ಸಿಡಿಲ ಸಂತ ಸ್ವಾಮಿ ವಿವೇಕಾನಂದರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

“ವೃಕ್ಷದ ಫಲವು ವೃಕ್ಷಕಲ್ಲ, ನದಿಯ ನೀರು ನದಿಗಲ್ಲ, ಸಂತನ ಬದುಕು ಸಂತನಿಗಲ್ಲ ಅದು ಲೋಕದ ಹಿತಕೆ” ಎಂಬ ಕಬೀರರ ದೋಹೆಯ ಸಾಲುಗಳು ಸಾರುವ ಸಾರದಂತೆ, ಜೀವಮಾನದ ಪೂರ್ತಿ ಬದುಕನ್ನು ಸಮಾಜದ ಹಿತಕ್ಕಾಗಿ ಸಮರ್ಪಿಸಿದ ಅಸಂಖ್ಯ ಸಂತರ ತಾಯಿನಾಡು ಈ ಭಾರತ. ಕ್ಲಿಷ್ಟಕರವಾದ ಆಧ್ಯಾತ್ಮಿಕತೆಯ ಶಿಖರವನ್ನೇರಿ ಸಾಮಾನ್ಯ ವ್ಯಕ್ತಿತ್ವದಿಂದ ಅಸಾಮಾನ್ಯ ವ್ಯಕ್ತಿತ್ವದ ಕಡೆ ಸಾಗಿ, ಅಸಾಧಾರಣ ಸಾಧನೆಗೈದ ಲಕ್ಷಾಂತರ ಸಾಧು-ಸಂತರ ಜೀವನವೇ ಈ ದೇಶದ ಪರಂಪರೆಗೆ ಹಿಡಿದ ಕೈಗನ್ನಡಿ.ಕುರುಕ್ಷೇತ್ರ ಯುದ್ಧ ಭೂಮಿಯಲ್ಲಿ ಅಭೇದ್ಯವಾದ ಚಕ್ರವ್ಯೂಹವನ್ನು ಭೇದಿಸಿದ ಅಭಿಮನ್ಯುವಿನಂತೆ, ಸನಾತನ ಧರ್ಮ ಪ್ರತೀಬಾರಿಯೂ ವಿರೋಧಿಗಳಿಂದ ಆಕ್ರಮಣದ ಮುಖೇನವಾಗಿ ರಚಿಸಲ್ಪಟ್ಟ ಚಕ್ರವ್ಯೂಹಗಳನ್ನು ಭೇದಿಸಿ ನಿಂತಿದೆ. ಆಕಾಶಕ್ಕಿಂತ ವಿಶಾಲವಾಗಿ, ಸಾಗರಕ್ಕಿಂತ ಆಳವಾಗಿ,ಪುರಾತನಕ್ಕಿಂತಲೂ ಸನಾತನವಾದ ಹಿಂದೂಧರ್ಮವನ್ನು ಅಜ್ಞಾನದಿಂದ ದೂರವಿರಿಸಲು ಕಾಲ – ಕಾಲಕ್ಕೆ ತಕ್ಕಂತೆ ಸುಜ್ಞಾನದ ಅಭ್ಯಂಜನ ಮಾಡಿಸಿ ಶುದ್ಧೀಕರಿಸಿದ ಕೀರ್ತಿ ಸಂತರದ್ದು. ಭಾರತ ಭೂಮಿಯ ಸಂತ ಶಿರೋಮಣಿಗಳ ಇತಿಹಾಸದಲ್ಲೇ ಕ್ರಾಂತಿಯ ಜ್ಯೋತಿಯಾಗಿ ಬೆಳಗಿದ ಸ್ವಾಮಿ ವಿವೇಕಾನಂದರ ಬದುಕು ಪೂರ್ತಿ ದೇಶದ ಭವ್ಯ ಚರಿತ್ರೆಯನ್ನು ಬಿಚ್ಚಿಡುತ್ತದೆ. ಭಾರತದ ಸ್ವರೂಪವನ್ನು ಸರಳವಾಗಿ ಅರ್ಥೈಸಿಕೊಳ್ಳಬೇಕಾದರೆ ಸ್ವಾಮಿ ವಿವೇಕಾನಂದರ ಜೀವನದ ಕಡೆ ಅವಲೋಕನ ಮಾಡಿದರೆ ಸಾಕು. ಯಾಕೆಂದರೆ ಸ್ವಾಮಿ ವಿವೇಕಾನಂದರು ತಮ್ಮ ಜೀವನವನ್ನು ಈ ದೇಶದಲ್ಲಿ ಲೀನಮಾಡಿಕೊಂಡವರು.

1863 ಜನವರಿ 12ರಂದು ಮಹಾನ್ ದೈವಭಕ್ತೆ ಭುವನೇಶ್ವರಿ ದೇವಿಯ ಗರ್ಭ ಸಂಜಾತನಾಗಿ ಜಗತ್ತಿನ ಬೆಳಕು ಕಂಡವರು ನರೇಂದ್ರನಾಥ ದತ್ತ. ಬಾಲಕ ನರೇಂದ್ರ ಎಳೆಯ ಪ್ರಾಯದಲ್ಲೇ ಆಧ್ಯಾತ್ಮಿಕತೆಯ ಕಡೆಗೆ ಆಕರ್ಷಿತಗೊಂಡುವನು. ತರುಣ ಪ್ರಾಯದಲ್ಲಿ ಕಾಳಿಮಾತೆಯ ಪರಮಭಕ್ತ ರಾಮಕೃಷ್ಣ ಪರಮಹಂಸರಿಂದ ಸಂನ್ಯಾಸ ದೀಕ್ಷೆ ಪಡೆದು ಸ್ವಾಮಿ ವಿವೇಕಾನಂದರಾದರು.1893ರಲ್ಲಿ ಅಮೇರಿಕದ ಚಿಕಾಗೋದಲ್ಲಿ ನಡೆದ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ ಮಾತೃಧರ್ಮದ ಕುರಿತಾದ ಭಾಷಣ ಸ್ವಾಮಿ ವಿವೇಕಾನಂದರ ವ್ಯಕ್ತಿತ್ವದ ಪಾಂಚಜನ್ಯವಾಗಿ ಜಗತ್ತಿನೆಲ್ಲೆಡೆ ಮೊಳಗಿತ್ತು. ಅಮೇರಿಕಾದಿಂದ ವಾಪಸ್ಸಾದ ಸ್ವಾಮೀಜಿ ಹಿಂದೂ ಧರ್ಮದಲ್ಲಿದ್ದ ಮೌಢ್ಯಾಚರಣೆಯ ನಿರ್ಮೂಲನೆಗೆ ನಾಂದಿ ಹಾಡಿದರು. ಭಾರತದ ಪರಂಪರೆ ಮತ್ತು ಆದರ್ಶ ಪುರುಷರ ಬಗ್ಗೆ ಅನುಯಾಯಿಗಳಲ್ಲಿ ಸದಾ ಅರಿವು ಮೂಡಿಸುತ್ತಿದ್ದ ಸ್ವಾಮಿ ವಿವೇಕಾನಂದರು ಭಾರತದ ಭವಿಷ್ಯ ಉದ್ಧಾರಕ್ಕಾಗಿ 1897ರಲ್ಲಿ ರಾಮಕೃಷ್ಣ ಮಿಷನ್ ಸ್ಥಾಪನೆ ಮಾಡಿದರು. ರಾಮಕೃಷ್ಣ ಮಿಷನ್ ಸ್ವಾಮಿ ವಿವೇಕಾನಂದರ ನೇತೃತ್ವದಲ್ಲಿ ಭಾರತದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿ,ಇಂದಿಗೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದೆ.

ಸ್ವಾಮಿ ವಿವೇಕಾನಂದರ ಕಾಲದಲ್ಲಿ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಡಿ ಅಗ್ನಿಯಾಗಿ ಉರಿಯುತ್ತಿತ್ತು,ಅನೇಕ ದಾರ್ಶನಿಕರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಆದರೆ ಸ್ವಾಮಿ ವಿವೇಕಾನಂದರು ಮಾತ್ರ ದೇಶದ ಭವಿಷ್ಯದ ಕುರಿತಾಗಿ ವಿಭಿನ್ನ ಆಲೋಚನೆ ಮಾಡಿದರು. ಈ ದೇಶಕ್ಕೆ ಸ್ವಾತಂತ್ರ ಇನ್ನೇನು ಕೆಲವೇ ವರ್ಷಗಳಲ್ಲಿ ದೊರಕಬಹುದು, ಆದರೆ ಆ ಸ್ವಾತಂತ್ರದ ರಕ್ಷಣೆಗೆ ಭಾರತೀಯರನ್ನು ಸಜ್ಜುಗೊಳಿಸುವ ಅವಶ್ಯಕತೆ ಇದೆ ಎಂಬ ಅಭಿಪ್ರಾಯ ಸ್ವಾಮಿ ವಿವೇಕಾನಂದರದ್ದಾಗಿತ್ತು. ಸ್ವಾತಂತ್ರ ಭಾರತದ ಭವಿಷ್ಯದ ರಕ್ಷಣೆ ಯುವ ಸಮಾಜದಿಂದ ಮಾತ್ರ ಸಾಧ್ಯ ಎಂದು ಸ್ವಾಮೀಜಿ ಯುವಶಕ್ತಿಯ ಸಂಘಟನೆಯತ್ತ ಕಾರ್ಯಪ್ರವೃತ್ತರಾದರು. ಸ್ವಾಮೀಜಿಯ ಧೀರತ್ವದ ಮಾತುಗಳೇ ಯುವ ಸಮಾಜವನ್ನು ಸೇರಿಸುವ ಸೇತುವೆಯಾಯಿತು. ಭವ್ಯ ಭಾರತದ ದಿವ್ಯ ಪರಂಪರೆಯ ಪುನರ್ ಮನನ ಮಾಡಿ,ದೇಶದ ಪೂರ್ವಜರ ರಕ್ತಸಿಕ್ತ ತ್ಯಾಗ, ಶೌರ್ಯ ಬಲಿದಾನದ ಕಥೆಯನ್ನು ಯುವಮನಗಳಿಗೆ ತಲುಪಿಸುವ ಕಾರ್ಯ ಸ್ವಾಮಿ ವಿವೇಕಾನಂದರು ಮಾಡಿದರು.

”ದನಗಾಹಿ ಬಾಲಕರು ರಾಷ್ಟ್ರರಥ ಚಾಲಕರು ಆದಾರು ಬೆಳೆದಾರು ಧ್ಯೇಯಜಲವೆರೆದಾಗ” ಅರ್ಥಾತ್ ಸಾಮಾನ್ಯ ವ್ಯಕ್ತಿಗೆ ಧ್ಯೇಯದ ದಿಕ್ಕನ್ನು ತೋರಿದಾಗ ಆತ ಅಸಾಮಾನ್ಯ ಸಾಧನೆಗೈಯುತ್ತಾನೆ. ಸಾಮಾನ್ಯ ವ್ಯಕ್ತಿಯನ್ನು ಬಡಿದೆಬ್ಬಿಸುವ ಅಂತಹ ಧ್ಯೇಯವಾಕ್ಯ ಅದು ಸ್ವಾಮಿ ವಿವೇಕಾನಂದರದು. ಸ್ವಾಮಿ ವಿವೇಕಾನಂದರ ವಾಣಿ ಒಬ್ಬ ವಿವೇಕವುಳ್ಳ ವ್ಯಕ್ತಿಯ ರಕ್ತದಲ್ಲಿ ವಿದ್ಯುತ್ ಸಂಚಾರ ಮಾಡಿಸುವಂತಹದ್ದು. ಸ್ವಾಮಿ ವಿವೇಕಾನಂದರ ಮಾತುಗಳು ಅಗ್ನಿಗಿಂತಲೂ ಪ್ರಖರವಾದುದು. ”ಉತ್ತಿಷ್ಠತ ಜಾಗ್ರತ ಪ್ರಪ್ಯವರಣ್ ನಿಭೋದತ” ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಸ್ವಾಮೀಜಿಯ ಅಮರವಾಣಿ ಎಂತಹ ಜಡ ನಿದ್ರೆಯಲ್ಲಿದ್ದವನನ್ನೂ ಬಡಿದೆಬ್ಬಿಸುವ ಸಿಂಹನಾದ. ಭಗವದ್ಗೀತೆಯ ಶ್ಲೋಕಗಳು ಯಾವ ರೀತಿ ಪೂರ್ತಿ ಜಗತ್ತಿಗೆ ಇಂದಿಗೂ ಪ್ರೇರಣದಾಯಕವಾಗಿದೆಯೋ ಅಂತೆಯೇ ಸ್ವಾಮಿ ವಿವೇಕಾನಂದರ ಮಾತುಗಳು ಇಂದಿಗೂ ಯುವಜನೆತೆಯ ಪಾಲಿಗೆ ವೇದಾಂತವೇ ಆಗಿದೆ.

ಒಂದು ವೇಳೆ ಸ್ವಾಮಿ ವಿವೇಕಾನಂದರು ಈ ದೇಶದಲ್ಲಿ ಸಂಭವಿಸಿ ಹೋಗದಿದ್ದರೆ, ಇಡೀ ಜಗತ್ತು ಹಿಂದೂ ಧರ್ಮ ಮತ್ತು ಭಾರತವನ್ನು ನೋಡುವ ರೀತಿಯೇ ಬೇರೆಯಾಗಿರುತ್ತಿತ್ತು. ಹಾವಾಡಿಗರ ದೇಶ ಎಂದು ನಂಬಿದ್ದ ವಿದೇಶಿಗರಿಗೆ ಈ ದೇಶ ಮುಂದೊಂದು ದಿನ ವಿಶ್ವ ಗುರುವಾಗಿ ಜಗತ್ತನಾಳುವ ರಾಷ್ಟ್ರ ವೆಂಬುದನ್ನು ತಿಳಿಸಿದವರು ಸ್ವಾಮಿ ವಿವೇಕಾನಂದರು. ಜಗತ್ತಿನ ಎಲ್ಲಾ ಧರ್ಮಗಳ ಮಾತೃಧರ್ಮವಾದ ಪವಿತ್ರ ಹಿಂದೂ ಧರ್ಮದ ಹಿರಿಮೆಯನ್ನು ಜಗತ್ತಿಗೆ ಸಾರಿದ ಕೀರ್ತಿ ಅದು ವೀರಸನ್ಯಾಸಿ ಸ್ವಾಮಿ ವಿವೇಕಾನಂದರದ್ದು. ಹಿಂದೂ ಧರ್ಮದ ಕುರಿತಾಗಿದ್ದ ಅನೇಕ ಅಪನಂಬಿಕೆಗಳಿಗೆ ತಿಲಾಂಜಲಿ ಬಿಟ್ಟು ವಿದೇಶಿಯರೂ ಹಿಂದೂ ಸಂಸ್ಕೃತಿಯತ್ತ ಗೌರವದಿಂದ ನೋಡುವಂತೆ ಮಾಡಿದವರು ಸ್ವಾಮಿ ವಿವೇಕಾನಂದರು.

ಅವರ ಆಲೋಚನೆಗಳು, ಚಿಂತನೆಗಳು ” ನ ಭೂತೋ ನ ಭವಿಷ್ಯತಿ ” ಅರ್ಥಾತ್ ಹಿಂದೆಯೂ ಇರಲಿಲ್ಲ ಮುಂದೆಯೂ ಇಲ್ಲ. ”ಏಕಮೇವದ್ವಿತೀಯಮ್” ಅಂದರೆ ಇರುವುದೊಂದೇ ಅದೇ ಸರ್ವ ಶ್ರೇಷ್ಠ ಎನ್ನಬಹುದಾದಂತ ಉತ್ಕೃಷ್ಟ ಚಿಂತನೆಗಳು .

ಭಾರತದ ಇತಿಹಾಸವೇ ಹಾಗೆ ಯಾವಾಗ ಧರ್ಮ ರಕ್ಷಣೆ ಅಥವಾ ಧರ್ಮ ಪುನರುತ್ಥಾನದ ಅವಶ್ಯಕತೆ ಇದೆಯೋ ಅಂತಹ ಸಂಧರ್ಭಗಳಲ್ಲಿ ದೈವಸ್ವರೂಪಿಯೇ ಧರೆಗಿಳಿಯುವ. ಧರೆಗಿಳಿದ ಆ ಮಹಾನ್ ಶಕ್ತಿ ಪುಂಜ ಖಡ್ಗವನ್ನೂ ಹಿಡಿಯಬಲ್ಲ, ಶಾಸ್ತ್ರವನ್ನೂ ಓದಬಲ್ಲ. ಮೊಘಲ್ ಸಾಮ್ರಾಜ್ಯದ ಅಟ್ಟಹಾಸದಿಂದ ಸ್ವಧರ್ಮ ಮತ್ತು ಸ್ವದೇಶದ ರಕ್ಷಣೆಯ ಸಲುವಾಗಿ ದೈವಾಂಶಸಂಭೂತ ಛತ್ರಪತಿ ಶಿವಾಜಿ ಮಹಾರಾಜರು ಶಸ್ತ್ರ ಹಿಡಿಯಬೇಕಾಯಿತು. ಅಂತೆಯೇ ಮೋಸದ ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವದೇಶವನ್ನು ಜಾಗೃತಗೊಳಿಸಲು ದೈವಾಂಶಸಂಭೂತ ಸ್ವಾಮಿ ವಿವೇಕಾನಂದರು ಶಾಸ್ತ್ರ ಓದಬೇಕಾಯಿತು. ಮೂರು ಸಾಗರ ನೂರು ಮಂದಿರ ದೈವಸಾಸಿರವಿದ್ದರೆ, ಗಂಗೆಯಿದ್ದರೆ ಸಿಂಧುವಿದ್ದರೆ ಗಿರಿಹಿಮಾಲಯವಿದ್ದರೆ ,ವೇದವಿದ್ದರೆ ಭೂಮಿಯಿದ್ದರೆ ಘನಪರಂಪರೆಯಿದ್ದರೆ,  ಏನು ಸಾರ್ಥಕ ಮನೆಯ ಮಕ್ಕಳೇ ಮಲಗಿ ನಿದ್ರಿಸುತ್ತಿದರೆ!” ಮಲಗಿ ನಿದ್ರಿಸುತ್ತಿರುವ ಯುವಜನತೆಯನ್ನು ಬಡಿದೆಬ್ಬಿಸಲು ದೇಶಾದ್ಯಂತ ಸ್ವಾಮಿ ವಿವೇಕಾನಂದರ ಸಿಡಿಲಿನ ನುಡಿಯ ಸಿಂಚನ ಮಾಡೋಣ. ಸ್ವಾಮಿ ವಿವೇಕಾನಂದರ ಆಲೋಚನೆಯ ಸಾಕಾರದ ಕಡೆಗೆ ಹೆಜ್ಜೆ ಹಾಕುತ್ತ ಸಾಗುವೆವೆಂದು ಆ ಮಹಾನ್ ವ್ಯಕ್ತಿತ್ವದ ಜಯಂತಿಯಂದು ಸಂಕಲ್ಪ ಮಾಡೋಣ. ಸಿಡಿಲ ಸಂತ ಸ್ವಾಮಿ ವಿವೇಕಾನಂದರ ಚಿಂತನೆ ಈ ದೇಶದ ಪ್ರತಿಯೊಬ್ಬ ಯುವ ತರುಣನಲ್ಲಿ ಮೈದಾಳಿ,ವಿಶ್ವವಿಜೇತನ ಆದರ್ಶಗಳ ಮೂಲಕ ಭಾರತ ಮಾತೆಯನ್ನು ವಿಶ್ವಮಾತೆಯನ್ನಾಗಿಸೋಣ

 

 

 

 

ಮಂಜುನಾಥ್ ಜೋಡುಕಲ್ಲು
ದ್ವಿತೀಯ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಪದವಿ ಕಾಲೇಜು ಪುತ್ತೂರು

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.