ಕನ್ವರ್ಷನ್ ಮಾಡಿದ ಜಾಗ ಖರೀದಿಸಿದ ಬಳಿಕವೂ ಆರ್‌ಟಿಸಿಯಲ್ಲಿ ಮೂಲ ಮಾಲೀಕನ ಹೆಸರು ಉಳಿಯುತ್ತದೆ!?

0

  • ಇಲಾಖಾ ಹಂತದಲ್ಲೇ ಸರಿ ಪಡಿಸಲು ಗ್ರಾಮಸಭೆಯಲ್ಲಿ ಆಗ್ರಹ-ಕೆಯ್ಯೂರು ಗ್ರಾಮಸಭೆ

ಪುತ್ತೂರು: ಕನ್ವರ್ಷನ್ ಮಾಡಿದ ಜಾಗವನ್ನು ಖರೀದಿಸಿ ೯-೧೧ ಮಾಡಿದ ಮೇಲೂ ಆರ್‌ಟಿಸಿಯಲ್ಲಿ ಜಾಗದ ಮೂಲ ಮಾಲೀಕನ ಹೆಸರೇ ಉಳಿಯುತ್ತಿದೆ. ಜಾಗ ಖರೀದಿಸಿದನ ಹೆಸರು ಆರ್‌ಟಿಸಿಯಲ್ಲಿ ಬರಬೇಕಿದ್ದರೂ ಇದು ಇಲಾಖಾ ಹಂತದಲ್ಲಿ ಆಗುತ್ತಿಲ್ಲ ಇದರಿಂದ ಜಾಗ ಖರೀದಿ ಮಾಡಿದ ವ್ಯಕ್ತಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಕನ್ವರ್ಷನ್ ಮತ್ತು ೯-೧೧ ಹಂತದಲ್ಲೇ ಈ ಬದಲಾವಣೆ ಇಲಾಖಾ ಹಂತದಲ್ಲಿ ಆಗಬೇಕು, ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಬೇಕು ಎಂದು ಕೆಯ್ಯೂ ಗ್ರಾಮ ಸಭೆಯಲ್ಲಿ ಆಗ್ರಹ ವ್ಯಕ್ತವಾಗಿದೆ. ಸಭೆಯು ಗ್ರಾಪಂ ಅಧ್ಯಕ್ಷೆ ಜಯಂತಿ ಎಸ್.ಭಂಡಾರಿಯವರ ಅಧ್ಯಕ್ಷತೆಯಲ್ಲಿ ಕಾರ್ಮಿಕ ಇಲಾಖೆಯ ಹಿರಿಯ ಕಾರ್ಮಿಕ ನಿರೀಕ್ಷಕ ಗಣಪತಿ ಹೆಗ್ಡೆಯವರ ಮಾಗದರ್ಶನದಲ್ಲಿ ಜ.೨೧ ರಂದು ಕೆಯ್ಯೂರು ಅಂಬೇಡ್ಕರ್ ಭವನದಲ್ಲಿ ನಡೆಯಿತು.


ಕೆಯ್ಯೂರು ಕೆದಂಬಾಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮಾಜಿ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಭಟ್‌ರವರು ವಿಷಯ ಪ್ರಸ್ತಾಪಿಸಿ ನಾವು ಕನ್ವರ್ಷನ್ ಮಾಡಿದ ಕೃಷಿ ಭೂಮಿಯನ್ನು ಖರೀದಿ ಮಾಡುತ್ತೇವೆ. ಬಳಿಕ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಪಂಚಾಯತ್ ಮಟ್ಟದಲ್ಲಿ ೯-೧೧ ಮಾಡುತ್ತೇವೆ. ಹೀಗೆ ಮಾಡಿದ ಬಳಿಕವೂ ಜಾಗದ ಆರ್‌ಟಿಸಿಯಲ್ಲಿ ನಾವು ಯಾರಿಂದ ಜಾಗವನ್ನು ಖರೀದಿ ಮಾಡಿದ್ದೇವೋ ಅವರ ಹೆಸರೇ ಉಳಿಯುತ್ತಿದೆ. ಕಂದಾಯ ಇಲಾಖಾ ಹಂತದಲ್ಲಿ ಹೆಸರು ಬದಲಾವಣೆ ಆಗಬೇಕಿದ್ದರೂ ಆಗುತ್ತಿಲ್ಲ ಈ ಬಗ್ಗೆ ಇಲಾಖಾಧಿಕಾರಿಯವರಲ್ಲಿ ಕೇಳಿದರೆ ನೀವು ಅರ್ಜಿ ಕೊಡಿ ಸರಿ ಮಾಡಿ ಕೊಡುತ್ತೇವೆ ಎಂದು ಹೇಳುತ್ತಾರೆ. ಕನ್ವರ್ಷನ್ ಮತ್ತು ೯-೧೧ ಇಲಾಖಾ ಮಟ್ಟದಲ್ಲಿ ಆಗುತ್ತಿರುವುದರಿಂದ ಈ ಹಂತದಲ್ಲೇ ಆರ್‌ಟಿಸಿಯಲ್ಲಿ ಹೆಸರು ಬದಲಾವಣೆ ಆಗಬೇಕು ಆದರೆ ಆಗುತ್ತಿಲ್ಲ ಇದು ಯಾಕೆ? ಎಂದು ಪ್ರಶ್ನಿಸಿದ ಅವರು ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಗ್ರಾಮಕರಣಿಕರಾದ ಸ್ವಾತಿಯವರು, ಇದು ಸರಕಾರಿ ಮಟ್ಟದಲ್ಲೇ ಆಗಬೇಕು ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳುವುದು ಎಂದು ನಿರ್ಣಯಿಸಲಾಯಿತು.

ತಾಲೂಕುಮಟ್ಟದ ಅಧಿಕಾರಿಗಳು ಭಾಗವಹಿಸಬೇಕು
ಗ್ರಾಮಸಭೆಯಲ್ಲಿ ಕೇವಲ ಗ್ರಾಮಮಟ್ಟದಲ್ಲಿ ಅಧಿಕಾರಿಗಳು ಭಾಗವಹಿಸುವುದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಗ್ರಾಮಮಟ್ಟದ ಅಧಿಕಾರಿಗಳು ಪ್ರತಿದಿನ ಗ್ರಾಮಸ್ಥರಿಗೆ ಸಿಗುತ್ತಿರುವವರು ಆಗಿರುವುದರಿಂದ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಬೇಕು ಎಂದು ಸದಾಶಿವ ಭಟ್ ಆಗ್ರಹಿಸಿದರು. ಗ್ರಾಮಸಭೆ ಎನ್ನುವುದು ಕೇವಲ ಕಾಟಾಚಾರದ ಸಭೆಗಳಾಗುತ್ತಿರುವುದು ಸರಿಯಲ್ಲ. ಗ್ರಾಮಸ್ಥರ ಪ್ರಶ್ನೆ, ಸಮಸ್ಯೆಗಳಿಗೆ ಸರಿಯಾದ ಮಾಹಿತಿ ನೀಡುವ ಅಧಿಕಾರಿಗಳ ಅವಶ್ಯಕತೆ ಇದೆ ಎಂದು ತಿಳಿಸಿದರು. ಅಧಿಕಾರಿಗಳು ಮಾಹಿತಿ ಕೊಟ್ಟು ಸಭೆಯಿಂದ ಎದ್ದು ಹೋಗುತ್ತಿರುವುದು ಸರಿಯಾದ ಕ್ರಮವಲ್ಲ, ಅಧಿಕಾರಿಗಳು ಸಭೆಯ ಕೊನೆಯ ತನಕ ಇರಬೇಕು, ಮಾಹಿತಿ ಕೊಟ್ಟು ಅರ್ಧದಲ್ಲೇ ಎದ್ದು ಹೋಗುತ್ತಿದ್ದರೆ ಸಭೆ ಸಂಗೀತ ಕುರ್ಚಿ ಸ್ಪರ್ಧೆಯಂತೆ ಆಗುತ್ತದೆ. ಇದು ಸರಿಯಲ್ಲ ಈ ಬಗ್ಗೆ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಮಕೃಷ್ಣ ಭಟ್ ತಿಳಿಸಿದರು.

ಕಾಡುಕೋಣಗಳ ಹಾವಳಿ ಜಾಸ್ತಿಯಾಗುತ್ತಿದೆ
ಕೆಯ್ಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಡುಕೋಣಗಳ ಹಾವಳಿ ಜಾಸ್ತಿಯಾಗುತ್ತಿದೆ. ಹಗಲು ಹೊತ್ತಿನಲ್ಲೇ ಕಾಡುಕೋಣಗಳು ಕೃಷಿಗೆ ಹಾನಿ ಮಾಡುತ್ತಿವೆ. ಕಣಿಯಾರು ರಕ್ಷಿತಾರಣ್ಯ ಪ್ರದೇಶ ಸೇರಿದಂತೆ ಹಲವು ಕಡೆಗಳಲ್ಲಿ ಕಾಡುಕೋಣಗಳ ಹಿಂಡು ಇದ್ದು ಇದರಿಂದ ಕೃಷಿಕನಿಗೆ ಮತ್ತು ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಒಂದು ಕಡೆಯಲ್ಲಿ ಕಾಡುಕೋಣಗಳ ಹಾವಳಿಯಾದರೆ ಇನ್ನೊಂದು ಕಡೆಯಲ್ಲಿ ಮಂಗಗಳ ಉಪಟಳ ಕೂಡ ಜಾಸ್ತಿಯಾಗುತ್ತಿದ್ದು ಒಟ್ಟಿನಲ್ಲಿ ಕೃಷಿಕನ ಸಮಸ್ಯೆಯನ್ನು ಕೇಳುವವರೇ ಇಲ್ಲದಾಗಿದೆ. ಈ ಬಗ್ಗೆ ಅರಣ್ಯ ಇಲಾಖಾ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸದಾಶಿವ ಭಟ್ ತಿಳಿಸಿದರು.

ತೀರ್ವೆ ಹೆಚ್ಚಿಸಿ
ಕೆಯ್ಯೂರು ಗ್ರಾಮದಲ್ಲಿ ಒಟ್ಟು ೧೨೬೦೦ ರೂ.ಮಾತ್ರ ತೀರ್ವೆ ಸಂಗ್ರಹವಾಗುತ್ತಿದೆ. ಇದು ಎಲ್ಲಿಗೂ ಸಾಲದು. ಎಕರೆಗೆ ಸರಕಾರಿ ತೀರ್ವೆ ಹೆಚ್ಚಿಸಬೇಕು, ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಬೇಕು ಎಂದು ರಾಮಕೃಷ್ಣ ಭಟ್ ತಿಳಿಸಿದರು. ಅದರೆಂತೆ ನಿರ್ಣಯ ಕೈಗೊಳ್ಳಲಾಯಿತು.

ಸ್ಕಾಲರ್‌ಶಿಫ್ ಮಾಹಿತಿ ಶಾಲೆಗಳಿಗೂ ಕೊಡಿ
ಮೆಟ್ರಿಕ್ ಪೂರ್ವ ಮತ್ತು ಇತರ ಸ್ಕಾಲರ್‌ಶಿಫ್‌ಗಳನ್ನು ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗಿರುವುದರಿಂದ ಯಾವ ಮಕ್ಕಳಿಗೆ ಸ್ಕಾಲರ್‌ಶಿಫ್ ಮಂಜೂರುಗೊಂಡಿದೆ ಮತ್ತು ಯಾವ ಮಕ್ಕಳು ಸ್ಕಾಲರ್‌ಶಿಫ್‌ಗೆ ಆಯ್ಕೆಯಾಗಿದ್ದಾರೆ ಎಂಬ ಬಗ್ಗೆ ಶಾಲೆಗಳಿಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಪೋಷಕರು ಶಾಲಾ ಶಿಕ್ಷಕರ ಹತ್ತಿರ ಈ ಬಗ್ಗೆ ವಿಚಾರಿಸುತ್ತಾರೆ ಆದ್ದರಿಂದ ಸ್ಕಾಲರ್‌ಶಿಫ್ ಮಂಜೂರುಗೊಂಡಿರುವ ಮಕ್ಕಳ ಮಾಹಿತಿಯ ಒಂದು ಪ್ರತಿಯನ್ನು ಇಲಾಖೆಯಿಂದ ಶಾಲೆಗಳಿಗೆ ಕಳುಹಿಸಿಕೊಟ್ಟರೆ ಅಥವಾ ಬಿಇಒ ಕಛೇರಿಗೆ ಕಳುಹಿಸಿದರೆ ಉತ್ತಮ ಎಂದು ಕೆಯ್ಯೂರು ಕೆಪಿಎಸ್‌ನ ಪ್ರಾಂಶುಪಾಲ ಆನಂದ್ ಮತ್ತು ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ.ಎಸ್ ತಿಳಿಸಿದರು. ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಆಟದ ಮೈದಾನದ ಬದಿಯಲ್ಲಿ ವಿದ್ಯುತ್ ಕಂಬ ಹಾದು ಹೋಗಿದ್ದು ಇದನ್ನು ತೆರವು ಮಾಡಿಕೊಡುವಂತೆ ಪ್ರಾಂಶುಪಾಲ ಆನಂದ್‌ರವರು ತಿಳಿಸಿದರು. ಇದಕ್ಕೆ ಉತ್ತರಿಸಿದ ಮೆಸ್ಕಾಂ ಜೆಇ ನಿತ್ಯಾನಂದ ತೆಂಡೂಲ್ಕರ್ ತೆರವು ಮಾಡುವ ಕೆಲಸ ನಡೆಯುತ್ತಿದೆ ಎಂದರು. ನಿತ್ಯಾನಂದ ತೆಂಡೂಲ್ಕರ್‌ರವರು ಸಾರ್ವಜನಿಕರ ಬೇಡಿಕೆಗಳಿಗೆ ಶೀಘ್ರ ಸ್ಪಂದನೆ ನೀಡುತ್ತಿದ್ದಾರೆ. ಓರ್ವ ಉತ್ತಮ ಅಧಿಕಾರಿಯಾಗಿದ್ದಾರೆ ಎಂದು ಅವರಿಗೆ ಸಭೆಯಿಂದ ಕಿಟ್ಟ ಅಜಿಲ ಕಣಿಯಾರು, ಸದಾಶಿವ ಭಟ್ ಅಭಿನಂದನೆ ಸಲ್ಲಿಸಿದರು.

ಮಧುವನ ಕೇಂದ್ರ ಪಾಳು ಬಿದ್ದಿದೆ
ಕೆಯ್ಯೂರು ಅಂಬೇಡ್ಕರ್ ಭವನದ ಸಮೀಪದಲ್ಲೇ ಮಧುವನ ಕೇಂದ್ರ ಇದ್ದು ಇಲ್ಲಿರುವ ಸರಕಾರಿ ಕಟ್ಟಡ ಯಾವುದೇ ಉಪಯೋಗವಿಲ್ಲ ಪಾಳು ಬಿದ್ದಿದೆ ಆದ್ದರಿಂದ ಇದನ್ನು ಪಂಚಾಯತ್‌ಗೆ ಹಸ್ತಾಂತರ ಮಾಡುವಂತೆ ಇಲಾಖೆಗೆ ಬರೆದುಕೊಳ್ಳುವ ಎಂದು ತಾಪಂ ಮಾಜಿ ಸದಸ್ಯೆ ಭವಾನಿ ಚಿದಾನಂದ್ ತಿಳಿಸಿದರು. ಇದರಲ್ಲಿ ಮಕ್ಕಳಿಗೆ ಟ್ಯೂಷನ್ ಕೊಡಬಹುದು ಅಥವಾ ಗ್ರಂಥಾಲಯ ಮಾಡಬಹುದು ಎಂದು ಅವರು ತಿಳಿಸಿದರು.

ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಬ್ರಹ್ಮಣ್ಯ ಕೆ.ಎಂ ಗ್ರಾಪಂ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಗಿರಿಜಾ ಕೆ, ಸದಸ್ಯರುಗಳಾದ ಅಬ್ದುಲ್ ಖಾದರ್ ಮೇರ್ಲ, ಜಯಂತ ಪೂಜಾರಿ ಕೆಂಗುಡೇಲು, ತಾರಾನಾಥ ಕಂಪ, ಶರತ್ ಕುಮಾರ್ ಮಾಡಾವು, ವಿಜಯ ಕುಮಾರ್ ಸಣಂಗಳ, ಬಟ್ಯಪ್ಪ ರೈ ದೇರ್ಲ, ಶೇಷಪ್ಪ ದೇರ್ಲ, ಸುಮಿತ್ರಾ ಪಲ್ಲತ್ತಡ್ಕ, ಅಮಿತಾ ಎಚ್.ರೈ, ಸುಭಾಷಿಣಿ, ಮೀನಾಕ್ಷಿ ವಿ.ರೈ,ನೆಬಿಸಾ, ಹರಿಣಾಕ್ಷಿ ಹಾಗೂ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಗ್ರಾಪಂ ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಗ್ರಾಪಂ ವರದಿ ಮಂಡಿಸಿ, ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಶಿವಪ್ರಸಾದ್, ರಾಕೇಶ್, ಮಾಲತಿ, ಜ್ಯೋತಿ, ಧರ್ಮಣ್ಣ ಸಹಕರಿಸಿದ್ದರು.

LEAVE A REPLY

Please enter your comment!
Please enter your name here