ಕುಟ್ರುಪಾಡಿ ಗ್ರಾ.ಪಂ.ಸಾಮಾನ್ಯ ಸಭೆ

0

  • ಗ್ರಾ.ಪಂ.ಸಭಾಭವನ ನಿರ್ಮಾಣ ಕಾಮಗಾರಿಯ ಟೆಂಡರ್ ಅವಧಿ ಮುಗಿದರೂ ಪೂರ್ಣಗೊಂಡಿಲ್ಲ ಕಟ್ಟಡ
  • ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆಸೇರಿಸುವಂತೆ ಗ್ರಾ.ಪಂ.ನಿಂದ ಜಿ.ಪಂ. ಸಿ.ಇ.ಒ.ಗೆ ಮನವಿ
  • “ಹೊಸ್ಮಠ-ಬಲ್ಯ” ದೇರಾಜೆ ಪನ್ಯಾಡಿ ತಿರುವು ರಸ್ತೆಯಾಗಿ ನಿರ್ಣಯ

ಕಡಬ: ಕುಟ್ರುಪಾಡಿ ಗ್ರಾ.ಪಂ.ಕಛೇರಿ ಕಟ್ಟಡದ ಮೇಲೆ ನಿರ್ಮಾಣಗೊಳ್ಳುತ್ತಿರುವ ಪಂಚಾಯತ್ ಸಭಾಭವನ ಕಟ್ಟಡ ಟೆಂಡರ್ ಅವಧಿ ಮುಗಿದರೂ ಗುತ್ತಿಗೆದಾರರು ಕಾಮಗಾರಿ ನಡೆಸಲು ನಿರ್ಲಕ್ಷ ವಹಿಸುತ್ತಿರುವ ಹಿನ್ನಲೆಯಲ್ಲಿ ಜ.20ರಂದು ನಡೆದ ಕುಟ್ರುಪಾಡಿ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಿ, ಕಾಮಗಾರಿ ನಡೆಸಲು ವಿಳಂಬ ಮಾಡುತ್ತಿರುವ ಗುತ್ತಿಗೆದಾರರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿ.ಪಂ.ಮುಖ್ಯ ಕಾರ್ಯಾನಿರ್ವಾಹಣಾಧಿಕಾರಿಯವರಿಗೆ ಹಾಗೂ ಇಂಜಿನಿಯರಿಂಗ್ ಇಲಾಖೆಗೆ ಪತ್ರ ಬರೆಯುವ ಬಗ್ಗೆ ತೀರ್ಮಾನ ಕೈಗೊಂಡ ಘಟನೆ ನಡೆದಿದೆ.


ಸಭೆಯು ಗ್ರಾ,ಪಂ. ಅಧ್ಯಕ್ಷ ಮೋಹನ ಕೆರೆಕೋಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು, ಸಭೆಯಲ್ಲಿ ಅಧ್ಯಕ್ಷರು ಮಾತನಾಡಿ, ಕುಟ್ರುಪಾಡಿ ಗ್ರಾಮ ಪಂಚಾಯತ್ 2017-18ನೇ ಸಾಲಿನ ಮುಖ್ಯಮಂತ್ರಿ ಗ್ರಾಮ ವಿಕಾಸ ಕ್ರಿಯಾಯೋಜನೆಯಲ್ಲಿ ಗ್ರಾಮ ಪಂಚಾಯತ್ ಕಛೇರಿ ಮೇಲ್ಗಡೆ ಸಭಾಭವನ ನಿರ್ಮಾಣ ಮಾಡಲು 12 ಲಕ್ಷ ಅನುದಾನವನ್ನು ಕಾದಿರಿಸಲಾಗಿತ್ತು. ಈ ಕಾಮಗಾರಿಯನ್ನು ಹಸನ್ ಎಂಬವರು ಗುತ್ತಿಗೆ ವಹಿಸಿಕೊಂಡಿದ್ದು ಕಾಮಗಾರಿ ಪ್ರಾರಂಬಿಸಿ ಮೂರು ವರ್ಷ ಕಳೆದರೂ ಕಾಮಗಾರಿ ಮಾತ್ರ ಪೂರ್ತಿ ಯಾಗಿಲ್ಲ ,ಈಗಾಗಲೇ ಆಗಿರುವ ಗೋಡೆ ಮತ್ತು ಪಿಲ್ಲರ್ ಗಳಿಗೆ ನೀರು ಸರಿಯಾಗಿ ಹಾಕಿಲ್ಲ, ಈ ಎಲ್ಲ ಅಂಶಗಳಿಂದ ಗುತ್ತಿಗೆದಾರರು ನಿರ್ಲಕ್ಷ ವಹಿಸಿದ್ದಾರೆ, ಗ್ರಾಮಸಭೆಯಲ್ಲಿ ಗ್ರಾಮಸ್ಥರು ಕಟ್ಟಡ ಕಾಮಗಾರಿಯ ಬಗ್ಗೆ ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಅಲ್ಲದೆ ಗ್ರಾಮ ಪಂಚಾಯತ್ ಗೆ ಸಭಾಭವನ ಇಲ್ಲದೆ ಸಾಮಾನ್ಯ ಸಭೆ ಇತರ ಸಭೆಗಳನ್ನು ನಡೆಸಲು ಕಷ್ಟವಾಗಿದೆ ಎಂದು ಹೇಳಿದ ಅವರು ಈ ಬಗ್ಗೆ ಗುತ್ತಿಗೆದಾರರ ವಿರುದ್ದ ಜಿ.ಪಂ.ಮುಖ್ಯ ಕಾರ್ಯಾನಿರ್ವಾಹಣಾಧಿಕಾರಿಯವರಿಗೆ ಹಾಗೂ ಇಂಜಿನಿಯರಿಂಗ್ ಇಲಾಖೆಗೆ ಪತ್ರ ಬರೆಯುವ ಎಂದು ಹೇಳಿದರು, ಈ ಬಗ್ಗೆ ಎಲ್ಲ ಸದಸ್ಯರು ಸಹಮತ ವ್ಯಕ್ತಪಡಿಸಿ ಈ ಬಗ್ಗೆ ನಿರ್ಣಯಿಸಲಾಯಿತು.

ಹೊಸ್ಮಠ ಬಲ್ಯ-ದೇರಾಜೆ ಕ್ರಾಸ್ ಇನ್ನು ಮುಂದೆ ಹೊಸ್ಮಠ-ಬಲ್ಯ ದೇರಾಜೆ ಪನ್ಯಾಡಿ ತಿರುವು ರಸ್ತೆ ಎಂದು ನಾಮ ಫಲಕ ಅಳವಡಿಸುವ ಬಗ್ಗೆ ನಿರ್ಣಯ. ಹೊಸ್ಮಠ ಬಲ್ಯ-ದೇರಾಜೆ ಕ್ರಾಸ್ ಬಗ್ಗೆ ಗ್ರಾಮಸ್ಥರಲ್ಲಿದ್ದ ಗೊಂದಲದ ಸ್ಥಳವನ್ನು ಇನ್ನು ಮುಂದೆ. ಹೊಸ್ಮಠ -ಬಲ್ಯ ದೇರಾಜೆ, ಪನ್ಯಾಡಿ ತಿರುವು ರಸ್ತೆ ಎಂದು ನಾಮ ಫಲಕ ಅಳವಡಿಸುವ ಬಗ್ಗೆ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು. ಬಲ್ಯ ಗ್ರಾಮದ ಹೊಸ್ಮಠ ಬಲ್ಯ-ದೇರಾಜೆ ಕ್ರಾಸ್ ಎಂದು ಕರೆಯುತ್ತಿದ್ದ ಸ್ಥಳದ ಬಗ್ಗೆ ಈಗಾಗಲೇ ಬಲ್ಯ 2ನೇ ವಾರ್ಡ್ ನ ವಾರ್ಡು ಸಭೆಯಲ್ಲಿ ಪರವಿರೋಧ , ಮಾತಿನ ಚಕಮಕಿಗಳು ನಡೆದು ಗೊಂದಲಕ್ಕೆ ಕಾರಣವಾಗಿತ್ತು, ಈ ಸಭೆಯಲ್ಲಿ ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು ಈ ತೀರ್ಮಾನಕ್ಕೆ ಅಲ್ಲಿಯ ಜನ ಒಪ್ಪಿದ್ದರು. ಈ ಹಿನ್ನಲೆಯಲ್ಲಿ ಸಾಮಾನ್ಯ ಸಭೆಯಲ್ಲಿ ವಿಚಾರ ಚರ್ಚೆಗೆ ಬಂದಾಗ ಸದಸ್ಯರು ಚರ್ಚೆ ನಡೆಸಿದರು. ಬಳಿಕ ಒಮ್ಮತದ ನಿರ್ಧಾರಕ್ಕೆ ಬರಲಾಗಿ ಹೊಸ್ಮಠ -ಬಲ್ಯ ದೇರಾಜೆ, ಪನ್ಯಾಡಿ ತಿರುವು ರಸ್ತೆ ಎಂದು ನಾಮ ಫಲಕ ಅಳವಡಿಸುವ ಬಗ್ಗೆ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.

ಗ್ರಾ.ಪಂ.ವ್ಯಾಪ್ತಿಯಲ್ಲಿನ ಅವಧಿ ಮುಗಿದ ಬಾಡಿಗೆ ಅಂಗಡಿ ಕಟ್ಟಡದ ಏಲಂ ಪ್ರಕ್ರಿಯೇಯನ್ನು ಫೆಬ್ರವರಿ ತಿಂಗಳಿನಲ್ಲಿ ನಡೆಸುವುದಾಗಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷೆ ವಾಣಿ ನಾಗೇಶ್ ಬನಾರಿ, ಸದಸ್ಯರಾದ ಸಂತೋಷ್.ಪಿ, ಡಿ.ವಿಜಯ, ಮೀನಾಕ್ಷಿ ಗೌಡ, ಲಕ್ಷ್ಮೀಶ ಬಂಗೇರ, ರಮೇಶ್.ಪಿ, ಸ್ವಪ್ನಾ ಪಿ.ಜೆ, ಯಶೋಧ ಕೆ.ಆರ್., ಕಿರಣ್ ಗೋಗಟೆ, ಮಾಧವಿ, ಭಾಸ್ಕರ ಸನಿಲ, ಮೀನಾಕ್ಷಿ ನೆಲ್ಲ, ಸುಮನ, ಮೋಹಿನಿ, ಸುಧೀರ್ ದೇವಾಡಿಗ, ಮಹಮ್ಮದಾಲಿರವರುಗಳು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಆನಂದ ಗೌಡ ಎ. ಸರಕಾರದ ಸುತ್ತೋಲೆ, ಗ್ರಾಮಸ್ಥರ ಅರ್ಜಿಗಳನ್ನು ಸಭೆಗೆ ಮಂಡಿಸಿದರು. ಸಿಬ್ಬಂದಿಗಳಾದ ಅಂಗು, ಜಿತೇಶ್, ತಾರಾನಾಥ, ಉಮೇಶ್, ಜನಾರ್ದನ ಅವರು ಸಹಕರಿಸಿದರು.

LEAVE A REPLY

Please enter your comment!
Please enter your name here