ಕೊರೋನಾ ಎದುರಿಸಿ ಬದುಕುತ್ತೇವೆ, ಲಾಕ್‌ಡೌನ್ (ಬಂದ್) ಮಾಡಿ ಸಾಯಿಸಬೇಡಿ – ರಾಜಕೀಯಕ್ಕಾಗಿ ಜನರ ಜೀವನದ ಜೊತೆ ಚೆಲ್ಲಾಟ ಬೇಡ.. ಬದುಕಲು ಬಿಡಿ..

0

[box bg=”#” color=”#” border=”#” radius=”5″ fontsize=”15″][box type=”error” bg=”#” color=”#” border=”#” radius=”5″ fontsize=”15″]ಬೆಂಗಳೂರಲ್ಲಿ ಕುಳಿತು ನಿರ್ಣಯ ಬೇಡ, ಶಾಸಕರಿಗೆ, ಸ್ಥಳೀಯ ಆಡಳಿತಕ್ಕೆ ಅಧಿಕಾರ ನೀಡಿ[/box][/box]

ಕೊರೋನಾ ಕಾಯಿಲೆಯ ಬಗ್ಗೆ ಲಾಕ್‌ಡೌನ್ (ಬಂದ್) ಕರ್ಫ್ಯೂ ಹೇರಿದಾಗ ಅದು ಸರಿಯಲ್ಲ ಎಂದು ಹಿಂದೆ ಹಲವಾರು ಬಾರಿ ಬರೆದಿದ್ದೇನೆ. ಕೊರೋನಾ ಬಂದರೂ 100ರಲ್ಲಿ 97 ಜನರಿಗೆ ಗೊತ್ತಾಗುವುದೇ ಇಲ್ಲ, ಗುಣಮುಖರಾಗುತ್ತಾರೆ. ಶೇ. 3 ಜನರಿಗೆ ಕಾಯಿಲೆ ತೊಂದರೆ ಕೊಡುತ್ತದೆ. ಸರಿಯಾದ ಚಿಕಿತ್ಸೆ ದೊರಕಿದರೆ ಅದರಲ್ಲಿಯೂ ಹೆಚ್ಚಿನವರು ಗುಣಮುಖರಾಗುತ್ತಾರೆ. ಬೆಳ್ತಂಗಡಿಯ ಸಿಯೋನ್ ಆಶ್ರಮದಲ್ಲಿದ್ದ 225 ದುರ್ಬಲ, ಬುದ್ಧಿಮಾಂದ್ಯ ವ್ಯಕ್ತಿಗಳಿಗೆ ಎಲ್ಲರಿಗೂ ಕೊರೋನಾ ಬಂದಿತ್ತು, ಧರ್ಮಸ್ಥಳದವರ ರಜತಾದ್ರಿಯಲ್ಲಿ ಚಿಕಿತ್ಸೆ ಪಡೆದ ಅವರೆಲ್ಲರೂ ಗುಣಮುಖರಾಗಿ ತೆರಳಿದ್ದರು. ಬೇರೆ, ಬೇರೆ ಕಾಯಿಲೆಗಳ ಹಿನ್ನಲೆ ಇದ್ದಾಗ ಕೊರೋನಾದಿಂದ ಸಾವನ್ನಪ್ಪಿದ ಪ್ರಕರಣಗಳು ಕೆಲವು ಇರಬಹುದು. ಒಮಿಕ್ರಾನ್ ಬೇಗ ಹರಡುತ್ತದೆ ಎಂದಿದ್ದರೂ ಕೊರೋನಾಗಿಂತ ಕಡಿಮೆ ಅಪಾಯಕಾರಿ. ಅದು ಮೈಲ್ಡ್ ಡಿಸೀಸ್ ಅದಕ್ಕೆ ಆಸ್ಪತ್ರೆ ಚಿಕಿತ್ಸೆ ಅವಶ್ಯಕತೆ ಇಲ್ಲ ಎಂದು ತಜ್ಞರು ಹೇಳಿದ್ದಾರೆ.

ಈಗಿನ ಸರಕಾರದ ಆರೋಗ್ಯ ಸಚಿವ ಸುಧಾಕರ್ ಕೊರೋನಾಕ್ಕೆ ಲಾಕ್‌ಡೌನ್ (ಬಂದ್) ಪರಿಹಾರವಲ್ಲವೆಂದು ಹೇಳಿದ್ದಾರೆ. ಹೀಗಿರುವಾಗ ಒಮಿಕ್ರಾನ್ ಭವಿಷ್ಯದಲ್ಲಿ ಬರುತ್ತದೆ ಎಂದಿದ್ದರೂ ಬಂದರೆ ಅದಕ್ಕೆ ಬೇಕಾದ ಚಿಕಿತ್ಸೆಯ ವ್ಯವಸ್ಥೆ ಮಾಡುವುದು ಬಿಟ್ಟು, ಅದು ಬರುತ್ತದೆ ಎಂದು ಒಮಿಕ್ರಾನ್ ಇಲ್ಲದ ಡಬಲ್‌ಡೋಸ್ ಕೊರೋನಾ ವ್ಯಾಕ್ಸಿನೇಷನ್ ಪಡೆದಿರುವ ನಮ್ಮ ಊರಿನಲ್ಲಿ ಜನರ ಜೀವನ ಬಂದ್ ಮಾಡುವುದು ಯಾಕೆ? ಬೆಂಗಳೂರಲ್ಲಿ ತರಕಾರಿ ಮಾರುವ ಮಹಿಳೆಯೋರ್ವರು ಮಾಧ್ಯಮದ ಮುಂದೆ ಬದುಕಲು ಬಿಡಿ, ಇಲ್ಲದಿದ್ದರೆ ಒಂದು ತೊಟ್ಟು ವಿಷ ಕೊಟ್ಟು ಸಾಯಿಸಿಬಿಡಿ, ಬಡ್ಡಿಗೆ ಹಣ ಪಡೆದು ವ್ಯಾಪಾರ ಮಾಡುತ್ತಿ ವೆ. ಲಾಕ್‌ಡೌನ್‌ನಿಂದಾಗಿ ಅದಕ್ಕೂ ಹಣ ಕೊಡುವವರು ಯಾರೂ ಇಲ್ಲ, ವ್ಯಾಪಾರವೂ ಇಲ್ಲ. ಎಂದು ಅಳಲು ತೋಡಿಕೊಂಡಿದ್ದಾರೆ.

ಇಲ್ಲಿ ಕೊರೋನಾ ಅಥವಾ ಒಮಿಕ್ರಾನ್‌ನ ಯಾವುದೇ ತೊಂದರೆ ಇಲ್ಲದಿರುವಾಗ ಬಂದ್‌ನಿಂದಾಗಿ ಜನರಿಗೆ ದುಡಿಮೆ ಇಲ್ಲದೆ, ಕೆಲಸ ಇಲ್ಲದೆ, ವ್ಯಾಪಾರ ವ್ಯವಹಾರ ನಷ್ಟ ಮಾಡಿಕೊಂಡು ಜೀವಮಾನವಿಡೀ ಸಾಲದಲ್ಲಿ ಬದುಕಬೇಕಾಗಿ ಬರುವ, ಬದುಕಿ ಸತ್ತಂತಿರುವ, ದಿನನಿತ್ಯ ದುಡಿಮೆ ಮಾಡಿ ತಿನ್ನುವ ಜನರು ಕೊರೋನಾ ಬಂದರೆ ಬರಲಿ ಅಲ್ಲಿಯವರೆಗೆ ಬದುಕಬೇಕಲ್ಲ ಎಂದು ಹೇಳುತ್ತಿದ್ದಾರೆ. ಹೀಗೆಯೇ ಮುಂದುವರಿದರೆ ಕೊರೋನಾ ಬರುವ ಮೊದಲೇ ಅವರು ಸಾಯುವುದಂತು ಖಂಡಿತ. ಅದಕ್ಕಾಗಿ ಕೊರೋನಾ ಬಂದರೆ ಕಾಯಿಲೆಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಿ ಅವರನ್ನು ಬದುಕಿಸಿ, ಉಳಿದವರನ್ನು ಅವರೇ ಬದುಕಲು ಬಿಡಿ ಎಂದು ಕರೆ ನೀಡಲು ಇಚ್ಚಿಸುತ್ತೇನೆ.

ಪಂಚರಾಜ್ಯಗಳಲ್ಲಿ ಇತ್ತೀಚಿನವರೆಗೆ ಚುನಾವಣಾ ರ್‍ಯಾಲಿಗಳು ನಡೆದಿದ್ದವು. ಎಲೆಕ್ಷನ್ ಕಮಿಷನ್ ಒಮಿಕ್ರಾನ್ ದೊಡ್ಡ ಕಾಯಿಲೆಯಲ್ಲ ಎಂದು ಹೇಳಿ ರ್‍ಯಾಲಿಗಳಿಗೆ ಅನುಮತಿ ನೀಡಿತ್ತು. ಈಗ ರ್‍ಯಾಲಿಗಳಿಗೆ, ಸಭೆಗಳಿಗೆ ನಿಷೇಧ ಹೇರಿದ್ದರೂ ಅಲ್ಲಿ ಲಾಕ್‌ಡೌನ್, ಬಂದ್, ಕರ್ಫ್ಯೂಗಳಿಲ್ಲ. ಹಾಗಿರುವಾಗ ಇಲ್ಲಿ ಈ ವಿಪರೀತ ಕಾನೂನು ಯಾಕೆ. ರಾಜಕೀಯ ಉದ್ದೇಶಗಳಿಗಾಗಿ ಜನರನ್ನು ನಿಯಂತ್ರಣದಲ್ಲಿಡಲು ಪ್ರಯತ್ನ ಮಾಡಬೇಡಿ. “ಯಾವುದೇ ಕಾನೂನನ್ನು ಮಾಡುವಾಗ ಅದರಿಂದ ಸಮಾಜದ ಕಟ್ಟಕಡೆಯ ದುರ್ಬಲ ವ್ಯಕ್ತಿಗೆ ಆಗಬಹುದಾದ ತೊಂದರೆಗಳನ್ನು ತಪ್ಪಿಸಿ, ಅದಕ್ಕೆ ಪರಿಹಾರವಿರುವಂತೆ ಆಚರಣೆಗೆ ತನ್ನಿ” ಎಂದು ಹೇಳಿರುವ ರಾಷ್ಟ್ರಪಿತ ಮಹಾತ್ಮಗಾಂಧಿಯ ಮಾತನ್ನು ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ. ಕೊನೇಯದಾಗಿ ಇಂತಹ ಯಾವುದೇ ಸಂದರ್ಭಗಳಲ್ಲಿ ಡೆಲ್ಲಿಯಿಂದ ಮತ್ತು ಬೆಂಗಳೂರಿನಿಂದ ಆದೇಶಗಳನ್ನು ಮಾಡುವ ಬದಲು ಜನರ ಜೀವನ, ಸಂಕಷ್ಟಗಳ ಬಗ್ಗೆ ತಿಳಿದಿರುವ ಸ್ಥಳೀಯ ಶಾಸಕರಿಗೆ, ಜನ ಪ್ರತಿನಿಧಿಗಳಿಗೆ, ಸ್ಥಳೀಯ ಆಡಳಿತಕ್ಕೆ, ಸಂಘ ಸಂಸ್ಥೆಗಳಿಗೆ ಜವಾಬ್ಧಾರಿಯನ್ನು, ಅಧಿಕಾರವನ್ನು ನೀಡಬೇಕು. ಕಳೆದ ಸಲ ಶಾಸಕರ ನೇತೃತ್ವದಲ್ಲಿ ಕೊರೋನಾ ಕಾರ್ಯಪಡೆ ಕೊರೋನಾ ನಿಯಂತ್ರಣವನ್ನು ಸಮರ್ಪಕವಾಗಿ ಮಾಡಿರುವುದು ತಮಗೆಲ್ಲಾ ತಿಳಿದಿದೆ. ಆ ಕಾರಣಕ್ಕೆ ಹಳ್ಳಿಯಿಂದ ಡೆಲ್ಲಿಗೆ ಆ ಆಡಳಿತವಾಗಬೇಕು ಎಂಬ ಮಹಾತ್ಮ ಗಾಂಧಿಯವರ ಗ್ರಾಮಸ್ವರಾಜ್ಯದ ಆಡಳಿತ ಆಚರಣೆಗೆ ಬರಲಿ ಎಂದು ಆಶಿಸುತ್ತೇನೆ.

ಮೇಲೆ ಕುಳಿತು ಇಂತಹ ಕಾನೂನು ಆಚರಣೆಗೆ ತರುವವರಿಗೆ, ಅಧಿಕಾರಿಗಳಿಗೆ ಬಂದ್, ಲಾಕ್‌ಡೌನ್‌ನಿಂದ ಯಾವುದೇ ತೊಂದರೆಯಾಗುವುದಿಲ್ಲ, ಅವರಿಗೆ ಎಲ್ಲಾ ಸವಲತ್ತುಗಳು ಮನೆ ಬಾಗಿಲಿಗೆ ದೊರಕುತ್ತದೆ. ಬಂದ್‌ನಿಂದ ಜನರು ಬಡವರಾಗುತ್ತಾ ಹೋದರೂ ಅವರು ಶ್ರೀಮಂತರಾಗುತ್ತಾ ಹೋಗುತ್ತಾರೆ. ಜನರ ಕಷ್ಟಗಳು ಅವರಿಗೆ ಅರಿವಾಗುವುದಿಲ್ಲ. ಎಲ್ಲಿಯವರೆಗೆ ಜನರು ತಾವು ಆರಿಸಿದ ಜನಪ್ರತಿನಿಧಿಗಳನ್ನು ಕೇಳುವುದಿಲ್ಲವೋ, ಪ್ರತಿಭಟಿಸುವುದಿಲ್ಲವೋ ಅಲ್ಲಿಯವರೆಗೆ ಇದೇ ರೀತಿಯ ಆಡಳಿತ ನಡೆಯುತ್ತಾ ಇರುತ್ತದೆ. ಪ್ರಜಾಪ್ರಭುತ್ವದಲ್ಲಿ ಜನರು ಜಾಗೃತರಾಗುವುದೇ ಅದಕ್ಕೆ ಪರಿಹಾರವೆಂದು ಸಾರಿ ಹೇಳಲು ಇಚ್ಚಿಸುತ್ತೇನೆ.
-ಸಂ

LEAVE A REPLY

Please enter your comment!
Please enter your name here