ತಾಯಿ, ಅಕ್ಕನಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದ ಪ್ರಕರಣದ ಆರೋಪಿ ಇಸ್ಮಾಯಿಲ್ ದೋಷಮುಕ್ತ

0

ಪುತ್ತೂರು: ಎರಡು ವರ್ಷಗಳ ಹಿಂದೆ ಬಲ್ನಾಡು ಗ್ರಾಮದ ಬಲ್ನಾಡು ಜನತಾ ಕಾಲೋನಿ ನಿವಾಸಿಗಳಾದ ಹಾಜಿರ ಮತ್ತು ನೆಬಿಸ ಎಂಬವರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದ ಆರೋಪ ಎದುರಿಸುತ್ತಿದ್ದ ಇಸ್ಮಾಯಿಲ್ ಎಂಬವರನ್ನು ಪುತ್ತೂರಿನ ಹೆಚ್ಚುವರಿ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.

ಘಟನೆ ವಿವರ: 14-08-2020ರಂದು ಬಲ್ನಾಡು ಗ್ರಾಮದ ಬಲ್ನಾಡು ಜನತಾ ಕಾಲೊನಿ ನಿವಾಸಿಗಳಾದ ಹಾಜಿರ ಮತ್ತು ಅವರ ಮಗಳಾದ ನೆಬಿಸ ಎಂಬವರು ತಮ್ಮ ಮನೆಯ ಹಾಲ್ ನಲ್ಲಿದ್ದಾಗ ಆರೋಪಿ ಇಸ್ಮಾಯಿಲ್ ತನ್ನ ತಾಯಿ ಹಾಜಿರರವರನ್ನು ಉದ್ದೇಶಿಸಿ, ಈ ಮನೆ ನನಗೆ ಬೇಕು, ನೀನು ಮತ್ತು ನಿನ್ನ ಮಗಳು ನೆಬಿಸ ಕೂಡಲೇ ಈ ಮನೆಯನ್ನು ಬಿಟ್ಟು ಹೋಗಬೇಕು, ಇಲ್ಲದಿದ್ದರೆ ನಿಮ್ಮನ್ನು ಬದುಕಲು ಬಿಡುವುದಿಲ್ಲ ಎಂದು ಹೇಳಿ ತಾಯಿಗೆ ಕೈಯಿಂದ ಹೊಡೆದು, ಕಾಲಿನಿಂದ ತುಳಿದು, ಇದನ್ನು ನೋಡಿದ ಆರೋಪಿಯ ಅಕ್ಕ ನೆಬಿಸ ಮನೆಯಿಂದ ಹೊರಗೆ ಓಡಿದಾಗ ಮನೆಯ ಅಂಗಳದಲ್ಲಿ ಇಸ್ಮಾಯಿಲ್ ತನ್ನ ತಾಯಿಯನ್ನು ಹಿಡಿದುಕೊಂಡು ಓಡಿ ಹೋಗದಂತೆ ತಡೆದು ನಿಲ್ಲಿಸಿ ಮತ್ತೆ ಕೈಯಿಂದ ಹೊಡೆದಿದ್ದಾರೆ ಮತ್ತು ಈ ಘಟನೆ ನೋಡಿದ ನೆರೆಕರೆಯವರು ಇಸ್ಮಾಯಿಲ್ ತನ್ನ ತಾಯಿಗೆ ಇನ್ನು ಹೆಚ್ಚಿನ ಹಲ್ಲೆ ಮಾಡದಂತೆ ತಡೆದಿದ್ದು ಈ ವೇಳೆ ಆರೋಪಿ ತನ್ನ ತಾಯಿಯನ್ನು ಉದ್ದೇಶಿಸಿ, ಇವತ್ತು ಬದುಕಿದ್ದೀರಿ, ಇನ್ನು ಮುಂದಕ್ಕೆ ನಿಮ್ಮನ್ನು ಬದುಕಲು ಬಿಡುವುದಿಲ್ಲ ಎಂದು ಜೀವ ಬೆದರಿಕೆವೊಡ್ಡಿದ್ದಾರೆ ಎಂದು ಹಾಜಿರ ನೀಡಿದ್ದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಕಲಂ 323, 341, 504, 506ಯನ್ವಯ ಕೇಸು ದಾಖಲಾಗಿತ್ತು. ಬಳಿಕ ಆರೋಪಿ ಇಸ್ಮಾಯಿಲ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಇದೀಗ ವಿಚಾರಣೆ ಪೂರ್ಣಗೊಳಿಸಿದ ಹೆಚ್ಚುವರಿ ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಮ್.ಎಫ್.ಸಿ.ಯ ನ್ಯಾಯಾಧೀಶೆ ನಿರ್ಮಲ ಕೆ. ಯವರು ಆರೋಪಿಯನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿಯ ಪರ ಹಿರಿಯ ವಕೀಲ ಮಹೇಶ್ ಕಜೆ ವಾದಿಸಿದ್ದರು.

LEAVE A REPLY

Please enter your comment!
Please enter your name here