`ನೆಕ್ಕಿಲಾಡಿ ಗ್ರಾ.ಪಂ. ಪಿಡಿಓರವರನ್ನು ಅಮಾನತುಗೊಳಿಸಬೇಕು’ ಪಂಚಾಯತ್‌ರಾಜ್ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಮನವಿ

0

ಪುತ್ತೂರು: 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರನ್ನು ಅಮಾನತ್ತಿನಲ್ಲಿಡಬೇಕು ಎಂದು ಪಂಚಾಯತ್‌ರಾಜ್ ಇಲಾಖೆಯ ಮುಖ್ಯ ಕಾರ್ಯದರ್ಶಿಯವರಿಗೆ ನೆಕ್ಕಿಲಾಡಿ ಗ್ರಾಮದ ಅಲಿಮಾರ ನಿವಾಸಿ, `ನಮ್ಮೂರು ನೆಕ್ಕಿಲಾಡಿ’ ಸಂಸ್ಥೆಯ ಅಧ್ಯಕ್ಷ ಎ. ಜತೀಂದ್ರ ಶೆಟ್ಟಿ ಮನವಿ ಸಲ್ಲಿಸಿದ್ದಾರೆ.

34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೇಶದ ಸಂವಿಧಾನಕ್ಕೆ ವಿರುದ್ಧವಾದ ನಿರ್ಣಯಗಳನ್ನು ಗ್ರಾಮ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳುತ್ತಿದ್ದಾರೆ. ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯವರ ತೀರ್ಪನ್ನು ತಿರುಚಿ ನಿರ್ಣಯ ಕೈಗೊಂಡಿದ್ದಾರೆ. ಈ ಬಗ್ಗೆ ಈಗಾಗಲೇ ವಕೀಲರ ಮೂಲಕ ನೊಟೀಸ್ ಜಾರಿ ಮಾಡಿದ್ದೇನೆ, ಅಲ್ಲದೆ, ಪಿಡಿಓರವರು ಕೆಲವು ಸಮಯಗಳ ಹಿಂದೆ ರಾಜ್ಯ ಕಾನೂನು ಪ್ರಾಧಿಕಾರ ಹಾಗೂ ಸರಕಾರ ಸಂಯೋಜಿತ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಕಛೇರಿಯಲ್ಲಿ 2.30ಕ್ಕೆ ನಿಗದಿಪಡಿಸಿದ್ದರೂ ಇಡೀ ಪಂಚಾಯತ್‌ನವರು 2.30ರವರೆಗೆ 3.30ರವರೆಗೆ ಕಛೇರಿಯನ್ನು ಖಾಲಿ ಬಿಟ್ಟು ಔತಣ ಕೂಟಕ್ಕೆ ಹೋಗಿದ್ದರು. ಪ್ರಾಧಿಕಾರದ ಕಾರ್ಯಕ್ರಮ 3.30ಕ್ಕೆ ಪ್ರಾರಂಭವಾಗಿದೆ. ಈ ಬಗ್ಗೆ ನಾನು ಕಾರ್ಯ ನಿರ್ವಹಣಾಧಿಕಾರಿಯವರ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರನ್ನು ತಕ್ಷಣ ಅಮಾನತುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜತೀಂದ್ರ ಶೆಟ್ಟಿ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಪಿಡಿಓ, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಲಾಯರ್ ನೊಟೀಸ್:
ಮೈಂದಡ್ಕ ಮೈದಾನದ ವಿಚಾರಕ್ಕೆ ಸಂಬಂಧಿಸಿ ಎ. ಜತೀಂದ್ರ ಶೆಟ್ಟಿಯವರು ಹೈಕೋರ್ಟ್‌ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳ್ಳದೇ ಇದ್ದರೂ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ `ಮೈಂದಡ್ಕ ಮೈದಾನ ಹಾಳುಗೆಡವಿದ್ದೇವೆ ಎಂದು ಜತೀಂದ್ರ ಶೆಟ್ಟಿಯವರಿಂದ ಸುಳ್ಳು ದೂರು, ಅರ್ಜಿ ತಿರಸ್ಕರಿಸಿ ಹೈಕೋರ್ಟ್ ವಜಾಗೊಳಿಸಿದ ತೀರ್ಪು ಸ್ವಾಗತಾರ್ಹವಾಗಿದೆ’ ಎಂದು ತಿರುಚಿ ನಿರ್ಣಯ ಅಂಗೀಕರಿಸಲಾಗಿದೆ ಎಂಬ ಕಾರಣಕ್ಕೆ ನೆಕ್ಕಿಲಾಡಿ ಗ್ರಾಮ ಪಂಚಾಯತ್‌ಗೆ ವಕೀಲರ ನೋಟಿಸ್ ಜಾರಿಗೊಳಿಸಲಾಗಿದೆ. 34 ನೆಕ್ಕಿಲಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕುಮಾರಯ್ಯ, ಗ್ರಾ. ಪಂ. ಅಧ್ಯಕ್ಷ ಪ್ರಶಾಂತ್ ಎನ್, ಉಪಾಧ್ಯಕ್ಷೆ ಸ್ವಪ್ನ ಗಾಣಿಗ, ಸದಸ್ಯರಾದ ಸುಜಾತ ಆರ್ ರೈ, ಹರೀಶ್ ನಾಕ್, ರಮೇಶ್ ನಾಕ್, ವಿಜಯ ಕುಮಾರ್, ವೇದಾವತಿ, ತುಳಸಿ, ರತ್ನಾವತಿ, ಗಿತಾರವರಿಗೆ ವಕೀಲ ಮನೋಹರ ಎ.ರವರ ಮೂಲಕ ನೊಟೀಸ್ ಜಾರಿಗೊಳಿಸಲಾಗಿದೆ, ಮುಂದೆ ಕೋರ್ಟ್‌ನಲ್ಲಿ ಕಾನೂನು ಹೋರಾಟ ಮುಂದುವರಿಸಲಾಗುವುದು ಎಂದು ಜತೀಂದ್ರ ಶೆಟ್ಟಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here