ಪೊಲೀಸ್ ಇನ್ಸ್ಪೆಕ್ಟರ್ ಮಾರುತಿ ನಾಯಕ್ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣ – ಸಂಸದ ನಳಿನ್ ಕುಮಾರ್ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

0

ಪುತ್ತೂರು: ಪೊಲೀಸ್ ವೃತ್ತ ನಿರೀಕ್ಷಕರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಸಂಬಂಧ ಸಂಸದ ನಳಿನ್ ಕುಮಾರ್ ಕಟೀಲು ವಿರುದ್ಧ ಮಂಗಳೂರು ಪೂರ್ವ ಠಾಣೆ ಪೋಲಿಸರು ದಾಖಲಿಸಿದ್ದ ಎಫ್‌ಐಆರ್ ಹಾಗೂ ಮಂಗಳೂರಿನ ೨ನೇ ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣೆಯನ್ನು ಹೈಕೋರ್ಟ್ ರದ್ದುಪಡಿಸಿದೆ.

ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ೨೦೧೭ರಲ್ಲಿ ದ.ಕ‌. ಸಂಸದರಾದ ಪಾಲ್ತಾಡಿ ಗ್ರಾಮದ ಕುಂಜಾಡಿ ಮೂಲದ ನಳಿನ್ ಕುಮಾರ್ ಕಟೀಲ್ ಅವರು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಎಫ್‌ಐಆರ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣೆಯನ್ನು ರದ್ದುಪಡಿಸಿದೆ. ನಳಿನ್ ಪರವಾಗಿ ನ್ಯಾಯವಾದಿ ಪವನಚಂದ್ರ ಶೆಟ್ಟಿ ವಾದಿಸಿದ್ದರು. ಪ್ರಕರಣದಲ್ಲಿ ಆರೋಪ ರುಜುವಾತು ಪಡಿಸುವಂತಹ ಅಂಶಗಳಿಲ್ಲ, ಅಲ್ಲದೆ, ಸಂವಿಧಾನದ ಪರಿಚ್ಛೇದ ೧೦೫ ಪ್ರಕಾರ ಸರಕಾರದ ಆಡಳಿತ ಯಂತ್ರ ಅಥವಾ ಅಧಿಕಾರಿಗಳು ತಪ್ಪು ಮಾಡುತ್ತಿದ್ದಾರೆ ಎಂದು ಗೊತ್ತಾದರೆ ಜನಪ್ರತಿನಿಧಿಗಳು(ಸಂಸದರು) ಮಧ್ಯ ಪ್ರವೇಶಿಸುವ ಅಧಿಕಾರ ಹೊಂದಿದ್ದಾರೆ. ಆ ಕರ್ತವ್ಯವನ್ನು ಸಂಸದರು ನಿಭಾಯಿಸಿದ್ದಾರೆ. ಜನರನ್ನು ಪ್ರಚೋದಿಸುವ ಅಥವಾ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಉದ್ದೇಶ ಅವರದ್ದಾಗಿರಲಿಲ್ಲ ಎಂದು ವಕೀಲ ಪವನ್ ಚಂದ್ರ ಶೆಟ್ಟಿ ನ್ಯಾಯಪೀಠದ ಗಮನ ಸೆಳೆದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಎಫ್‌ಐಆರ್ ಮತ್ತು ವಿಚಾರಣೆಯನ್ನು ರದ್ದುಪಡಿಸಿದೆ. ಜತೆಗೆ ಜೆಎಂಎಫ್‌ಸಿ ನ್ಯಾಯಾಲಯ ತಿರಸ್ಕರಿಸಿದ್ದ ಬಿ ರಿಪೋರ್ಟ್ ಅನ್ನು ಹೈಕೋರ್ಟ್ ಅಂಗೀಕರಿಸಿದೆ.

ಪ್ರಕರಣ ಇದು:
ರಾಜ್ಯದಲ್ಲಿ ಕೋಮು ಗಲಭೆ ನಡೆಯುತ್ತಿದೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಛಾ ವತಿಯಿಂದ ೨೦೧೭ರಂದು ಸೆ. ೭ರಂದು ಬೆಂಗಳೂರಿನಿಂದ ಮಂಗಳೂರಿಗೆ ಬೈಕ್ ರ್‍ಯಾಲಿ ಹಮ್ಮಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅಂದು ಮಧ್ಯಾಹ್ನ ೧ ಗಂಟೆಗೆ ಮಂಗಳೂರು ಜಿಲ್ಲಾಧಿಕಾರಿ ಕಛೇರಿಗೆ ಮೆರವಣಿಗೆ ನಡೆಸಲು ಮುಂದಾಗಿದ್ದ ಬಿಜೆಪಿ ಕಾರ್ಯಕರ್ತರನ್ನು ಮಂಗಳೂರು ಪೂರ್ವ ಠಾಣೆಯ ಇನ್‌ಸ್ಪೆಕ್ಟರ್ ಬಂಧಿಸಿದ್ದರು. ಈ ಕುರಿತು ಮಾಹಿತಿ ಪಡೆದಿದ್ದ ನಳಿನ್ ಕುಮಾರ್ ಅವರು ಅಂದು ಮಧ್ಯಾಹ್ನ ೩ ಗಂಟೆಗೆ ಠಾಣೆಗೆ ತೆರಳಿ ಕಾರ್ಯಕರ್ತರ ಬಂಧನದ ಕುರಿತ ಡೈರಿಯನ್ನು ತಮಗೆ ತೋರಿಸುವಂತೆ ಇನ್‌ಸ್ಪೆಕ್ಟರ್ ಮಾರುತಿ ಜಿ. ನಾಯಕ್ ಅವರನ್ನು ಕೇಳಿದ್ದರು. ಆಗ ಇನ್ಸ್‌ಪೆಕ್ಟರ್ ತಮ್ಮ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾರೆಂದು ಆರೋಪಿಸಿ ನಳಿನ್ ಕುಮಾರ್ ವಿರುದ್ಧ ಮಂಗಳೂರು ಪೂರ್ವ ಠಾಣೆಯ ಠಾಣಾಧಿಕಾರಿಗೆ ದೂರು ನೀಡಿದ್ದರು. ಬಳಿಕ ಎಫ್‌ಐಆರ್ ದಾಖಲಿಸಲಾಗಿತ್ತು. ಪ್ರಕರಣ ಮಂಗಳೂರು ೨ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ಕೋರ್ಟ್ ತಲುಪಿತ್ತು. ಈ ದೂರನ್ನು ರದ್ದುಪಡಿಸಬೇಕು ಎಂದು ಕೋರಿ ನಳಿನ್ ಹೈಕೋರ್ಟ್ ಮೆಟ್ಟಲೇರಿದ್ದರು.

LEAVE A REPLY

Please enter your comment!
Please enter your name here