ಹೈಕೋರ್ಟ್ ಆದೇಶ ಹಿನ್ನೆಲೆ: ಕೋಡಿಂಬಾಡಿಯಲ್ಲಿ ರಸ್ತೆ ಬದಿ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿದ್ದ ಬಾಬು ಗೌಡರವರ ಅಂಗಡಿ ತೆರವು

0

ಪುತ್ತೂರು: ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕೋಡಿಂಬಾಡಿಯಲ್ಲಿ ರಸ್ತೆ ಬದಿ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿದ್ದ ಬಾಬು ಗೌಡರವರ ಅಂಗಡಿ ತೆರವು ಮಾಡಲಾಗಿದೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರನ್ನೊಳಗೊಂಡ ದ್ವಿಸದಸ್ಯ ಪೀಠ ಅಂಗಡಿ ತೆರವಿಗೆ ಆದೇಶಿದ್ದ ನಿಟ್ಟಿನಲ್ಲಿ ಬಾಬು ಗೌಡರವರು ಅಂಗಡಿ ತೆರವುಗೊಳಿಸಿದ್ದಾರೆ.

ಹಿಂದೆ ಇದ್ದ ಅಂಗಡಿ

 

ಅಂಗಡಿ ತೆರವಿಗೆ ಹೈಕೋರ್ಟ್ ಆದೇಶ: ಕೋಡಿಂಬಾಡಿಯಲ್ಲಿ ರಸ್ತೆ ಬದಿ ಅನಧಿಕೃತವಾಗಿ ವ್ಯವಹರಿಸುತ್ತಿರುವ ಬಾಬು ಗೌಡರವರ ಗೂಡಂಗಡಿಯನ್ನು ತೆರವು ಮಾಡಲು ಕ್ರಮ ಕೈಗೊಳ್ಳುವಂತೆ ಕೋಡಿಂಬಾಡಿ ‘ಜಿನ’ ನಿವಾಸದ ಹರ್ಷೇಂದ್ರ ಜೈನ್ ಹೈಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಅಂಗಡಿ ತೆರವುಗೊಂಡಿರುವುದು

ಲೋಕೋಪಯೋಗಿ ಇಲಾಖಾ ವ್ಯಾಪ್ತಿಯ ಪುತ್ತೂರು-ಉಪ್ಪಿನಂಗಡಿ ಮೇಲ್ದರ್ಜೆಗೇರಿಸಿದ ರಾಜ್ಯ ಹೆದ್ದಾರಿ ರಸ್ತೆಯ ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆ ಬದಿಯಲ್ಲಿ ರಸ್ತೆ ಮಾರ್ಜಿನನ್ನು ಅತಿಕ್ರಮಿಸಿ ಬಾಬು ಗೌಡ ಎಂಬವರು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಇದರಿಂದ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸದ್ರಿ ಅಂಗಡಿಯ ಎದುರು ಕೆಲ ಯುವಕರು ರಾತ್ರಿ ಹಗಲೆನ್ನದೆ ನಿಂತು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ. ಅಕ್ರಮವಾಗಿ ಅಂಗಡಿ ಕಟ್ಟಡ ನಿರ್ಮಿಸಿ ರಸ್ತೆಯ ಜಾಗವನ್ನು ಒತ್ತುವರಿ ಮಾಡುವುದು ಕಾನೂನು ಬಾಹಿರವಾಗಿದೆ. ಅಲ್ಲದೆ, ಈ ಅಂಗಡಿಯ ಹಿಂದೆ ನ್ಯಾಯಬೆಲೆ ಅಂಗಡಿ, ಗ್ರಾಮಕರಣಿಕರ ಕಛೇರಿ ಕಾರ್ಯ ನಿರ್ವಹಿಸುತ್ತಿದೆ. ಅನಧಿಕೃತ ಅಂಗಡಿಯಿಂದಾಗಿ ಅಗತ್ಯ ವ್ಯವಹಾರಕ್ಕೆ ಹೋಗಲು ತೊಂದರೆಯಾಗುತ್ತಿದೆ. ಆದ್ದರಿಂದ ಈ ಅನಧಿಕೃತ ಅಂಗಡಿಯನ್ನು ತೆರವುಗೊಳಿಸುವಂತೆ ಸಂಬಂಧಿಸಿದವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುತ್ತಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ತಿಳಿಸಲಾಗಿತ್ತು. ಹೈಕೋರ್ಟಿನಲ್ಲಿ ದ.ಕ. ಜಿಲ್ಲಾಧಿಕಾರಿ, ಪುತ್ತೂರು ಸಹಾಯಕ ಆಯುಕ್ತರು, ತಹಶೀಲ್ದಾರರು, ತಾ.ಪಂ. ಕಾರ್ಯ ನಿರ್ವಾಹಕಾಧಿಕಾರಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್, ಕೋಡಿಂಬಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಬಾಬು ಗೌಡರವರನ್ನು ಪ್ರತಿವಾದಿಗಳನ್ನಾಗಿಸಲಾಗಿತ್ತು.‌ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ಸಚಿನ್ ಶಂಕರ್ ಮಗದಮ್ ಅವರನ್ನು ಒಳಗೊಂಡ ನ್ಯಾಯಪೀಠವು ಅಂಗಡಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಿತ್ತು. ಕೋಡಿಂಬಾಡಿ ಗ್ರಾಮ‌ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಕಾನೂನು ಪ್ರಕಾರ ಸೂಕ್ತ ಕ್ರಮ ಜರಗಿಸುವಂತೆ ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿತ್ತು. ಅಲ್ಲದೆ, ಅರ್ಜಿಯನ್ನು ಇತ್ಯರ್ಥಪಡಿಸಿತ್ತು. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇದೀಗ ಬಾಬು ಗೌಡರವರು ಸ್ವಯಂಪ್ರೇರಿತರಾಗಿ ಅಂಗಡಿ ತೆರವು ಮಾಡಿದ್ದಾರೆ. ಕೋಡಿಂಬಾಡಿ ಗ್ರಾಮ ಪಂಚಾಯತಿನ ಮಾಜಿ ಉಪಾಧ್ಯಕ್ಷರೂ ಆಗಿರುವ ಬಾಬು ಗೌಡರವರು ಕಳೆದ 30 ವರ್ಷಕ್ಕಿಂತಲೂ ಅಧಿಕ ಸಮಯಗಳಿಂದ ಇಲ್ಲಿ ಅಂಗಡಿ ನಡೆಸುತ್ತಿದ್ದರು.

LEAVE A REPLY

Please enter your comment!
Please enter your name here