ಸುಳ್ಯ ಪೊಲೀಸ್ ಠಾಣೆಯ ಎ.ಎಸ್.ಐ ಗೆ ಪುತ್ತೂರಿನಲ್ಲಿ ಹಲ್ಲೆ, ಜಾತಿ ನಿಂದನೆ – ಪುತ್ತೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಆಗಿದ್ದರೂ ತಡವಾಗಿ ಬೆಳಕಿಗೆ ಬಂದ ಪ್ರಕರಣ

0

ಪುತ್ತೂರು: ಸುಳ್ಯ ಪೊಲೀಸ್ ಠಾಣೆಯ ಎ.ಎಸ್.ಐ ಯೊಬ್ಬರಿಗೆ ಪುತ್ತೂರಿನಲ್ಲಿ ಮೂವರು ವ್ಯಕ್ತಿಗಳು ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ ಪ್ರಕರಣ ದಲಿತ ಸಂಘಟನೆ ಪತ್ರಿಕಾಗೋಷ್ಟಿ ವೇಳೆ ಬೆಳಕಿಗೆ ಬಂದಿದೆ. ಘಟನೆ ಜ.4ರಂದು ನಡೆದಿದ್ದು, ಎಫ್‌ಐಆರ್ ಆದರೂ ಇದೀಗ ತಡವಾಗಿ ಘಟನೆ ಬೆಳಕಿಗೆ ಬಂದಿರುವುದು ಕುತೂಹಲಕಾರಿಯಾಗಿದೆ.

ಪುತ್ತೂರು ಬಪ್ಪಳಿಗೆ ಟೆಲಿಕಾಂ ವಸತಿಗೃಹದಲ್ಲಿ ವಾಸ್ತವ್ಯ ಹೊಂದಿರುವ ಸುಳ್ಯ ಪೊಲೀಸ್ ಠಾಣೆಯ ಎ.ಎಸ್.ಐ ಗಂಗಾಧರ್ ಹಲ್ಲೆ ಮತ್ತು ಜಾತಿ ನಿಂಧನೆ ದೂರು ನೀಡಿದವರು. ಪ್ರಸಾದ್, ಪವನ್, ಅಜೇಯ್ ಅವರು ಆರೋಪಿಗಳು. ಎ.ಎಸ್.ಐ ಗಂಗಾಧರ್ ಅವರು ಜ.೪ರಂದು ಕರ್ತವ್ಯ ಮುಗಿಸಿ ಮನೆಗೆ ಹೋಗಲೆಂದು ಪುತ್ತೂರಿಗೆ ಬಂದು ಮನೆಗೆ ಬೇಕಾದ ಸಾಮಾಗ್ರಿ ಖರೀದಿಸಿ, ಸಂಚಾರ ಪೊಲೀಸ್ ಹಿಂಬದಿಯ ಎಟಿಎಂಗೆ ಹೋಗಿ ನಂತರ ಮನೆಯಲ್ಲಿ ಸಂಬಂಧಿಕರಿಗೆ ಮದ್ಯ ಖರೀದಿಸಲು ಸಂತೋಷ್ ವೈನ್ ಶಾಪ್‌ಗೆ ಹೋಗಿದ್ದ ವೇಳೆ ಮದ್ಯದಂಗಡಿಯಲ್ಲಿದ್ದ ಪರಿಚಯದ ಪ್ರಸಾದ್ ಮತ್ತು ಪವನ್ ಎಂಬವರು ನೆಹರುನಗರದ ಕೇಶವ ಎಂಬವರಿಗೆ ಹಲ್ಲೆ ನಡೆಸಿರುವ ಕುರಿತು ವಿಚಾರಿಸಿದಾಗ ಪ್ರಸಾದ್ ಮತ್ತು ಪವನ್ ಅವರು ಎ.ಎಸ್.ಐ ಗಂಗಾಧರ್ ಅವರನ್ನು ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂಧನೆ ಮಾಡಿದ್ದಲ್ಲದೆ ಹಲ್ಲೆ ನಡೆಸಿದ್ದಾರೆ. ಬಳಿಕ ಗಾಯಗೊಂಡ ಗಂಗಾಧರ್ ಅವರು ಆಸ್ಪತ್ರೆಗೆ ಹೋಗಲೆಂದು ವಾಹನದ ಬಳಿ ಬಂದಾಗ ಅಲ್ಲಿಗೆ ಬಂದ ಇನ್ನೋರ್ವ ಪರಿಚಯದ ಅಜಯ್ ಎಂಬವರು ವಿಡಿಯೋ ಮಾಡುವುದನ್ನು ನೋಡಿ ಪ್ರಶ್ನಿಸಿದಾಗ ಅಲ್ಲೂ ಅಜಯ್ ಎಂಬವರು ಜಾತಿ ನಿಂಧನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಕುರಿತು ಜ.೪ರಂದು ಗಂಗಾಧರ್ ಅವರು ಪುತ್ತೂರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಇದೀಗ ಘಟನೆ ಬೆಳಕಿಗೆ ಬಂದಿದೆ.

 

ಹಳೆಯ ದ್ವೇಷ: ಆರೋಪಿ ಅಜಯ್ ಮತ್ತು ಹಲ್ಲೆಗೊಳಗಾದ ಗಂಗಾಧರ್ ಅವರ ಪುತ್ರ ಸ್ನೇಹಿತರಾಗಿದ್ದರು. ಕೆಲವು ಸಮಯಗಳ ಹಿಂದೆ ವಾಚ್ ಕಳೆದು ಹೋದ ವಿಚಾರದಲ್ಲಿ ಅಜಯ್ ಮತ್ತು ಗಂಗಾಧರ್ ಪುತ್ರನ ನಡುವೆ ಮನಸ್ತಾಪ ಉಂಟಾಗಿತ್ತು. ಇದೆ ವಿಚಾರದಲ್ಲಿ ಇದೀಗ ಇತ್ತಂಡದ ನಡುವೆ ದ್ವೇಷ ಸಾಧನೆ ನಡೆದಿದೆ ಎನ್ನಲಾಗಿದೆ. ಅಜಯ್ ಮತ್ತು ಮತ್ತಿತರರು ಎ.ಎಸ್.ಐ ಗಂಗಾಧರ್ ಅವರು ಕರ್ತವ್ಯ ಮುಗಿಸಿ ಮನೆಗೆ ಬರುವ ವೇಳೆ ವೈನ್ ಶಾಫ್‌ಗೆ ಹೋಗುವುದನ್ನು ವಿಡಿಯೋ ಚಿತ್ರಿಕರಣ ಮಾಡಿರುವುದು ಪ್ರಶ್ನಿಸಿದ ವೇಳೆ ಪರಸ್ಪರ ಮಾತಿನಚಕಮಕಿ ನಡೆದು ಹಲ್ಲೆ ನಡೆದಿದೆ ಎನ್ನಲಾಗಿದೆ.

ದಲಿತ ಸಂಘಟನೆ ಮೂಲಕ ಪ್ರಕರಣ ಬೆಳಕಿಗೆ:
ದಲಿತ ಸಂಘಟನೆಗಳು ಎ.ಎಸ್.ಐ ಗಂಗಾಧರ್ ಅವರಿಗೆ ಹಲ್ಲೆ ಮತ್ತು ಜಾತಿ ನಿಂಧನೆ ಮಾಡಿದ ಪ್ರಕರಣಕ್ಕೆ ವಾರ ಕಳೆದು ಇನ್ನೂ ಆರೋಪಿಗಳ ವಿಚಾರಣೆಯನ್ನು ಪೊಲೀಸರು ಮಾಡಿಲ್ಲ ಎಂದು ಆರೋಪಿಸಿ ಪತ್ರಿಕಾಗೋಷ್ಠಿ ನಡೆಸಿದ ವೇಳೆ ವಿಚಾರ ಬೆಳಕಿಗೆ ಬಂದಿದೆ. ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಇನ್ನಿತರ ಅನ್ಯಾಯಗಳ ಬಗ್ಗೆ ಪುತ್ತೂರಿನ ಯಾವುದೇ ಪೊಲೀಸ್ ಠಾಣೆಯಲ್ಲಿ ನ್ಯಾಯ ಸಿಗುತ್ತಿಲ್ಲ. ನ್ಯಾಯಕ್ಕಾಗಿ ಪ್ರತಿಭಟನೆ ಮಾಡುವ ಸ್ಥಿತಿಯನ್ನು ಪೊಲೀಸರೇ ನಿರ್ಮಿಸುತ್ತಿದ್ದಾರೆ ಎಂದು ದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷ ಸೇಸಪ್ಪ ಬೆದ್ರಕಾಡು ಸುದ್ದಿಗೆ ತಿಳಿಸಿದ್ದಾರೆ. ಸುಳ್ಯ ಠಾಣೆಯ ಎಎಸ್‌ಐ ದಲಿತ ಸಮುದಾಯದ ಗಂಗಾಧರ್ ಎಂಬವರನ್ನು ಪ್ರಸಾದ್ ಮತ್ತು ಪವನ್ ಎಂಬವರು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ದೂರು ನೀಡಿ ೧೦ ದಿನಗಳು ಕಳೆದರೂ ಆರೋಪಿಗಳನ್ನು ವಿಚಾರಣೆ ನಡೆಸಿಲ್ಲ. ಇದೆಲ್ಲಾ ದಲಿತರಿಗೆ ಅನ್ಯಾಯವಾದಾಗ ಪ್ರತಿಭಟನೆ ಮಾಡಿದರೆ ಮಾತ್ರ ಕಾನೂನು ಕ್ರಮ ಎನ್ನುವ ಸ್ಥಿತಿ ನಿರ್ಮಿಸಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಗಮನ ಹರಿಸಿ ದಲಿತರ ಮೇಲೆ ನಡೆಯುವ ದೌರ್ಜನ್ಯಕ್ಕೆ ಪ್ರತಿಭಟನೆಗೆ ಕಾಯದೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಅಧ್ಯಕ್ಷ ಚಂದ್ರಶೇಖರ ವಿಟ್ಲ, ಪುತ್ತೂರು ತಾಲೂಕು ಶಾಖೆಯ ಅಧ್ಯಕ್ಷ ಬಿ.ಕೆ. ಅಣ್ಣಪ್ಪ ಕಾರೆಕ್ಕಾಡು, ಉಪಾಧ್ಯಕ್ಷ ಮನೋಹರ ಕೋಡಿಜಾಲು ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here