ಉಪ್ಪಿನಂಗಡಿ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 2020-21 ಸಾಲಿನ ತೃತೀಯ ಬಿ.ಎಸ್.ಡಬ್ಲ್ಯೂ. ಪದವಿ ವಿದ್ಯಾರ್ಥಿನಿಯಾಗಿದ್ದ ಸ್ಮಿತಾ ಅವರ ಶೈಕ್ಷಣಿಕ ಪ್ರಗತಿ ಹಾಗೂ ಭಾಷಣ, ಬರವಣಿಗೆ ಮುಂತಾದ ಒಟ್ಟಾರೆ ಪ್ರತಿಭೆಯನ್ನು ಗುರುತಿಸಿ ಅವರ ಉನ್ನತ ಶಿಕ್ಷಣಕ್ಕಾಗಿ ಅಮೇರಿಕಾದ “ಸ್ಮಾಲ್ ಆಕ್ಟ್ಸ್ ಫಾರ್ ಸಸ್ಟೈನಾಬಿಲಿಟಿ ಮತ್ತು ಎ ಮೋರ್ ಬೇಲೆಂಸ್ಡ್ ವರ್ಲ್ಡ್” ಎಂಬ ಸಂಸ್ಥೆಯು ಕೊಡುವ ಫೆಲೋಶಿಪ್ಗೆ “ಎಸ್ಎಎಸ್ ಸ್ಕಾಲರ್” ಆಗಿ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುಬ್ಬಪ್ಪ ಕೈಕಂಬ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷದ ಪದವಿ ಅಧ್ಯಯನದ ಸಂದರ್ಭದಲ್ಲೂ ಈ ಫೆಲೋಶಿಪ್ಗೆ ಆಯ್ಕೆಯಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಲೇಜಿನ ಗೌರವ ಮತ್ತು ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇವರು ಉನ್ನತ ಶಿಕ್ಷಣಕ್ಕಾಗಿ ಮಾನಸಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂಎಸ್ಡಬ್ಲ್ಯು. ಸ್ನಾತಕೋತ್ತರ ಅಧ್ಯಯನಕ್ಕೆ ಪ್ರವೇಶಾತಿಯನ್ನು ಪಡೆದುಕೊಂಡಿದ್ದಾರೆ. ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ. ನಂದೀಶ್ ವೈ.ಡಿ. ಇವರು ಈ ಫೆಲೋಶಿಪ್ಗೆ ಆಯ್ಕೆಯಾಗಲು ಮಾರ್ಗದರ್ಶನ ನೀಡಿರುತ್ತಾರೆ ಎಂದು ಪ್ರೊ. ಸುಬ್ಬಪ್ಪ ಕೈಕಂಬ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.