ಕೊರೊನಾ ವಿರುದ್ಧ ಅಸಮರ್ಪಕ ಲಾಕ್‌ಡೌನ್ ಪರಿಹಾರವಲ್ಲ

0

    • ಜಿಲ್ಲಾಡಳಿತ ಜನಪ್ರತಿನಿಧಿಗಳ ಸಮ್ಮುಖದಲ್ಲಿ ವರ್ತಕ ಮುಖಂಡರ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳುವಂತಾಗಬೇಕು
    •  ಉಪ್ಪಿನಂಗಡಿ ವರ್ತಕ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ
    •  ಬಲಾತ್ಕಾರದಿಂದ ಲಾಕ್‌ಡೌನ್ ಮಾಡುವುದನ್ನು ನಾವು ವಿರೋಧಿಸುತ್ತೇವೆ

 

ಉಪ್ಪಿನಂಗಡಿ: ಕೊರೊನಾ ವಿರುದ್ಧ ಅಸಮರ್ಪಕ ಲಾಕ್‌ಡೌನ್ ಪರಿಹಾರವಲ್ಲ, ಅದರ ಸಲುವಾಗಿ ಲಾಕ್‌ಡೌನ್ ಮಾಡುವುದೇ ಆಗಿದ್ದಲ್ಲಿ ಜಿಲ್ಲಾಢಳಿತ ಜನಪ್ರತಿನಿಧಿಗಳ ಸಮ್ಮಖದಲ್ಲಿ ವರ್ತಕ ಮುಖಂಡರ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳುವಂತಾಗಬೇಕು ಎಂದು ಆಗ್ರಹಿಸಿ ಉಪ್ಪಿನಂಗಡಿ ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿ’ಕೋಸ್ತ ಮತ್ತು ಕಾರ್‍ಯದರ್ಶಿ ಅಬ್ದುಲ್ ರಹಿಮಾನ್ ಯುನಿಕ್ ದ.ಕ. ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಸಂಘದ ವತಿಯಿಂದ ಮನವಿ ಸಲ್ಲಿಸಿದ್ದಾರೆ.

ಕೊರೊನಾ ಮಹಾಮಾರಿ ಈಡೀ ಜಗತ್ತನ್ನೇ ಕಾಡುತ್ತಿದೆ, ಲಕ್ಷಾಂತರ ಜೀವವನ್ನೂ ಬಲಿ ಪಡೆದಿದೆ. ಜೊತೆಗೆ ಆರ್ಥಿಕವಾಗಿ ನಮ್ಮನ್ನು ಪ್ರಪಾತಕ್ಕೆ ತಳ್ಳುತ್ತಿದೆ. ನಾವು ಈ ರೋಗ ಇಲ್ಲವೆಂದೂ, ಜನ ಸಾಯುತ್ತಿಲ್ಲವೆಂದೂ ಹೇಳುತ್ತಿಲ್ಲ. ಆದರೆ ಅದರ ನಿಯಂತ್ರಣದ ರೀತಿ ಮತ್ತು ನೀತಿ ವಿಷಯದಲ್ಲಿ ನಮ್ಮ ಕೆಲವು ವಿರೋಧವಿದೆ.

ಪ್ರಸ್ತುತ ಕೊರೊನಾ ಎಷ್ಟು ವರ್ಷ ಹೀಗೆ ಇರುತ್ತದೆ ಅನ್ನುವ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ. ಅದಕ್ಕೆ ಅಸಮರ್ಪಕ ಲಾಕ್‌ಡೌನ್ ಖಂಡಿತ ಪರಿಹಾರವಾಗಲಾರದು. ಒಂದು ಕಡೆ ರಾಜಕೀಯ ಮೆರವಣಿಗೆ, ಧಾರ್ಮಿಕ ಮೆರವಣಿಗೆ, ಸರ್ಕಾರಿ ಕಾರ್ಯಕ್ರಮ, ಚುನಾವಣೆಗಳು ನಡೆಯುತ್ತಲೇ ಇದೆ. ಆದರೆ ಸಣ್ಣಪುಟ್ಟ ವ್ಯಾಪಾರಿಗಳ ಮೇಲೆ ಕೊರೊನಾ ಅಸ್ತ್ರ ಬಿಟ್ಟು ಬಂದ್ ಮಾಡಿಸಲಾಗುತ್ತಿದೆ. ಇದು ಹೀಗೇ ಮುಂದುವರಿದರೆ ಅನೇಕ ಕುಟುಂಬಗಳು ಆತ್ಮಹತ್ಯೆಯ ದಾರಿ ಹಿಡಿಯುವ ಸಾಧ್ಯತೆ ಇದೆ. ಈ ಕಾರಣಕ್ಕೆ ದ.ಕ. ಜಿಲ್ಲಾಧಿಕಾರಿ ತಕ್ಷಣ ನಮ್ಮನ್ನು ಸೇರಿಸಿ, ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸಭೆ ಜರುಗಿಸಬೇಕು. ಕೋವಿಡ್ ನಿಯಮಾವಳಿ ಜಾರಿಗೆ ತರುವ ಮೊದಲು ವ್ಯಾಪಾಸ್ಥರ ಮುಖಂಡರನ್ನೂ ಸೇರಿ ಸಮಿತಿ ರಚಿಸಿ ಈ ಬಗ್ಗೆ ಮುಕ್ತ ಸಂವಾದವಾಗಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ಈ ರೀತಿ ಸಂವಾದ ಮಾಡದೇ ಬಲತ್ಕಾರದಿಂದ ಲಾಕ್‌ಡೌನ್ ಮಾಡುವುದನ್ನು ನಾವು ವಿರೋಧಿಸುತ್ತೇವೆ. ಮತ್ತು ಜಿಲ್ಲಾಡಳಿತ ನಮ್ಮನ್ನು ಮಾತುಕತೆಗೆ ಕರೆಯದೆ ಏಕಮುಖಿ ನಿರ್ಣಯ ಮಾಡಿದರೆ, ನಾವು ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯವಾಗುತ್ತದೆ ಎಂದು ಈ ಮೂಲಕ ಸ್ಪಷ್ಟಪಡಿಸುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here