿ ಅಧಿಕಾರಿ ಟಿ.ಎನ್.ಭರಮಣ್ಣವರ, ಜಿ.ಪಂ.ಇಂಜಿನಿಯರ್ ಎಸ್.ಎಸ್.ಹುಕ್ಕೇರಿ, ಹಿರಿಯ ಪಶುವೈದ್ಯ ಪರೀಕ್ಷಕ ರವೀಂದ್ರ ಪಿ., ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಪುಷ್ಪಾವತಿಯವರು ಇಲಾಖಾವಾರು ಮಾಹಿತಿ ನೀಡಿದರು. ಪಿಡಿಒ ಜಗದೀಶ್ ನಾಯ್ಕ್, ಗ್ರಾ.ಪಂ.ಉಪಾಧ್ಯಕ್ಷೆ ಶೋಭಲತಾ, ಸದಸ್ಯರಾದ ಬಾಬು ಪೂಜಾರಿ, ಜೀವಿತ, ಹೇಮಲತ, ಬಾಲಕೃಷ್ಣ ಅಲೆಕ್ಕಿ, ಗುಲಾಬಿ ಕೆ., ಪದ್ಮನಾಭ ಪೂಜಾರಿ, ಸವಿತ, ಸಂಧ್ಯಾ, ನೋಣಯ್ಯ ಗೌಡ, ಪ್ರಜಲ, ವಿ.ಸಿ.ಜೋಸೆಫ್, ವಾರಿಜಾಕ್ಷಿ, ಶೃತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಚಂದ್ರಾವತಿ ವರದಿ ವಾಚಿಸಿದರು. ಸಿಬ್ಬಂದಿ ಪುಷ್ಪಾರವರು ಉದ್ಯೋಗ ಖಾತರಿ ಯೋಜನೆಯಡಿ ಬಂದ ಅರ್ಜಿಗಳನ್ನು ಓದಿದರು. ಸಿಬ್ಬಂದಿಗಳಾದ ಬಾಬು ನಾಯ್ಕ್, ದಿನೇಶ್, ಯಶವಂತ, ಕೀರ್ತಿಕಾ, ಪ್ರಮೀಳಾ ಸಹಕರಿಸಿದರು.

ಹಕ್ಕುಪತ್ರ ಸಿಕ್ಕರೂ ಜಾಗ ಸಿಕ್ಕಿಲ್ಲ..!
೨೦೧೨ರಲ್ಲಿ ಹಲವು ಮಂದಿಗೆ ಮನೆ ನಿವೇಶನದ ಜಾಗ ಮಂಜೂರಾತಿಯ ಹಕ್ಕುಪತ್ರದ ಜೆರಾಕ್ಸ್ ಪ್ರತಿ ನೀಡಲಾಗಿದೆ. ಆದರೆ ಇಲ್ಲಿ ತನಕವೂ ಅದರ ಮೂಲ ದಾಖಲೆಯೂ ಸಿಕ್ಕಿಲ್ಲ, ಜಾಗವೂ ತೋರಿಸಿಲ್ಲ ಎಂಬ ಆರೋಪ ಕೇಳಿಬಂತು. ಇದಕ್ಕೆ ಉತ್ತರಿಸಿದ ಗ್ರಾಮಕರಣಿಕೆ ಪ್ರೇಮಾ ಮ್ಯಾಗೇರಿಯವರು, ಈ ಹಕ್ಕುಪತ್ರದ ಮೂಲಪ್ರತಿ ಪುತ್ತೂರು ತಾಲೂಕು ಕಚೇರಿಯಲ್ಲಿದ್ದು ಅಲ್ಲಿಂದ ಕಡಬ ಕಚೇರಿಗೆ ಕಳಿಸಿಕೊಡಲು ಕೇಳಿಕೊಳ್ಳಲಾಗಿದೆ. ಕಡಬಕ್ಕೆ ಬಂದ ಬಳಿಕ ಮೂಲಪ್ರತಿ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಸಣ್ಣಂಪಾಡಿಯಲ್ಲಿ ೪.೧೮ ಎಕ್ರೆ ಮನೆ ನಿವೇಶನಕ್ಕೆ ಜಾಗ ಗುರುತಿಸಲಾಗಿದೆ. ಹಕ್ಕುಪತ್ರ ಪಡೆದುಕೊಂಡವರು ಅಲ್ಲಿ ಮನೆ ನಿರ್ಮಾಣಕ್ಕೂ ಮುಂದೆ ಬಂದಿಲ್ಲ. ಇದರಲ್ಲಿ ಬಹುತೇಕ ಜಾಗ ಈಗ ಅತಿಕ್ರಮಣವಾಗಿದೆ ಎಂದು ಗ್ರಾಮ ಸಹಾಯಕರು ತಿಳಿಸಿದರು.
——————————

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.