ನೆಲ್ಯಾಡಿ ಗ್ರಾಮಸಭೆ – ಕೋಳಿ ಸಾಕಾಣಿಕೆ ಘಟಕ ಸ್ಥಾಪನೆಗೆ ಆಕ್ಷೇಪ, ತೆರವಿಗೆ ಆಗ್ರಹ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ತ್ಯಾಜ್ಯ ವಿಲೇವಾರಿಗೆ ಒತ್ತಾಯ
  • ಆಸ್ಪತ್ರೆಗೆ ವಾಹನ ಬೇಕು
  • ನೆಲ್ಯಾಡಿ ಹೋಬಳಿ ಆಗಲಿ

ನೆಲ್ಯಾಡಿ: ಗ್ರಾಮದ ಸರೋಳಿಕೆರೆ ಎಂಬಲ್ಲಿ ಗ್ರಾಮಸ್ಥರ ಆಕ್ಷೇಪವಿದ್ದರೂ ಕೋಳಿಘಟಕ ಸ್ಥಾಪನೆ ಮಾಡಲಾಗಿದ್ದು, ಇದರಿಂದ ಪರಿಸರದಲ್ಲಿ ಕೆಟ್ಟ ದುರ್ವಾಸನೆ ಬೀರುತ್ತಿದ್ದು ರೋಗ ರುಜಿನಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ಈ ಘಟಕ ತೆರವುಗೊಳಿಸಬೇಕೆಂದು ಗ್ರಾಮಸ್ಥರು ನೆಲ್ಯಾಡಿ ಗ್ರಾಮ ಪಂಚಾಯತ್ ಗ್ರಾಮ ಸಭೆಯಲ್ಲಿ ಒತ್ತಾಯಿಸಿದ್ದಾರೆ.


ಸಭೆ ಗ್ರಾ.ಪಂ.ಅಧ್ಯಕ್ಷೆ ಚೇತನಾರವರ ಅಧ್ಯಕ್ಷತೆಯಲ್ಲಿ ಜ.೧೦ರಂದು ನೆಲ್ಯಾಡಿ ಸರಕಾರಿ ಹಿ.ಪ್ರಾ.ಶಾಲೆಯ ಸಭಾಂಗಣದಲ್ಲಿ ನಡೆಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ ಅವರು ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸರೋಳಿಕೆರೆ ನಿವಾಸಿ ಜೋಮನ್ ಕೆ.,ಎಂಬವರು ಸರೋಳಿಕೆರೆಯಲ್ಲಿ ಸ್ಥಳೀಯರ ಆಕ್ಷೇಪಣೆ ಇದ್ದರೂ ಕೋಳಿ ಘಟಕ ಸ್ಥಾಪನೆ ಮಾಡಲಾಗಿದೆ. ಈ ಪರಿಸರದಲ್ಲಿ 10 ಮನೆಗಳಿದ್ದು ಹಿರಿಯರು, ಅನಾರೋಗ್ಯಪೀಡಿತರೂ ಇದ್ದಾರೆ. ನಮ್ಮ ಮನೆಯಿಂದ ೫೫ ಮೀಟರ್ ದೂರದಲ್ಲಿ ಸರಕಾರದ ನಿಯಮಕ್ಕೆ ವಿರುದ್ಧವಾಗಿ ಘಟಕ ನಿರ್ಮಾಣ ಮಾಡಲಾಗಿದೆ. ಈಗ ಇಲ್ಲಿಂದ ಕೆಟ್ಟ ದುರ್ವಾಸನೆ ಬರುತ್ತಿದ್ದು ಆರೋಗ್ಯ ಹದಗೆಡುತ್ತಿದೆ. ಈ ಹಿಂದೆ ಎರಡು ಸಲ ಕೋಳಿಘಟಕ ಸ್ಥಾಪನೆಗೆ ಆಕ್ಷೇಪಿಸಿ ಗ್ರಾಮ ಪಂಚಾಯತ್‌ಗೆ ಹಾಗೂ ತಾಲೂಕು ಪಂಚಾಯತ್‌ಗೆ ಮನವಿ ಮಾಡಿದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾ.ಪಂ.ಸದಸ್ಯ ರವಿಪ್ರಸಾದ್ ಶೆಟ್ಟಿಯವರು, ಸರೋಳಿಕೆರೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಪಂಚಾಯತ್‌ನಿಂದ ಅನುಮತಿ ನೀಡಿದ್ದೇವೆ. ಕೋಳಿ ಸಾಕಾಣಿಕೆಗೆ ಅನುಮತಿ ನೀಡಲಾಗಿಲ್ಲ. ಅವರು ತಾಲೂಕು ಆರೋಗ್ಯಾಧಿಕಾರಿಯವರಿಂದಲೇ ಎನ್‌ಒಸಿ ತಂದಿದ್ದಾರೆ ಎಂದರು. ಈ ವೇಳೆ ಮಾತನಾಡಿದ ಗ್ರಾಮಸ್ಥ ಗಣೇಶ್‌ರವರು, ಅಲ್ಲಿ ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹಾಕುವ ಸಂದರ್ಭದಲ್ಲಿಯೇ ಆಕ್ಷೇಪಣೆ ನೀಡಲಾಗಿತ್ತು. ಆದರೂ ಕಟ್ಟಡ ನಿರ್ಮಾಣಗೊಂಡಿದೆ ಎಂದರು. ಸ್ಥಳೀಯ ನಿವಾಸಿಗಳಾದ ಶಿಬಾಜೋಮನ್, ಸುಜಾತ, ಮೋಳಿ ಮತ್ತಿತರರು ಮಾತನಾಡಿ, ಇಲ್ಲಿ ಸತ್ತಕೋಳಿಗಳನ್ನು ಗುಂಡಿಗೂ ಹಾಕುತ್ತಿಲ್ಲ, ನಾಯಿಗಳು ಎತ್ತಿಕೊಂಡು ನಮ್ಮ ಮನೆ ಬಾಗಿಲಿಗೆ ಬರುತ್ತಿವೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್‌ರವರು, ಈ ಬಗ್ಗೆ ಘಟಕದ ಮಾಲಕರಿಗೆ ಎಚ್ಚರಿಕೆ ನೀಡುವುದಾಗಿ ಹೇಳಿದರು. ಕೋಳಿ ಘಟಕದಿಂದ ಆಗುತ್ತಿರುವ ತೊಂದರೆ ಬಗ್ಗೆ ಪ್ರಸ್ತಾಪಿಸಿದ ಗ್ರಾಮಸ್ಥರು ಕೋಳಿ ಘಟಕ ತೆರವುಗೊಳಿಸುವಂತೆ ಆಗ್ರಹಿಸಿದರು. ಗ್ರಾಮಸ್ಥರಾದ ವರ್ಗೀಸ್ ಮಾದೇರಿ, ಅಣ್ಣಿ ಎಳ್ತಿಮಾರ್‌ರವರು ಪೂರಕವಾಗಿ ಮಾತನಾಡಿ ಕೋಳಿ ಘಟಕ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಈ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ಮಾತನಾಡಿದ ಮಾರ್ಗದರ್ಶಿ ಅಧಿಕಾರಿಯಾಗಿದ್ದ ಭಾರತಿ ಅವರು, ಈ ವಿಚಾರವನ್ನು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಗಮನಕ್ಕೆ ತರುವುದಾಗಿ ಹೇಳಿ ಚರ್ಚೆಗೆ ತೆರೆ ಎಳೆದರು.

ತ್ಯಾಜ್ಯ ವಿಲೇವಾರಿಗೆ ಒತ್ತಾಯ:
ಘನತ್ಯಾಜ್ಯ ಘಟಕ ನಿರ್ಮಾಣಗೊಂಡು ವಾಹನ ಖರೀದಿಯೂ ಆಗಿದೆ. ಒಂದೂವರೇ ವರ್ಷವಾದರೂ ತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ. ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಮಾಜಿ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ ಹೇಳಿದರು. ವರ್ಗೀಸ್ ಮಾದೇರಿ ಹಾಗೂ ಇತರರೂ ಧ್ವನಿಗೂಡಿಸಿ ಕಸ ವಿಲೇವಾರಿ ಸೂಕ್ತವಾಗಿ ಆಗಬೇಕೆಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಸದಸ್ಯ ರವಿಪ್ರಸಾದ್ ಶೆಟ್ಟಿಯವರು, ಎಲ್ಲಾ ಅಂಗಡಿಗಳಿಗೂ ಬಕೆಟ್ ಕೊಡಲಾಗಿದೆ. ತ್ಯಾಜ್ಯ ನಿರ್ವಹಣೆಯನ್ನು ಸಂಜೀವಿನಿ ಒಕ್ಕೂಟದವರಿಗೆ ನೀಡಬೇಕೆಂದು ಸರಕಾರದಿಂದ ಸುತ್ತೋಲೆ ಬಂದಿದೆ. ಅದರಂತೆ ಸಂಜೀವಿನಿ ಒಕ್ಕೂಟದವರ ಸಭೆ ಕರೆದು ಸಮಾಲೋಚನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಗ್ರಾಮಸ್ಥ ಜಾನ್ ಪಿ.ಎಸ್.,ರವರು ಮಾತನಾಡಿ, ತ್ಯಾಜ್ಯ ವಿಲೇವಾರಿ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಬೇಕು. ಬಲ್ಬ್ ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನು ತಂದು ತೋಡುಗಳಿಗೆ ಸುರಿಯಲಾಗುತ್ತಿದೆ. ಕರ್ಬಸಂಕ ಎಂಬಲ್ಲಿ ಗಣಪತಿ ವಿಗ್ರಹ ವಿಸರ್ಜನೆ ಮಾಡುವ ಜಾಗದಲ್ಲಿ ತ್ಯಾಜ್ಯ ತಂದು ಹಾಕಲಾಗುತ್ತಿದೆ. ಇಲ್ಲಿ ಪಕ್ಕದಲ್ಲಿ ಚರ್ಚ್ ಸಹ ಇದೆ. ತ್ಯಾಜ್ಯಗಳಿಂದ ಪರಿಸರ ದುರ್ವಾಸನೆಯಿಂದ ಕೂಡಿದೆ ಎಂದರು.

ಆಸ್ಪತ್ರೆಗೆ ವಾಹನ ಬೇಕು:
ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಾಹನದ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ವಿದ್ಯುತ್ ಸಮಸ್ಯೆ:
ಪಡುಬೆಟ್ಟು ಶಾಲೆ, ಪಲ್ಲದಗಂಡಿಯಲ್ಲಿ ಟ್ರಾನ್ಸ್‌ಫಾರ್‍ಮರ್ ಕೆಳಮಟ್ಟದಲ್ಲಿದ್ದು ಇದರ ಬದಲಾವಣೆ ಮಾಡಬೇಕೆಂದು ಗ್ರಾಮಸ್ಥ ಕೆ.ಪಿ.ಆನಂದ ಆಗ್ರಹಿಸಿದರು. ಬೆಥನಿ-ಪಡ್ಡಡ್ಕ ರಸ್ತೆಯಲ್ಲಿ ವಿದ್ಯುತ್ ಲೈನ್‌ಗಳು ಕೆಳಮಟ್ಟದಲ್ಲಿವೆ. ಆದ್ದರಿಂದ ಸದ್ರಿ ರಸ್ತೆಯಲ್ಲಿ ಜೆಸಿಬಿ, ಹಿಟಾಚಿಗಳಿಗೆ ಸಂಚಾರ ಸಾಧ್ಯವಾಗದೇ ಸುತ್ತುಬಳಸಿ ಹೋಗಬೇಕಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥ ಜಾನ್ ಪಿ.ಎಸ್.ರವರು ಮೆಸ್ಕಾಂ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದರು.

ನೆಲ್ಯಾಡಿ ಹೋಬಳಿ ಆಗಲಿ:
ನೆಲ್ಯಾಡಿ ಬದಲು ಆಲಂಕಾರು ಹೋಬಳಿ ಕೇಂದ್ರ ಆಗುತ್ತಿದೆ ಎಂದು ಪ್ರಚಾರವಿದೆ. ನೆಲ್ಯಾಡಿ ಹೋಬಳಿ ಕೇಂದ್ರ ಆಗಬೇಕು. ಆಗದೇ ಇದ್ದಲ್ಲಿ ನೆಲ್ಯಾಡಿ ಗ್ರಾಮವನ್ನು ಕಡಬ ಹೋಬಳಿ ಕೇಂದ್ರಕ್ಕೆ ಸೇರಿಸಬೇಕು ಎಂದು ಗ್ರಾಮಸ್ಥ ಸೀತಾರಾಮ ಕಾನಮನೆ ಒತ್ತಾಯಿಸಿದರು. ಪಡುಬೆಟ್ಟುನಲ್ಲಿ ಎಸ್‌ಸಿ,ಎಸ್‌ಟಿಯವರಿಗೆ ಸ್ಮಶಾನಕ್ಕೆ ಜಾಗ ಕಾದಿರಿಸಬೇಕೆಂದು ಆನಂದ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮಕರಣಿಕೆ ಅಶ್ವಿನಿಯವರು, ಮೂಲದಾಖಲಾತಿಯಲ್ಲಿ ಇಲ್ಲಿ ಸ್ಮಶಾನಕ್ಕೆ ಜಾಗ ಇದೆ ಎಂದರು. ಸ್ಮಶಾನಕ್ಕೆ ಮೀಸಲಾದ ಜಾಗದ ಗಡಿ ಗುರುತು ಮಾಡುವಂತೆ ಒತ್ತಾಯಿಸಲಾಯಿತು.

ಅಂಬೇಡ್ಕರ್ ಭವನ ನಿರ್ಮಿಸಿ:
ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೆ.ಪಿ.ಆನಂದ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನೋಡೆಲ್ ಅಧಿಕಾರಿಯಾಗಿದ್ದ ಭಾರತಿಯವರು, ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ವಹಿಸಿಕೊಂಡು 1ವಾರ ಆಗಿದೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಗಮನಹರಿಸುವುದಾಗಿ ಹೇಳಿದರು. ಎಸ್‌ಸಿ,ಎಸ್‌ಟಿಯವರಿಗೆ ಮೀಸಲಾದ ಅನುದಾನ ದುರುಪಯೋಗ ಆಗಬಾರದು. ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಬರುವ ಅನುದಾನ, ಅಭಿವೃದ್ಧಿ ಕೆಲಸಗಳ ಬಗ್ಗೆ ಗ್ರಾಮ ಪಂಚಾಯತ್‌ಗೆ, ವಾರ್ಡ್ ಸದಸ್ಯರಿಗೆ ಮಾಹಿತಿ ಸಿಗಬೇಕೆಂದು ಗ್ರಾಮಸ್ಥರಾದ ಅಣ್ಣಿ ಎಲ್ತಿಮಾರ್, ಕೆ.ಪಿ.ಆನಂದ ಹೇಳಿದರು.

ಸೋಲಾರ್ ಲೈಟ್ ಅಳವಡಿಸಿ:
ಪಡುಬೆಟ್ಟು ಅಂಗನವಾಡಿ ಕೇಂದ್ರದ ಬಳಿ ಸೋಲಾರ್ ಲೈಟ್ ಅಳವಡಿಸಬೇಕು. ಇಲ್ಲಿ ಸಂಜೆ ವೇಳೆಗೆ ಮದ್ಯ ಸೇವಿಸಿ ಅಂಗನವಾಡಿ ವಠಾರದಲ್ಲಿ ಬಾಟ್ಲಿಗಳನ್ನು ಎಸೆದು ಹೋಗುತ್ತಿದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತೆ ರಜನಿ ಹೇಳಿದರು. ಅಂಗನವಾಡಿಗೆ ಆವರಣಗೋಡೆ ನಿರ್ಮಿಸುವಂತೆಯೂ ಅವರು ಮನವಿ ಮಾಡಿದರು. ಪಡುಬೆಟ್ಟು ಶಾಲೆಗೆ ಸುಸಜ್ಜಿತ ಶೌಚಾಲಯ, ವಿಕಲಚೇತನರ ಶೌಚಾಲಯವೂ ಆಗಬೇಕೆಂದು ಅಲ್ಲಿನ ಶಿಕ್ಷಕಿ ಮನವಿ ಮಾಡಿದರು. ಪಡುಬೆಟ್ಟುನಲ್ಲಿ ಪರಿಶಿಷ್ಠ ಜಾತಿ/ಪಂಗಡದವರ ಕಾಲೋನಿಗೆ ಸೋಲಾರ್ ಲೈಟ್ ಅಳವಡಿಸಬೇಕೆಂದು ಅಣ್ಣಿ ಎಲ್ತಿಮಾರ್ ಒತ್ತಾಯಿಸಿದರು. ಈ ಸಲದ ಕ್ರೀಯಾಯೋಜನೆಯಲ್ಲಿ ಸೋಲಾರ್ ಲೈಟ್‌ಗೆ ಅನುದಾನ ಕಾಯ್ದಿರಿಸಲಾಗಿದೆ ಎಂದು ಸದಸ್ಯರು ಉತ್ತರಿಸಿದರು. ಕುರುಬರಕೇರಿ ಅಂಗನವಾಡಿಯ ಹೆಸರು ರಾಮನಗರ ಅಂಗನವಾಡಿ ಕೇಂದ್ರ ಎಂದು ಬದಲಾಯಿಸಬೇಕೆಂದು ಗ್ರಾ.ಪಂ.ಸದಸ್ಯರಾದ ರವಿಪ್ರಸಾದ್, ಪ್ರಕಾಶ್ ಕೆ.ಪೂಜಾರಿ, ಸೀತಾರಾಮ ಕಾಮಮನೆ ಒತ್ತಾಯಿಸಿದರು. ಅಂಗನವಾಡಿಗಳಿಗೆ ಹೊಸ ಕಟ್ಟಡ ನಿರ್ಮಾಣಕ್ಕೂ ಗ್ರಾಮಸ್ಥರು ಒತ್ತಾಯಿಸಿದರು.

ಕೊಳಚೆ ನೀರು ತಡೆಯಿರಿ:
ನೆಲ್ಯಾಡಿ ಪೇಟೆಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ಇದರಿಂದಾಗಿ ಸೊಳ್ಳೆಗಳ ಕಾಟದಿಂದ ರಾತ್ರಿ ನಿದ್ದೆ ಮಾಡಲಾಗುತ್ತಿಲ್ಲ ಎಂದು ಗ್ರಾಮಸ್ಥರೊಬ್ಬರು ಸಭೆಯಲ್ಲಿ ಅಳಲು ತೋಡಿಕೊಂಡರು.

ಕೊರಗ ಜನಾಂಗದ ಜಾಗ ಗಡಿಗುರುತು ಮಾಡಿ:
ನೆಲ್ಯಾಡಿಯಲ್ಲಿ ೧ ಕೊರಗ ಜನಾಂಗದ ಕುಟುಂಬವಿದ್ದು ಅವರ ಜಾಗದ ಗಡಿ ಗುರುತು ಆಗಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸದಸ್ಯ ಜಯಾನಂದ ಬಂಟ್ರಿಯಾಲ್ ಒತ್ತಾಯಿಸಿದರು. ಬೆಥನಿ-ಪಡಡ್ಕ ರಸ್ತೆ ಕಾಂಕ್ರಿಟೀಕರಣ, ಮಾದೇರಿಯಿಂದ ಎರಕಡಪು ಸಂಪರ್ಕ ರಸ್ತೆ ಅಭಿವೃದ್ಧಿಗೆ ಅಣ್ಣಿ ಎಲ್ತಿಮಾರ್ ಒತ್ತಾಯಿಸಿದರು. ಸಮಾಜ ಕಲ್ಯಾಣ ಇಲಾಖೆಯಿಂದ ಸಿಗುವ ವಿದ್ಯಾರ್ಥಿ ವೇತನದ ಬಗ್ಗೆ ಶಾಲೆಗಳಿಗೆ ಮಾಹಿತಿ ಒದಗಿಸಿಕೊಡಬೇಕೆಂದು ಸದಸ್ಯ ರವಿಪ್ರಸಾದ್ ಶೆಟ್ಟಿ ಹೇಳಿದರು.

ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರ, ಮೆಸ್ಕಾಂನ ಸುನೀತಾ, ಕೃಷಿ ಅಧಿಕಾರಿ ಭರಮಣ್ಣವರ, ಪೊಲೀಸ್ ಇಲಾಖೆಯ ಯೋಗರಾಜ್, ಸಿಆರ್‌ಪಿ ವಿಮಲ್‌ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪುಷ್ಪಾವತಿ, ಗ್ರಾಮಕರಣಿಕೆ ಅಶ್ವಿನಿ ಹಾಗೂ ಸಮಾಜ ಕಲ್ಯಾಣ ಇಲಾಖಾಧಿಕಾರಿಯವರು ಇಲಾಖಾವಾರು ಮಾಹಿತಿ ನೀಡಿದರು. ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಸದಸ್ಯರಾದ ಜಯಾನಂದ ಬಂಟ್ರಿಯಾಲ್, ಉಷಾ ಓ.ಕೆ., ರೇಷ್ಮಾ, ಮಹಮ್ಮದ್ ಇಕ್ಬಾಲ್, ಜಯಲಕ್ಷ್ಮೀಪ್ರಸಾದ್, ಪುಷ್ಪಾ, ರವಿಪ್ರಸಾದ್ ಶೆಟ್ಟಿ, ಯಾಕುಬ್ ಯಾನೆ ಸಲಾಂ, ಶ್ರೀಲತಾ ಸಿ.ಹೆಚ್., ಜಯಂತಿ, ಪ್ರಕಾಶ್, ಆನಂದ ಪಿಲವೂರುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಮಂಜುಳ ಎನ್.,ಸ್ವಾಗತಿಸಿ, ವರದಿ ಮಂಡಿಸಿದರು. ಸಿಬ್ಬಂದಿ ಶಿವಪ್ರಸಾದ್ ವಂದಿಸಿದರು. ಗ್ರಾಮಸಭೆ ಆರಂಭಕ್ಕೆ ಮೊದಲು ೨೦೨೨-೨೩ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕ್ರಿಯಾ ಯೋಜನೆ ತಯಾರಿ ಗ್ರಾಮಸಭೆ ನಡೆಯಿತು. ಸಿಬ್ಬಂದಿ ಶಿವಪ್ರಸಾದ್‌ರವರು ಉದ್ಯೋಗ ಖಾತರಿ ಯೋಜನೆಯಡಿ ಬಂದ ಅರ್ಜಿಗಳನ್ನು ಸಭೆಗೆ ಮಂಡಿಸಿದರು. ನೆಲ್ಯಾಡಿ ಶಾಲಾ ಮುಖ್ಯಗುರು ಆನಂದ ಅಜಿಲರವರು ಪ್ರಾರ್ಥಿಸಿದರು.

 

ಸರಕಾರಿ ಕಚೇರಿಗಳಲ್ಲಿ ಕಾಲಮಿತಿಯಲ್ಲಿ ಕೆಲಸ ಆಗಲಿ:
ತಾಲೂಕು ಕಚೇರಿ, ಸಹಾಯಕ ಆಯುಕ್ತರ ಕಚೇರಿಯಲ್ಲಿ ಕೆಲವೊಂದು ಕಡತಗಳು ಮೂರ್‍ನಾಲ್ಕು ವರ್ಷದಿಂದ ವಿಲೇವಾರಿ ಆಗದೆ ಬಾಕಿಯಾಗಿದೆ. ಇದರಿಂದ ಬಹಳಷ್ಟು ಸಮಸ್ಯೆ ಆಗುತ್ತಿದೆ. ಯಾವುದೇ ಕಡತ ಇದ್ದರೂ ಕಾಲಮಿತಿಯೊಳಗೆ ಕೆಲಸ ಆಗಬೇಕು. ವಿಳಂಬ ಮಾಡಿ ಜನರನ್ನು ಅಲೆದಾಟ ನಡೆಸುವುದು ಸರಿಯಲ್ಲ ಎಂದು ಸದಸ್ಯ ಜಯಾನಂದ ಬಂಟ್ರಿಯಾಲ್‌ರವರು ಹೇಳಿದರು. ನೆಲ್ಯಾಡಿ ಪೇಟೆ ಅಂಗನವಾಡಿಯ ಆರ್‌ಟಿಸಿಗೆ ಹಲವು ವರ್ಷದಿಂದ ಪ್ರಯತ್ನಿಸುತ್ತಿದ್ದರೂ ಇನ್ನೂ ಆಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಸುದ್ದಿಬಿಡುಗಡೆ ನೇತೃತ್ವದಲ್ಲಿ ನಡೆಯುತ್ತಿರುವ ಸರಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳಿಗೆ ನಿರ್ಬಂಧ, ಭ್ರಷ್ಟಾಚಾರ ವಿರುದ್ಧದ ಹೋರಾಟದ ಬಗ್ಗೆಯೂ ಜಯಾನಂದ ಬಂಟ್ರಿಯಾಲ್‌ರವರು ಸಭೆಯಲ್ಲಿ ಉಲ್ಲೇಖಿಸಿದರು.

ಗಾಂಜಾ ಮಾರಾಟ ತಡೆಯಿರಿ:
ನೆಲ್ಯಾಡಿ ಪೇಟೆಯಲ್ಲೂ ಗಾಂಜಾ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥ ವರ್ಗೀಸ್ ಮಾದೇರಿ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನೆಲ್ಯಾಡಿ ಹೊರಠಾಣೆ ಕಾನ್ಸ್‌ಸ್ಟೇಬಲ್ ಯೋಗರಾಜ್‌ರವರು, ಗ್ರಾಮದಲ್ಲಿ ನಡೆಯುವ ಯಾವುದೇ ಅಕ್ರಮ ಚಟುವಟಿಕೆ ಬಗ್ಗೆ ಗ್ರಾಮಸ್ಥರು ಪೊಲೀಸ್ ಇಲಾಖೆಗೆ ಗೌಪ್ಯವಾಗಿ ಮಾಹಿತಿ ನೀಡಿ. ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ನೆಲ್ಯಾಡಿ ಪರಿಸರದಲ್ಲಿ ಹೊರಜಿಲ್ಲೆ, ಹೊರ ರಾಜ್ಯದ ಕಾರ್ಮಿಕರು ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದಾರೆ. ಇಲ್ಲಿ ಕೆಲವೊಮ್ಮೆ ಗಲಾಟೆ ಸಹ ನಡೆಯುತ್ತಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸದಸ್ಯ ಜಯಾನಂದ ಬಂಟ್ರಿಯಾಲ್ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಯೋಗರಾಜ್‌ರವರು, ಸರಿಯಾದ ಮಾಹಿತಿ ಇಲ್ಲದೇ, ವಿಳಾಸ ಪಡೆದುಕೊಳ್ಳದೇ ಮನೆ ಬಾಡಿಗೆಗೆ ನೀಡಬಾರದು ಎಂದು ಹೇಳಿದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.