ಚೆನ್ನಾವರ ಮಸೀದಿಯ ಗೌರವಕ್ಕೆ ಧಕ್ಕೆ-ಇಬ್ಬರ ವಿರುದ್ಧ ಪೊಲೀಸರಿಗೆ ದೂರು. ಸಿ.ಸಿ ಟಿವಿಯಲ್ಲಿ ಸೆರೆಯಾಯಿತು ದೀಪ ಬೆಳಗಿಸುವ ದೃಶ್ಯ

0

ಪುತ್ತೂರು: ಐತಿಹಾಸಿಕ ಹಿನ್ನೆಲೆಯುಳ್ಳ ಪಾಲ್ತಾಡಿ ಗ್ರಾಮದ ಚೆನ್ನಾವರ ಮುಹಿಯುದ್ದೀನ್ ಜುಮಾ ಮಸೀದಿಗೆ ಪ್ರವೇಶಿಸಿ ಮಸೀದಿಯ ಮುಂಭಾಗದಲ್ಲಿರುವ ಮಸೀದಿಯ ದೀಪವನ್ನು ಬೆಳಗಿಸಿ ಮಸೀದಿಯ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಅದರ ಫೋಟೋ ದುರ್ಬಳಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಇಬ್ಬರು ಕಿಡಿಗೇಡಿಗಳ ವಿರುದ್ಧ ಜಮಾಅತ್ ಕಮಿಟಿ ಅಧ್ಯಕ್ಷರು ಪೊಲೀಸರಿಗೆ ದೂರು ನೀಡಿದ ಘಟನೆ ನಡೆದಿದೆ.
ಚೆನ್ನಾವರ ಜುಮಾ ಮಸೀದಿ ಐತಿಹಾಸಿಕ ಹಿನ್ನೆಲೆಯುಳ್ಳದ್ದಾಗಿದ್ದು ಇಲ್ಲಿ ವಿದ್ಯುದ್ದೀಪ ಬರುವ ಮೊದಲು ದೀಪದ ಬೆಳಕಿನಲ್ಲಿ ನಮಾಜ್ ಮಾಡುತ್ತಿದ್ದರು.

ಅಂದಿನಿಂದ ನಡೆದುಕೊಂಡು ಬಂದ ದೀಪ ಬೆಳಗಿಸುವ ಪದ್ದತಿ ಈಗಲೂ ಚಾಲ್ತಿಯಲ್ಲಿದೆ.  ಆದರೆ ಹೊತ್ತಲ್ಲದ ಹೊತ್ತಿನಲ್ಲಿ ಮಸೀದಿಗೆ ಪ್ರವೇಶಿಸಿದ ಚೆನ್ನಾವರ ಜಮಾಅತಿಗೊಳಪಟ್ಟ ಇಸ್ಮಾಯಿಲ್ ಹನೀಫಿ ಹಾಗೂ ಅಬೂಬಕ್ಕರ್ ಮದನಿ ಎಂಬವರು ಮುಸ್ಸಂಜೆಯ ವೇಳೆ ಯಾರೂ ಮಸೀದಿಯಲ್ಲಿ ಇಲ್ಲದ ಸಮಯದಲ್ಲಿ ಮಸೀದಿಗೆ ಬಂದು ಮಸೀದಿಯ ಮುಂಭಾಗದಲ್ಲಿದ್ದ ದೀಪವನ್ನು ಬೆಳೆಗಿಸಿದ್ದಾರೆ. ಬಳಿಕ ಅದರ ಫೋಟೋ ತೆಗೆದು ಮಸೀದಿಯ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಬರೆದು ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟಿದ್ದಾರೆ.

ಈ ವಿಚಾರ ಜಮಾಅತಿನಲ್ಲಿ ಗೊಂದಲವನ್ನು ಸೃಷ್ಟಿಸಿತ್ತು. ಮಸೀದಿಯ ಬಗ್ಗೆ ಅಪಪ್ರಚಾರ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಮಾಅತರಿಂದ ಆಗ್ರಹ ವ್ಯಕ್ತವಾಗಿತ್ತು. ಘಟನೆ ಬಗ್ಗೆ ಮಸೀದಿಯ ಅಧ್ಯಕ್ಷ ಮಹಮ್ಮದ್ ಶಾಫಿ ಅವರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳ ವಿರುದ್ಧ ೧೦೭ ಸೆಕ್ಷನ್ ಅಡಿಯಲ್ಲಿ ಕೇಸು ದಾಖಲಾಗಿದೆ.

ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ:
ಮಸೀದಿಯ ಸಿಸಿ ಟಿವಿಯಲ್ಲಿ ಕಿಡಿಗೇಡಿಗಳು ದೀಪ ಬೆಳಗಿಸಿದ ದೃಶ್ಯ ಸೆರೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರವಾಗಿರುವ ಬಗ್ಗೆ ಜಮಾಅತರ ಗಮನಕ್ಕೆ ಬಂದಿತ್ತು. ಈ ಬಗ್ಗೆ ಚೆನ್ನಾವರ ಜಮಾಅತ್ ಸದಸ್ಯರುಗಳಿಗೆ ಹಲವು ಕಡೆಗಳಿಂದ ಕರೆಗಳು ಬಂದಿತ್ತು. ನಂತರ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಆರೋಪಿಗಳು ನಡೆಸಿರುವ ಕೃತ್ಯ ಬಯಲಾಗಿದೆ. ಸಿಸಿ ಟಿವಿ ದೃಶ್ಯ ಆಧರಿಸಿ ಆರೋಪಿಗಳ ವಿರುದ್ಧ ದೂರು ನೀಡಲಾಗಿದೆ.

ಮಸೀದಿ ಎಂದರೆ ಪವಿತ್ರವಾದ ಅಲ್ಲಾಹನ ಭವನವಾಗಿದ್ದು ಅಂತಹ ಸ್ಥಳದಲ್ಲಿ ಬಂದು ಈ ರೀತಿಯ ಕೃತ್ಯವೆಸಗುವುದು ಅಕ್ಷಮ್ಯ. ಅಲ್ಲದೇ ದೀಪ ಬೆಳಗಿಸಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಇಲ್ಲಸಲ್ಲದ ವಿಚಾರಗಳನ್ನು ಬರೆದು ಹರಿಯಬಿಡುವುದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಈ ರೀತಿಯ ಕೃತ್ಯವನ್ನು ಯಾವ ಉದ್ದೇಶಕ್ಕೆ ಮಾಡಿದ್ದಾರೆ ಎನ್ನುವುದು ತಿಳಿದಿಲ್ಲ. ಮಸೀದಿ ವಿಚಾರದಲ್ಲಿ ಅಪಪ್ರಚಾರ ನಡೆಸಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸರಿಗೆ ದೂರು ನೀಡಿದ್ದೇನೆ.
-ಮಹಮ್ಮದ್ ಶಾಫಿ, ಅಧ್ಯಕ್ಷರು ಜುಮಾ ಮಸೀದಿ ಚೆನ್ನಾವರ

LEAVE A REPLY

Please enter your comment!
Please enter your name here