ಚೆಲ್ಯಡ್ಕದಲ್ಲಿ ವಿದ್ಯುತ್ ಎಚ್.ಟಿ ಲೈನ್ ಮೇಲೆ ಬಿದ್ದ ಬೃಹತ್ ಮರ – ವಾಹನ ಸಂಚಾರಕ್ಕೆ ಅಡ್ಡಿ

0

ಘಟನೆಗೆ ಅರಣ್ಯ ಇಲಾಖೆಯ ನಿರ್ಲಕ್ಷವೇ ಕಾರಣ-ಸ್ಥಳೀಯರ ಆರೋಪ

ರಸ್ತೆ ಅಭಿವೃದ್ಧಿಯಾಗುತ್ತಿರುವ ಸ್ಥಳದಲ್ಲಿ ಮರ ತೆರವುಗೊಳಿಸದ ಅರಣ್ಯ ಇಲಾಖೆ

ಪುತ್ತೂರು: ಪುತ್ತೂರು-ಪಾಣಾಜೆ ರಸ್ತೆಯ ಚೆಲ್ಯಡ್ಕದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು ಇಲ್ಲಿ ಬೃಹತ್ ಮರವೊಂದು ರಸ್ತೆಯ ಬದಿಯಲ್ಲಿರುವ ವಿದ್ಯುತ್ ತಂತಿಯ ಮೇಲೆ ವಾಲಿ ಬಿದ್ದು ಅಪಾಯಕ್ಕೆ ಆಹ್ವಾನಿಸುತ್ತಿದೆ. ಇದಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅಪಘಾತ ವಲಯವಾಗಿದ್ದ ಪುತ್ತೂರು-ಪಾಣಾಜೆ ರಸ್ತೆಯ ಚೆಲ್ಯಡ್ಕದಲ್ಲಿ ಲೋಕೋಪಯೋಗಿ ಇಲಾಖೆಯ 2021-22 ಸಾಲಿನ ಯೋಜನೆಯಲ್ಲಿ ರೂ.3ಕೋಟಿ ವೆಚ್ಚದಲ್ಲಿ ಕಾಮಗಾರಿಯು ಭರದಿಂದ ಸಾಗುತ್ತಿದೆ. ಈ ಭಾಗದಲ್ಲಿ ಕಾಮಗಾರಿಗೆ ಅಡ್ಡಿಯುಂಟು ಮಾಡುತ್ತಿದ್ದ ವಿದ್ಯುತ್ ಕಂಬಗಳನ್ನು ಮೆಸ್ಕಾಂನವರು ಸ್ಥಳಾಂತರಿಸಿದ್ದರು. ಆದರೆ ಅಲ್ಲಿ ಕಾಮಗಾರಿಗೆ ಅಡ್ಡಿಯುಂಟು ಮಾಡುವ ಮರಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಯವರಿಗೆ ಹಲವು ಭಾರಿ ಮನವಿ ಮಾಡಿದ್ದರು ಇಲಾಖೆಯವರು ಮರ ತೆರವುಗೊಳಿಸಿಲ್ಲ.

ಅರಣ್ಯ ಇಲಾಖೆಯ ನಿರ್ಲಕ್ಷವೇ ಕಾರಣ; ಕಾಮಗಾರಿ ಪ್ರಾರಂಭಿಸುವ ಸಂದರ್ಭದಲ್ಲಿಯೇ ಸ್ಥಳದಲ್ಲಿದ್ದ ವಿದ್ಯುತ್ ಕಂಬ ಹಾಗೂ ಮರಗಳನ್ನು ತೆರವುಗೊಳಿಸುವಂತೆ ಆಯಾ ಇಲಾಖೆಗೆ ಮನವಿ ಮಾಡಲಾಗುತ್ತು. ಹೀಗಾಗಿ ಮೆಸ್ಕಾನವರು ಕಾಮಗಾರಿಗೆ ಅಡ್ಡಿಯುಂಟು ಮಾಡುವ ಮರಗಳನ್ನು ತೆರವುಗೊಳಿಸಿದ್ದರು. ಆದರೆ ಎಷ್ಟೇ ಭಾರಿ ಮನವಿ ಮಾಡಿದರೂ ಅರಣ್ಯ ಇಲಾಖೆಯವರು ಮರಗಳನ್ನು ತೆರವುಗೊಳಿಸಿಲ್ಲ. ಕಳೆದ ಕೆಲ ದಿನಗಳ ಹಿಂದೆ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಲು ಬಂದಿರುವ ಸಂದರ್ಭದಲ್ಲಿ ಸ್ಥಳಿಯ ಜನಪ್ರತಿನಿಧಿಗಳು ಸದರಿ ಸಮಸ್ಯೆ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದರು. ಈ ಕುರಿತು ವಿಚಾರಿಸಲು ಶಾಸಕರೇ ಅರಣ್ಯ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿ ಹಾಗೂ ವಲಯಾರಣ್ಯಾಧಿಕಾರಿಯವರ ಮೊಬೈಲ್ ಗೆ ಕರೆ ಮಾಡಿದಾಗ ಅವರಿಬ್ಬರೂ ಕರೆ ಸ್ವೀಕರಿಸಿರಲಿಲ್ಲ. ಹೀಗಾಗಿ ಈ ಘಟನೆಗೆ ಅರಣ್ಯ ಇಲಾಖೆಯ ದಿವ್ಯ ನಿರ್ಲಕ್ಷವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ವಾಹನ ಸಂಚಾರಕ್ಕೆ ಅಡ್ಡಿ: ಬೃಹತ್ ದೂಪದ ಮರ ವಾಲಿ ವಿದ್ಯುತ್ ಎಚ್.ಟಿ ತಂತಿಯ ಮೇಲೆ ಬಿದ್ದಿದ್ದು ಭಾರಿ ಅಪಾಯ ತಂದೊಡ್ಡುವ ಸ್ಥಿತಿಯಲ್ಲಿದೆ. ಇದರಿಂದಾಗುವ ಸಂಭಾವ್ಯ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಸದರಿ ರಸ್ತೆಯಲ್ಲಿ ವಾಹನ ಸಂಚಾರವನ್ನು ತಡೆಯಲಾಗಿದೆ. ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತಿದ್ದು ಮರ ವಾಲಿ ಬಿದ್ದು ಅಪಾಯದ ಕರೆಗಂಟೆ ಭಾರಿಸುತ್ತಿರುವುದರಿಂದ ವಾಹನ ಸಂಚಾರಕ್ಕೂ ಅಡ್ಡಿಯಟಾಗಿದೆ.

LEAVE A REPLY

Please enter your comment!
Please enter your name here