ಪುತ್ತೂರು; `ಸಂಸ್ಕೃತ-ಸಂಸ್ಕೃತಿಗೆ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಕೊಡುಗೆ ಒಂದು ಅಧ್ಯಯನ’ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಪಡೆದ ಮಂಗಳೂರು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಸ್ವಾಮೀಜಿ ಹಾಗೂ ಪೆರಿಯಡ್ಕ ಸರ್ವೋದಯ ಪ್ರೌಢ ಶಾಲಾ ಕಾರ್ಯದರ್ಶಿಯಾಗಿರುವ ಡಾ.ಧರ್ಮಪಾಲನಾಥ ಸ್ವಾಮೀಜಿ ಅವರಿಗೆ ಸರ್ವೋದಯ ಪ್ರೌಢಶಾಲೆಯಲ್ಲಿ ಅಭಿನಂದನಾ ಸಮಾರಂಭ ನಡೆಯಿತು.
ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಡಾ.ಧರ್ಮಪಾಲನಾಥ ಸ್ವಾಮೀಜಿ ಅವರು ತಾನು ಪದವಿ ಪಡೆಯಲು ಈ ಮಹಾಪ್ರಬಂಧದವನ್ನು ಪಿಎಚ್ಡಿಗೋಸ್ಕರ ಮಾಡಿಲ್ಲ. ಆದಿಚುಂಚನಗಿರಿ ಮಹಾಸಂಸ್ಥಾನದ ಜಗದ್ಗುರುಗಳಾದ ಬಾಲಗಂಗಾಧರನಾಥ ಸ್ವಾಮೀಜಿ ಅವರ ಸಾಧನೆಯ ಬಗ್ಗೆ ಅಧ್ಯಯನ ನಡೆಸಿ ಇಂದಿನ ಹಾಗೂ ಮುಂದಿನ ಜನತೆಗೆ ದಾರಿದೀಪವಾಗಲಿ ಎಂಬ ಸದುದ್ದೇಶ ಇಟ್ಟುಕೊಂಡು ಬರೆದಿದ್ದೇನೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ ಅವರು ಮಾತನಾಡಿ, ಬಿಜಿಎಸ್ ವಿದ್ಯಾಸಂಸ್ಥೆ ಎಂಬುವುದು ಶಿಕ್ಷಣ ಕಾಶಿ. ಅದೇ ಒಂದು ವಿಶ್ವವಿದ್ಯಾಲಯ ಇದ್ದಂತೆ. ಪೂಜ್ಯ ಸ್ವಾಮೀಜಿ ಅವರು ಸ್ವಾಮೀಜಿಯಾಗಿ ಮಾತ್ರವಲ್ಲ ಸಾಹಿತ್ಯ ಸಂಸ್ಕೃತಿ ಹಾಗೂ ಶೈಕ್ಷಣಿಕವಾಗಿ ವಿವಿಧ ಮಜಲುಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದವರು. ಆ ಮೂಲಕ ಇತರರಿಗೆ ಪ್ರೇರಕ ಶಕ್ತಿಯಾಗಿದ್ದಾರೆ ಎಂದು ಹೇಳಿದರು. ಶಿಕ್ಷಣ ಸಂಯೋಜಕ ಹರಿಪ್ರಸಾದ್, ಉದ್ಯಮಿ ಸುಂದರ ಗೌಡ ಅರ್ಬಿ, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಬಾಬು ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು ಹಾಗೂ ಉಪ್ಪಿನಂಗಡಿ ಗ್ರಾಪಂ ಅಧ್ಯಕ್ಷೆ ಉಷಾಚಂದ್ರ ಭಾಗಿಯಾಗಿದ್ದರು. ಸರ್ವೋದಯ ಪ್ರೌಢಶಾಲಾ ಪರಿವೀಕ್ಷಕ ಬಾಲಕೃಷ್ಣ ಗೌಡ ಸ್ವಾಗತಿಸಿದರು. ಮುಖ್ಯಶಿಕ್ಷಕಿ ಶಕುಂತಳಾ ಕೆ ವಂದಿಸಿದರು. ಸಹಶಿಕ್ಷಕಿ ಲಕ್ಷ್ಮಿ ಪಿ ಅಭಿನಂದನಾ ಮಾತುಗಳನ್ನಾಡಿದರು. ಶಿಕ್ಷಕಿ ಸವಿತಾ ಪಿ ಸಿ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕರಾದ ರಜನಿ, ಮೋಹನ್, ಬಸವರಾಜ್ ಹಾಗೂ ಡೊಂಬಯ ಗೌಡ ಸಹಕರಿಸಿದರು. ಶಾಲಾ ಶಿಕ್ಷಕವರ್ಗ ಹಾಗೂ ಎಸ್ಡಿಎಂಸಿ ವತಿಯಿಂದ ಈ ಅಭಿನಂದನಾ ಕಾರ್ಯಕ್ರಮ ನಡೆಸಲಾಯಿತು.