ಫಿಲೋಮಿನಾ ಕಾಲೇಜಿನ ನಿರ್ಗಮಿತ ಪ್ರಾಂಶುಪಾಲ ಪ್ರೊ|ಲೀಯೋ ನೊರೋನ್ಹಾರವರಿಗೆ ವಿದಾಯ ಸನ್ಮಾನ

0

ಆಂತರಿಕ ಆಧ್ಯಾತ್ಮಿಕ ಶಕ್ತಿಯೇ ಪ್ರೊ|ಲೀಯೊರವರ ನಿಜವಾದ ಶಕ್ತಿ-ವಂ|ಲಾರೆನ್ಸ್ ಮಸ್ಕರೇನ್ಹಸ್

ಪುತ್ತೂರು: ಪ್ರತಿಷ್ಠಿತ ಫಿಲೋಮಿನಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಪ್ರಾಂಶುಪಾಲರಾಗಿ ಅನನ್ಯ ಸೇವೆಯನ್ನು ನೀಡಿದವರು ಪ್ರೊ|ಲಿಯೋ ನೊರೋನ್ಹಾರವರು. ಅವರಲ್ಲಿ ಪ್ರೀತಿಯೆಂಬ ಸೆಲೆ, ವಿನಮ್ರತೆ, ವಿಧೇಯತೆ, ಪ್ರಾಮಾಣಿಕತೆಯುಳ್ಳ ಶಕ್ತಿಯನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ಸತ್ಯ ಹಾಗೂ ನ್ಯಾಯಕ್ಕೆ ಸದಾ ಬೆಲೆ ನೀಡುವವರಾಗಿದ್ದಾರೆ. ಅದರಲ್ಲೂ ಅವರಲ್ಲಿನ ಆಂತರಿಕ ಆಧ್ಯಾತ್ಮಿಕ ಶಕ್ತಿಯೇ ಪ್ರೊ|ಲೀಯೊರವರಿಗೆ ನಿಜವಾದ ಶಕ್ತಿಯೆನಿಸಿದೆ ಎಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಲಾರೆನ್ಸ್ ಮಸ್ಕರೇನ್ಹಸ್‌ರವರು ಹೇಳಿದರು.
ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನಲ್ಲಿ ಕಳೆದ 11 ವರ್ಷಗಳಿಂದ ಪ್ರಾಂಶುಪಾಲರಾಗಿದ್ದು ಇದೀಗ ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜಿಗೆ ವರ್ಗಾವಣೆಗೊಂಡ ಪ್ರೊ|ಲೀಯೊ ನೊರೋನ್ಹಾರವರಿಗೆ ಕಾಲೇಜಿನ ಬೋಧಕ ಹಾಗೂ ಆಡಳಿತ ಸಿಬ್ಬಂದಿ ವರ್ಗದಿಂದ ಜ.7 ರಂದು ಕಾಲೇಜಿನ ಬೆಳ್ಳಿ ಹಬ್ಬದ ಸಭಾಂಗಣದಲ್ಲಿ ನಡೆದ ವಿದಾಯ ಸಮಾರಂಭದಲ್ಲಿ ಅವರು ಪ್ರೊ|ಲಿಯೋ ನೊರೋನ್ಹಾರವರಿಗೆ ವಿದಾಯ ಸನ್ಮಾನವನ್ನು ನೆರವೇರಿಸಿ ಮಾತನಾಡಿದರು. ಪ್ರೊ|ಲಿಯೋರವರ ಕುಟುಂಬದಲ್ಲಿ ಸಹೋದರ, ಸಹೋದರಿಯರ ಸಹಿತ ಅನೇಕ ಧರ್ಮಗುರುಗಳು, ಧರ್ಮಭಗಿನಿಯರು ಇದ್ದು ಅವರದ್ದು ಆಧ್ಯಾತ್ಮಿಕತೆಯೆ ಕುಟುಂಬವೆನಿಸಿದೆ. ಅಲ್ಲದೆ ಹುಟ್ಟೂರು ಮಡಂತ್ಯಾರು ಚರ್ಚ್‌ನಲ್ಲಿ ಜರಗುವ ಪವಿತ್ರ ಪೂಜಾವಿಧಿ ಸಂದರ್ಭದಲ್ಲಿ ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಗಾಯನ ಮಂಡಳಿಯ ನೇತೃತ್ವವನ್ನು ವಹಿಸಿರುತ್ತಾರೆ ಎಂದ ಅವರು 2015ರಲ್ಲಿ ಪ್ರೊ|ಲಿಯೋರವರ ಆರೋಗ್ಯದಲ್ಲಿ ಕೊಂಚ ಏರುಪೇರು ಆಗಿತ್ತು. ಇದೀಗ ಅವರಿಗೆ ಎರಡನೇ ಜೀವನವನ್ನು ದೇವರು ಕರುಣಿಸಿದ್ದಾರೆ. ಹುಟ್ಟೂರಿನ ಕಾಲೇಜಿನಲ್ಲಿ ಶೈಕ್ಷಣಿಕ ಜೀವನವನ್ನು ಮುಂದುವರೆಸುತ್ತಿರುವ ಸಂದರ್ಭದಲ್ಲಿ ದೇವರು ಉತ್ತಮ ಆರೋಗ್ಯವನ್ನು ಪ್ರೊ|ಲಿಯೋರವರಿಗೆ ಕರುಣಿಸಲಿ ಹಾಗೂ ನೂತನ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದ ಪ್ರಕಾಶ್ ಮೊಂತೇರೋರವರಿಗೆ ಶುಭವಾಗಲಿ ಮತ್ತು ಸಂಸ್ಥೆಯ ಪ್ರತಿಯೋರ್ವರು ಒಂದೇ ಕುಟುಂಬದವರಂತೆ ಸೇವೆ ಸಲ್ಲಿಸುವ ಮೂಲಕ ಸಂಸ್ಥೆಯನ್ನು ಯಶಸ್ವಿಯತ್ತ ಮುನ್ನೆಡೆಸಿರಿ ಎಂದು ಅವರು ಹೇಳಿದರು.

ಕಾಲೇಜಿಗೆ ಕೃತಜ್ಞತೆಯುಳ್ಳ ಸೇವಕರೆನಿಸಿಕೊಂಡಿದ್ದಾರೆ ಪ್ರೊ|ಲಿಯೋರವರು-ವಂ|ಡಾ|ಆಂಟನಿ ಪ್ರಕಾಶ್:
ಕಾಲೇಜಿನ ನೂತನ ಪ್ರಾಂಶುಪಾಲರಾದ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ಮಾತನಾಡಿ, ನಿರ್ಗಮಿತ ಪ್ರಾಂಶುಪಾಲರಾಗಿರುವ ಪ್ರೊ|ಲಿಯೋರವರೋರ್ವ ಬಹಳ ತಾಳ್ಮೆಯ ವ್ಯಕ್ತಿ ಜೊತೆಗೆ ವಿಧೇಯತೆ, ಒಳ್ಳೆಯ ಸ್ವಭಾವವುಳ್ಳ ಸುಂದರ ಮನುಷ್ಯರಾಗಿದ್ದಾರೆ. ೨೦೧೧ರಲ್ಲಿ ನಾನು ಈ ಸಂಸ್ಥೆಗೆ ಬಂದಂತಹ ಸಂದರ್ಭದಲ್ಲಿ ನನಗೆ ಪ್ರೊ|ಲಿಯೋರವರು ಬಾಸ್ ಆಗಿದ್ದರು. ನಾನು ಕ್ಯಾಂಪಸ್ ನಿರ್ದೇಶಕನಾಗಿದ್ದಾಗ ತನ್ನಿಂದ ಏನಾದರೂ ತಪ್ಪುಗಳು ನಡೆದಾಗ ಅವರು ಅದನ್ನು ತಿದ್ದುವ ಕೆಲಸವನ್ನು ಮಾಡುತ್ತಿದ್ದರು. ಅವರನ್ನು ಎಲ್ಲರೂ `ಪಾಪ’, ಕೆಲವೊಮ್ಮೆ `ರಫ್ ಆಂಡ್ ಟಫ್’ ಎಂದೂ ಕರೆದದ್ದೂ ಉಂಟು. ಪ್ರೊ|ಲಿಯೋರವರ ಮುಂದಾಳತ್ವದಲ್ಲಿ ಕಾಲೇಜಿಗೆ ಅನೇಕ ರ್‍ಯಾಂಕ್‌ಗಳು, ಅನೇಕ ವಿದ್ಯಾರ್ಥಿಗಳು ದೆಹಲಿಯಲ್ಲಿ ಜರಗುವ ಪ್ರತಿಷ್ಠಿತ ಆರ್.ಡಿ ಪೆರೇಡ್‌ಗೆ ಭಾಗವಹಿಸಿರುತ್ತಾರೆ ಎಂದ ಅವರು ಎಂಕಾಂ, ಎಂಎಸ್ಸಿ ಫಿಸಿಕ್ಸ್, ಎಂಎಸ್ಸಿ ಮ್ಯಾಥ್ಸ್, ಎಂಎಸ್ಸಿ ಕಂಪ್ಯೂಟರ್ ಸೈನ್ಸ್, ಎಂಕಾಂ ಅವರಿದ್ದ ಸಂದರ್ಭದಲ್ಲಿ ಆಗಿತ್ತು ಮಾತ್ರವಲ್ಲದೆ ಎಂಎ ಹಿಂದಿ ವಿಭಾಗವನ್ನು ತೆರೆಯಲು ಸಿದ್ಧತೆ ಮಾಡಿದ್ದರು. ಸಂಸ್ಥೆಯ ಅಭಿವೃದ್ದಿ ಸಂದರ್ಭದಲ್ಲಿ ಜವಾಬ್ದಾರಿಗಳನ್ನು ಎಲ್ಲರ ಜೊತೆ ಹಂಚಿಕೊಂಡು ಮುನ್ನೆಡೆಯುವ ಅವರ ಸ್ವಭಾವ ನಿಜಕ್ಕೂ ಕಾಲೇಜಿಗೆ ಕೃತಜ್ಞತೆಯುಳ್ಳ ಸೇವಕರೆನಿಸಿಕೊಂಡಿದ್ದಾರೆ ಪ್ರೊ|ಲಿಯೋರವರು ಎಂದು ಹೇಳಿ ಮುಂದಿನ ಅವರ ಶೈಕ್ಷಣಿಕ ಜೀವನಕ್ಕೆ ಶುಭ ಹಾರೈಸಿದರು.
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ವಿಜಯ್ ಲೋಬೋ, ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೊ|ಲಿಯೋ ನೊರೋನ್ಹಾರವರ ಅವಧಿಯಲ್ಲಿ ಕಾಲೇಜಿನಲ್ಲಿ ಸೇವೆಗೈಯ್ದು ನಿವೃತ್ತರಾದ ಪ್ರೊ|ವಿಷ್ಣು ಭಟ್, ಪ್ರೊ|ಗಣಪತಿ ಎಸ್, ಡಾ|ಹರ್ಬರ್ಟ್ ನಜ್ರೆತ್, ಪ್ರೊ|ಮ್ಯಾಕ್ಸಿಂ ಕಾರ್ಲ್, ಪ್ರೊ|ಜೋನ್ ಬಿ.ಸಿಕ್ವೇರಾ, ಆಡಳಿತ ಸಿಬ್ಬಂದಿಗಳಾದ ಲೂವಿಸ್ ಡಿ’ಸೋಜ, ಸಿರಿಲ್ ವಾಸ್, ಸಿರಿಲ್ ಮೊರಾಸ್, ಜೋಕಿಂ ಮಿನೇಜಸ್ ಸಹಿತ ಪದವಿ ಕಾಲೇಜಿನ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಬೋಧಕ ಹಾಗೂ ಆಡಳಿತ ಸಿಬ್ಬಂದಿ ಉಪಸ್ಥಿತರಿದ್ದರು.
ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕಿ ವಾರಿಜ ಮತ್ತು ಬಳಗ ಪ್ರಾರ್ಥಿಸಿದರು. ಕಾಲೇಜಿನ ಬೋಧಕ ಹಾಗೂ ಆಡಳಿತ ಸಿಬ್ಬಂದಿ ವರ್ಗದ ಸ್ಟಾಫ್ ಕಾರ್ಯದರ್ಶಿ ಪ್ರೊ|ಗಣೇಶ್ ಭಟ್ ಕೆ. ಸ್ವಾಗತಿಸಿ, ಅಧ್ಯಕ್ಷ ಇತಿಹಾಸ ವಿಭಾಗದ ಪ್ರೊ|ಝುಬೈರ್ ವಂದಿಸಿದರು. ಆಂಗ್ಲ ಭಾಷಾ ವಿಭಾಗದ ಉಪನ್ಯಾಸಕಿ ಭಾರತಿ ಎಸ್.ರೈ ಸನ್ಮಾನಿತರ ಸನ್ಮಾನ ಪತ್ರ ವಾಚಿಸಿದರು. ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೊ|ಮಾಲಿನಿ ಕಾರ್ಯಕ್ರಮ ನಿರೂಪಿಸಿದರು.

ಫಿಲೋಮಿನಾ ವಿದ್ಯಾಸಂಸ್ಥೆಯಲ್ಲಿನ ಸೇವೆ ನನ್ನ ಪಾಲಿನ ಸೌಭಾಗ್ಯ…
ಪ್ರಾಧ್ಯಾಪಕನಾಗಿ ಹಾಗೂ ಪ್ರಾಂಶುಪಾಲನಾಗಿ 11 ವರ್ಷ ಫಿಲೋಮಿನಾ ಸಂಸ್ಥೆಯಲ್ಲಿ ಸೇವೆ ಮಾಡುವ ಅವಕಾಶ ಲಭಿಸಿದ್ದು, ನನ್ನ ಹತ್ತು ವರ್ಷಗಳ ಪ್ರಾಂಶುಪಾಲತ್ವದ ಅವಧಿಯಲ್ಲಿ ಕಾಲೇಜಿಗೆ 64 ರ್‍ಯಾಂಕ್‌ಗಳು ಲಭಿಸಿರುತ್ತದೆ ಜೊತೆಗೆ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರದಲ್ಲಿ ಫಿಲೋಮಿನಾ ಸಂಸ್ಥೆಯು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ರಾರಾಜಿಸಿದೆ. ಈ ಸಾಧನೆಯ ಹಿಂದೆ ಹಲವರ ಬೆವರಿನ ಹಾಗೂ ರಕ್ತದ ಹನಿಗಳು ಇಲ್ಲಿನ ಮಣ್ಣಿನಲ್ಲಿ ಬಿದ್ದಿದೆ. ಇದು ನನ್ನದೊಬ್ಬನ ಸಾಧನೆಯಲ್ಲ, ಬದಲಾಗಿ ಎಲ್ಲರ ಪ್ರೀತಿ, ವಿಶ್ವಾಸ ಹಾಗೂ ಪ್ರೋತ್ಸಾಹದಿಂದ ಸಾಧ್ಯವಾಗಿದೆ. ಆದ್ದರಿಂದ ನನಗೆ ಫಿಲೋಮಿನಾ ಸಂಸ್ಥೆಯಲ್ಲಿ ಪ್ರೀತಿಯಿಂದ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯವಾಗಿದೆ. ನೂತನ ಪ್ರಾಂಶುಪಾಲ ಆಂಟನಿ ಪ್ರಕಾಶ್‌ರವರು ನನಗೆ ಪ್ರಾಂಶುಪಾಲರಾಗಿ ಮುಂದುವರೆಯಲು ಹೇಳಿದ್ದರು. ಆದರೆ ನನಗೆ ನನ್ನ ಆರೋಗ್ಯದ ದೃಷ್ಟಿಯಿಂದ ನಾನು ಹಿಂದೆ ಸರಿದಿರುತ್ತೇನೆ. ಕಾಲೇಜಿಗೆ ಸರಿಯಾದ ಸಮಯದಲ್ಲಿ ಸರಿಯಾದ ವ್ಯಕ್ತಿ ಪ್ರಾಂಶುಪಾಲರಾಗಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲಿ ಛಾಪನ್ನು ಮೂಡಿಸಿರುವ ಪ್ರಕಾಶ್‌ರವರಿಗೆ ಎನ್‌ಇಪಿ ಕಾಯ್ದೆಯನ್ನು ಎದುರಿಸುವ ಗುರುತರ ಸವಾಲು ಇದೆ. ಎಲ್ಲರೂ ಅವರೊಂದಿಗೆ ಕೈಜೋಡಿಸಿ ಸಂಸ್ಥೆಯನ್ನು ಮತ್ತಷ್ಟು ಉನ್ನತ ಸ್ತರಕ್ಕೆ ಕೊಂಡೊಯ್ಯುವಲ್ಲಿ ಸಹಕರಿಸಿ.
-ಪ್ರೊ|ಲಿಯೋ ನೊರೋನ್ಹಾ, ನಿರ್ಗಮಿತ ಪ್ರಾಂಶುಪಾಲ, ಸಂತ ಫಿಲೋಮಿನಾ ಕಾಲೇಜು

ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜಿಗೆ ಸಹಾಯಕ ಪ್ರಾಧ್ಯಾಪಕರಾಗಿ ವರ್ಗಾವಣೆಗೊಂಡ ಕಾಲೇಜಿನ ನಿರ್ಗಮಿತ ಪ್ರಾಂಶುಪಾಲರಾದ ಪ್ರೊ|ಲಿಯೋ ನೊರೋನ್ಹಾರವರನ್ನು ಅವರು ನೀಡಿದ ಸೇವೆಗೆ ಮಾಯಿದೆ ದೇವುಸ್ ಚರ್ಚ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ಲಾರೆನ್ಸ್ ಮಸ್ಕರೇನ್ಹಸ್ ಹಾಗೂ ವೇದಿಕೆಯಲ್ಲಿನ ಗಣ್ಯರು ಶಾಲು ಹೊದಿಸಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ಪ್ರೊ|ಲಿಯೋ ನೊರೋನ್ಹಾರವರು ಸನ್ಮಾನಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here