ಬೀರಿಗದಲ್ಲಿ ಪ.ಜಾತಿ ಕಾಲೋನಿ ಮನೆ ಮೇಲೆ ಅಪಾಯಕಾರಿ ರೀತಿಯಲ್ಲಿ ಮಣ್ಣು ಹಾಕಿದ ಆರೋಪ- ಡಿಎಸ್ಎಸ್ ನಿಂದ ಬನ್ನೂರು ಗ್ರಾ.ಪಂ ವಿರುದ್ಧ ಪ್ರತಿಭಟನೆ

0

  • ಕೇಸು ದಾಖಲಾಗಿ ಜೈಲಿಗೆ ಹೋದರೂ ಸರಿ. ಮಣ್ಣಿನಡಿ‌ ಬಿದ್ದು ಸಾಯಲು ತಯಾರಿಲ್ಲ-ಸೇಸಪ್ಪ ಬೆದ್ರಕಾಡು

ಪುತ್ತೂರು; ಬನ್ನೂರು ಗ್ರಾ.ಪಂ ವ್ಯಾಪ್ತಿಯ ಬೀರಿಗದಲ್ಲಿ ಕೌಶಲ್ಯ ಅಭಿವೃದ್ಧಿ ನಿಗಮದ ಕಟ್ಟಡ ನಿರ್ಮಾಣಕ್ಕೆ ಅಗೆದ ಮಣ್ಣನ್ನು ಅಪಾಯಕಾರಿ ರೀತಿಯಲ್ಲಿ ಪ.ಜಾತಿ ಕಾಲೋನಿ ಮನೆಗಳ ಮೇಲೆ ರಾಶಿ ಹಾಕಿರುವುದನ್ನು ತೆರವುಗೊಳಿಸುವಂತೆ ಮನವಿ ಮಾಡಿದರೂ ಗ್ರಾ.ಪಂ ಸ್ಪಂದನೆ ನೀಡಿಲ್ಲ ಎಂದು ಆರೋಪಿಸಿ ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿಯಿಂದ ಜ.7ರಂದು ಬನ್ನೂರು ಗ್ರಾ.ಪಂ ವಿರುದ್ಧ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಗೆ ಮುನ್ನವೇ ಪಂಚಾಯತ್ ವತಿಯಿಂದ ಮಣ್ಣು ತೆರವು ಕಾರ್ಯಾಚರಣೆ ಪ್ರಾರಂಭಿದಲಾಗಿದ್ದರೂ, ಮಣ್ಣನ್ನು ಸಂಪೂರ್ಣವಾಗಿ ತೆರವುಗೊಳಿಸುವುದು ಹಾಗೂ ಸರ್ವೆ ನಡೆಸಿದ ಬಳಿಕವೇ ಮತ್ತೆ ಕಾಮಗಾರಿ ಪ್ರಾರಂಭಿಸುವುದಾಗಿ ಲಿಖಿತವಾಗಿ ನೀಡಿದರೆ ಮಾತ್ರ ಪ್ರತಿಭಟನೆ ಸ್ಥಗಿತಗೊಳಿಸುವುದಾಗಿ ಪಟ್ಟು ಹಿಡಿದು ದರಣಿ ಕುಳಿತರು. ಪಾತ್ರ,ಕೊಡಪಾನ ಇಟ್ಟು ಪ್ರತಿಭಟನೆ ನಡೆಸಿದರು. ಮಣ್ಣು ತೆರವುಗೊಳಿಸಲು ಸ್ಥಳಕ್ಕೆ ತೆರಲಿದ್ದ ಪಿಡಿಓ ಚಿತ್ರಾವತಿ ಹಾಗೂ ಅಧ್ಯಕ್ಷೆ ಜಯರವರು ಪಂಚಾಯತ್ ಗೆ ಆಗಮಿಸಿ ಜ.21ರಂದು ಜಂಟಿ‌ ಸರ್ವೆ ನಡೆಸುವುದಾಗಿ ಲಿಖಿತ ವಾಗಿ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಂಡರು.


ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಾಕಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು, ಅಪಾಯಕಾರಿಯಲ್ಲಿರುವ ಮಣ್ಣನ್ನು ತೆರವುಗೊಳಿಸುವಂತೆ ನಾವು ಮನವಿ ಹಲವು ದಿನಗಳೇ ಕಳೆದರೂ ಈಗ ನಮ್ಮ ಕಣ್ಣಿಗೆ ಮಣ್ಣು ಹಾಕಬೇಕು ಎಂಬ ರೀತಿಯಲ್ಲಿ ಮಣ್ಣು ತೆರವುಗೊಳಿಸುತ್ತಿದ್ದಾರೆ. ಅಪಾಯಕಾರಿ ಸ್ಥಿತಿಯಲ್ಲಿರುವ ಮಣ್ಣನ್ನು ಸಂಪೂರ್ಣವಾಗಿ ತೆರವುಗೊಳಿಸುವ ತನಕ ಧರಣಿ ನಡೆಸಲಾಗುವುದು. ನಮಗೆ ರಕ್ಷಣೆ ಕೊಡಬೇಕಾದ ಅಧಿಕಾರಿಗಳು, ಪಂಚಾಯತ್ ನಮ್ಮ ಮೇಲೆ ಸವಾರಿ ಮಾಡುತ್ತಿದ್ದಾರೆ. ಕೊರೋನಾ ಸಂದರ್ಭದಲ್ಲಿ ಪ್ರತಿಭಟನೆ ನಡೆಸಬಾರದು. ಪ್ರತಿಭಟನೆ ನಡೆಸಿದರೆ ಕೇಸು ದಾಖಲಿಸಲಾಗುವುದು ಎಂಬ ಜಿಲ್ಲಾಧಿಕಾರಿಗಳ ಆದೇಶವಿದೆ. ಹಾಗಿದ್ದರೂ ನಮ್ಮವರಿಗಾಗಿ ಪ್ರಕರಣ ದಾಖಲಾದರೂ, ಜೈಲಿಗೆ ಹೋದರೂ ಪರವಾಗಿಲ್ಲ. ನಾವು ಮಣ್ಣಿನ ಅಡಿಗೆ ಬಿದ್ದು ಸಾಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಅಲ್ಲಿರುವುದು ನಮ್ಮ ಜಾಗ. ನಾವು ಮಣ್ಣಿನ ಅಡಿಗೆ‌ ಬಿದ್ದು ಸಾಯಲು ತಯಾರಿಲ್ಲ. ಮಣ್ಣನ್ನು ಸಂಪೂರ್ಣವಾಗಿ ತೆರವುಗೊಳಿಸಿ, ಸರ್ವೆ ಮಾಡಿದ ಬಳಿಕವೇ ಮತ್ತೆ ಕಾಮಗಾರಿ ಪ್ರಾರಂಭಿಸುವುದಾಗಿ ಅಧ್ಯಕ್ಷರು ಹಾಗೂ ಪಿಡಿಓರಚರು ಲಿಖಿತವಾಗಿ ನೀಡಬೇಕು.ಅಲ್ಲಿ ತನಕ ಧರಣಿ ನಡೆಸುವುದಾಗಿ ಅವರು ಎಚ್ಚರಿಸಿದರು.

ಅಧ್ಯಕ್ಷರ ಕುಮ್ಮಕ್ಕು;
ಬೀರಿಗದಲ್ಲಿ ಪ.ಜಾತಿಯವರಿಗೆ ಜಮೀನು ಮಂಜೂರಾಗಿ, ಸಾಗುವಳಿ ಚೀಟಿಯೂ ಆಗಿದೆ. ಇದರ ಮಧ್ಯೆ ಗ್ರಾ.ಪಂ ಅಧ್ಯಕ್ಷರ ಕುಮ್ಮಕ್ಕು, ಬೇಜಾಬ್ದಾರಿಯಿಂದ ಕೌಶಲ್ಯ ಅಭಿವೃದ್ಧಿ ಕಟ್ಟಡಕ್ಕೆ ನಿರ್ಮಾಣಕ್ಕೆ ಜೇಸಿಬಿ ಮೂಲಕ ಸಮತಟ್ಟು ಮಾಡಿ ಸುಮಾರು200 ಲೋಡ್ ಮಣ್ಣನ್ನು ಅಪಾಯಕಾರಿ ರೀತಿಯಲ್ಲಿ ರಾಶಿ ಹಾಕಲಾಗಿದೆ. ಮುಂದೆ ಎದುರಾಗಬಹುದಾದ ಅಪಾಯದ‌ ಕುರಿತು ಅಧ್ಯಕ್ಷರ ಗಮನಕ್ಕೆ ತಂದರೂ ಅವರು ಕಾಮಗಾರಿ ನಿಲ್ಲುಸುವ ಪ್ರಯತ್ನ ಮಾಡಿಲ್ಲ. ರಾಶಿ ಹಾಕಿದ ತೆರವುಗೊಳಿಸುವುದಾಗಿ‌ ಭರವಸೆ ನೀಡಿದರೂ ಅವರು ಮಣ್ಣು ತೆರವುಗೊಳಿಸಿಲ್ಲ. ಹೀಗಾಗಿ ಅವರ ಮೇಲಿನ ನಂಬಿಕೆ ಕಳೆದುಕೊಂಡಿದ್ದೇವೆ ಎಂದು ಸೇಸಪ್ಪ ಬೆದ್ರಕ್ಕಾಡು ಆರೋಪಿಸಿದರು.

ತಾಲೂಕು ಘಟಕದ ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು ಮಾತನಾಡಿ, ಬನ್ನೂರು ಗ್ರಾ.ಪಂನ ಅಧ್ಯಕ್ಷರು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಕಾಡು ಪ್ರಾಣಿಗಳಿಗಿಂತ ಕಡೆಯಾಗಿ ವರ್ತಿಸುತ್ತಿದ್ದಾರೆ. ಮಣ್ಣನ್ನು ತೆರವುಗೊಳಿಸದಿದ್ದರೆ ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವುದಾಗಿ ಎಚ್ಚರಿಸಿದರು. ಅಂಬೇಡ್ಕರ್ ರಕ್ಷಣಾ ಸಮಿತಿ ಸುಂದರ ಪಾಟಾಜೆ ಮಾತನಾಡಿ, ಅಪಾಯಕಾರಿ ರೀತಿಯಲ್ಲಿ ಮಣ್ಣು ರಾಶಿ ಹಾಕುವ ಮೂಲಕ ದಲಿತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಅಂಬೇಡ್ಕರ್ ರಕ್ಷಣಾ ಸಮಿತಿ ಮುಖಂಡ ಸತೀಶ್ ಬೂಡುಮಕ್ಕಿ, ದಲಿತ್ ಸೇವಾ ಸಮಿತಿ ಮಾಜಿ ಅಧ್ಯಕ್ಷೆ ಸುನಂದ ತೆಂಕಿಲ, ಪ್ರಧಾನ ಕಾರ್ಯದರ್ಶಿ ಸುಂದರ ನರಿಮೊಗರು, ನಗರ ಸಭಾ ಮಾಜಿ ಸದಸ್ಯ ಮುಖೇಶ್ ಕೆಮ್ಮಿಂಜೆ, ಚಂದ್ರಶೇಖರ ವಿಟ್ಲ ಹಾಗೂ ಅಭಿಷೇಕ್ ಬೆಳ್ಳಿಪ್ಪಾಡಿ ಸಹಿತ ಹಲವು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ದೌರ್ಜನ್ಯ ಎಸಗಿಲ್ಲ. ತಾರತಮ್ಯ ಮಾಡಿಲ್ಲ;
ಪಂಚಾಯತ್ ನ ಅಧ್ಯಕ್ಷೆಯಾಗಿ ನಾನುಗ್ರಾಮದ ಅಭಿವೃದ್ಧಿಗೆ ಪ್ರಯತ್ನಿಸಿದ್ದೇನೆ. ಉದ್ದೇಶಪೂರ್ವಕವಾಗಿ ನಾನು ಯಾವುದೇ ಕೆಲಸ ಮಾಡಿಲ್ಲ. ಕೌಶಲ್ಯ ಅಭಿವೃದ್ಧಿ ನಿಗಮದಿಂದ ಬಂದ ಅನುದಾನದಲ್ಲಿ ಪಂಚಾಯತ್ ಗೆ ಮಂಜೂರಾದ ನಿವೇನದಲ್ಲಿ ಸಮತಟ್ಟು ಮಾಡುವ ಕಾಮಗಾರಿ ಪ್ರಾರಂಭಿಸಲಾಗಿತ್ತು. ಇಲ್ಲಿ ನಾನು ಯಾರಿಗೂ ದೌರ್ಜನ್ಯ ಎಸಗಿಲ್ಲ. ತಾರತಮ್ಯವೂ ಮಾಡಿಲ್ಲ. ಪಂಚಾಯತ್ ಗೆ ಮಂಜೂರಾದ ಜಾಗದಲ್ಲಿ ಸಮತಟ್ಟು ಮಾಡುವ ಕೆಲಸ ಮಾಡಿದ್ದೇವೆ. ಬೇರೆ ಯಾವುದೇ ಜಾಗಕ್ಕೆ ನಾವು ಕೈ ಹಾಕಿಲ್ಲ. ರಾಶಿ ಹಾಕಿರುವ ಮಣ್ಣನ್ನು ಮನೆಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ತೆರವುಗೊಳಿಸಲಾಗುವುದು. ಅಲ್ಲಿ ಕಾಮಗಾರಿ ಪ್ರಾರಂಭಗೊಂಡು ಮಣ್ಣಿನ ಬೃಹತ್ ರಾಶಿ ಬಿದ್ದ ಬಳಿಕ ನಮಗೆ ಮಾಹಿತಿ ದೊರೆತಿದ್ದು ಕೂಡಲೇ ಅದನ್ನು ತೆರವುಗೊಳಿಸಲು ಗುತ್ತಿಗೆದಾರರಿಗೆ ತಿಳಿಸಲಾಗಿದೆ ಎಂದು ಅಧ್ಯಕ್ಷೆ ಜಯ ಸ್ಪಷ್ಟ ಪಡಿಸಿದ್ದಾರೆ.

ಸ್ಪಂದನೆ ನೀಡಿದ್ದೇವೆ;
ಮಣ್ಣಿನ ರಾಶಿ ಅಪಾಯಕಾರಿಯಲ್ಲಿರುವ ಕುರಿತು ಮನವಿ ಬಂದ ಸ್ಪಂದನೆ ನೀಡಿದ್ದು ಕೂಡಲೇ ಅದನ್ನು ತೆರವುಗೊಳಿಸಲು ಕ್ರಮಕೈಗೊಂಡಿದ್ದೇವೆ. ಆದರೆ ಜೆಸಿಬಿ, ಹಿಟಾಚಿ ಹಾಗೂ ಟಿಪ್ಪರ್ ಕ್ಲಪ್ತ ಸಮಯದಲ್ಲಿ ದೊರೆಯದೇ ಸ್ವಲ್ಪ ವಿಳಂಬವಾಗಿದೆ. ಈಗ ಮಣ್ಣು ತೆರವು ಕಾರ್ಯವು ಪ್ರಗತಿಯಲ್ಲಿ ಸಾಗುತ್ತಿದೆ ಎಂದು ಪಿಡಿಓ ಚಿತ್ರಾವತಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here