ಭಜನೆಯಿಂದ ಹಿಂದುತ್ವದ ಶಕ್ತಿ ಬೆಳಗಲು ಸಾಧ್ಯ: ಮಾಣಿಲ ಶ್ರೀ

0

ಉಪ್ಪಿನಂಗಡಿ: ಕಾಲ, ಯುಗಗಳು ಎಂದಿಗೂ ಹಾಳಾಗಿಲ್ಲ. ಆದರೆ ಮನುಷ್ಯನ ರೀತಿ- ನೀತಿ, ಆಚಾರ- ವಿಚಾರಗಳು, ಸಂಪ್ರದಾಯ- ಸಂಸ್ಕೃತಿಗಳು ಇಂದು ಹಾಳಾಗಿವೆ. ಭಜನೆಯಿಂದ ಸಂಸ್ಕೃತಿ- ಸಂಸ್ಕಾರಯುತ ಸಮಾಜ ನಿರ್ಮಾಣ ಸಾಧ್ಯವಾಗಲಿದೆ. ಭಜನೆಯ ತಾಳದ ತರಂಗದಿಂದ ಹಿಂದುತ್ವದ ಶಕ್ತಿ ಬೆಳಗಲು ಸಾಧ್ಯ. ಆದ್ದರಿಂದ ಭಜನೆಯನ್ನು ಮನೆ ಮನೆ ತಲುಪಿಸುವ ಕಾರ್ಯವಾಗಬೇಕು ಎಂದು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ತಿಳಿಸಿದರು.

ಪುನರ್‌ನಿರ್ಮಾಣಗೊಂಡ ದುರ್ಗಾಗಿರಿಯ ಶ್ರೀ ದುರ್ಗಾ ಭಜನಾ ಮಂದಿರದ ಲೋಕಾರ್ಪಣೆ ಮತ್ತು ಪ್ರವೇಶೋತ್ಸವ ಕಾರ್ಯಕ್ರಮದಲ್ಲಿ ಗುರುವಾರ ರಾತ್ರಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.


ಯಾರೂ ಈ ಜಗತ್ತಿನಲ್ಲಿ ಶಾಶ್ವತವಲ್ಲ. ಆದ್ದರಿಂದ ಇನ್ನೊಬ್ಬರಲ್ಲಿ ವೈಮನಸ್ಸನ್ನು ಹೊಂದುವ ಮನೋಭಾವ ನಮ್ಮದಾಗಬಾರದು. ಕೆಟ್ಟದರಲ್ಲೂ ಒಳ್ಳೆಯದನ್ನು ನೋಡಲು ಸಾಧ್ಯವಿದೆ. ಆದ್ದರಿಂದ ಎಲ್ಲರನ್ನೂ ಪ್ರೀತಿಸುವ ಮನೋಭಾವ, ಎಲ್ಲರ ಒಳಿತಿಗಾಗಿ ಪ್ರಾರ್ಥಿಸುವ ಗುಣ ನಮ್ಮದಾಗಲಿ ಎಂದರು.


ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಮಾತನಾಡಿ, ಉತ್ತಮ ಸಂಸ್ಕಾರ, ಉತ್ತಮ ದೃಷ್ಟಿ ನಮ್ಮದಾದಾಗ ಮಾತ್ರ ಉತ್ತಮ ಸಮಾಜದ ನಿರ್ಮಾಣ ಸಾಧ್ಯ. ಭಜನಾ ಮಂದಿರಗಳಿಂದ ಉತ್ತಮ ಸಂಸ್ಕಾರಗಳನ್ನು ಕಲಿಯಲು ಸಾಧ್ಯ. ತಾಯಿಯ ಆರಾಧನೆಯಿಂದ ಸಾಂಘಿಕ ಶಕ್ತಿಯ ಉದ್ದೀಪನವಾಗಲಿದೆ. ಭಜನಾ ಮಂದಿರಗಳು ಸಮಾಜಮುಖಿ ಕಾರ್ಯಗಳೊಂದಿಗೆ ಬಾಲ ಸಂಸ್ಕಾರ ಕೇಂದ್ರಗಳೂ ಆಗಬೇಕು. ಇಂತಹ ಕಾರ್ಯಗಳು ಇಲ್ಲಿ ನಿತ್ಯ ನಿರಂತರ ನಡೆಯುವಂತಾಗಬೇಕು ಎಂದು ತಿಳಿಸಿದರು.


ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ ಮಾತನಾಡಿ, ಜಾತಿ ಹಾಗೂ ಪಕ್ಷದಿಂದ ಹಿಂದೂ ಸಮಾಜದ ಒಗ್ಗಟ್ಟಿಂದು ಒಡೆದು ಹೋಗುತ್ತಿದೆ. ನಮ್ಮ ನಂಬಿಕೆ ಮೇಲೆ ಸವಾರಿ ಮಾಡಿದಾಗ ಅದನ್ನು ಪ್ರಶ್ನಿಸಲು, ಅಂತವರಿಗೆ ತಕ್ಕ ಉತ್ತರ ನೀಡಲು ಹಿಂದೂ ಸಮಾಜವಿಂದ ಒಗ್ಗಟ್ಟಾಗಬೇಕಿದೆ. ಭಜನಾ ಮಂದಿರಗಳಿಗೆ ಹಿಂದೂ ಸಮಾಜವನ್ನು ಒಗ್ಗೂಡಿಸುವ ಶಕ್ತಿ ಇದೆ. ಆದ್ದರಿಂದ ಪ್ರತಿಯೋರ್ವರು ಭಜನಾ ಮಂದಿರದಲ್ಲಿ ಒಂದಾಗಬೇಕು. ಭಕ್ತಿ, ಶೃದ್ಧೆಯ ಅರ್ಪಣೆ ಮಾಡಬೇಕು. ಸ್ವಹಿತದ ಪ್ರಾರ್ಥನೆಯೊಂದಿಗೆ ಹಿಂದೂ ಸಮಾಜದ ಒಳಿತಿಗಾಗಿಯೂ ಪ್ರಾರ್ಥಿಸಬೇಕು ಎಂದರು.


ಅಧ್ಯಕ್ಷತೆ ವಹಿಸಿದ್ದ ಧನ್ಯಕುಮಾರ್ ರೈ ಬಿಳಿಯೂರುಗುತ್ತು ಮಾತನಾಡಿ, ದೇವರ ಸಂಕೀರ್ತನೆಯ ಮೂಲಕ ಭಗವಂತನನ್ನು ಬಲು ಬೇಗ ಒಳಿಸಿಕೊಳ್ಳಲು ಸಾಧ್ಯ. ಭಜನಾ ಮಂದಿರದಂತಹ ಸಂಸ್ಕಾರಯುತ ಕೇಂದ್ರದಲ್ಲಿ ಒಗ್ಗೂಡುವುದರಿಂದ ಸಂಸ್ಕಾರಯುತ ಬದುಕು ನಮ್ಮದಾಗಲು ಸಾಧ್ಯವಿದೆ ಎಂದರು.


ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾಚಂದ್ರ ಮುಳಿಯ ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಭಜನಾ ಮಂದಿರದ ಗೌರವಾಧ್ಯಕ್ಷ ವೆಂಕಟ್ರಮಣ ಭಟ್ ಪಾತಾಳ, ಸ್ಥಾಪಕಾಧ್ಯಕ್ಷ ವಿಶ್ವನಾಥ ನಿನ್ನಿಕಲ್ಲ್, ಮಾಜಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಕಂಗ್ವೆ ಉಪಸ್ಥಿತರಿದ್ದರು.

ಭಜನಾ ಮಂದಿರಕ್ಕೆ ದೇಣಿಗೆ ನೀಡಿದವರನ್ನು ಈ ಸಂದರ್ಭ ಗೌರವಿಸಲಾಯಿತು. ಗ್ರಾ.ಪಂ. ಅಧ್ಯಕ್ಷೆ ಉಷಾಚಂದ್ರ ಮುಳಿಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಶೇಖರ ಗೌಂಡತ್ತಿಗೆ, ತಾ.ಪಂ. ಮಾಜಿ ಸದಸ್ಯ ಉಮೇಶ್ ಶೆಣೈ, ಉದ್ಯಮಿ ಚಂದಪ್ಪ ಮೂಲ್ಯ, ಶಾಂತಾರಾಮ ಭಟ್ ಸೂರ್‍ಯಂಬೈಲು ಮತ್ತಿತರರು ಉಪಸ್ಥಿತರಿದ್ದರು.

ಸಂರಕ್ಷಾ, ಪೂಜಾ, ಹಂಸಿನಿ ಪ್ರಾರ್ಥಿಸಿದರು ಸತೀಶ್ ಕುಲಾಲ್ ದಂಪತಿ ಸ್ವಾಮೀಜಿಯವರಿಗೆ ಗೌರವಾರ್ಪಣೆ ಸಲ್ಲಿಸಿದರು. ಶೀನಪ್ಪ ನಾಯ್ಕ ಆರ್ತಿಲ, ಗೋಪಾಲಕೃಷ್ಣ ವರೆಕ್ಕ, ಈಶ್ವರ ಪ್ರಸಾದ ಆರ್ತಿಲ, ಪ್ರದೀಪ್ ಪಾತಾಳ, ಅತಿಥಿಗಳನ್ನು ಗೌರವಿಸಿದರು. ಭಜನಾ ಮಂದಿರದ ಕಾರ್ಯದರ್ಶಿ ಪದ್ಮನಾಭ ಸಂಕೇಶ, ಕೋಶಾಧಿಕಾರಿ ವೆಂಕಟ್ರಮಣ ಭಟ್ ಮುಣಿಕ್ಕಾನ, ಉಪಾಧ್ಯಕ್ಷರುಗಳಾದ ಕೇಶವ ರಂಗಾಜೆ, ವಿಮಲ ಗೋಪಾಲ ಪಾತಾಳ, ಸಹ ಕಾರ್ಯದರ್ಶಿಗಳಾದ ಶೇಖರ ವರೆಕ್ಕ, ಮಾಲತಿ ಗಿರಿಯಪ್ಪ ಬೆತ್ತೋಡಿ, ಶ್ರೀ ದುರ್ಗಾ ಮಾತಾ ಭಜನಾ ಮಂಡಳಿ ಅಧ್ಯಕ್ಷೆ ಅರ್ಚನಾ ಸತೀಶ್ ಬೆತ್ತೋಡಿ, ಶ್ರೀ ದುರ್ಗಾ ಯುವಕ ಮಂಡಲದ ಅಧ್ಯಕ್ಷ ಪವನ್ ಪಾತಾಳ ಮತ್ತಿತರರು ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಭಜನಾ ಮಂದಿರದ ಅಧ್ಯಕ್ಷ ಲೋಕೇಶ್ ಬೆತ್ತೋಡಿ ಸ್ವಾಗತಿಸಿದರು. ಪ್ರಾಂಶುಪಾಲ ಶ್ರೀಧರ ಭಟ್ ವಂದಿಸಿದರು. ಸತೀಶ್ ಹೊಸ್ಮಾರು ಕಾರ್ಯಕ್ರಮ ನಿರೂಪಿಸಿದರು.

ಶ್ರೀ ಮಂದಿರದ ಲೋಕಾರ್ಪಣೆ
ವೇ.ಮೂ. ಕರಾಯ ಹರಿಪ್ರಸಾದ್ ವೈಲಾಯರ ನೇತೃತ್ವದಲ್ಲಿ ಜ.೨೧ರ ಬೆಳಗ್ಗೆ ೯:೧೨ರ ಕುಂಭ ಲಗ್ನ ಶುಭ ಮುಹೂರ್ತದಲ್ಲಿ ಶ್ರೀ ಮಂದಿರದ ಲೋಕಾರ್ಪಣೆ ಮತ್ತು ಪ್ರವೇಶೋತ್ಸವವು ನಡೆಯಿತು. ಅಲ್ಲದೇ, ಚಂಡಿಕಾ ಯಾಗ, ತುಳಸೀ ಪ್ರತಿಷ್ಠೆ, ದ್ವಾರ ಮಹಾಲಕ್ಷ್ಮೀ ಪೂಜೆ, ನವಗ್ರಹ ಪೂಜೆ, ಮಹಾ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿ- ವಿಧಾನಗಳು ನಡೆಯಿತು.

LEAVE A REPLY

Please enter your comment!
Please enter your name here