ಸಂಪೂರ್ಣ ಸಂಚಾರ ಬಂದ್ ಮಾಡಿ ರಸ್ತೆ ಕಾಮಗಾರಿ ಗುತ್ತಿಗೆದಾರರಿಂದ ಕಾನೂನು ಉಲ್ಲಂಘನೆ: ಆರೋಪ

0

  • ಪೂರ್ವ ಸೂಚನೆ ನೀಡದ್ದರಿಂದ ವಾಹನ ಸವಾರರರು ಅತಂತ್ರ!

ಉಪ್ಪಿನಂಗಡಿ: ಅಜಿಲಮೊಗರಿನಿಂದ ಬಾಜಾರು- ಸರಳೀಕಟ್ಟೆಯಾಗಿ ಉಪ್ಪಿನಂಗಡಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಮರು ಡಾಮರೀಕರಣ ನಡೆಯುತ್ತಿದ್ದು, ಗುತ್ತಿಗೆದಾರರು ಯಾವೊಂದು ಪೂರ್ವ ಸೂಚನೆಯನ್ನೂ ನೀಡದೇ ಏಕಾಏಕಿ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿ ಡಾಮರು ಕಾಮಗಾರಿ ನಡೆಸುತ್ತಿದ್ದಾರೆ. ಈ ಬಗ್ಗೆ ಮಾಹಿತಿಯಿಲ್ಲದ್ದರಿಂದ ಆ ಭಾಗಕ್ಕೆ ತೆರಳುವ ವಾಹನ ಸವಾರರು ಅರ್ಧ ರಸ್ತೆಯಲ್ಲೇ ಅತಂತ್ರ ಸ್ಥಿತಿ ತಲುಪುವ ಸ್ಥಿತಿ ಶನಿವಾರ ಉಂಟಾಗಿದ್ದು, ವ್ಯಾಪಕ ಆಕ್ರೋಶ ಕೇಳಿ ಬಂದಿದೆ.

ಉಪ್ಪಿನಂಗಡಿಯಿಂದ ಪೆದಮಲೆಯಾಗಿ ಸರಳೀಕಟ್ಟೆ- ಬಾಜಾರು- ಅಜಿಮೊಗರುವಾಗಿ ಬಂಟ್ವಾಳಕ್ಕೆ ಹೋಗುವ ರಸ್ತೆಯಿದ್ದು, ಈ ರಸ್ತೆಯ ಮರುಡಾಮರು ಕಾಮಗಾರಿಗೆ ಪಿಎಂಜಿಎಸ್ ಪ್ರೋತ್ಸಾಹ ನಿಧಿಯಿಂದ ೧.೨೫ ಕೋ.ರೂ. ಅನುದಾನ ಬಿಡುಗಡೆಗೊಂಡಿದ್ದು, ಅಜಿಲಮೊಗರಿನಿಂದ ಉಪ್ಪಿನಂಗಡಿ ಭಾಗಕ್ಕೆ ಬರುವ ರಸ್ತೆಗೆ ೧೦ ಕಿ.ಮೀ.ನಷ್ಟು ಡಾಮರು ಕಾಮಗಾರಿ ನಡೆಯಲಿದೆ. ಈ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಆದರೆ ಶನಿವಾರ ದಿನ ಅಜಿಲಮೊಗರು ಮಸೀದಿ ಬಳಿ ಇರುವ ಸೇತುವೆಯ ಬಳಿ ರಸ್ತೆಯನ್ನು ಎರಡೂ ಕಡೆ ಬಂದ್ ಮಾಡಿ ಡಾಮರು ಕಾಮಗಾರಿ ನಡೆಸಲಾಯಿತು. ಇಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ ಎಂಬುದಾಗಲೀ, ಕಾಮಗಾರಿಗಾಗಿ ರಸ್ತೆಯನ್ನು ಬಂದ್ ಮಾಡಲಾಗಿದೆ ಎಂಬುದಾಗಿಯಾಗಲೀ ಯಾವುದೇ ನಾಮಫಲಕವನ್ನು ಗುತ್ತಿಗೆದಾರರು ಅಳವಡಿಸಿರಲಿಲ್ಲ. ಇದರಿಂದಾಗಿ ಆ ದಾರಿಯಲ್ಲಿ ಬಂದ ವಾಹನ ಸವಾರರು ರಸ್ತೆ ಬಂದ್ ಆಗಿದ್ದರಿಂದ ಒಂದೋ ಬಂದ ದಾರಿಯಲ್ಲೇ ವಾಪಸ್ ಹೋಗಬೇಕಿತ್ತು. ಇಲ್ಲದಿದ್ದಲ್ಲಿ ಕಾಮಗಾರಿ ಸಂಪೂರ್ಣವಾಗಿ ಅದು ವಾಹನ ಸಂಚಾರಕ್ಕೆ ಯೋಗ್ಯವಾಗುವವರೆಗೆ ಕಾಯಬೇಕಾದ ಪರಿಸ್ಥಿತಿ ಎದುರಾಗಿತ್ತು. ಕೇವಲ ೧೦ ನಿಮಿಷದ ಅವಧಿಯಲ್ಲಿ ಆ ದಾರಿಯಲ್ಲಿ ಕಾರಿನಲ್ಲಿ ಅಜಿಲಮೊಗರಿಗೆ ತೆರಳಿದವರು ೧೦ ನಿಮಿಷ ಬಿಟ್ಟು ಉಪ್ಪಿನಂಗಡಿಗೆ ಹಿಂದುರುಗಿ ಬರಬೇಕಾದರೆ ಇಲ್ಲಿ ರಸ್ತೆ ಬಂದ್ ಮಾಡಿದ್ದರಿಂದಾಗಿ ಸುತ್ತುಬಳಸಿ ಬರುವಂತಾಗಿತ್ತು.

ಕಾನೂನು ಉಲ್ಲಂಘನೆಗೆ ಆಕ್ರೋಶ: ರಸ್ತೆಯೊಂದನ್ನು ಏಕಾಏಕಿ ಬಂದ್ ಮಾಡುವಂತಿಲ್ಲ. ಕಾಮಗಾರಿಗೆ ರಸ್ತೆ ಬಂದ್ ಮಾಡುವ ಅವಶ್ಯಕತೆ ಇದ್ದರೂ, ಜಿಲ್ಲಾಧಿಕಾರಿಯವರ ಅನುಮತಿ ಪಡೆದು, ಪತ್ರಿಕೆಯಲ್ಲಿ ಪ್ರಕಟನೆ ನೀಡಿ ಸಾರ್ವಜನಿಕರಿಗೆ ಮಾಹಿತಿ ನೀಡುವುದು ಹಾಗೂ ಬದಲೀ ದಾರಿಯ ಬಗ್ಗೆ ತಿಳಿಯಪಡಿಸುವುದು ಸಂಬಂಧಿತ ಇಲಾಖೆಯ ಕರ್ತವ್ಯ. ಅಲ್ಲದೇ, ಗುತ್ತಿಗೆದಾರರೂ ಕಾಮಗಾರಿ ಸ್ಥಳದಲ್ಲಿ ನಾಮಫಲಕವನ್ನೂ ಅಳವಡಿಸಬೇಕು. ಆದರೆ ಇಲ್ಲಿ ಮಾತ್ರ ಕಾಮಗಾರಿ ನೆಪದಲ್ಲಿ ಏಕಾಏಕಿ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿ ವಾಹನ ಸಂಚಾರಕ್ಕೆ ಅಡಚಣೆ ಮಾಡುವ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಲ್ಲದೆ, ಗುತ್ತಿಗೆದಾರರು ಸರ್ವಾಧಿಕಾರ ಧೋರಣೆ ಅನುಸರಿಸಿದ್ದಾರೆ ಎಂಬ ಆಕ್ರೋಶ ವಾಹನ ಸವಾರರಿಂದ ಕೇಳಿ ಬಂತು.

ಈ ರಸ್ತೆ ಅಗಲ ಕಿರಿದಾಗಿದೆ. ಆದ್ದರಿಂದ ಒಂದು ಬದಿ ಡಾಮರು ಕಾಮಗಾರಿ ನಡೆಸಿ, ಮತ್ತೊಂದು ಬದಿ ಮತ್ತೊಮ್ಮೆ ಡಾಮರು ಕಾಮಗಾರಿ ನಡೆಸಲು ಕಷ್ಟ ಅಂತ ಈ ರೀತಿ ಮಾಡಿದ್ದು. ಸೂಚನೆ ನೀಡದೇ ರಸ್ತೆ ಬ್ಲಾಕ್ ಮಾಡಿ ಕಾಮಗಾರಿ ನಡೆಸಿರುವುದು ತಪ್ಪು. ರಸ್ತೆ ಬ್ಲಾಕ್ ಮಾಡಲು ಜಿಲ್ಲಾಧಿಕಾರಿಯವರಿಂದ ಇಲಾಖೆಯು ಅನುಮತಿ ಪಡೆದುಕೊಳ್ಳಬೇಕಿತ್ತು. ಆದರೆ ಇಲ್ಲಿ ಎಲ್ಲಾ ಕಡೆ ಈ ರೀತಿಯ ಸಮಸ್ಯೆಯಿಲ್ಲ. ಕೆಲವು ಕಡೆ ರಸ್ತೆ ಬ್ಲಾಕ್ ಮಾಡದೇ ಡಾಮರು ಕಾಮಗಾರಿ ನಡೆಸಲು ಸಾಧ್ಯವಾಗುತ್ತದೆ. ಆದ್ದರಿಂದ ಜಿಲ್ಲಾಧಿಕಾರಿಯವರಿಂದ ಅನುಮತಿ ಪಡೆದುಕೊಳ್ಳಲಿಲ್ಲ. ಹಾಗಾಗಿ ರಸ್ತೆ ಬ್ಲಾಕ್ ಮಾಡುವ ಬಗ್ಗೆ ಪ್ರಕಟನೆ, ಮಾಹಿತಿ ನೀಡಲಿಲ್ಲ. ಆದರೂ ಸ್ಥಳೀಯ ತೆಕ್ಕಾರು ಗ್ರಾ.ಪಂ.ಗೆ ಇಲ್ಲಿ ರಸ್ತೆ ಕಾಮಗಾರಿ ನಡೆಸುವಾಗ ರಸ್ತೆ ತಡೆಯ ಬಗ್ಗೆ ಜನರಿಗೆ ಮಾಹಿತಿ ನೀಡಲು ಹೇಳಿದ್ದೇನೆ. ಅವರು ಒಪ್ಪಿಕೊಂಡಿದ್ದರು. ಗುತ್ತಿಗೆದಾರರಲ್ಲಿಯೂ ನಾಮಫಲಕ ಅಳವಡಿಸಲು ಸೂಚಿಸಿದ್ದೇನೆ. ಆದರೆ ಅವರು ಅದನ್ನು ನಿರ್ವಹಿಸದ ಕಾರಣ ತೊಂದರೆಯಾಗುವಂತಾಗಿದೆ. ಮುಂದೆ ಕಾಮಗಾರಿ ಸಂದರ್ಭ ರಸ್ತೆ ತಡೆವುಂಟಾಗುವುದಾದರೆ ನಾಮಫಲಕ ಅಳವಡಿಸಲು ಗುತ್ತಿಗೆದಾರರಿಗೆ ಸೂಚಿಸುತ್ತೇನೆ ಉದಯಕುಮಾರ್ ಸಹಾಯಕ ಎಂಜಿನಿಯರ್, ಪಿಎಂಜಿಎಸ್ ಯೋಜನಾ ವಿಭಾಗ

ಬೆಳಗ್ಗೆ ರಸ್ತೆ ಕಾಮಗಾರಿ ನಡೆಯುತ್ತ ಇರುವಾಗಲೇ ನಾನು ಕಾರಿನಲ್ಲಿ ಕಾಮಗಾರಿ ಸ್ಥಳದಿಂದ ಸುಮಾರು ೨೦೦ ಮೀಟರ್ ದೂರ ಇರುವ ಅಜಿಲಮೊಗರಿಗೆ ಉಪ್ಪಿನಂಗಡಿಯಿಂದ ಆ ರಸ್ತೆಯ ಮೂಲಕ ತೆರಳಿದ್ದೆ. ೧೦-೧೫ ನಿಮಿಷದಲ್ಲಿ ನಾನು ಅಲ್ಲಿಂದ ವಾಪಸ್ ಉಪ್ಪಿನಂಗಡಿಗೆ ಬರುವಾಗ ಈ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿ ಕಾಮಗಾರಿ ನಡೆಸುತ್ತಿದ್ದರು. ಪ್ರಶ್ನಿಸಿದಾಗ ಒಂದೋ ಕಾಯಬೇಕು. ಇಲ್ಲದಿದ್ದಲ್ಲಿ ಬೇರೆ ದಾರಿಯಲ್ಲಿ ಸುತ್ತು ಬಳಸಿ ಹೋಗಬೇಕು ಎಂದು ಉಡಾಫೆಯಿಂದ ಅಲ್ಲಿದ್ದವರು ಹೇಳಿದರು. ರಸ್ತೆ ಬಂದ್ ಮಾಡುವ ಬಗ್ಗೆ ಪೂರ್ವ ಸೂಚನೆಯನ್ನು ಇವರು ನೀಡುತ್ತಿದ್ದರೆ, ನಾನು ಒಂದೋ ಅಲ್ಲೇ ಕಾರು ನಿಲ್ಲಿಸಿ ಅಜಿಲಮೊಗರಿಗೆ ತೆರಳುತ್ತಿದ್ದೆ. ಇಲ್ಲದಿದ್ದಲ್ಲಿ ಪರ್ಯಾಯ ವ್ಯವಸ್ಥೆಯನ್ನು ಹುಡುಕುತ್ತಿದ್ದೆ. ಆದರೆ ಯಾವುದೇ ಮುನ್ಸೂಚನೆಯನ್ನು ನೀಡದೇ ಇವರು ಸಂಪೂರ್ಣ ರಸ್ತೆ ಬಂದ್ ಮಾಡಿರುವುದು ಕಾನೂನು ಉಲ್ಲಂಘನೆಯಾಗಿದೆ. ಇವರ ಈ ನಡೆಯಿಂದಾಗಿ ನನ್ನಂತೆ ಹಲವರು ಅತಂತ್ರರಾಗುವ ಸ್ಥಿತಿ ಎದುರಾಗಿದೆ ನಝೀರ್

LEAVE A REPLY

Please enter your comment!
Please enter your name here