ಸರಕಾರದಿಂದ ಪಡೆದ ಸೌಲಭ್ಯ ಸದುಪಯೋಗವಾಗಲಿ – ನಗರಸಭೆ ವಿವಿಧ ಸವಲತ್ತು ವಿತರಣೆಯಲ್ಲಿ ಶಾಸಕ ಸಂಜೀವ ಮಠಂದೂರು

0

ಪುತ್ತೂರು: ಕೊರೊನಾ ರೂಪಾಂತರಿ ತಳಿಗಳಿಂದಾಗಿ ಜನಸಾಮಾನ್ಯರ ಬದುಕು ಬರ್ಬರ ಆದ ಸಂದರ್ಭದಲ್ಲಿ ದೇಶದ ಜನರಿಗೆ ಬದುಕು ಕೊಡುವ ನಿಟ್ಟಿನಲ್ಲಿ ಪ್ರಧಾನಿಯವರ ಆತ್ಮನಿರ್ಭರ ಭಾರತದ ಆಧಾರದಲ್ಲಿ ಇವತ್ತು ಬಡಜನರ ಕಲ್ಯಾಣ ಆಗಬೇಕೆಂದು ನೀಡಿದ ಸರಕಾರಿ ಯೋಜನೆಗಳನ್ನು ಎಲ್ಲರು ಸದುಪಯೋಗಪಡಿಸಿಕೊಳ್ಳಿ ಎಂದು ಶಾಸಕ ಸಂಜೀವ ಮಠಂದೂರು ಅವರು ಹೇಳಿದರು.


ನಗರಸಭೆಯ ವತಿಯಿಂದ ಪ್ರಧಾನ ಮಂತ್ರಿ ಅವಾಝ್ ಯೋಜನೆಯಡಿ ಪ.ಜಾತಿ ಮತ್ತು ಪಂಗಡದ ಬಡವರಿಗಾಗಿ ಶೇ. 24.10 ನಿಧಿ, ಇತರ ಜಾತಿಯ ಬಡಜನರಿಗಾಗಿ ಶೇ.7.25 ನಿಧಿ, ವಿಕಲಚೇತನರಿಗಾಗಿ ಶೇ.5ರ ನಿಧಿಯಲ್ಲಿ `ವಿವಿಧ ಸವಲತ್ತುಗಳನ್ನು ಜ.12ರಂದು ಇಲ್ಲಿನ ಪುರಭವನದಲ್ಲಿ ಫಲಾನುಭವಿಗಳಿಗೆ ವಿತರಣೆ ಮತ್ತು ಮಂಜೂರಾತಿ ಪತ್ರ ನೀಡಿ ಮಾತನಾಡಿದರು.

ಕೋವಿಡ್ ಕಾರಣದಿಂದಾಗಿ ಜನರ ಬದಕು ಬರ್ಬರವಾಗಿದ್ದು, ಅದರಿಂದ ಚೇತರಿಸಕೊಳ್ಳುವ ನಿಟ್ಟಿನಲ್ಲಿ ಪ್ರಧಾನಿಗಳ ಆತ್ಮನಿರ್ಭರ ಭಾರತ ಯೋಜನೆಯು ಸಹಕಾರಿಯಾಗಿದೆ. ಈ ಮೂಲಕ ಒಂದಿಷ್ಟು ಸೌಲಭ್ಯಗಳು ಬಡಜನರಿಗೆ ವಿತರಣೆಯಾಗುತ್ತಿದೆ. ಬಡವರೂ ಇತರರಂತೆ ಸ್ವಾವಲಂಬಿ ಮತ್ತು ಸ್ವಾಭಿಮಾನಿ ಬದುಕು ಕಂಡು ಕೊಳ್ಳಬೇಕು. ಅವರಿಗೆ ಮೂಲಭೂತ ಸೌಲಭ್ಯ ಹಾಗೂ ಆರೋಗ್ಯ ಸೇವೆಗಳು ಲಭ್ಯವಾಗಬೇಕು ಎಂದು ಇಂತಹ ಯೋಜನೆಗಳನ್ನು ನೀಡಲಾಗುತ್ತಿದೆ. ಸರ್ಕಾರದ ಯೋಜನೆಗಳು ಸದುಪಯೋಗವಾಗಬೇಕು. ಮುಂದಿನ ದಿನ ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಬಡತನ ನಿರ್ಮೂಲನೆ ಆಗಬೇಕೆಂದರು.

ನಗರಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ ನಗರಸಭೆ ವ್ಯಾಪ್ತಿಯಲ್ಲಿ ಮುಂದಿನ ದಿನ ಎಸ್ಸಿ,ಎಸ್ಟಿ ಸಮೀಕ್ಷೆ ಮಾಡಿ ಅದರಲ್ಲಿ ಫಲಾನುಭವಿಗಳ ಅರ್ಹತೆಯನ್ನು ಪಟ್ಟಿ ಮಾಡಿ ಅವರಿಗೆ ವಿವಿಧ ಸವಲತ್ತು ನೀಡುವ ಯೋಜನೆ ಕೈಗೊಳ್ಳಲಾಗುವುದು ಎಂದರು. ವೇದಿಕೆಯಲ್ಲಿ ನಗರಸಭಾ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು ಉಪಸ್ಥಿತರಿದ್ದರು. ನಗರಸಭಾ ಪೌರಾಯುಕ್ತ ಮಧು ಎಸ್ ಮನೋಹರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಜಯಲಕ್ಷ್ಮೀ ಬೇಕಲ್ ಪ್ರಾರ್ಥಿಸಿದರು. ನಗರಸಭಾ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ ವಂದಿಸಿದರು. ನಗರರಸಭಾ ಸಿಬ್ಬಂದಿ ರವೀಂದ್ರ ಕಾರ್ಯಕ್ರಮ ನಿರೂಪಿಸಿದರು. ನಗರಸಭೆಯ ಸಿಬ್ಬಂದಿಗಳಾ ಲೋಕೇಶ್ ಮತ್ತಿತರು ಸಹಕರಿಸಿದರು.

ರೂ. 21ಲಕ್ಷದ ಸವಲತ್ತು ವಿತರಣೆ
ಪ್ರಧಾನ ಮಂತ್ರಿ ಆವಾಝ್ ಯೋಜನೆಯಡಿ ೧೦೮ ಫಲಾನುಭವಿಗಳೀಗೆ ಮನೆಕಟ್ಟಲು ತಲಾ ರೂ. 1.5ಲಕ್ಷ ಸಹಾಯಧನದ ಕಾರ್ಯಾದೇಶ, ಪ.ಜಾತಿ ಮತ್ತು ಪಂಗಡದ ಕುಟುಂಬಗಳ 39 ಮಂದಿಗೆ ಮನೆ ದುರಸ್ತಿ, 8 ಮಂದಿಗೆ ಶೌಚಾಲಯ, 6 ಮನೆಗಳಿಗೆ ವಿದ್ಯುತ್ ಜೋಡಣೆ, 6 ಮನೆಗಳಿಗೆ ಜಲ ಸಂಪರ್ಕ, 5 ಮಂದಿಗೆ ವೈದ್ಯಕೀಯ ಸೌಲಭ್ಯ ಹಾಗೂ ಇತರ ಜಾತಿಯ 6ಮಂದಿಗೆ ಮನೆ ದುರಸ್ತಿ, 5 ಮಂದಿಗೆ ವೈದ್ಯಕೀಯ ಸೌಲಭ್ಯ ಒಟ್ಟು ಸೇರಿ 7.60 ಲಕ್ಷ, 53ಮಂದಿ ವಿಕಲಚೇತನರಿಗೆ ರೂ. 2,86,600 ಸಹಾಯಧನ ವಿತರಿಸಲಾಯಿತು.

LEAVE A REPLY

Please enter your comment!
Please enter your name here