ಜಿಲ್ಲಾ ಬಿಜೆಪಿಯಿಂದ ಪಕ್ಷಗಳ ಮಧ್ಯೆ ಬೀದಿ ರಂಪಾಟ ನಡೆಸುವ ಹುನ್ನಾರ

0

  • ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ರಾಮಚಂದ್ರ ಅಮಳ ಆರೋಪ

ಪುತ್ತೂರು:ಪಂಜಾಬ್‌ನಲ್ಲಿ ಪ್ರಧಾನ ನರೇಂದ್ರ ಮೋದಿಗೆ ಭದ್ರತಾ ವೈಫಲ್ಯದ ಘಟನೆಗೆ ಸಂಬಂಧಿಸಿ ದ.ಕ ಜಿಲ್ಲಾ ಬಿಜೆಪಿಯವರು ಮಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವ ಮೂಲಕ ಪಕ್ಷಗಳ ಮಧ್ಯೆ ಬೀದಿ ರಂಪಾಟ ನಡೆಸುವ ಹೊನ್ನಾರ ನಡೆಸುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಅಮಳ ಆರೋಪಿಸಿದರು.

ಎಪಿಎಂಸಿ ರಸ್ತೆಯಲ್ಲಿರುವ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಜ.೧೦ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಪಕ್ಷ, ಸಂಘಟನೆಗಳು ಸಾರ್ವಜನಿಕ ಸ್ಥಳ, ರಸ್ತೆ ಬದಿ, ಸರಕಾರಿ ಕಚೇರಿಗಳ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವುದು ಸಾಮಾನ್ಯ, ಒಂದು ಪಕ್ಷ ಇನ್ನೊಂದು ಪಕ್ಷದ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಇತಿಹಾಸವೇ ದೇಶದಲ್ಲಿಲ್ಲ. ಆದರೆ ಬಿಜೆಪಿಯವರು ಹೊಸ ಸಂಪ್ರದಾಯ ಪ್ರಾರಂಭಿಸಿದ್ದಾರೆ. ಪಂಜಾಬ್‌ನಲ್ಲಿ ನಡೆದ ಘಟನೆ ಸಂಬಂಧಿಸಿದ ದ.ಕ ಜಿಲ್ಲಾ ಬಿಜೆಪಿಯವರು ಕೆಳದಿನಗಳ ಹಿಂದೆ ಸಂಜೆ ವೇಳೆಗೆ ಮಂಗಳೂರಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕಾರ್ಮಿಕ ಘಟಕದ ಅಧ್ಯಕ್ಷರು ಓರ್ವರೇ ಇರುವ ಸಂದರ್ಭದಲ್ಲಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವ ಮೂಲಕ ನಾಚಿಕೆಗೇಡು, ಉದ್ದಟತನ, ಅಧಿಕ ಪ್ರಸಂಗದ ಕೆಲಸ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಸಂಯಮ ಕಳೆದುಕೊಳ್ಳಲಿಲ್ಲ. ಸಂಯಮ ಕಳೆದುಕೊಳ್ಳುತ್ತಿದ್ದರೆ ಅಲ್ಲಿ ಬೀದಿ ರಂಪಾಟವೇ ಅಗುತ್ತಿತ್ತು. ಕಾಂಗ್ರೆಸ್ ಗೌರವದಿಂದ ಪ್ರತಿರೋಧ ವ್ಯಕ್ತಪಡಿಸಿದೆ. ಪಕ್ಷದ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಪಕ್ಷಗಳ ಮಧ್ಯೆ ಹೊಡೆದಾಟ ನಡೆದು ಬೀದಿ ರಂಪಾಟ ನಡೆಸುವುದೇ ಬಿಜೆಪಿಯವರ ಉದ್ದೇಶವಾಗಿದೆ. ತಾ.ಪಂ. ಜಿ..ಪಂ., ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿಯವರೇ ಆಡಳಿತದಲ್ಲಿದ್ದು ವಿರೋಧ ಪಕ್ಷದವರನ್ನು ರಾಜಕೀಯವಾಗಿ ಮುಗಿಸುವುದೇ ಇವರ ಉದ್ದೇಶವಾಗಿದ ಎಂದು ಆರೋಪಿಸಿದರು.

ಪ್ರಧಾನಿಯಿಂದ ಸಿಂಪತಿ ಗಿಟ್ಟಿಸುವ ಕೆಲಸ:
ಪಂಜಾಬ್‌ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ಲೈ ಓವರ್ ಮೇಲೆ ರಸ್ತೆ ತಡೆ ಉಂಟಾಗಿದೆ. ಅಲ್ಲಿಂದ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿಯವರು ನಾನು ಜೀವಂತವಾಗಿ ಮರಳಿದ್ದಕ್ಕೆ ಅಲ್ಲಿನ ಮುಖ್ಯಮಂತ್ರಿಗೆ ಧನ್ಯವಾದ ತಿಳಿಸುವ ಮೂಲಕ ಸಿಂಪತಿ ಗಿಟ್ಟಿಸುವ ಕೆಲಸ ಮಾಡಿದ್ದಾರೆ. ಘಟನೆ ನಡೆದ ಎರಡು ದಿನಗಳ ಬಳಿಕ ಅದಕ್ಕೆ ಸಂಬಂಧಿಸಿದ ವಿಡಿಯೋ ಬಿಡುಗಡೆಯಾಗಿದ್ದು, ಪ್ರಧಾನಿ ಮೋದಿಯವರ ವಾಹನದಿಂದ ಕೇವಲ ಹತ್ತು ಅಡಿ ಅಂತರದಲ್ಲಿ ಬಿಜೆಪಿ ಕಾರ್ಯಕರ್ತರು ಪಕ್ಷದ ಧ್ವಜ ಹಿಡಿದು ಘೋಷಣೆ ಕೂಗುವುದು ವಿಡಿಯೋದಲ್ಲಿದೆ. ಎಸ್‌ಪಿಜಿ ಭದ್ರತೆಯ ಮಧ್ಯೆ ಬಿಜೆಪಿ ಕಾರ್ಯಕರ್ತರು ಅಲ್ಲಿಗೆ ಹೇಗೆ ಬಂದಿದ್ದಾರೆ? ಎಸ್‌ಪಿಜಿ ಭದ್ರತ ಪಡೆಯವರು ಅವರನ್ನು ಯಾಕೆ ತಡೆಯಲಿಲ್ಲ? ಈ ಘಟನೆಯಲ್ಲಿ ಯಾವುದೋ ಸಂಚಿದೆ ಎಂದು ಆಪಾಧಿಸಿದರು. ಪಂಜಾಬ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ೭೦,೦೦೦ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅಲ್ಲಿಗೆ ಬಂದಿರುವುದು ಕೇವಲ ೭೦೦ ಮಂದಿ ಮಾತ್ರ. ಇದರಿಂದ ಅಸಹ್ಯಪಟ್ಟು ಮೋದಿಯವರು ಅಲ್ಲಿಂದಲೇ ಹಿಂತಿರುಗಿದ್ದಾರೆ ಎಂದು ವ್ಯಂಗ್ಯವಾಡಿದ ಅಮಳರವರು, ಕಾಂಗ್ರೆಸ್ ಕಳೆದ ೬೦ ವರ್ಷಗಳಲ್ಲಿ ಕೊಲ್ಲುವ ರಾಜಕೀಯ ಮಾಡಿಲ್ಲ. ಹಿಂಸೆಯ ರಾಜಕಾರಣದಲ್ಲಿ ಕಾಂಗ್ರೆಸ್ ನಂಬಿಕೆ ಇಟ್ಟಿಲ್ಲ. ಸಿಎಎ ಹಾಗೂ ಎನ್‌ಆರ್‌ಸಿ ಕಾನೂನು ಜಾರಿಗೊಳಿಸುವ ಮೂಲಕ ಜನರಲ್ಲಿ ಭಾವನಾತ್ಮಕವಾಗಿ ವಿರೋಧಿಸುವಂತೆ ಮಾಡಿದ್ದಾರೆ. ಇದರಿಂದ ಅವರು ಸಾಧಿಸಿದ್ದೇನು? ದೇಶಕ್ಕೆ ಏನು ಪ್ರಯೋಜನವಾಗಿದೆ? ನಾವು ಸೈಂದಾಂತಿಕವಾಗಿ ವಿರೋಧಿಸುತ್ತಾ ಬಂದಿದ್ದೇವೆ ಹೊರತು ವೈಯಕ್ತಿವಾಗಿ ಅಲ್ಲ. ಪ್ರಧಾನಿಯವರನ್ನು ನಾವು ವಿರೋಧಿಸುತ್ತಿಲ್ಲ. ಆದರೆ ಬಿಜೆಪಿಯವರನ್ನು ಸೈಂದಾಂತಿಕವಾಗಿ ನಾವು ವಿರೋಧಿಸುತ್ತೇವೆ. ವೈಯಕ್ತಿಕವಾಗಿ ಬಿಜೆಪಿಯವರು ಸ್ನೇಹಿತರೇ ಎಂದರು.

ಲಾಕ್‌ಡೌನ್‌ಗೆ ಸಲಹೆ ನೀಡುವ ತಜ್ಞರಿಗೆ ಪುತ್ತೂರಿನಲ್ಲಿ ಸನ್ಮಾನ:
ಕೊರೋನಾ ನಿಯಂತ್ರಿಸಲು ಲಾಕ್‌ಡೌನ್ ಮಾಡುವಂತೆ ಸರಕಾರಕ್ಕೆ ಸಲಹೆ ನೀಡುವ ತಜ್ಞರು ಯಾರು. ಅವರನ್ನು ಪುತ್ತೂರಿಗೆ ಆಮಂತ್ರಿಸಿ ದೊಡ್ಡ ಕಾರ್ಯಕ್ರಮ ನಡೆಸಿ ಅವರನ್ನು ಸನ್ಮಾನಿಸಲಾಗುವುದು. ಅವರ ಸಂಶೋಧನೆಯಲ್ಲಿ ಕೊರೋನಾ ರಾತ್ರಿ ಮಾತ್ರ ಹರಡುವುದು. ಹಗಲನಲ್ಲಿಲ್ಲ. ಶನಿವಾರ, ಆದಿತ್ಯವಾರ ಮಾತ್ರ. ಉಳಿದ ದಿನಗಳಲ್ಲಿ ಹರಡುವುದಿಲ್ಲ. ಇಂತಹ ಸಂಶೋಧಕರ ಸಲಹೆಗಳನ್ನು ಒಪ್ಪಿಕೊಳ್ಳುವವರಿಗೆ ಮಿದುಳಿಲ್ಲ. ಅವರು ಶತಮೂರ್ಖರು. ಕೊರೋನಾ ನಿಯಂತ್ರಿಸಲು ದಕ್ಷಿಣ ಕನ್ನಡ ಜಿಲ್ಲೆಗೆ ಯಾಕೆ ಈ ನಿಯಮಗಳು. ಕಾಂಗ್ರೆಸ್ ಹಮ್ಮಿಕೊಂಡಿರುವ ಮೇಕೆದಾಟು ಪಾದಾಯಾತ್ರೆ ತಡೆಯುವುದೇ ಇವರ ಉದ್ದೇಶ. ರಾಜಕೀಯ ಉದ್ದೇಶಕ್ಕಾಗಿ ಅವರು ಲಾಕ್‌ಡೌನ್ ಮಾಡಿ ಜನರನ್ನು ಮಂಗ ಮಾಡುತ್ತಾರೆ. ಇದನ್ನು ಕಾಂಗ್ರೆಸ್ ಖಂಡಿಸುವುದಾಗಿ ರಾಮಚಂದ್ರ ಅಮಳ ತಿಳಿಸಿದರು.

ಧಾರ್ಮಿಕ ನಂಬಿಕೆಗೆ ದಕ್ಕೆ ತರುವುದನ್ನು ಧರ್ಮ, ಪಕ್ಷ, ಬೇಧ ಮರೆತು ಖಂಡಿಸಬೇಕು:
ಕೊರಗ ವೇಷ ಹಾಕದಂತೆ ಕಾನೂನಿದೆ. ಅದು ಜನಾಂಗೀಯ ನಿಂಧನೆಯಾಗುತ್ತದೆ. ಮದುವೆ ಕಾರ್ಯಕ್ರಮದಲ್ಲಿ ಮದುಮಗನಿಗೆ ಕೊರಗಜ್ಜ ದೈವವವನ್ನು ಹೋಲುವ ವೇಷ ಹಾಕಿರುವುದನ್ನು ಕಾಂಗ್ರೆಸ್ ಖಂಡಿಸುತ್ತದೆ. ಧಾರ್ಮಿಕ ನಂಬಿಕೆಗಳಿಗೆ ದಕ್ಕೆ ತರುವವರನ್ನು ಪ್ರತಿಯೊಬ್ಬರು ಜಾತಿ, ಧರ್ಮ, ಪಕ್ಷ ಬೇಧ ಮರೆತು ಖಂಡಿಸಬೇಕು. ಇದರಲ್ಲಿ ಯಾವುದೇ ರಾಜಕೀಯ ಇರಬಾರದು. ಈ ಘಟನೆಯನ್ನು ಕಾಂಗ್ರೆಸ್ ಉಗ್ರವಾಗಿ ಖಂಡಿಸುತ್ತದೆ. ಇಂತಹ ಕೃತ್ಯ ಮಾಡಿದವರನ್ನು ನ್ಯಾಯ ಬದ್ಧವಾಗಿ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಾನೂನು ಬದ್ದವಾದ ಶಿಕ್ಷೆ ಆಗಬೇಕು ಎಂದು ಅಮಳ ರಾಮಚಂದ್ರ ಒತ್ತಾಯಿಸಿದರು.

ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಕೆ.ಎ ಅಲಿ ಹಾಗೂ ಎಸ್.ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here