ಏಕಾಗ್ರತೆ ಪಡೆಯಲು ಶಿವನ ಆರಾಧನೆ ಮಾಡಿದರೆ ಉತ್ತಮ – ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆ

0

ಪುತ್ತೂರು:ಮಾನಸಿಕವಾಗಿ ನೊಂದವರು ಪುತ್ತೂರು ಮಹಾಲಿಂಗೇಶ್ವರ ದೇವಳದಲ್ಲಿ ದೇವರ ಸೇವೆ ಮಾಡಿ ಭಜನೆ ಮಾಡಿದರೆ ಮಾನಸಿಕ ಅಸ್ವಸ್ಥತೆಗಳು ಹೋಗಿ ಒಂದು ಒಳ್ಳೆಯ ವ್ಯಕ್ತಿತ್ವ ರೂಪಾಂತರವಾದೀತು.ಜನರಿಗೆ ಏಕಾಗ್ರತೆ ಪಡೆಯಲು ಶಿವನನ್ನು ಆರಾಧನೆ ಮಾಡಿದರೆ ಉತ್ತಮ ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ನಡೆಯುತ್ತಿರುವ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದೆ.

ಜ್ಯೋತಿರ್ವಿದ್ವಾನ್ ವಳಕ್ಕುಂಜ ವೆಂಕಟರಮಣ ಭಟ್ ಮತ್ತು ಡಾ|ವಳಕ್ಕುಂಜ ಮುರಳಿಕೃಷ್ಣ ಭಟ್ ನೇತೃತ್ವದಲ್ಲಿ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಜ.17ರಂದು ಪುನರಾರಂಭಗೊಂಡ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಈ ವಿಷಯವನ್ನು ದೈವಜ್ಞರು ನುಡಿದರು.ಅದ್ಭುತವಾದ ಸಂಬಂಧ ಐತಿಹ್ಯ ಇದ್ದ ಚರಿತ್ರೆ ಇದೆ. ಮಾನಸಿಕವಾಗಿ ನೊಂದವರಿಗೆ ದೇವರ ಸೇವೆ ಮಾಡಿ ಭಜನೆ ಮಾಡುವುದು, ಅದೂ 11/41/108 ದಿವಸ ದೇವರ ಪ್ರಾಕಾರದಲ್ಲಿ ಭಜನೆಗೆ ಕೂತು ಆ ರೀತಿಯಲ್ಲಿ ಆರಾಧನೆ ಮಾಡಿದರೆ ಭಜನೆ ಕೊನೆಯ ಸಮಯದಲ್ಲಿ ಮಾನಸಿಕ ಅಸ್ವಸ್ಥತೆಗಳು ಹೋಗಿ ಒಂದು ಒಳ್ಳೆಯ ವ್ಯಕ್ತಿತ್ವ ರೂಪಾಂತರವಾದೀತು.ಚಂಚಲ ಸ್ವಭಾವ ಇರುವ ವ್ಯಕ್ತಿಗಳು ಕೂಡಾ ಈ ಶಿವನನ್ನು ಆರಾಧನೆ ಮಾಡಿದರೆ ಮನಸ್ಸಿನಲ್ಲಿ ಜಿತೇಂದ್ರಿಯ ಸ್ವಭಾವ ಬಂದೀತು,ಒಟ್ಟಿನಲ್ಲಿ ಜನರಿಗೆ ಏಕಾಗ್ರತೆ ಪಡೆಯಲು ಶಿವನನ್ನು ಆರಾಧನೆ ಮಾಡಿದರೆ ಉತ್ತಮ, ಶಿವನ ಆರಾಧನೆಯಿಂದ ಏಕಾಗ್ರತೆ ಫಲಿಸುವುದು ಎಂದರು.

ನೈರ್ಮಲ್ಯಕ್ಕೆ ಪ್ರಾಶಸ್ತ್ಯ ಕೊಡುವುದು: ದೇವಸ್ಥಾನಗಳಲ್ಲಿ ನೈರ್ಮಲ್ಯ ವಿಚಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡಬೇಕು.ಸಾಮಾನ್ಯ ರೀತಿಯಲ್ಲಿ ಹೇಳುವುದಾದರೆ ಕರೆಂಟ್‌ಗಾಗಿ ಬಲ್ಬ್ ಬದಲಾಯಿಸಿದಂತಲ್ಲ.ದೇವಳದ ನೈರ್ಮಲ್ಯ ವಿಚಾರ.ಅಂತಹ ಸೂಕ್ಷ್ಮ ವಿಚಾರವನ್ನು ಅರ್ಥ ಮಾಡಿಕೊಂಡು ಅದಕ್ಕೆ ಬೇಕಾದ ರೀತಿಯಲ್ಲಿ ತೀರ್ಮಾನ ಕೈಗೊಳ್ಳುವುದು ಅಗತ್ಯ ಎಂದು ದೈವಜ್ಞರು ನುಡಿದರು.

ಭೋಜನ ಯಜ್ಞ ಉತ್ತಮ ವಿಚಾರ: ಅನ್ನಛತ್ರ ವಿಚಾರದಲ್ಲಿ ಕುಂಠಿತವಾಗಿದೆ ಎಂದು ಪ್ರಸ್ತಾಪವಾದಾಗ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ನಾರಾವಿಯವರು, ಪ್ರಸ್ತುತ ಭಕ್ತರಿಗೆ ಅನ್ನಪ್ರಸಾದವನ್ನು ಕುಳಿತಲ್ಲಿಗೆ ಕೊಡುವ ವ್ಯವಸ್ಥೆ ಇದೆ.ಭಕ್ತರು ಕುಳಿತೇ ಅನ್ನಪ್ರಸಾದ ಸೇವಿಸಬೇಕು.ಅದಕ್ಕೂ ಮೊದಲು ಅವರು ಬ್ರಹ್ಮಾರ್ಪಣೆ ಮಾಡಬೇಕೆಂದು ವಿವರಿಸಿದರು.ದೈವಜ್ಞರು ಮಾತನಾಡಿ ಭೋಜನ ಯಜ್ಞ ಉತ್ತಮ ವಿಚಾರ. ಕುಳಿತುಕೊಂಡು ಊಟ ಮಾಡುವ ತೃಪ್ತಿ,ಮಣ್ಣಿಗೆ ಸಿಗುವ ಪುಣ್ಯ ಬಫೆ ಸಿಸ್ಟಮ್‌ನಲ್ಲಿ ಸಿಗುವುದಿಲ್ಲ ಎಂದರು.ಇದೇ ವೇಳೆ ಮಹಿಳೆಯೊಬ್ಬರು ಮಾತನಾಡಿ ಹಿಂದೆ ದೇವಳದ ಪಶ್ಚಿಮ ಭಾಗದಲ್ಲಿರುವ ಸರಕಾರಿ ಶಾಲಾ ಕಟ್ಟಡದಲ್ಲಿ ವೈಷ್ಣವರು ಊಟದ ಸಮಯದಲ್ಲಿ ಅಸಮಾಧಾನಗೊಂಡು ಕೈಯನ್ನು ನೆಲಕ್ಕೆ ಸ್ಪರ್ಶ ಮಾಡಿ ಎದ್ದು ಹೋಗಿದ್ದಾರೆ ಎಂಬುದನ್ನು ಗಮನಕ್ಕೆ ತಂದರು.ಇದೊಂದು ಸ್ಥೂಲವಾದ ಮತ್ತು ಸೂಕ್ಷ್ಮವಾದ ವಿಚಾರ ಎಂದು ದೈವಜ್ಞರು ನುಡಿದರು.ಧ್ವಜಸ್ತಂಭ ವಿಚಾರದಲ್ಲೂ ದೇವಸ್ಥಾನ ಬ್ರಹ್ಮಕಲಶ ಆಗುವ ಮುಂದೆ ಲೋಪವಾಗಿತ್ತು.ಬಳಿಕ ಬದಲಾವಣೆಯಲ್ಲೂ ಹಳೆ ಧ್ವಜಸ್ತಂಭದ ಮರ ಉಳಿಸುವ ಕುರಿತು ವಿಮರ್ಶೆ ಮಾಡಲಾಯಿತು.

ಪ್ರಶ್ನೆ ಅನ್ನುವುದು ಪ್ರಸವ ವೇದನೆಯಂತೆ: ಭಗವಂತನು ಕೊಟ್ಟ ವಿಚಾರದಲ್ಲಿ ಬಿಟ್ಟು ಹೋಗಬಾರದು ಎಂಬ ನಿಟ್ಟಿನಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆ ಉತ್ತಮ ರೀತಿಯಲ್ಲಿ ನಡೆಯುತ್ತಿದೆ.ಹೊರಟಂತಹ ವಿಚಾರದಲ್ಲಿ ನ್ಯಾಯ ಒದಗಿಸುವ ಪ್ರಧಾನ ಲಕ್ಷಣ ಇದೆ.ಪ್ರಶ್ನೆ ಅನ್ನುವುದು ಪ್ರಸವ ವೇದನೆ, ಆ ಪ್ರಸವ ವೇದನೆಯನ್ನು ಯಾವ ಸ್ತ್ರೀಯು ಕೂಡಾ ದೀರ್ಘವಾಗಿ ಅನುಭವಿಸಲು ಇಷ್ಟ ಪಡುವುದಿಲ್ಲ.ಅದೇ ಸ್ವಭಾವ ಅಷ್ಟಮಂಗಲ ಪ್ರಶ್ನೆಯಲ್ಲಿಯೂ ಇದೆ.ಇಲ್ಲಿ ಎಷ್ಟು ನಿಷ್ಟುರವಾದರೂ ಕೂಡಾ ಯತಾರ್ಥವಾದದ್ದನ್ನು ಹೇಳಿzವೆ ಎಂದು ದೈವಜ್ಞರು ವಿಮರ್ಶೆಯ ಸಂದರ್ಭದಲ್ಲಿ ಉಲ್ಲೇಖಿಸಿದರು.ವಿದ್ವಾನ್ ಪಂಜ ಭಾಸ್ಕರ್ ಭಟ್, ವಿದ್ವಾನ್ ಹಿರಣ್ಯ ವೆಂಕಟೇಶ್ ಭಟ್, ಪ್ರಧಾನ ಅರ್ಚಕರಾದ ವಿ.ಎಸ್ ಭಟ್, ವಸಂತ ಕೆದಿಲಾಯ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ರಾಮಚಂದ್ರ ಕಾಮತ್, ಡಾ.ಸುಧಾ ಎಸ್ ರಾವ್, ವೀಣಾ ಬಿ.ಕೆ, ಬಿ.ಐತ್ತಪ್ಪ ನಾಯ್ಕ್, ರಾಮದಾಸ್ ಗೌಡ, ಶೇಖರ್ ನಾರಾವಿ, ರವೀಂದ್ರನಾಥ ರೈ ಬಳ್ಳಮಜಲು, ಮಾಜಿ ಆಡಳಿತ ಮೊಕ್ತೇಸರ ಎನ್.ಕೆ.ಜಗನ್ನಿವಾಸ ರಾವ್, ಹಿರಿಯರಾದ ಕಿಟ್ಟಣ್ಣ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಬನ್ನೂರು ಜೋಡುಕಟ್ಟೆಯಲ್ಲಿ ಮಡಲಿನ ದೊಂದಿ ಹಿಂದೆ ಶಕ್ತಿಯಾಗಿತ್ತು
ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಿಂದೆ ದೂತನನ್ನು ಇನ್ನೊಂದು ದೇವಸ್ಥಾನಕ್ಕೆ ಆಮಂತ್ರಣ ಕೊಡಲು ಕಳುಹಿಸುವ ಪದ್ಧತಿ ಇತ್ತು.ಈ ಕುರಿತು ಒಟ್ಟು ೮ ಕಡೆಗಳಿಗೆ ಪ್ರಧಾನವಾಗಿ ಸಂದೇಶ ತಲುಪಿಸುವ ವ್ಯವಸ್ಥೆ ಕುರಿತು ವಿಮರ್ಶೆ ನಡೆದಾಗ, ಉಪ್ಪಿನಂಗಡಿಗೆ ಹಿಂದೆ ಅವಭೃತಕ್ಕೆ ಹೋಗುವ ದಾರಿಯಲ್ಲಿ ಪ್ರಧಾನವಾದ ಶಕ್ತಿಗೆ ಸಂಬಂಧಿಸಿ ಕ್ಷೇತ್ರದ ವಿಚಾರ ಬಂತು.ಈ ವೇಳೆ ಆನೆಮಜಲಿನ ಶಕ್ತಿಯ ಕ್ಷೇತ್ರದ ವಿಚಾರ ಪ್ರಸ್ತಾಪ ಆಯಿತು.ಆದರೆ ಅಲ್ಲಿಗೆ ಹೋಗಲು ಬನ್ನೂರು ಜೋಡುಕಟ್ಟೆಯ ಒಳ ದಾರಿಯನ್ನು ಬಳಸಲಾಗುತ್ತಿತ್ತು.ಇದಕ್ಕೆ ಪೂರಕವಾಗಿ ಇವತ್ತು ಕೂಡಾ ಮಡಲಿನ ದೊಂದಿಯೊಂದಿಗೆ ಜೋಡುಕಟ್ಟೆಯಲ್ಲಿ ದೇವರಿಗೆ ಸ್ವಾಗತ ನೀಡಲಾಗುತ್ತದೆ ಎಂದು ಸಭೆಯಲ್ಲಿ ಪ್ರಸ್ತಾಪ ಆಯಿತು.ದೈವಜ್ಞರು ಮಾತನಾಡಿ ವಿಶೇಷವಾದ ಶಕ್ತಿಯೊಂದು ಕಾಲಘಟ್ಟದಲ್ಲಿ ಮಹಾಲಿಂಗೇಶ್ವರ ದೇವರಿಗೆ ಆ ಒಂದು ಕ್ಷೇತ್ರಕ್ಕೆ ಹೋಗುವ ದಾರಿ ತೋರಿಸಿಕೊಟ್ಟ ಚರಿತ್ರೆ ಇರಬಹುದು.ಆ ಸಂದರ್ಭ ಘನಘೋರ ವಾತಾವರಣ ಉಂಟಾದಾಗ ಸಂರಕ್ಷಣಾ ವ್ಯವಸ್ಥೆಯಾಗಿ ಶಕ್ತಿಯ ಪ್ರವೇಶವಾಗಿ ತದನಂತರ ಬೆಂಕಿಯ ಮೂಲಕ ದಾರಿ ದೀಪವಾದ ಚರಿತ್ರೆ ಇದೆ ಎಂದು ನುಡಿದರು.

LEAVE A REPLY

Please enter your comment!
Please enter your name here