- ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸರ್ವೆ ಗ್ರಾಮ ಸಮಿತಿ ಸಭೆ
ಪುತ್ತೂರು: ತಲತಲಾಂತರದಿಂದ ಕಾಂಗ್ರೆಸ್ನ ಯೋಜನೆಗಳನ್ನು ಪಡೆದುಕೊಂಡು ಲಾಭ ಮಾಡಿಕೊಂಡವರು ಇಂದು ಕಾಂಗ್ರೆಸ್ಗೆ ವಿರೋಧ ಮಾಡುತ್ತಿದ್ದಾರೆ. ಕಾಂಗ್ರೆಸ್ ಈ ದೇಶವನ್ನು ಕಟ್ಟಿ ಬೆಳೆಸಿದ್ದು ಕಾಂಗ್ರೆಸ್ ನೀಡಿದ ಕೊಡುಗೆಗಳನ್ನು ಬಿಜೆಪಿ ಒಂದೊಂದಾಗಿ ಮಾರುತ್ತಾ ದೇಶವನ್ನು ಅವನತಿಯತ್ತ ಕೊಂಡೊಯ್ಯುತ್ತಿದೆ, ಕಾಂಗ್ರೆಸ್ ಪಕ್ಷ ಶಕ್ತಿಯುತವಾಗಿ ದೇಶದಲ್ಲಿ ತಳವೂರದೇ ಇದ್ದಲ್ಲಿ ದೇಶದ ಪರಿಸ್ಥಿತಿ ಶೊಚನೀಯವಾಗಲಿದೆ ಎಂದು ಮುಂಡೂರು ಪ್ರಾ.ಕೃ.ಪ.ಸಹಕಾರಿ ಸಂಘಟದ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸುರೇಶ್ ಕುಮಾರ್ ಸೊರಕೆ ಹೇಳಿದರು.
ಜ.೭ರಂದು ಸರ್ವೆ ಗ್ರಾಮದ ಕಲ್ಪಣೆ ಮೊಗೇರ ಸಮುದಾಯ ಭವನದಲ್ಲಿ ನಡೆದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಸರ್ವೆ ಗ್ರಾಮ ಸಮಿತಿ ರಚನಾ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಅಧಿಕಾರದಲ್ಲಿದ್ದರೆ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿರುತ್ತದೆ. ಗ್ರಾಮ ಪಂಚಾಯತ್ ಕೆಲಸ ಕಾರ್ಯಗಳು ಸ್ಥಗಿತಗೊಂಡು ಅಭಿವೃದ್ಧಿ ಕಾರ್ಯಗಳು ಪಾತಾಳಕ್ಕಿಳಿದಿದೆ. ವಸತಿ ಯೋಜನೆ ಸೇರಿದಂತೆ ಯಾವುದೇ ಯೋಜನೆಗಳು ಜನ ಸಾಮಾನ್ಯರಿಗೆ ಸಿಗುತ್ತಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡದಿದ್ದರೂ ಚುನಾವಣೆ ಸಂದರ್ಭದಲ್ಲಿ ಯಾವುದಾದರೂ ಭಾವನಾತ್ಮ ವಿಚಾರಗಳನ್ನು ಮುಂದಿಟ್ಟುಕೊಂಡು ಮತ ಪಡೆಯಲು ಬಿಜೆಪಿಯವರು ಪ್ರಯತ್ನಿಸುತ್ತಾರೆ ಎಂದು ಅವರು ಹೇಳಿದರು. ಬಿಜೆಪಿ ದುರಾಡಳಿತದ ಬಗ್ಗೆ ಪ್ರತೀ ಮನೆಯವರಿಗೂ ತಿಳಿಸುವ ಕೆಲಸವಾಗಬೇಕು. ೮೫% ಜನರು ಜಾತ್ಯಾತೀತತೆಯನ್ನು ಒಪ್ಪುವವರಾಗಿದ್ದು ಜಾತ್ಯಾತೀತತೆಯನ್ನು ಒಪ್ಪುವವರು ಮೌನ ವಹಿಸಿರುವುದು ಕೂಡಾ ಬಿಜೆಪಿಗೆ ಲಾಭವಾಗಿ ಪರಿಣಮಿಸಿದೆ. ದೇಶದ ಮಾಧ್ಯಮಗಳು ಕೂಡಾ ಪಕ್ಷಪಾತಿ ಧೋರಣೆಯ ಮೂಲಕ ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ ಎಂದು ಸುರೇಶ್ ಕುಮಾರ್ ಸೊರಕೆ ಹೇಳಿದರು.
ಬಿಜೆಪಿ ಅಧಿಕಾರದಲ್ಲಿದ್ದರೆ ಜನರ ಬದುಕು ಕಷ್ಟಕರ-ಎಸ್.ಡಿ ವಸಂತ
ಉದ್ಘಾಟಿಸಿದ ಸರ್ವೆ ವಲಯ ಕಾಂಗ್ರೆಸ್ ಅಧ್ಯಕ್ಷ ಎಸ್.ಡಿ ವಸಂತ ಮಾತನಾಡಿ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡರೆ ಜನ ಸಾಮಾನ್ಯರ ಬದುಕು ಕಷ್ಟಕರವಾಗುತ್ತದೆ. ಅಧಿಕಾರಕ್ಕಾಗಿ ಹಪಹಪಿಸುವ ಬಿಜೆಪಿ ತಮ್ಮ ಅಧಿಕಾರವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡದೇ ಜನರಿಗೆ ಮೋಸ ಮಾಡುತ್ತಿದೆ. ಗ್ರಾ.ಪಂ ಅಭಿವೃದ್ಧಿ ಕಾರ್ಯಾಗಳೂ ಕುಂಠಿತವಾಗಿದೆ. ಬಡವರ, ಜನ ಸಾಮಾನ್ಯರ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರ ಪಡೆಯಬೇಕಾಗಿದ್ದು ಅದಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರು ತಳಮಟ್ಟದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುವ ಕಾರ್ಯ ಮಾಡಬೇಕಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಉಳಿದರೆ ದೇಶ ಉಳಿಯಲಿದೆ-ಹುಸೈನ್ ದಾರಿಮಿ
ಕಾಂಗ್ರೆಸ್ ಮುಖಂಡ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಮಾತನಾಡಿ ಕಾಂಗ್ರೆಸ್ ಉಳಿದರೆ ಮಾತ್ರ ದೇಶ ಉಳಿಯಲಿದೆ. ಅಲ್ಪ ಸಂಖ್ಯಾತರು ಕಾಂಗ್ರೆಸ್ಗೆ ಮತವನ್ನು ಹಾಕುತ್ತಾ ಬಂದಿದ್ದು ಇತ್ತೀಚಿನ ವರ್ಷಗಳಲ್ಲಿ ಇತರ ಪಕ್ಷಗಳ ಕಡೆಯೂ ಅಲ್ಪಸಂಖ್ಯಾತರು ವಾಲುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು. ಹಿರಿಯ ಕಾಂಗ್ರೆಸ್ಸಿಗರ ಮಕ್ಕಳನ್ನು, ಮನೆಯವರನ್ನು ಬಿಜೆಪಿಯವರು ತಮ್ಮ ಪಕ್ಷದತ್ತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಯುವ ಜನತೆ ಬಿಜೆಪಿ ಮತ್ತು ಎಸ್.ಡಿ.ಪಿ.ಐ ಪಕ್ಷಗಳಿಗೆ ಮಾರು ಹೋಗದೇ ಜಾತ್ಯಾತೀತ ಪಕ್ಷವಾಗಿರುವ ಕಾಂಗ್ರೆಸ್ನ್ನು ಬೆಂಬಲಿಸಬೇಕು ಎಂದು ಅವರು ಹೇಳಿದರು. ಕಾಂಗ್ರೆಸ್ ಪಕ್ಷದ ನಾಯಕರೂ ಕೂಡಾ ತಮ್ಮೊಳಗಿನ ವೈಮನಸ್ಸು, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷಕ್ಕಾಗಿ ಒಂದಾದರೆ ಮಾತ್ರ ಇಲ್ಲಿ ಕಾಂಗ್ರೆಸ್ಗೆ ಭವಿಷ್ಯವಿದೆ ಎಂದ ದಾರಿಮಿಯವರು ಧರ್ಮದ ಆಧಾರದಲ್ಲಿ ವಿಭಜಿಸುವ ರಾಜಕೀಯದ ಬಗ್ಗೆ ಪ್ರತಿಯೋರ್ವರೂ ಒಗ್ಗಟ್ಟಾಗಬೇಕಾಗಿದೆ ಎಂದು ಅವರು ಹೇಳಿದರು.
ಅಭಿವೃದ್ಧಿ ಬೇಕಾದರೆ ಕಾಂಗ್ರೆಸ್ ಅಧಿಕಾರದಲ್ಲಿರಬೇಕು-ಕಮಲೇಶ್
ಮುಂಡೂರು ಗ್ರಾ.ಪಂ ಸದಸ್ಯ ಕಮಲೇಶ್ ಎಸ್.ವಿ ಮಾತನಾಡಿ ಅಭಿವೃದ್ಧಿ ಬೇಕಾದರೆ ಕಾಂಗ್ರೆಸ್ ಅಧಿಕಾರದಲ್ಲಿರಬೇಕು. ಬಿಜೆಪಿ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ಎನ್ನುವ ವಿಚಾರವೇ ಮಾಯವಾಗುತ್ತದೆ. ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಉದ್ಯೋಗ ಖಾತರಿ ಯೋಜನೆಯನ್ನು ಟೀಕಿಸಿ ವ್ಯಂಗ್ಯವಾಡಿದ್ದ ಪ್ರಧಾನಿ ಮೋದಿಯವರು ಇಂದು ಅದೇ ಉದ್ಯೋಗ ಖಾತರಿ ಯೋಜನೆಯನ್ನು ಒಪ್ಪಿಕೊಂಡಿದ್ದಾರೆ. ಗ್ರಾಮ ಪಂಚಾಯತ್ಗಳ ಮೂಲಕ ಸಿಗುತ್ತಿದ್ದ ವಸತಿ ಯೋಜನೆ ಕಣ್ಮರೆಯಾಗಿದೆ. ಯಾವ ಅಭಿವೃದ್ಧಿ ಕಾಮಗಾರಿಗಳಿಗೂ ಅನುದಾನ ಬಿಡುಗಡೆಯಾಗುತ್ತಿಲ್ಲ. ಇದು ಬಿಜೆಪಿಯ ದುರಾಡಳಿತವಾಗಿದ್ದು ಕೇವಲ ಅಧಿಕಾರ ಪಡೆಯುವುದು ಮಾತ್ರ ಬಿಜೆಪಿ ಉದ್ದೇಶವಾಗಿದೆ ಎಂದು ಅವರು ಹೇಳಿದರು. ಜನರ ಬೇಡಿಕೆಯನ್ನು ಈಡೇರಿಸುವಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಸುಳ್ಳು ಹೇಳಿ, ಅಪಪ್ರಚಾರ ನಡೆಸಿ ಅಧಿಕಾರ ಪಡೆಯುವ ಬಿಜೆಪಿ ಅಧಿಕಾರ ಸಿಕ್ಕಿದ ಬಳಿಕ ಸಂಪೂರ್ಣ ನಿಷ್ಕ್ರಿಯವಾಗುತ್ತದೆ. ಬಿಜೆಪಿಯ ದುರಾಡಳಿತದ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ತಳಮಟ್ಟದಿಂದಲೇ ಪಕ್ಷ ಸಂಘಟಿಸಬೇಕಾಗಿದೆ-ಶಕೂರ್ ಹಾಜಿ
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ವಿ.ಎಚ್.ಎ ಶಕೂರ್ ಹಾಜಿ ಮಾತನಾಡಿ ಕಾಂಗ್ರೆಸ್ ಪಕ್ಷ ಎಲ್ಲ ಸಮುದಾಯಗಳನ್ನು ಒಂದೇ ರೀತಿಯಲ್ಲಿ ನೋಡುವ, ಎಲ್ಲ ಸಮುದಾಯದವರಿಗೂ ಅವಕಾಶ ನೀಡುವ ಜಾತ್ಯಾತೀತ ಪಕ್ಷವಾಗಿದ್ದು ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಮಾತ್ರ ಜನತೆ ನೆಮ್ಮದಿಯಿಂದ ಜೀವನ ಸಾಗಿಸುತ್ತಾರೆ ಎಂದು ಹೇಳಿದರು. ಕಾಂಗ್ರೆಸ್ ಸಮಾನತೆ ಸಾರುವ ಜಾತ್ಯಾತೀತ ಹಿನ್ನೆಲೆಯ ಪಕ್ಷವಾಗಿರುವ ಕಾರಣ ಅಲ್ಪಸಂಖ್ಯಾತರು ಕಾಂಗ್ರೆಸ್ನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದು ಮುಂದಕ್ಕೂ ಕಾಂಗ್ರೆಸ್ನ್ನು ತಳಮಟ್ಟದಿಂದಲೇ ಬಲಪಡಿಸುವ ಕಾರ್ಯ ನಮ್ಮಿಂದಾಗಬೇಕಾಗಿದೆ ಎಂದು ಅವರು ಹೇಳಿದರು. ಬಿಜೆಪಿ ಮತ್ತು ಎಸ್ಡಿಪಿಐ ಪಕ್ಷಗಳ ಮಾತಿಗೆ ಮರುಳಾಗದೇ ಅಲ್ಪಸಂಖ್ಯಾತರು ಕಾಂಗ್ರೆಸ್ನ್ನು ಬೆಂಬಲಿಸಬೇಕು ಎಂದು ಶಕೂರ್ ಹಾಜಿ ಹೇಳಿದರು.
ವೇದಿಕೆಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸದಸ್ಯ ರಾಮಚಂದ್ರ ಸೊರಕೆ, ಅಲ್ಪಸಂಖ್ಯಾತ ಘಟಕದ ಪ್ರ.ಕಾರ್ಯದರ್ಶಿಗಳಾದ ರಶೀದ್ ಅಮ್ಚಿನಡ್ಕ, ಶರೀಫ್ ಕೊಲ, ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರ.ಕಾರ್ಯದರ್ಶಿ ಕೆ.ಎಂ ಹನೀಫ್ ರೆಂಜಲಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಅಬ್ದುಲ್ ಅಝೀಝ್ ರೆಂಜಲಾಡಿ ವಂದಿಸಿದರು. ಸಭೆಯಲ್ಲಿ ಅಲ್ಪಸಂಖ್ಯಾತ ಘಟಕದ ಸರ್ವೆ ಗ್ರಾಮ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಮುಂಬೈ ವಿಮಾನ ನಿಲ್ದಾಣ ವನ್ನೂ ಯಾರು ಕಸಗಿಕರಣ ಮಾಡಿದ್ದು ಎಂದು ಯಾರಿಗಾದರೂ ಗೊತ್ತು ಉಂಟಾ ತಿಳಿಸಿ frafulpatel ವಿಮಾನಯಾನ ಸಚಿವ ರಾಗಿ ಇದ್ದ ಸಮಯ
ನಿದ್ರ ಡ್ ದ್ದ್ ಲಕ್ಕಿಯರ.