ಉಪ್ಪಿನಂಗಡಿ: ತಲವಾರು ದಾಳಿ ಪ್ರಕರಣ ಕುಪ್ಪೆಟ್ಟಿಯ ಸರ್ಪುದ್ಧೀನ್, ಕೋಲ್ಪೆಯ ಇರ್ಫಾನ್ ಬಂಧನ

0

ಉಪ್ಪಿನಂಗಡಿ : ಕಳೆದ ಡಿಸೆಂಬರ್ 6 ರಂದು ಉಪ್ಪಿನಂಗಡಿಯ ಮೀನು ಮಾರಾಟದ ಅಂಗಡಿಗೆ ದಾಳಿ ನಡೆಸಿ ತಲ್ವಾರಿನಿಂದ ಹಲ್ಲೆಗೈದು ಪರಾರಿಯಾಗಿದ್ದ ಆರೋಪಿಗಳ ಪೈಕಿ ಇಬ್ಬರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತರನ್ನು ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದ ಕುಪ್ಪೆಟ್ಟಿ ಬೈತಾರು ಮನೆ ನಿವಾಸಿ ಬಿ ದಾವೂದ್ ಎಂಬವರ ಮಗ ಸರ್ಪುದ್ದೀನ್ (31) ಹಾಗೂ ಕಡಬ ತಾಲೂಕು ಕೊಣಾಲು ಗ್ರಾಮದ ಕೋಲ್ಪೆ ಕೊಳಂಬೆ ಮನೆ ನಿವಾಸಿ ಮೂಸನ್ ಎಂಬವರ ಮಗ ಮೊಹಮ್ಮದ್ ಇರ್ಫಾನ್ (24) ಎಂದು ಗುರುತಿಸಲಾಗಿದೆ.
ಡಿ 5 ರಂದು ಇಳಂತಿಲದ ಅಂಡೆತಡ್ಕ ಎಂಬಲ್ಲಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಪ್ರತಿಯಾಗಿ ಮತೀಯ ನೆಲೆಗಟ್ಟಿನಲ್ಲಿ ಪ್ರತಿಕಾರ ಕೈಗೊಳ್ಳುವ ಉzಶದಿಂದ ಇತರ ದುಷ್ಕರ್ಮಿಗಳೊಡಗೂಡಿ ಉಪ್ಪಿನಂಗಡಿಯ ಸುಬ್ರಹ್ಮಣ್ಯ ಕ್ರಾಸ್ ಬಳಿ ಇರುವ ಹಿಂದೂ ಸಮುದಾಯದ ಮೀನು ಮಾರಾಟ ಕೇಂದ್ರಕ್ಕೆ ದಾಳಿ ನಡೆಸಿ ಅಲ್ಲಿದ್ದ ಅಶೋಕ ಆಲಿಯಾಸ್ ಅನಿಲ್ ಕುಮಾರ್ , ಮತ್ತವರ ಅಣ್ಣ ಮೋಹನ್ ದಾಸ್ ಮತ್ತು ಅಂಗಡಿಗೆ ಗ್ರಾಹಕನಾಗಿ ಬಂದಿದ್ದ ಮಹೇಶ್ ರವರನ್ನು ಹತ್ಯೆಗೈಯುವ ಸಲುವಾಗಿ ತಲವಾರಿನಿಂದ ಕಡಿದು ಗಾಯಗೊಳಿಸಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಡಿ 14 ರಂದು ಕೃತ್ಯದಲ್ಲಿ ಭಾಗಿಯಾದ ದುಷ್ಕರ್ಮಿಯೊಬ್ಬನನ್ನು ಹಾಗೂ ಕೃತ್ಯಕ್ಕೆ ಸಹಕಾರ ನೀಡಿದ ಪಿ ಎಫ್ ಐ ಸಂಘಟನೆಯ ಮೂವರು ಪ್ರಮುಖರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯಲ್ಲಿ ದಿನವಿಡೀ ಪ್ರತಿಭಟನೆ ನಡೆದು ರಾತ್ರಿ ಲಾಠಿ ಚಾರ್ಜ್ ನಡೆದಿತ್ತು. ಬಳಿಕದ ದಿನಗಳಲ್ಲಿ ಹತ್ಯೆ ಯತ್ನ ಪ್ರಕರಣದ ತನಿಖೆ ಮಂದಗತಿಯಲ್ಲಿ ನಡೆದು ಘಟನೆ ಘಟಿಸಿ ತಿಂಗಳು ಕಳೆದರೂ ಯಾರೊಬ್ಬ ಆರೋಪಿಯ ಬಂಧನವಾಗದಿದ್ದ ಬಗ್ಗೆ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗುತ್ತಿತ್ತು. ಇದರ ನಡುವೆಯೇ ಪೊಲೀಸರು ಇಬ್ಬರು ಆರೋಪಿಗಳನ್ನು ಕಡಂಬು ಎಂಬಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮುಸುಕುಧಾರಿಗಳಾಗಿ ವಾಹನಗಳಲ್ಲಿ ಆಗಮಿಸಿ ಹತ್ಯೆಗೆ ಯತ್ನಿಸಿದ ಈ ಪ್ರಕರಣದಲ್ಲಿ ಯಾವುದೇ ಸುಳಿವು ಇಲ್ಲದಿದ್ದರೂ , ನಂದ ಕುಮಾರ್ ಮತ್ತಿತರ ಅಪರಾಧ ಪತ್ತೆ ಕಾರ್ಯದಲ್ಲಿ ನಿಪುಣರಾದ ಪೊಲೀಸ್ ಅಧಿಕಾರಿಗಳ ಪ್ರಯತ್ನದ ಫಲವಾಗಿ ಕೃತ್ಯದಲ್ಲಿ ಭಾಗಿಯಾಗಿದ್ದ ಸಿನಾನ್ ಎಂಬಾತನನ್ನು ಬಂಧಿಸಿ ಆತ ನೀಡಿದ ಮಾಹಿತಿಯಾಧರದಲ್ಲಿ ಉಳಿದ ಹದಿನಾಲ್ಕು ಆರೋಪಿಗಳನ್ನು ಗುರುತಿಸಲಾಗಿತ್ತು. ಬಳಿಕದ ಬೆಳವಣಿಗೆಯಲ್ಲಿ ವಿಶೇಷ ತಂಡವನ್ನು ಹಿಂದಕ್ಕೆ ಕರೆಯಿಸಿ ತಲೆ ಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಉಪ್ಪಿನಂಗಡಿ ಎಸೈ ಕುಮಾರ್ ಕಾಂಬಳೆ ರವರಿಗೆ ಹೊಣೆ ನೀಡಲಾಗಿತ್ತು.

LEAVE A REPLY

Please enter your comment!
Please enter your name here