ಪುತ್ತೂರು: ಬಂಟ್ವಾಳ ತಾಲೂಕಿನ ಪುಣಚ ಅಂಚೆ ಕಛೇರಿಗೆ ಇಬ್ಬರು ಅಂಚೆ ಬಟವಾಡೆದಾರರನ್ನು ನೇಮಕ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಬಿ.ಶ್ರೀಧರ ಶೆಟ್ಟಿ ಬೈಲುಗುತ್ತುರವರು ಪುತ್ತೂರು ಹಿರಿಯ ಅಂಚೆ ಅಧೀಕ್ಷರಿಗೆ ಮನವಿ ಮಾಡಿಕೊಂಡಿದ್ದಾರೆ. ಪುಣಚ ಗ್ರಾಮವು ಬಂಟ್ವಾಳ ತಾಲೂಕಿನಲ್ಲಿ ಅತೀ ದೊಡ್ಡ ಗ್ರಾಮವಾಗಿದ್ದು ಪುಣಚ ಅಂಚೆ ಕಛೇರಿಗೆ 4 ವಾರ್ಡ್, 8 ಸಾವಿರ ಜನಸಂಖ್ಯೆ ಇದ್ದು 65 ಕಿಲೋ ಮೀಟರ್ ವ್ಯಾಪ್ತಿ ಒಳಪಟ್ಟಿದೆ. ಈ ಅಂಚೆ ಕಛೇರಿಗೆ ಸಂಬಂಧಪಟ್ಟಂತೆ ಗ್ರಾಮ ಪಂಚಾಯತ್, ಗ್ರಾಮಕರಣಿಕರ ಕಛೇರಿ, 1 ಹೈಸ್ಕೂಲ್, 7 ಹಿರಿಯ ಪ್ರಾಥಮಿಕ ಶಾಲೆ, 2 ಇಂಗ್ಲೀಷ್ ಮಾಧ್ಯಮ ಶಾಲೆ, 1 ರಾಷ್ಟ್ರೀಕೃತ ಬ್ಯಾಂಕ್, 2 ಸೇವಾ ಸಹಕಾರಿ ಬ್ಯಾಂಕ್, ಗ್ರಂಥಾಲಯ, ಹಾಲು ಉತ್ಪಾದಕರ ಸಹಕಾರಿ ಸಂಘ, 9 ಅಂಗನವಾಡಿ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ದೇವಸ್ಥಾನ, ಭಜನಾ ಮಂದಿರ, ಚರ್ಚ್, 3 ಮಸೀದಿ, ಸೇವಾ ಆಶ್ರಮ, 3 ಯುವಕ ಮಂಡಲ, ಮಹಿಳಾ ಮಂಡಳ, ಪೆಟ್ರೋಲ್ ಬಂಕ್, ಕೈಗಾರಿಕಾ ಸಂಸ್ಥೆಗಳು ಇದ್ದು ರಾಜಕೀಯ ಪ್ರತಿನಿಧಿಗಳು, ಸಂಘ ಸಂಸ್ಥೆಯ ಅಧ್ಯಕ್ಷರುಗಳು ಹಾಗೂ ಅತೀ ಹೆಚ್ಚು ಪಿಂಚಣಿದಾರರು ಈ ಗ್ರಾಮದಲ್ಲಿದ್ದಾರೆ. ಆದ್ದರಿಂದ ಈ ಅಂಚೆ ಕಛೇರಿಯನ್ನು ಮೇಲ್ದರ್ಜೆಗೆ ಏರಿಸಬೇಕು ಹಾಗೂ ಕನಿಷ್ಠ ಇಬ್ಬರಾದರೂ ಅಂಚೆ ಬಟವಾಡೆದಾರರನ್ನು ನೇಮಿಸಬೇಕು ಎಂದು ಅವರು ಮನವಿಯಲ್ಲಿ ಕೇಳಿಕೊಂಡಿದ್ದಾರೆ.
ಪತ್ರಗಳ ಬಟವಾಡೆಗೆ ತೊಂದರೆ
ಪ್ರಸ್ತುತ ಒಬ್ಬರೇ ಬಟವಾಡೆದಾರರು ಇರುವುದರಿಂದ ಪತ್ರಗಳ ಬಟವಾಡೆಗೆ ತೊಂದರೆಯಾಗುತ್ತಿದೆ. ಪ್ರಸ್ತುತ ಕರ್ತವ್ಯದಲ್ಲಿರುವ ಅಂಚೆ ಪೇದೆಗೆ ಹೃದಯ ಶಸ್ತ್ರ ಚಿಕಿತ್ಸೆಯಾಗಿರುವುದರಿಂದ ರಜೆಯಲ್ಲಿದ್ದಾರೆ. ಇವೆಲ್ಲವೂ ಗೊತ್ತಿದ್ದರೂ ಅಂಚೆ ಇಲಾಖೆ ಮೌನವಹಿಸಿರುವುದು ಸರಿಯಲ್ಲ. ಗ್ರಾಮದ ಜನರ ಸಮಸ್ಯೆಗೆ ಶೀಘ್ರ ಸ್ಪಂದನೆ ನೀಡಬೇಕಾಗಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಮಾಡಿದರೂ ಸ್ಪಂದನೆ ಇಲ್ಲ
ಈ ಬಗ್ಗೆ ಈ ಹಿಂದೆ ಕೂಡ ಅಂಚೆ ಅಧೀಕ್ಷಕರಿಗೆ ಮನವಿ ಮಾಡಿಕೊಳ್ಳಲಾಗಿದೆ ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿರುವ ಅವರು ಇದೀಗ ಎರಡನೇ ಮನವಿಯನ್ನು ನೀಡುತ್ತಿದ್ದೇವೆ ಈ ಮನವಿಗೆ ಸ್ಪಂದನೆ ಸಿಗದೇ ಇದ್ದರೆ ಮುಂದಿನ ದಿನಗಳಲ್ಲಿ ಗ್ರಾಮಸ್ಥರನ್ನು ಒಟ್ಟುಗೂಡಿಸಿ ಇಲಾಖೆಯ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಬಿ.ಶ್ರೀಧರ ಶೆಟ್ಟಿ ಬೈಲುಗುತ್ತು ಎಚ್ಚರಿಸಿದ್ದಾರೆ.