ವಿಫ್ರೋ ಆರ್ಥಿಯನ್ ಸುಸ್ಥಿರ ಶಿಕ್ಷಣ ಕಾರ್ಯಕ್ರಮ-ರಾಷ್ಟ್ರಮಟ್ಟದ ಯೋಜನಾ ಕಲಿಕಾ ಸ್ಪರ್ಧೆ:  ಪುಣಚ ಮೂಡಂಬೈಲು ಸ. ಹಿ.ಪ್ರಾ.ಶಾಲೆಗೆ ರಾಷ್ಟ್ರಮಟ್ಟದ ಪ್ರಶಸ್ತಿ

0

ಪುತ್ತೂರು: ವಿಫ್ರೋ ಫೌಂಡೇಶನ್ ನಡೆಸುವ ವಿಫ್ರೋ ಆರ್ಥಿಯನ್ ಶಾಲಾ ಕಾಲೇಜುಗಳಿಗಾಗಿ ಸುಸ್ಥಿರ ಶಿಕ್ಷಣ ಕಾರ್ಯಕ್ರಮ ರಾಷ್ಟ್ರಮಟ್ಟದ ಯೋಜನಾ ಕಲಿಕಾ ಸ್ಪರ್ಧೆಯಲ್ಲಿ 2021-22 ನೇ ಸಾಲಿನ ರಾಷ್ಟ್ರಮಟ್ಟದ ವಿಜೇತರಾಗಿ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಪುಟ್ಟ ಹಳ್ಳಿಯಲ್ಲಿರುವ ಮೂಡಂಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಇಲ್ಲಿನ ಮಕ್ಕಳು ಕನ್ನಡ ಭಾಷೆಯಲ್ಲಿ ಮಾಡಿದ ಯೋಜನಾ ವರದಿಗೆ ೫೦ ಸಾವಿರ ರೂ. ಹಾಗೂ ಪ್ರಶಸ್ತಿ ಪತ್ರದ ಜೊತೆಗೆ ರಾಷ್ಟ್ರಮಟ್ಟದ ಉತ್ತಮ ೨೦ ಶಾಲೆಗಳಲ್ಲೊಂದಾಗಿ ಆಯ್ಕೆಯಾಗಿದ್ದು ಕರ್ನಾಟಕದ ಏಕೈಕ ಶಾಲೆ ಎಂಬ ಗೌರವಕ್ಕೆ ಪಾತ್ರವಾಗಿದೆ. ರಾಷ್ಟ್ರಮಟ್ಟದ ಈ ಸ್ಪರ್ಧೆಯಲ್ಲಿ ಭಾಗವಹಿಸಿ,ದಕ್ಷಿಣ ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ಕನ್ನಡದಲ್ಲೇ ಬರೆದ ಯೋಜನಾ ವರದಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.

ವಿಫ್ರೋ ಆರ್ಥಿಯನ್ ಸ್ಪರ್ಧೆ ಎನ್ನುವುದು ಶಾಲಾ ಕಾಲೇಜುಗಳಿಗಾಗಿ ಸುಸ್ಥಿರ ಶಿಕ್ಷಣ ಕಾರ್ಯಕ್ರಮ ಯೋಜನೆ ಆಧಾರತಿ ಕಲಿಕಾ ಪದ್ದತಿಯ ಈ ಕಾರ್ಯಕ್ರಮದಲ್ಲಿ ಸುಸ್ಥಿರತೆ ಮತ್ತು ತ್ಯಾಜ್ಯ ನಿರ್ವಹಣೆ, ಸುಸ್ಥಿರತೆ ಮತ್ತು ಜೀವ ವೈವಿಧ್ಯ ಮುಖ್ಯವಾಗಿರುತ್ತದೆ. ಪ್ರತಿ ಯೋಜನೆಯಲ್ಲೂ ಕಡ್ಡಾಯ ಮತ್ತು ಆಯ್ಕೆಯ ಚಟುವಟಿಕೆಗಳು ಇರುತ್ತವೆ. ಜತೆಗೆ ಪ್ರಬಂಧ ರಚನೆಯೂ ಇರುತ್ತದೆ. ಸಂದರ್ಶನ, ಕ್ಷೇತ್ರ ಭೇಟಿ ಮಾಡಿ ನೋಡುವ ಚಟುವಟಿಕೆ ಮತ್ತು ತಂಡದ ಕ್ರಿಯಾಶೀಲತೆಗೆ ಅವಕಾಶಗಳು ಇದರಲ್ಲಿ ಇರುತ್ತದೆ. ಶಾಲೆಗಳಲ್ಲಿ ರಾಷ್ಟ್ರೀಯ ಹಸಿರು ಕಾರ್ಯಪಡೆಯ ಭಾಗವಾಗಿ ನಡೆಯುವ ಇಕೋ ಕ್ಲಬ್ ಚಟುವಟಿಕೆಯಾಗಿ ಈ ಯೋಜನೆಯನ್ನು ಶಾಲೆಗಳು ನಡೆಸುತ್ತವೆ.

ಮೂಡಂಬೈಲು ಸರಕಾರಿ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ಬಾರಿ ಸುಸ್ಥಿರತೆ ಮತ್ತು ತ್ಯಾಜ್ಯ ನಿರ್ವಹಣೆಯ ಯೋಜನೆ ಆಯ್ಕೆ ಮಾಡಿಕೊಂಡಿದ್ದರು. ನಮ್ಮ ಕಸ ನಮ್ಮ ಹೊನೆ, ಸ್ವಚ್ಛತೆಗೆ ಹಾಕು ಮಣೆ ಎಂಬ ಶೀರ್ಷಿಕೆಯಲ್ಲಿ ಈ ಯೋಜನೆ ಕೈ ಗೊಂಡಿದ್ದರು. ಮಾರ್ಗದರ್ಶಿ ಪುಸ್ತಕದಲ್ಲಿರುವ ಚಟುವಟಿಕೆಗಳ ಜೊತೆಗೆ ಯೋಜನೆಗೆ ಪೂರಕವಾದ ಕೆಲವು ವಿಶೇಷ ಚಟುವಟಿಕೆಗಳನ್ನು ಶಾಲಾ ತಂಡ ಕೈಗೊಂಡಿತ್ತು.ಹಳೆಯ ಸೀರೆಯಿಂದ ಕಾಲೊರೆಸುವ ಮ್ಯಾಟ್ ತಯಾರಿ, ಬಳಸಿ ಎಸೆಯುವ ಪೆನ್‌ಗಳನ್ನು ಸಂಗ್ರಹಿಸಿ ಅದರಿಂದ ಪೆನ್ ಸ್ಟ್ಯಾಂಡ್ ಮತ್ತು ಹೂದಾನಿ ತಯಾರಿ, ಹಳೆಯ ಪ್ಯಾಂಟ್ ಬಟ್ಟೆಯಿಂದ ಬಹೂಪಯೋಗಿ ಚೀಲ ತಯಾರಿ,ಪುನರ್ಬಳಕೆ ಸಾಧ್ಯವಾಗದ ಪ್ಲಾಸ್ಟಿಕ್‌ನಿಂದ ಇಕೋ ಬ್ರಿಕ್ ತಯಾರಿ, ರವಿಕೆ ಬಟ್ಟೆಯಿಂದ ಹಾರ ತಯಾರಿ,ಹಳೆಯ ಚಿಂದಿ ಬಟ್ಟೆಯಿಂದ ಡಸ್ಟರ್ ತಯಾರಿ, ಪುನರ್ಬಳಕೆಯಾಗುವ ವಸ್ತುಗಳ ಸಂಗ್ರಹ ಮತ್ತು ವಿಂಗಡಣೆ ಎಲೆಕ್ಟ್ರಾನಿಕ್ ವೇಸ್ಟ್ ಸಂಗ್ರಹ, ಹಳೆಯ ಚಿಂದಿ ಪೇಪರ್‌ನಿಂದ ಮತ್ತೆ ಹೊಸ ಪೇಪರ್ ತಯಾರಿ ಹೀಗೆ ಹಲವು ಚಟುವಟಿಕೆಗಳನ್ನು ಮಾಡಲಾಗಿದೆ. ಈ ಯೋಜನಾ ತಯಾರಿಯಲ್ಲಿ ಎಂಟನೆ ತರಗತಿಯ ಆಕಾಶ್, ಕಾರ್ತಿಕ್, ಪ್ರಣಾಮ್, ಪ್ರೀತಂ, ಏಳನೇ ತರಗತಿಯ ಆದಿತ್ಯ ಮತ್ತು ನಿತೇಶ್, ಶಿಕ್ಷಕರಾದ ಶುತಿ ಎನ್, ಮುಖ್ಯ ಶಿಕ್ಷಕ ಅರವಿಂದ್ ಕುಡ್ಲ ಭಾಗವಹಿಸಿದ್ದರು.

ಕರ್ನಾಟಕದ ಏಕೈಕ ಶಾಲೆ ಎಂಬ ಹೆಗ್ಗಳಿಕೆ
ಕಳೆದ ಹತ್ತು ವರ್ಷಗಳಿಂದ ವಿಫ್ರೋ ಸಂಸ್ಥೆ ಈ ಸ್ಪರ್ಧೆ ನಡೆಸುತ್ತಿದೆ. ದಶಕದಿಂದ ೬೦ ಶಾಲೆಗಳು ಭಾಗವಹಿಸಿದ್ದವು.ಇಲ್ಲಿ ಕೆಲವು ಶಾಲೆಗಳನ್ನು ಶಾರ್ಟ್ ಲಿಸ್ಟ್ ಮಾಡಿ ರಾಜ್ಯಮಟ್ಟಕ್ಕೆ ಕಳುಹಿಸಲಾಗುತ್ತದೆ. ಅಲ್ಲಿಂದ ೨೫ ಶಾಲೆಗಳು ರಾಷ್ಟ್ರಮಟ್ಟಕ್ಕೆ ಹೋಗುತ್ತವೆ. ರಾಷ್ಟ್ರಮಟ್ಟದಲ್ಲಿ ೪೦ ಶಾಲೆಗಳನ್ನು ಫೈನಲ್ ಮಾಡಿ ಅದರಲ್ಲಿ ೨೦ ಶಾಲೆಗಳನ್ನು ಬೆಸ್ಟ್ ಶಾಲೆ ಎಂದು ಆಯ್ಕೆ ಮಾಡಲಾಗುತ್ತದೆ. ೪೦ ರ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಮೂಡಂಬೈಲು ಹಾಗೂ ಬಜಪೆಯ ಶಾಲೆ ಇದ್ದು, ಅಂತಿಮ ೨೦ ರ ಪಟ್ಟಿಯಲ್ಲಿ ಮೂಡಂಬೈಲು ಶಾಲೆ ಆಯ್ಕೆಯಾಗಿದೆ. ಆ ಮೂಲಕ ಕರ್ನಾಟಕದ ಏಕೈಕ ಶಾಲೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.

ಈ ಯೋಜನಾ ಕಲಿಕೆಯಿಂದ ಮಕ್ಕಳ ಶಾಲಾ ಕಲಿಕೆಯೂ ಉತ್ತಮವಾಗಿದೆ. ಕಲಿಕಾ ಕೌಶಲಗಳಾದ ಆಲಿಸುವ, ಮಾತನಾಡುವ, ಪ್ರಶ್ನಿಸುವ ಸಂದರ್ಶನ ಮಾಡುವ ಕೌಶಲ ಜತೆಗೆ ಅವಲೋಕನ, ಮಾಹಿತಿ ಸಂಗ್ರಹ, ಅಂಕಿ ಅಂಶಗಳ ವಿಶ್ಲೇಷಣೆ, ವಿಮರ್ಶೆ, ಪರಿಸರ ಪ್ರಜ್ಞೆ, ಸಾಮಾಜಿಕ ಜಾಗೃತಿ ಇವುಗಳು ಬೆಳವಣಿಗೆಯಾಗುತ್ತದೆ. ಕೋವಿಡ್ ಕಾಲದ ಕಲಿಕಾ ನ್ಯೂನತೆಗಳನ್ನು ದಾಟಿ ಮುಂದೆ ಬರಲು ಈ ಯೋಜನೆ ಬಹಳ ಸಹಕಾರಿಯಾಗಿದೆ. ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿ ವರ್ಗದವರು, ಶಿಕ್ಷಕರು, ಮಕ್ಕಳ ಪೋಷಕರ ಸಂಪೂರ್ಣ ಸಹಕಾರದಿಂದ ಇದು ಸಾಧ್ಯವಾಗಿದೆ-ಅರವಿಂದ್ ಕುಡ್ಲ, ಮುಖ್ಯಶಿಕ್ಷಕ

 

LEAVE A REPLY

Please enter your comment!
Please enter your name here