- ಮಾನವೀಯತೆ, ಪ್ರೀತಿ, ಸಹೋದರತ್ವ, ಸಹಬಾಳ್ವೆಯೇ ಕ್ರಿಸ್ಮಸ್ ಸಂದೇಶ-ವಂ|ಸ್ಟ್ಯಾನಿ ಪಿಂಟೋ
ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವದ ವತಿಯಿಂದ ರೋಟರಿ ಯುವದ ಸದಸ್ಯ ಹಾಗೂ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾಗಿರುವ ಎಲ್ಯಾಸ್ ಪಿಂಟೋರವರ ಪ್ರಾಯೋಜಕತ್ವದಲ್ಲಿ ಎಲ್ಯಾಸ್ ಪಿಂಟೋರವರ ಕೊಂಬೆಟ್ಟಿನಲ್ಲಿರುವ ಸ್ವಗೃಹದಲ್ಲಿ ಜ.೧೨ ರಂದು ಕ್ರಿಸ್ಮಸ್ ಹಬ್ಬದ ಸಹಮಿಲನ ಕಾರ್ಯಕ್ರಮ ಏರ್ಪಟ್ಟಿತ್ತು.
ಮುಖ್ಯ ಅತಿಥಿಯಾಗಿ ಭಾಗವಹಿಸಿರುವ ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಹಾಗೂ ಆಂಗ್ಲ ಭಾಷಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ವಂ|ಸ್ಟ್ಯಾನಿ ಪಿಂಟೋರವರು ಮಾತನಾಡಿ, ಮನುಷ್ಯತ್ವ ಇರುವ ಹಾಗೂ ಇಲ್ಲದಿರುವ ವ್ಯಕ್ತಿಯನ್ನು ಈ ಜಗತ್ತು ಕಂಡಿದೆ. ಯಾರು ದೇವರಿಗೆ ಹತ್ತಿರವಾಗಿರುತ್ತಾರೋ, ಮನುಷ್ಯತ್ವವನ್ನು ಮೈಗೂಡಿಸಿಕೊಂಡಿರುತ್ತಾರೋ ಅವರು ಪರಸ್ಪರ ಹೊಡೆದಾಡಿಕೊಳ್ಳುವುದಿಲ್ಲ. ಮಾನವೀಯತೆ, ಪ್ರೀತಿ, ಸಹೋದರತ್ವ, ಸಹಬಾಳ್ವೆಯೇ ಕ್ರಿಸ್ಮಸ್ ಸಂದೇಶವಾಗಿದೆ. ಪ್ರತಿಯೋರ್ವರು ಮನುಕುಲಕ್ಕೆ ಒಳ್ಳೆದಾಗುವ ರೀತಿಯಲ್ಲಿ ನಡೆಯೋಣ. ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆಗಳು ಸಮಾಜಿಕ ಕಳಕಳಿಯನ್ನು ಹೊಂದಿರುವುದರ ಜೊತೆಗೆ ಮಾನವೀಯತೆಯನ್ನು ಸಮಾಜದಲ್ಲಿ ಮೂಡಿಸುವ ಕೈಂಕರ್ಯ ಶ್ಲಾಘನೀಯ ಎಂದರು.
ರೋಟರಿ ವಲಯ ಸೇನಾನಿ ಉಮೇಶ್ ನಾಯಕ್ರವರು ಮಾತನಾಡಿ, ರೋಟರಿ ಸಂಸ್ಥೆಯು ವಿದ್ಯಾಸೇತು ಯೋಜನೆಯಡಿಯಲ್ಲಿ ಪುತ್ತೂರಿನ ಏಳು ರೋಟರಿ ಸಂಸ್ಥೆಗಳು ಒಗ್ಗೂಡಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ತಾಲೂಕಿನ ಸುಮಾರು ೩೦ ಸರಕಾರಿ ಹಾಗೂ ಗ್ರಾಮೀಣ ಭಾಗದ ಶಾಲೆಯ ವಿದ್ಯಾರ್ಥಿಗಳಿಗೆ ಈಗಾಗಲೇ ಸುಮಾರು ೧೫೦೦ ಸಾವಿರ ಪಠ್ಯಪುಸ್ತಕಗಳನ್ನು ವಿತರಿಸಿದ್ದೇವೆ ಎಂದರು.
ರೋಟರಿ ಯುವದ ನಿಕಟಪೂರ್ವ ಅಧ್ಯಕ್ಷ ಡಾ|ಹರ್ಷಕುಮಾರ್ ರೈ ಮಾಡಾವು, ರೋಟರಿ ಯುವದ ಸ್ಥಾಪಕಾಧ್ಯಕ್ಷ ರತ್ನಾಕರ್ ರೈ ಕೆದಂಬಾಡಿಗುತ್ತು, ಮಾಜಿ ಅಧ್ಯಕ್ಷ ಪಶುಪತಿ ಶರ್ಮ, ಕುಸುಮ್ರಾಜ್ ಸಹಿತ ರೋಟರಿ ಯುವದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷ ಭರತ್ ಪೈ ಸ್ವಾಗತಿಸಿ, ಕಾರ್ಯದರ್ಶಿ ದೇವಿಚರಣ್ ರೈ ವಂದಿಸಿದರು. ಸದಸ್ಯ ಎಲ್ಯಾಸ್ ಪಿಂಟೋರವರು ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಸದಸ್ಯ ಸತೀಶ್ ರೈ ಕಟ್ಟಾವುರವರು ವಿವಿಧ ಸ್ಪರ್ಧೆಯನ್ನು ನಡೆಸಿಕೊಟ್ಟರು.
ಸನ್ಮಾನ…
ಕಳೆದ ೩೬ ವರ್ಷಗಳಿಂದ ಎಲೆಕ್ಟ್ರಿಶಿಯನ್ ವೃತ್ತಿಯನ್ನು ಮಾಡುತ್ತಾ ಬಂದಿರುವ `ಬಾಲನ್ನ’ ಎಂಬ ಹೆಸರಿನಲ್ಲಿಯೇ ಎಲ್ಲರಿಗೆ ಚಿರಪರಿಚಿತರಾಗಿರುವ ದರ್ಬೆ ವಿಜಯಲಕ್ಷ್ಮೀ ಇಲೆಕ್ಟ್ರಿಕಲ್ಸ್ನ ಮಾಲಕರಾಗಿರುವ ಚಂದ್ರಶೇಖರ ಸಾಮೆತ್ತಡ್ಕರವರಿಗೆ ರೋಟರಿ ಯುವದ ವೃತ್ತಿ ಸೇವಾ ವಿಭಾಗದಡಿಯಲ್ಲಿ ಸನ್ಮಾನಿಸಲಾಯಿತು. ಸನ್ಮಾನಿತ ಚಂದ್ರಶೇಖರ್ರವರ ಪತ್ನಿ ಹಾಗೂ ಈರ್ವರು ಮಕ್ಕಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಹೊಂದಿರುವ ಸದಸ್ಯ ಎಲ್ಯಾಸ್ ಪಿಂಟೋ ಹಾಗೂ ಅವರ ಪತ್ನಿ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿರುವ ಮೋಲಿ ಪಿಂಟೋರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.