ನರಿಮೊಗರು ಗ್ರಾ.ಪಂ.ವ್ಯಾಪ್ತಿಯ ವೀರಮಂಗಲ ಬಿಜೆಪಿ ಬೂತ್ 142ರಲ್ಲಿ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ

0

  • ರಸ್ತೆ ಅಭಿವೃದ್ಧಿಗಳೂ ಅಚ್ಛೇದಿನ್ ಯೋಜನೆಯಾಗಿದೆ – ಮಠಂದೂರು

ಪುತ್ತೂರು : ನರಿಮೊಗರು ಗ್ರಾ.ಪಂ.ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸಂಜೀವ ಮಠಂದೂರುರವರ ರೂ.21.05 ಕೋಟಿ ಅನುದಾನದಲ್ಲಿ ವೀರಮಂಗಲ ಬಿಜೆಪಿ ಬೂತ್ ಸಂಖ್ಯೆ 142ರಲ್ಲಿ ಸುಮಾರು ಒಂದು ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ಕಾರ್ಯಕ್ರಮ ಜ.20ರಂದು ನಡೆಯಿತು.


ರೂ.90 ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿ : ಶಾಂತಿಗೋಡು ಗ್ರಾಮದ ಗಡಿಪಿಲ-ಬಲೆರಾವು-ಸಾರಕುಟೇಲು ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ವಕೀಲ ಮಹಾಬಲೇಶ್ವರ ಭಟ್ ಮತ್ತು ನಿವೃತ್ತ ವಲಯಾರಣ್ಯಾಧಿಕಾರಿ ರಘುನಾಥರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ಸಂಜೀವ ಮಠಂದೂರುರವರು ತೆಂಗಿನ ಕಾಯಿ ಒಡೆದು ಕಾಮಗಾರಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಶಾಸಕರು ಕಳೆದ ೭೫ ವರ್ಷಗಳಲ್ಲಿ ಆಗದ ರಸ್ತೆ ಅಭಿವದ್ಧಿ ಕಾರ್ಯಗಳು ನರೇಂದ್ರ ಮೋದಿ ಸರಕಾರ ಬಂದ ಮೇಲೆ ಆಗುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೂಡ ಸರಕಾರದ ಯೋಜನೆಗಳು ಸಿಗಬೇಕು ಎಂಬ ಯೋಜನೆ ನಮ್ಮದಾಗಿದೆ. ನಿಜವಾದ ಅಚ್ಛೇದಿನ್ ಈಗ ಬರುತ್ತಿದೆ. ಇಂತಹ ರಸ್ತೆ ಅಭಿವೃದ್ಧಿಗಳು ಕೂಡ ಅಚ್ಛೇದಿನ್ ಯೋಜನೆಯಾಗಿದೆ. ಬಿಜೆಪಿ ಸರಕಾರದಿಂದ ಗುಣಮಟ್ಟದ ರಸ್ತೆ ಅಭಿವೃದ್ಧಿ ಆಗುತ್ತಿದೆ. ಸಾರ್ವಜನಿಕರು ರಸ್ತೆ ಕಾಮಗಾರಿಯ ಮೇಲುಸ್ತುವಾರಿ ನೋಡಿಕೊಳ್ಳಬೇಕು. ಆಗ ಗುಣಮಟ್ಟದ ರಸ್ತೆ ನಿರ್ಮಿಸಲು ಸಾಧ್ಯ ಎಂದರು. ಪುತ್ತೂರು ತಾ.ಪಂ. ಮಾಜಿ ಸದಸ್ಯೆ ಯಶೋಧ ಕೆ. ಗೌಡ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ರೈತಮೋರ್ಚಾದ ಸದಸ್ಯ ಬೆಳಿಯಪ್ಪ ಗೌಡ, ಬಿಜೆಪಿ ಹಿರಿಯ ಮುಖಂಡ ಕೇಶವ ಗೌಡ ಗುತ್ತು, ವೀರಮಂಗಲ ಬಿಜೆಪಿ ಬೂತ್ ಅಧ್ಯಕ್ಷ ರವೀಂದ್ರ ಗೌಡ ಕೈಲಾಜೆ, ವೀರಮಂಗಲ ಪಂಚಾಯತ್ ಸದಸ್ಯೆ ವಸಂತಿ ಗಂಡಿ, ಪದ್ಮಪ್ಪ ಆನಾಜೆ, ಬೇಬಿ ಕಾಯರ್‌ಮುಗೇರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

10 ಲಕ್ಷ ವೆಚ್ಚದಲ್ಲ ವೀರಮಂಗಲ ಶಾಲಾ ಕೊಠಡಿ ಇಂಟರ್‌ಲಾಕ್ ಕಾಮಗಾರಿ : ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಹಾಗೂ ಜಿ.ಪಂ.ನ ರೂ.೧೦ ಲಕ್ಷ ಅನುದಾನದಲ್ಲಿ ವೀರಮಂಗಲ ಹಿ.ಪ್ರಾ.ಶಾಲೆಯಲ್ಲಿ ಮುಖ್ಯಗುರುಗಳ ಕೊಠಡಿಗೆ ಟೈಲ್ಸ್ ಮತ್ತು ಶಾಲಾ ಸಭಾಭವನಕ್ಕೆ ಇಂಟರ್‌ಲಾಕ್ ಅಳವಡಿಕೆ ಕಾಮಗಾರಿಗೆ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಶಾಸಕ ಸಂಜೀವ ಮಠಂದೂರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸರಕಾರದ ಅನುದಾನಗಳು ಎಲ್ಲಾ ರೀತಿಯಲ್ಲಿಯೂ ವಿನಿಯೋಗವಾಗಬೇಕು. ಖಾಸಗಿ ಶಾಲೆಯಲ್ಲಿರುವ ವ್ಯವಸ್ಥೆಗಳು ಸರಕಾರಿ ಶಾಲೆಯಲ್ಲಿಯೂ ಇರಬೇಕು. ಸರಕಾರಿ ಶಾಲೆಯಲ್ಲಿ ಯಾವ ಕೊರತೆಯೂ ಇರಬಾರದು. ಸರಕಾರಿ ಶಾಲೆಗಳೂ ಅಭಿವೃದ್ಧಿ ಹೊಂದಬೇಕು ಎಂದು ಹೇಳಿ ಶುಭಹಾರೈಸಿದರು. ನರಿಮೊಗರು ಗ್ರಾ.ಪಂ.ಅಧ್ಯಕ್ಷೆ ವಿದ್ಯಾ ಮಾತನಾಡಿ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿ ಶುಭಹಾರೈಸಿದರು. ಜಿ.ಪಂ.ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಎಸ್‌ಡಿಎಂಸಿ ಅಧ್ಯಕ್ಷೆ ಅನುಪಮಾ, ನರಿಮೊಗರು ಗ್ರಾ.ಪಂ. ಕಾರ್ಯದರ್ಶಿ ಖಲಂದರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಪ್ರಭಾರ ಮುಖ್ಯಗುರು ಹರಿಣಾಕ್ಷಿ ಸ್ವಾಗತಿಸಿ ವಂದಿಸಿದರು. ಶಾಲಾ ೬೦ನೇ ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ, ಎಸ್‌ಡಿಎಂಸಿ ಉಪಾದ್ಯಕ್ಷ ರಝಾಕ್, ಶಿಕ್ಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here