ದಾನಿ ಮುಹಮ್ಮದ್ ರಾಫಿಹ್ ತಂಙಳ್ ಕೊಡುಗೆ ನೀಡಿದ ತೆಗ್ಗು ಕಟ್ಟಜೀರ್ ಕೊಳವೆಬಾವಿ ಲೋಕಾರ್ಪಣೆ

0

 

ಪುತ್ತೂರು: ಕೆಯ್ಯೂರು ಗ್ರಾಮದ ತೆಗ್ಗು ಕಟ್ಟಜೀರ್‌ನಲ್ಲಿ ಕೊಳವೆಬಾವಿಯನ್ನು ಜ.21 ರಂದು ಉದ್ಘಾಟಿಸಲಾಯಿತು. ಕಟ್ಟಜೀರ್ ಪರಿಸರದಲ್ಲಿದ್ದ ಬೋರ್‌ವೆಲ್‌ನಲ್ಲಿ ಕುಡಿಯಲು ಯೋಗ್ಯವಲ್ಲದ ನೀರು ಬರುತ್ತಿದ್ದ ಹಿನ್ನಲೆಯಲ್ಲಿ ಎಸ್‌ಡಿಪಿಐ ವತಿಯಿಂದ ಕಾಸರಗೋಡು ಮೂಲದ ಉದ್ಯಮಿ, ದಾನಿ ಸಯ್ಯದ್ ಮುಹಮ್ಮದ್ ರಾಫಿಹ್ ತಂಙಳ್‌ರವರಲ್ಲಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರು ಕಟ್ಟಜೀರ್‌ಗೆ ಹೊಸ ಕೊಳವೆಬಾವಿಯನ್ನು ಕೊರೆಸಿ ಅದನ್ನು ಕೊಡುಗೆಯಾಗಿ ನೀಡಿದ್ದು ಬಳಿಕ ಈ ಕೊಳವೆಬಾವಿಯನ್ನು ಕೆಯ್ಯೂರು ಗ್ರಾಪಂಗೆ ಹಸ್ತಾಂತರ ಮಾಡಿದ್ದರು. ಗ್ರಾಪಂ ವತಿಯಿಂದ ಈ ಕೊಳವೆಬಾವಿಗೆ ಪಂಪು ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಈ ಕೊಳವೆಬಾವಿಯಿಂದ ಪರಿಸರದ 34 ಮನೆಗಳಿಗೆ ನೀರು ಸರಬರಾಜು ಆಗುತ್ತಿದೆ. ಕೊಳವೆಬಾವಿಯನ್ನು ಎಸ್‌ಡಿಪಿಐ ತಾಲೂಕು ಅಧ್ಯಕ್ಷ ಇಬ್ರಾಹಿಂ ಸಾಗರ್‌ರವರು ಉದ್ಘಾಟಿಸಿ ಮಾತನಾಡಿ, ಎಲ್ಲಾ ಜೀವರಾಶಿ ಬದುಕಬೇಕಾದರೆ ನೀರು ಅವಶ್ಯಕ. ಇಂತಹ ನೀರಿನ ಮೂಲವನ್ನು ಕೊಡುಗೆಯಾಗಿ ನೀಡಿರುವುದು ದೇವರ ಮೆಚ್ಚುವ ಕೆಲಸವಾಗಿದೆ ಎಂದು ಶುಭ ಹಾರೈಸಿದರು. ಪಂಪು ಸ್ವಿಚ್ ಆನ್ ಮಾಡುವ ಮೂಲಕ ನೀರು ಸರಬರಾಜು ಉದ್ಘಾಟಿಸಿದ ಕೆಯ್ಯೂರು ಗ್ರಾಪಂ ಸದಸ್ಯ ಅಬ್ದುಲ್ ಖಾದರ್ ಮೇರ್ಲರವರು ಮಾತನಾಡಿ, ಕೊಳವೆಬಾವಿ ಕೊರೆಯಿಸಿ ಅದನ್ನು ಕೊಡುಗೆಯಾಗಿ ಪಂಚಾಯತ್‌ಗೆ ನೀಡುವ ಮೂಲಕ ಪರಿಸರದ ಜನರಿಗೆ ನೀರು ಕೊಡುವಂತಹ ಒಳ್ಳೆಯ ಕೆಲಸವನ್ನು ಮಾಡಿರುವ ತಂಙಳ್‌ರವರಿಗೆ ದೇವರ ಅನುಗ್ರಹ ಸದಾ ಇರಲಿ, ಇವರಿಂದ ಇನ್ನಷ್ಟು ಕೊಡುಗೆಗಳು ಸಿಗಲಿ ಎಂದು ಹೇಳಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಜಯಂತಿ ಎಸ್.ಭಂಡಾರಿ, ಅಭಿವೃದ್ಧಿ ಅಧಿಕಾರಿ ಸುಬ್ರಹ್ಮಣ್ಯ ಕೆ.ಎಂ, ಸದಸ್ಯರುಗಳಾದ ಅಮಿತಾ ಎಚ್.ರೈ, ನೆಬಿಸಾ, ಬಟ್ಯಪ್ಪ ರೈ ದೇರ್ಲ, ಎಸ್‌ಡಿಪಿಐ ಕುಂಬ್ರ ಬ್ಲಾಕ್ ಅಧ್ಯಕ್ಷ ಶರೀಫ್ ಕಟ್ಟತ್ತಾರು, ಓಲೆಮುಂಡೋವು ಬೂತ್ ಅಧ್ಯಕ್ಷ ಸಮದ್, ಕಾರ್ಯದರ್ಶಿ ಸಿದ್ದಿಕ್, ಸ್ಥಳೀಯರಾದ ಸಂಶು, ಅಬ್ಬಾಸ್, ಅಶ್ರಫ್, ಜಬ್ಬಾರ್ ಹಾಗೂ ಕಟ್ಟಜೀರ್ ಪರಿಸರದ ಫಲಾನುಭವಿಗಳು, ಎಸ್‌ಡಿಪಿಐ ಕಾರ್ಯಕರ್ತರು ಉಪಸ್ಥಿತರಿದ್ದರು. ಸಿನಾನ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here