ಕೊಳ್ತಿಗೆ: ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವದ ಸಂಭ್ರಮ, ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ

0

ಪುತ್ತೂರು : ಕೊಳ್ತಿಗೆ ಗ್ರಾಮದ ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ಜ. 20ರಿಂದ ಆರಂಭಗೊಂಡಿದ್ದು, ಜ. 23ರ ವರೆಗೆ ವಿಜೃಂಭಣೆಯಿಂದ ಜರುಗಿತು. ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಜಾತ್ರೋತ್ಸವ, ವೈಧಿಕ ಕಾರ್ಯಕ್ರಮಗಳು ನಡೆಯಿತು.

ಜ. 20ರಂದು ಬೆಳಿಗ್ಗೆ ಉಗ್ರಾಣ ಮುಹೂರ್ತ, ಭಕ್ತಾದಿಗಳಿಂದ ಹಸಿರು ಹೊರೆ ಕಾಣಿಕೆ ಸಮರ್ಪಣೆ ನಡೆಯಿತು. ಜ. 21ರಂದು ಬೆಳಿಗ್ಗೆ ಆಶ್ಲೇಷ ಬಲಿ ಪೂಜೆ, ನಾಗನ ಕಟ್ಟೆಯಲ್ಲಿ ಕಲಶಾಭಿಷೇಕ, ತಂಬಿಲ ಸೇವೆ, ಶ್ರೀ ಮಹಾವಿಷ್ಣು ಆರಾಧನೆ ನಡೆದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.


ಸಂಜೆ ಸ್ಪಂದನಾ ಜ್ಞಾನ ವಿಕಾಸ ಪಾಂಬಾರು, ಆದಿಶಕ್ತಿ ಭಜನಾ ಮಂಡಲಿ ಪೆರ್ಲಂಪಾಡಿ, ವಾಗ್ಧೇವಿ ಮಹಿಳಾ ಭಜನಾ ಮಂಡಲಿ ಕಂಟ್ರಮಜಲು, ಮರಾಠಿ ಸಮಾಜ ಸೇವಾ ಸಂಘ ಕುಣಿತ ಭಜನಾ ತಂಡ ಕೊಳ್ತಿಗೆ-ಪೆರ್ಲಂಪಾಡಿ ಇವರಿಂದ ಭಜನೆ ಮತ್ತು ಕುಣಿತ ಭಜನೆ ನಡೆಯಿತು.

ಸಂಜೆ ದುಗ್ಗಳದಿಂದ ಶ್ರೀ ಉಳ್ಳಾಕ್ಲು ದೈವದ ಭಂಡಾರವು ನಾಲಕದಿಂದ ಶ್ರೀ ರಾಜನ್ ದೈವ (ಶಿರಾಡಿ)ದ ಭಂಡಾರವು ಹೊರಟು ಶ್ರೀ ದೇವರ ಸನ್ನಿಧಿಗೆ ಆಗಮಿಸಿ, ರಾತ್ರಿ ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ಉತ್ಸವ, ಪಲ್ಲಕ್ಕಿ ಉತ್ಸವ, ಕಟ್ಟೆ ಪೂಜೆ, ಅಶ್ವತ್ಥ ಕಟ್ಟೆ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.


ಜ.22 ರಂದು ಬೆಳಿಗ್ಗೆ ಮಹಾಗಣಪತಿಗೆ ಹೋಮ, ಕಲಶಪೂಜೆ, ಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಮಧ್ಯಾಹ್ನ ಶ್ರೀ ದೇವರಿಗೆ ಕಲಶಾಭಿಷೇಕ ಮಹಾಪೂಜೆ, ವೈಧಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.

ಅನ್ನಸಂತರ್ಪಣೆ ಬಳಿಕ ಇರ್ವೆರು ಉಳ್ಳಾಕುಳುರವರ ಭಂಡಾರ ದುಗ್ಗಳಕ್ಕೆ ನಿರ್ಗಮನ ಕಾರ್ಯಕ್ರಮ ನಡೆಯಿತು. ರಾತ್ರಿ ರಂಗಪೂಜೆ, ವ್ಯಾಘ್ರ ಚಾಮುಂಡಿ, ವಾರಾಹಿ ದೈವದ ನೇಮ, ಕಾಣಿಕೆ ಹರಕೆ ಸಮರ್ಪಣೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಜ.23ರಂದು ಬೆಳಿಗ್ಗೆ ಶ್ರೀ ರಕ್ತೇಶ್ವರಿ, ಧೂಮ್ರ ಧೂಮಾವತಿ ಮತ್ತು ಶಿರಾಡಿ ದೈವಗಳ ನೇಮ ನಡಾವಳಿ, ಕಾಣಿಕೆ ಹರಕೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.

ಸಾವಿರಾರು ಭಕ್ತಾದಿಗಳು ಭಾಗಿ: ಶ್ರೀ ಕ್ಷೇತ್ರದ ವರ್ಷಾವಧಿ ಜಾತ್ರೋತ್ಸವದಲ್ಲಿ ಊರ ಪರ ಊರ ಸಾವಿರಾರು ಭಕ್ತರು ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು. ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀ ನೇಮಿರಾಜ ಪಾಂಬಾರು, ಉತ್ಸವ ಸಮಿತಿ ಅಧ್ಯಕ್ಷ ಶ್ರೀ ತೀರ್ಥಾನಂದ ಗೌಡ ದುಗ್ಗಳ, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಶ್ರೀ ಜಯರಾಮ ಬಡೆಕಿಲ್ಲಾಯ-ಪ್ರಧಾನ ಅರ್ಚಕರು, ಶ್ರೀ ಕೆ ಆರ್ ಲಕ್ಷ್ಮಣ ಗೌಡ ಕುಂಟಿಕಾನ ಸ್ಥಳಮನೆ, ಶ್ರೀ ಮುರಲಿಕೃಷ್ಣ ಸಿದ್ದಮೂಲೆ, ಶ್ರೀ ಸುಧೀರ್ ಕಟ್ಟಪುಣಿ, ಶ್ರೀ ಪುಷ್ಪರಾಜ ರೈ ಕೆ ಕಲಾಯಿ, ಶ್ರೀ ನಾರಾಯಣ ನಾಯ್ಕ ಮಾಲೆತ್ತೋಡಿ, ಶ್ರೀಮತಿ ಯಶೋದಾ ಜಿ ಭಟ್ ಎಕ್ಕಡ್ಕ, ಶ್ರೀಮತಿ ಸರೋಜಿನಿ ಎಂ ಮೇರಡ್ಕ, ಉಪ ಸಮಿತಿಯ ಸರ್ವ ಸದಸ್ಯರುಗಳು ಹಾಗೂ 1 ಕವಳೆ, 4 ಸ್ಥಳಮನೆ, 16 ಬಾರಿಕೆ ಮನೆತನಗಳ ಮುಖ್ಯಸ್ಥರು, ಊರಿನ ಸಮಸ್ತ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here