ಲಂಚ, ಭ್ರಷ್ಟಾಚಾರ ನಿರ್ಮೂಲನೆ ದೇಶಕ್ಕೆ ಅವಶ್ಯ

0

  • ಹಲವು ವರ್ಷಗಳ ಹಿಂದೆ ಸುಳ್ಯದ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿನ ಭ್ರಷ್ಟ ಅಧಿಕಾರಿಯನ್ನು ಹೋರಾಟದ ಮೂಲಕ ಅಮಾನತುಗೊಳಿಸಿದ್ದು ಸುಳ್ಯದ ಇತಿಹಾಸ : ಡಿ.ವಿ. ಸದಾನಂದ ಗೌಡ

ಪುತ್ತೂರು : ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ ಹಾಗೂ ಇದರ ನಿರ್ಮೂಲನೆ ದೇಶಕ್ಕೆ ಅವಶ್ಯವಾಗಿದೆ, ಎಲ್ಲಾ ಕಡೆಗಳಲ್ಲಿ ಯಾವುದೇ ಸರಕಾರಿ ಕೆಲಸಗಳು ಆಗಬೇಕಿದ್ದರೆ ಸಾಮಾನ್ಯ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ಅಧಿಕಾರಿಗಳಿಗೆ ಲಂಚ ಕೊಡದಿದ್ದರೆ, ಕಾನೂನಿನ ವಿರುದ್ಧವಾದ ಕೆಲಸಗಳನ್ನು ಮಾಡದಿದ್ದರೆ ನಮ್ಮ ಕೆಲಸ ಆಗುವುದಿಲ್ಲ ಎಂಬುದು ಇವತ್ತು ಸಾಮಾನ್ಯ ಜನರ ಮನಸ್ಸಿನಲ್ಲಿದೆ. ಬೆಳೆಯುತ್ತಿರುವ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಭ್ರಷ್ಟಾಚಾರ ಅತೀ ವೇಗವಾಗಿ ಹೋಗುತ್ತಿದೆ ಎಂದರೆ ಅದಕ್ಕೆ ಕಡಿವಾಣ ಹಾಕುವುದು ಸಾಮಾನ್ಯ ಜನರ ಕರ್ತವ್ಯ. ಜನರೇ ಸ್ವಯಂಪ್ರೇರಿತರಾಗಿ ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ಇಲಾಖಾ ಅಧಿಕಾರಿಗಳಿಗೆ ಯಾವುದೇ ರೀತಿಯ ಲಂಚ ಕೊಡದೆ ತಮ್ಮ ಕೆಲಸ ಆಗುವಂತೆ ಮಾಡಿಸಬೇಕು.

 

ಲಂಚ, ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಬೇಕು ಎಂಬ ಜನಜಾಗೃತಿ ಇವತ್ತಿನ ಅವಶ್ಯಕತೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ, ಸಂಸದ ಡಿ.ವಿ. ಸದಾನಂದ ಗೌಡರು ಹೇಳಿದ್ದಾರೆ. ದೇವರಗುಂಡದ ಅವರ ಮನೆಯಲ್ಲಿ ‘ಸುದ್ದಿ’ಯೊಂದಿಗೆ ಮಾತನಾಡಿದ ಅವರು ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಸಕಾಲ ಎಂಬ ಕಾನೂನನ್ನು ಜಾರಿಗೆ ತಂದಿದ್ದೆ. ಸರಕಾರಿ ಸೇವೆಗಳನ್ನು ನಿಗದಿತ ದಿನಗಳಲ್ಲಿ ಜನಸಾಮಾನ್ಯರಿಗೆ ಕೊಡುವಂತಹ ಕೆಲಸ ಕಾರ್ಯಗಳನ್ನು ಮಾಡಿಸುವಂತಿತ್ತು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ದಂಡ ಹಾಕುವಂತಹ ಕೆಲಸ ಕಾರ್ಯಗಳನ್ನು ಜಾರಿಗೆ ತಂದಿದ್ದೆವು. ಆ ಸಂದರ್ಭದಲ್ಲಿ 180ರಿಂದ 190ರಷ್ಟು ಸರಕಾರಿ ಸೇವೆಗಳನ್ನು ಯಾವುದೇ ರೀತಿಯ ತೊಂದರೆ ಇಲ್ಲದೆ ಅಧಿಕಾರಿಗಳಿಗೆ ಲಂಚ ನೀಡದೆ ಸಕಾಲ ಕಾನೂನಿನ ಮೂಲಕ ಕೈಗೊಂಡಿದ್ದೆವು.

ಆದರೆ ಅದು ಅತೀ ವೇಗವಾಗಿ ಅನುಷ್ಟಾನಗೊಂಡಿಲ್ಲ. ಇತ್ತೀಚೆಗೆ ರಾಜ್ಯದ ಮುಖ್ಯಮಂತ್ರಿಯವರು ಸ್ವಾತಂತ್ರ್ಯೋತ್ಸವದ ಸಂದರ್ಭದ ಸಂದೇಶದಲ್ಲಿ ಸರಕಾರಿ ಸೇವೆಗಳನ್ನು ನಿಗದಿತ ಸಮಯದಲ್ಲಿ ಜನಸಾಮಾನ್ಯರ ಮನೆ ಮನೆಗೆ ತಲುಪಿಸುವಂತದ್ದು ಸರಕಾರದ ಜವಾಬ್ದಾರಿ ಎಂಬ ಘೋಷಣೆಯನ್ನು ಮಾಡಿದ್ದರು. ತಕ್ಷಣ ನಾನು ಮುಖ್ಯಮಂತ್ರಿಯವರಿಗೆ ಪತ್ರದ ಮೂಲಕ ಈ ಕಾನೂನು ತರಲು ಬೇರೆ ಯಾವುದೇ ಕಾನೂನು ಅಗತ್ಯವಿಲ್ಲ. ಬದಲಾಗಿ ಸಕಾಲ ಕಾನೂನಿನ ಮೂಲಕ ಜಾರಿಗೆ ತನ್ನಿ ಎಂದು ಹೇಳಿದ್ದೆ. ಸುಮಾರು 600ಕ್ಕಿಂತ ಹೆಚ್ಚು ಸೇವೆಗಳು ಸಕಾಲ ವ್ಯಾಪ್ತಿಯೊಳಗೆ ಬರುವಂತದ್ದು. ಆದರೆ ಸಕಾಲ ಕಾನೂನು ಅನುಷ್ಟಾನಗೊಳ್ಳದಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಡಿ.ವಿ. ಸದಾನಂದ ಗೌಡರು ಸುದ್ದಿಗೆ ತಿಳಿಸಿದರು. ಸುದ್ದಿ ಬಿಡುಗಡೆ ಪತ್ರಿಕೆಯವರು ಇವತ್ತು ನಡೆಸುತ್ತಿರುವಂತಹ ಲಂಚ, ಭ್ರಷ್ಟಾಚಾರದ ವಿರುದ್ಧದ ಜನಾಂದೋಲನದಿಂದ ಜನರಲ್ಲಿ ಲಂಚ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮವಾಗಿದೆ. ಇದು ಉತ್ತಮ ಕೆಲಸವಾಗಿದೆ. ಇದಕ್ಕೆ ನನ್ನ ಪೂರ್ತಿ ಸಹಕಾರವಿದೆ ಎಂದರಲ್ಲದೆ, ಬಹಳ ಹಿಂದಿನಿಂದಲೂ ನಾನು ಅಧಿಕಾರದಲ್ಲಿ ಇದ್ದಾಗಲೂ, ಅಧಿಕಾರದಲ್ಲಿ ಇಲ್ಲದಿದ್ದಾಗಲೂ ಲಂಚ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ್ದೇನೆ ಎಂದು ಡಿ.ವಿ.ಯವರು ಹೇಳಿದರು.

ಸುದ್ದಿ ಆಂದೋಲನಕ್ಕೆ ಪೂರ್ಣ ಬೆಂಬಲ

ನಾನು ಸುಳ್ಯದಲ್ಲಿ ಭಾರತೀಯ ಜನತಾ ಪಕ್ಷದ ಪ್ರಥಮ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಸುಳ್ಯದ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿನ ಲಂಚದ ವಿರುದ್ಧ ಹೋರಾಟ ಮಾಡಿ ಆ ಅಧಿಕಾರಿಯನ್ನು ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆಗಳ ಮೂಲಕ ಅವರ ಮೇಲೆ ಕೇಸು ದಾಖಲಿಸಿ ಅವರನ್ನು ಅಮಾನತು ಮಾಡಿ ಮನೆಗೆ ಕಳುಹಿಸಿದ್ದು, ಸುಳ್ಯದಲ್ಲಿ ಇತಿಹಾಸವಾಗಿದೆ. ಇವತ್ತು ಮತ್ತೆ ಇದಕ್ಕೆ ಜೀವಕೊಟ್ಟು ಈ ಹೋರಾಟವನ್ನು ಮುಂದುವರೆಸುತ್ತಿರುವ ಸುದ್ದಿ ಬಿಡುಗಡೆ ಸಮೂಹ ಮಾಧ್ಯಮ ಸಂಸ್ಥೆಯ ಪ್ರವರ್ತಕರಾದ ಡಾ.ಯು.ಪಿ.ಶಿವಾನಂದ ಉದ್ದೇಶ ಒಳ್ಳೆಯದು. ಅವರ ತಂಡಕ್ಕೆ ಯಶಸ್ಸು ಸಿಗಲಿ ಎಂದು ಡಿ.ವಿ.ಸದಾನಂದ ಗೌಡರು ಹೇಳಿದರು. ಬಳಿಕ ಸುದ್ದಿ ಜನಾಂದೋಲನದ `ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ ಉತ್ತಮ ಸೇವೆಗೆ ಪುರಸ್ಕಾರ’ದ ಫಲಕ ಸ್ವೀಕರಿಸಿದರು.

LEAVE A REPLY

Please enter your comment!
Please enter your name here