ಅಪಾಯಕಾರಿ ಸ್ಥಿತಿಯಲ್ಲಿರುವ ಭಕ್ತಕೋಡಿ ಶಾಲೆಯ ನಾಲ್ಕು ತರಗತಿ ಕೋಣೆಗಳು ಬಂದ್…! ಪ್ರವೇಶ ನಿಷೇಧಿಸಿ ಬೋರ್ಡ್ ಅಳವಡಿಕೆ

0

@ಯೂಸುಫ್ ರೆಂಜಲಾಡಿ

ಪುತ್ತೂರು: ಶಿಥಿಲಾವಸ್ಥೆಯಲ್ಲಿರುವ ಸರ್ವೆ ಗ್ರಾಮದ ಭಕ್ತಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕು ತರಗತಿ ಕೋಣೆಗಳನ್ನು ಇಲಾಖಾ ಆದೇಶದಂತೆ ಬಂದ್ ಮಾಡಲಾಗಿದ್ದು ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ಕುಳಿತುಕೊಳ್ಳಲು ಇತರ ತರಗತಿಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಶಿಕ್ಷಣ ಇಲಾಖೆ ವತಿಯಿಂದ ತರಗತಿ ಕೋಣೆಗಳನ್ನು ಬಂದ್ ಮಾಡಿ ಯಾರೂ ಪ್ರವೇಶಿಸದಂತೆ ಹಗ್ಗ ಕಟ್ಟಿ ಬಂದ್ ಮಾಡಲಾಗಿದೆ. ಅಲ್ಲದೇ `ಶಾಲಾ ಕಟ್ಟಡಗಳು ಅಪಾಯಕಾರಿ ಸ್ಥಿತಿಯಲ್ಲಿದೆ, ಪ್ರವೇಶ ನಿಷೇಧಿಸಿದೆ’ ಎನ್ನುವ ಬೋರ್ಡ್‌ನ್ನು ಅಳವಡಿಸಲಾಗಿದೆ. ಶಾಲೆಗೆ ದೈ.ಶಿ.ಪರಿವೀಕ್ಷಣಾಧಿಕಾರಿ ಸುಂದರ ಗೌಡ, ನರಿಮೊಗರು ಕ್ಲಸ್ಟರ್ ಸಿಆರ್‌ಪಿ ಚರಣ್‌ಕುಮಾರ್ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಅಪಾಯದ ಮುನ್ಸೂಚನೆಯ ಕಾರಣಕ್ಕೆ ಶಾಲೆಯ ಒಂದು ತರಗತಿ ಕೋಣೆಯನ್ನು ಮೊದಲೇ ಬಂದ್ ಮಾಡಲಾಗಿತ್ತು. ಉಳಿದ ಕೋಣೆಗಳಲ್ಲಿ ಮಕ್ಕಳು ಭಯದಿಂದಲೇ ಪಾಠ ಕೇಳುತ್ತಿದ್ದರು. ಶಾಲೆಯ ಮಾಡು ಮಾತ್ರವಲ್ಲೇ ಕಿಟಕಿ, ಬಾಗಿಲುಗಳು ಕೂಡಾ ತುಕ್ಕು ಹಿಡಿದು ಶಿಥಿಲಾವಸ್ಥೆಯಲ್ಲಿದೆ. ಬೆಂಚ್, ಡೆಸ್ಕ್‌ಗಳೂ ಸಮರ್ಪಕವಾಗಿಲ್ಲ. ಶಾಲೆಯ ಕಟ್ಟಡವನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣ ಮಾಡಬೇಕು ಅಥವಾ ಸಂಪೂರ್ಣವಾಗಿ ದುರಸ್ತಿಗೊಳಿಸಬೇಕು ಎಂದು ಪೋಷಕರು ಆಗ್ರಹಿಸುತ್ತಿದ್ದಾರೆ.

ಭಕ್ತಕೋಡಿ ಶಾಲೆ ಶಿಥಿಲಾವಸ್ಥೆಯಲ್ಲಿದ್ದು ಮಕ್ಕಳು ಅಪಾಯಕಾರಿ ಸ್ಥಿತಿಯಲ್ಲಿ ಪಾಠ ಕೇಳುತ್ತಿರುವ ಬಗ್ಗೆ `ಸುದ್ದಿ’ ಪತ್ರಿಕೆ ಮಾತ್ತು ಸುದ್ದಿ ಚಾನೆಲ್ ವಿಸ್ತೃತ ವರದಿ ಪ್ರಕಟಿಸಿತ್ತು. ನಂತರ ಇತರ ಮಾಧ್ಯಗಳಲ್ಲೂ ಈ ಶಾಲೆಯ ಪರಿಸ್ಥಿತಿ ಬಗ್ಗೆ ವರದಿ ಬಿತ್ತರಗೊಂಡಿತ್ತು.

LEAVE A REPLY

Please enter your comment!
Please enter your name here