ಶಾಲಾ ಕಟ್ಟಡದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲು ಸಂಬಂಧಪಟ್ಟವರಿಗೆ 10 ದಿನಗಳ ಕಾಲಾವಕಾಶ

0

  • ಭಕ್ತಕೋಡಿ ಶಾಲಾ ಪೋಷಕರ ಸಭೆಯಲ್ಲಿ ತೀರ್ಮಾನ

ಪುತ್ತೂರು: ಶಿಥಿಲಾವಸ್ಥೆಯಲ್ಲಿರುವ ಸರ್ವೆ ಗ್ರಾಮದ ಭಕ್ತಕೋಡಿ ಸರಕಾರಿ ಹಿ.ಪ್ರಾ.ಶಾಲಾ ಕಟ್ಟಡದ ವಿಚಾರದಲ್ಲಿ ಸಂಬಂಧಪಟ್ಟವರು 10 ದಿನಗಳೊಳಗಾಗಿ ಸೂಕ್ತ ನಿರ್ಧಾರ ಕೈಗೊಳ್ಳದೇ ಇದ್ದಲ್ಲಿ ಶಾಲಾ ಕಟ್ಟಡಕ್ಕಾಗಿ ಹೋರಾಟಕ್ಕೆ ಇಳಿಯುವುದಾಗಿ ಭಕ್ತಕೋಡಿ ಶಾಲಾ ಪೋಷಕರ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು. ಸಭೆ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ವಸಂತ ಪೂಜಾರಿ ಕೈಪಂಗಳದೋಳ ಅಧ್ಯಕ್ಷತೆಯಲ್ಲಿ ಜ.21ರಂದು ನಡೆಯಿತು.

ಅಪಾಯಯದ ಕರೆಗಂಟೆ ಬಾರಿಸುತ್ತಿದೆ-ಮೊದೀನ್ ಕುಟ್ಟಿ
ಉದ್ಘಾಟಿಸಿದ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ರಾಜ್ಯಾಧ್ಯಕ್ಷ ಮೊದೀನ್ ಕುಟ್ಟಿ ಮಾತನಾಡಿ ಈ ಶಾಲೆ ಅಪಾಯಯದ ಕರೆಗಂಟೆ ಬಾರಿಸುತ್ತಿದೆ, ಕೊಠಡಿಗಳನ್ನು ಬಂದ್ ಮಾಡುವುದು ಮಾತ್ರ ಪರಿಹಾರವಲ್ಲ. ಬದಲಿ ವ್ಯವಸ್ಥೆ ಬಗ್ಗೆಯೂ ತೀರ್ಮಾನ ಆಗಬೇಕು. ಪೋಷಕರು, ಈ ಭಾಗದ ಗ್ರಾ.ಪಂ ಸದಸ್ಯರು, ಎಸ್‌ಡಿಎಂಸಿಯವರು ಒಗ್ಗಟ್ಟಾಗಿ ಈ ಶಾಲೆಗೆ ವಿಚಾರದಲ್ಲಿ ಆಗಬೇಕಾದ ತುರ್ತು ಕಾರ್ಯಗಳಿಗೆ ಪ್ರಯತ್ನಿಸಬೇಕೆಂದು ಅವರು ಸಲಹೆ ನೀಡಿದರು.

ಶಿಕ್ಷಣ ಇಲಾಖೆ ವಿರುದ್ಧ ಅಸಮಾಧಾನ:
ಶಿಕ್ಷಣ ಇಲಾಖೆ ವಿರುದ್ದ ಪೋಷಕರು ಅಸಮಾಧಾನ ವ್ಯಕ್ತಪಡಿಸಿದರು. ಶಾಲೆ ಈ ಹಂತಕ್ಕೆ ಬಂದು ತಲುಪಿದ್ದರೂ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಇಲ್ಲಿಗೆ ಬರಲು ಪುರುಸೊತ್ತಿಲ್ಲ ಎಂದು ಸಭೆಯಲ್ಲಿದ್ದವರು ಹೇಳಿದರು. ತಮ್ಮ ಇಲಾಖಾ ಕಚೇರಿಗೆ ಒಂದು ಕೋಟಿ ಅನುದಾನದ ಕಟ್ಟಡ ಪಡೆಯಲು ಯಶಸ್ವಿಯಾದ ಶಿಕ್ಷಣಾಧಿಕಾರಿಯವರಿಗೆ ಸರಕಾರಿ ಶಾಲೆಯ ಮಕ್ಕಳಿಗೂ ಒಳ್ಳೆಯ ಕಟ್ಟಡ ಬೇಕೆಂದು ಗೊತ್ತಿಲ್ಲವೇ ಎಂದು ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ರಾಜ್ಯಾಧ್ಯಕ್ಷ ಮೊದೀನ್ ಕುಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ಮಕ್ಕಳ ಹಕ್ಕುಗಳ ಜಿಲ್ಲಾ ಸಮಿತಿ ಸದಸ್ಯೆ ವನಿತಾ ಮಾತನಾಡಿ ಇಲ್ಲಿನ ಶಾಲೆಯ ಸ್ಥಿತಿಯನ್ನು ನೋಡವಾಗ ಮಕ್ಕಳ ಹಕ್ಕುಗಳ ಬೆಲೆ ನೆಲಕಚ್ಚಿರುವುದು ಕಂಡು ಬರುತ್ತಿದೆ. ಇಂತಹ ಪರಿಸ್ಥಿತಿ ಬಂದಿರುವುದು ದುರಂತ ಎಂದು ಹೇಳಿದರು.

ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎಸ್.ಡಿ ಮಾತನಾಡಿ ಗ್ರಾ.ಪಂಗೆ, ಶಿಕ್ಷಣಾಧಿಕಾರಿಗಳಿಗೆ, ಶಾಸಕರಿಗೆ ಹೀಗೆ ಎಲ್ಲರಿಗೂ ಹಿಂದಿನಿಂದಲೂ ಮನವಿ ನೀಡಿದ್ದೇವೆ. ಶಾಲೆಯ ಪರಿಸ್ಥಿತಿ ಬಗ್ಗೆ ಮಾಧ್ಯಮ ವರದಿ ಬಂದ ಬಳಿಕ ಸಿಆರ್‌ಪಿ ಅವರು ಶಾಲಾ ಕೊಠಡಿ ಎದುರು ಹಗ್ಗ ಕಟ್ಟಿ ಹೋಗಿದ್ದು ಆ ಬಳಿಕ ಯಾರೂ ಇತ್ತ ತಿರುಗಿ ನೋಡಿಲ್ಲ, ಇಲ್ಲಿ ಮಕ್ಕಳಿಗೆ ಏನಾದರೂ ಅನಾಹುತ ಆದಲ್ಲಿ ಯಾರು ಹೊಣೆ ಎಂದು ಅವರು ಪ್ರಶ್ನಿಸಿದರು.

ಮುಂಡೂರು ಗ್ರಾ.ಪಂ ಸದಸ್ಯ ಚಂದ್ರಶೇಖರ್ ಎನ್.ಎಸ್.ಡಿ ಮಾತನಾಡಿ ಶಾಲೆಯ ವಿಚಾರದಲ್ಲಿ ಶಾಸಕರಿಗೆ ಮನವಿ ಕೊಟ್ಟಿದ್ದೇವೆ. ಜಿ.ಪಂ ಇಂಜಿನಿಯರ್ ಅವರನ್ನು ಶಾಲೆಗೆ ಭೇಟಿ ನೀಡಲು ಶಾಸಕರು ಸೂಚಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಇಲ್ಲಿ ನಡೆದ ಸುವರ್ಣ ಮಹೋತ್ಸವ ಸಂದರ್ಭದಲ್ಲೇ ಇಲ್ಲಿ ಸಮಸ್ಯೆ ಇದ್ದರೂ ಆ ಸಮಯದಲ್ಲಿ ಯಾರೂ ಮಾತನಾಡಿಲ್ಲ. ಈಗ ತಕ್ಷಣವೇ ದುರಸ್ತಿ ಆಗಬೇಕು ಎಂದು ಹೇಳುವುದು ಅಷ್ಟು ಸಮಂಜಸವಾಗುವುದಿಲ್ಲ ಎಂದು ಹೇಳಿದರು.

ಮುಂಡೂರು ಗ್ರಾ.ಪಂ ಸದಸ್ಯ ಕಮಲೇಶ್ ಎಸ್.ವಿ ಮಾತನಾಡಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಗ್ರಾ.ಪಂನಲ್ಲಿ ಅವಕಾಶವಿಲ್ಲ. ಇದು ಯಾರ ಪರವಾದ ಅಥವಾ ವಿರುದ್ಧವಾದ ಸಂಘರ್ಷವಲ್ಲ. ಶಾಲಾ ಕಟ್ಟಡದ ಸಮಸ್ಯೆಗೆ ಪರಿಹಾರ ಸಿಗಬೇಕೆನ್ನುವುದು ಮಾತ್ರ ನಮ್ಮೆಲ್ಲರ ಬೇಡಿಕೆಯಾಗಿದೆ. ಇಲ್ಲಿನ ಕಟ್ಟಡದ ಸ್ಥಿತಿ ಶೋಚನೀಯವಾದ ಕಾರಣ ತಕ್ಷಣದ ಸ್ಪಂದನೆ ಸಿಗಬೇಕಾಗಿದೆ, ಇಲಾಖೆ, ಜನಪ್ರತಿನಿಧಿಗಳು ಈ ಬಗ್ಗೆ ತುರ್ತು ಗಮನಹರಿಸಬೇಕಾಗಿದೆ ಎಂದು ಹೇಳಿದರು.

ಮುಂಡೂರು ಗ್ರಾ.ಪಂ ಸದಸ್ಯೆ ಕಾವ್ಯ ಕಡ್ಯ ಮಾತನಾಡಿ ಶಾಸಕರು ಮುಂದಿನ ವಾರ ಈ ಭಾಗದಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಬರುವವರಿದ್ದು ಆ ವೇಳೆ ಶಾಲೆಗೆ ಬರಬಹುದು ಎಂದು ಹೇಳಿದರು. ಶಾಲಾ ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಸ್ವಾಗತಿಸಿದರು. ಶಿಕ್ಷಕ ಅನಂತ್ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರ್ವಹಿಸಿದರು.

ಸ್ಪಂದನೆ ಸಿಗದಿದ್ದಲ್ಲಿ ಹೋರಾಟ:
ಸಂಬಂಧಪಟ್ಟವರು ಶಾಲೆಯ ವಿಷಯದಲ್ಲಿ ಏನಾದರೂ ನಿರ್ಧಾರ ತೆಗೆದುಕೊಳ್ಳಲೇಬೇಕು ಎನ್ನುವ ಆಗ್ರಹ ಪೋಷಕರಿಂದ ಕೇಳಿ ಬಂತು. ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುವ ಪರಿಸ್ಥಿತಿ ಬಂದಿರುವುದು ದುರಂತ ಎಂದು ಕೆಲವರು ಹೇಳಿದರು. ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯವಾಗುತ್ತದೆ ಎಂದು ಇನ್ನೂ ಕೆಲ ಪೋಷಕರು ಹೇಳಿದರು. ಪೋಷಕ ಕೃಷ್ಣಪ್ಪ ಎಂಬವರು ಮಾತನಾಡಿ 10 ದಿನದ ಗಡುವು ನೀಡಿದ ಬಳಿಕವೂ ಪರಿಹಾರ ಸಿಗದಿದ್ದಲ್ಲಿ ನಾವೆಲ್ಲಾ ಕೆಲಸಕ್ಕೆ ರಜೆ ಹಾಕಿ ಪ್ರತಿಭಟನೆ ಮಾಡುವ ಎಂದರು. ಪೋಷಕರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

LEAVE A REPLY

Please enter your comment!
Please enter your name here