ನೆಲ್ಯಾಡಿಯ ಪಿಗ್ಮಿ ಸಂಗ್ರಾಹಕ ಪ್ರವೀಣ್‌ಕುಮಾರ್ ನಾಪತ್ತೆ

0
  • ಹಲವರಿಂದ ಲಕ್ಷಾಂತರ ರೂ., ಸಾಲ ಪಡೆದು ಹಿಂತಿರುಗಿಸದೆ ವಂಚನೆ-ಆರೋಪ
  • ಛೋಟಾ ರಾಜನ್ ಗ್ಯಾಂಗ್ ಜಾಲದೊಳಗೆ ಬಿಹಾರದಲ್ಲಿದ್ದೇನೆ; ‘ಸುದ್ದಿ’ಗೆ ಪ್ರವೀಣ್‌ಕುಮಾರ್ ಮಾಹಿತಿ

ನೆಲ್ಯಾಡಿ: ಸಹಕಾರ ಸಂಘವೊಂದರ ನೆಲ್ಯಾಡಿ ಶಾಖೆಯಲ್ಲಿ ಪಿಗ್ಮಿ ಸಂಗ್ರಾಹಕರಾಗಿದ್ದ ಕೌಕ್ರಾಡಿ ಗ್ರಾಮದ ದೋಂತಿಲ ನಿವಾಸಿ ಪ್ರವೀಣ್ ಕುಮಾರ್(26ವ.)ಎಂಬವರು ಕಳೆದ 15 ದಿನಗಳಿಂದ ನಾಪತ್ತೆಯಾಗಿದ್ದಾರೆ. ಇವರು ನೆಲ್ಯಾಡಿ ಅಸುಪಾಸಿನಲ್ಲಿ ಹಲವು ಮಂದಿಯಿಂದ ಲಕ್ಷಾಂತರ ರೂ. ಸಾಲ ಪಡೆದುಕೊಂಡಿದ್ದು ಸಾಲ ಹಿಂತಿರುಗಿಸಲು ಸಾಧ್ಯವಾಗದೆ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ. ಈ ಮಧ್ಯೆ ಜ.18ರಂದು ಮಧ್ಯಾಹ್ನದ ವೇಳೆಗೆ ಸುದ್ದಿಬಿಡುಗಡೆ ಪತ್ರಿಕೆಯ ನೆಲ್ಯಾಡಿ ವರದಿಗಾರರಿಗೆ ವಾಟ್ಸಫ್ ಕರೆ ಮಾಡಿರುವ ಪ್ರವೀಣ್ ಕುಮಾರ್, ನಾನು ಬಿಹಾರದಲ್ಲಿದ್ದು ಛೋಟಾ ರಾಜನ್ ಗ್ಯಾಂಗ್‌ನವರ ಜಾಲದೊಳಗೆ ಸಿಲುಕಿಕೊಂಡಿರುವುದಾಗಿ ತಿಳಿಸಿದ್ದಾರೆ.


ಪ್ರವೀಣ್‌ಕುಮಾರ್‌ರವರು ಕಳೆದ 10ಕ್ಕೂ ಹೆಚ್ಚು ವರ್ಷಗಳಿಂದ ನೆಲ್ಯಾಡಿಯಲ್ಲಿ ಪಿಗ್ಮಿ ಸಂಗ್ರಾಹಕರಾಗಿ ಕೆಲಸ ಮಾಡಿಕೊಂಡಿದ್ದು ಚಿರಪರಿಚಿತರಾಗಿದ್ದರು. ಇಲ್ಲಿನ ಅಡಿಕೆ ವ್ಯಾಪಾರಿಗಳು, ನೆಲ್ಯಾಡಿಯ ಪ್ರತಿಷ್ಠಿತ ಉದ್ಯಮಿಗಳು ಸೇರಿದಂತೆ ಹಲವು ಮಂದಿಯ ವಿಶ್ವಾಸಗಳಿಸಿಕೊಂಡಿದ್ದ ಅವರು ಕೆಲವರಿಂದ ಲಕ್ಷಕ್ಕೂ ಮಿಕ್ಕಿ ಕೈ ಸಾಲ ಪಡೆದುಕೊಂಡು ಹಿಂತಿರುಗಿಸಲಾಗದೆ ಈಗ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೇ ಚಿಟ್‌ಫಂಡ್‌ನಲ್ಲೂ ಇವರಿಂದ ಕೆಲವರಿಗೆ ಮೋಸ ಆಗಿದೆ ಎಂಬ ದೂರುಗಳು ಕೇಳಿಬಂದಿವೆ. ಇವರು ಹಲವು ಮಂದಿಯಿಂದ ರೂ.55ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರು ಎಂದು ಹೇಳಲಾಗಿದೆ. ಪ್ರವೀಣ್‌ಕುಮಾರ್‌ರವರು ಜ.3ರಿಂದ ನಾಪತ್ತೆಯಾಗಿದ್ದು ಅವರ ಮೊಬೈಲ್ ಈಗ ಸ್ವಿಚ್ಡ್ ಆಫ್ ಆಗಿದೆ. ಪ್ರವೀಣ್ ನೆಲ್ಯಾಡಿ ವರ್ತಕ ಸಂಘದ ಕಾರ್ಯದರ್ಶಿಯೂ ಆಗಿದ್ದರು. ಮನೆಯವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಬಿಹಾರದಲ್ಲಿದ್ದೇನೆ:
ಜ.18ರಂದು ಮಧ್ಯಾಹ್ನದ ವೇಳೆಗೆ ಸುದ್ದಿಬಿಡುಗಡೆ ಪತ್ರಿಕೆಯ ನೆಲ್ಯಾಡಿ ವರದಿಗಾರರಿಗೆ ‘8792930641’ ನಂಬ್ರದಿಂದ ಕರೆ ಮಾಡಿರುವ ಪ್ರವೀಣ್‌ಕುಮಾರ್‌ರವರು ನಾನು ಬಿಹಾರದಲ್ಲಿದ್ದು ಛೋಟಾ ರಾಜನ್ ಗ್ಯಾಂಗ್‌ನವರ ಜಾಲದೊಳಗೆ ಸಿಲುಕಿಕೊಂಡಿದ್ದೇನೆ ಎಂದಿದ್ದಾರೆ. 1 ವರ್ಷದ ಹಿಂದೆ ನಾನು ಪೆರಿಯಶಾಂತಿಯಲ್ಲಿದ್ದ ವೇಳೆ ಫಾರ್ಚೂನರ್ ಕಾರೊಂದರಲ್ಲಿ ಬಂದವರು ನಾವು ನೆಲ್ಯಾಡಿಯಲ್ಲಿ ಹೊಸ ಉದ್ದಿಮೆ ಆರಂಭಿಸುತ್ತೇವೆ ಎಂದು ಹೇಳಿ ನೆಲ್ಯಾಡಿಯ ಪ್ರತಿಷ್ಠಿತ ಉದ್ಯಮಿಗಳ ಬಗ್ಗೆ ನನ್ನಲ್ಲಿ ವಿಚಾರಿಸಿ ಹೋಗಿದ್ದರು. ಆ ಬಳಿಕ ಅವರು ನನ್ನೊಂದಿಗೆ ಸಂಪರ್ಕದಲ್ಲಿದ್ದು ಹಣ ದ್ವಿಗುಣಗೊಳಿಸುವುದಾಗಿ ಹೇಳಿ ಈ ತನಕ ನನ್ನಿಂದ ಸುಮಾರು 35 ಲಕ್ಷ ರೂ., ಪಡೆದುಕೊಂಡಿದ್ದಾರೆ. ಇದಕ್ಕೆ 70 ಲಕ್ಷ ರೂ.,ನೀಡುವುದಾಗಿ ಹೇಳಿ ಜ.3ರಂದು ನನ್ನನ್ನು ಶಿವಮೊಗ್ಗಕ್ಕೆ ಬರಲು ಹೇಳಿದ್ದು ಅದರಂತೆ ನಾನು ಶಿವಮೊಗ್ಗಕ್ಕೆ ಹೋದಾಗ ಅಲ್ಲಿಂದ ನನ್ನನ್ನು ಬಿಹಾರಕ್ಕೆ ಕರೆದುಕೊಂಡು ಹೋಗಿದ್ದಾರೆ. ನಾವು ಛೋಟಾ ರಾಜನ್ ಗ್ಯಾಂಗ್‌ನವರು ಎಂದು ಅವರು ನನ್ನಲ್ಲಿ ಹೇಳುತ್ತಿದ್ದು ಅವರ ಕಣ್ಣುತಪ್ಪಿಸಿ ಅವರದ್ದೇ ಮೊಬೈಲ್‌ನಿಂದ ಕರೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಆದರೆ ನೆಲ್ಯಾಡಿಯಲ್ಲಿ ಹಲವು ಮಂದಿಯಿಂದ ಲಕ್ಷಾಂತರ ರೂ.,ಪಡೆದು ವಂಚಿಸಿ ನಾಪತ್ತೆಯಾಗಿರುವ ಪ್ರವೀಣ್‌ಕುಮಾರ್‌ರವರ ಈ ನಡೆ ಅನುಮಾನಕ್ಕೆ ಕಾರಣವಾಗಿದೆ.

ಚೀಟಿ ಬರೆದು ನಾಪತ್ತೆ:
ಜ.3ರಂದು ಮಧ್ಯಾಹ್ನದ ಬಳಿಕ ಪ್ರವೀಣ್ ನಾಪತ್ತೆಯಾಗಿದ್ದು ಅವರು ನಾಪತ್ತೆಯಾದ ಎರಡು ದಿನದ ಬಳಿಕ ಅವರ ಕೋಣೆಯಲ್ಲಿ ಶಿವಮೊಗ್ಗಕ್ಕೆ ಚಿಕಿತ್ಸೆಗೆ ಹೋಗುವುದಾಗಿ ಬರೆದಿದ್ದ ಚೀಟಿಯೊಂದು ಪತ್ತೆಯಾಗಿದೆ. ಪ್ರವೀಣ್‌ರವರು ನರಕ್ಕೆ ಸಂಬಂಧಿಸಿ ಚಿಕಿತ್ಸೆ ಪಡೆಯುತ್ತಿದ್ದರು. ಇದಕ್ಕೆ ಆತ ಚಿಕಿತ್ಸೆಗೆ ಹೋಗಿರಬಹುದೆಂದು ನಾವು ಶಿವಮೊಗ್ಗಕ್ಕೆ ತೆರಳಿ ಹಲವು ಆಸ್ಪತ್ರೆಗಳಲ್ಲಿ ವಿಚಾರಿಸಿದ್ದೇವೆ. ಆದರೂ ಅವರ ಬಗ್ಗೆ ಯಾವುದೇ ಸುಳಿವು ಸಿಗದೇ ಇದ್ದ ಹಿನ್ನೆಲೆಯಲ್ಲಿ ಜ.8ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ ಎಂದು ಪ್ರವೀಣ್‌ರವರ ಅಣ್ಣ ರವಿಯವರು ಸುದ್ದಿಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here