ಜ.26 ಪ್ರಜಾಪ್ರಭುತ್ವ ದಿನ-ನಮ್ಮಿಂದ ನಮಗಾಗಿ ನಮ್ಮದೇ ಆಡಳಿತದ ದಿನ

0

  • ಬನ್ನಿ ಎದ್ದೇಳಿ, ಲಂಚ, ಭ್ರಷ್ಟಾಚಾರ ದಹಿಸೋಣ ನಿಜವಾದ ಸ್ವಾತಂತ್ಯ ಪಡೆಯೋಣ
  • ಪಕ್ಷ, ಜಾತಿ, ಧರ್ಮ, ಅಧಿಕಾರ, ಹಣಕ್ಕೆ ಮಾರಿಕೊಳ್ಳದೆ-ಜನಸ್ವಾತಂತ್ರ್ಯದತ್ತ ಹೆಜ್ಜೆಹಾಕೋಣ
  • ಜನಪ್ರತಿನಿಧಿ, ಸರಕಾರ, ಇಲಾಖೆಗಳು ನಮ್ಮ ಸೇವೆಗಾಗಿ ಎಂದಾದರೆ ಲಂಚ ಭ್ರಷ್ಟಾಚಾರ ಯಾಕೆ?

ನಮ್ಮ ದೇಶದಲ್ಲಿ, ರಾಜ್ಯದಲ್ಲಿ, ಊರಿನಲ್ಲಿ ಯಾವುದೇ ಸರಕಾರ ಬಂದರೂ ಲಂಚ ಭ್ರಷ್ಟಾಚಾರ ನಿಲ್ಲುವುದಿಲ್ಲ. ಜನರ ಶೋಷಣೆ ತಪ್ಪುವುದಿಲ್ಲ ಎಂದು ಎಲ್ಲರೂ ಹೇಳುತ್ತಾರೆ ಯಾಕೆ? ಪ್ರಜಾಪ್ರಭುತ್ವದ ಆಡಳಿತವಿದ್ದರೂ ನಾವು ಗುಲಾಮರಂತೆ ಇರುವುದು ಅದಕ್ಕೆ ಕಾರಣ ಎಂದು ಹೇಳಬಯಸುತ್ತೇನೆ. ಅದು ಅರ್ಥವಾಗಬೇಕಾದರೆ ನಮ್ಮ ದೇಶದ ಸ್ವಾತಂತ್ರಪೂರ್ವದ ಇತಿಹಾಸವನ್ನು ತಿಳಿದುಕೊಳ್ಳಬೇಕು. 1947 ಆ.15ರ ಹಿಂದೆ ನಾವು ಭಾರತೀಯರು ಎಂದೂ ಸ್ವತಂತ್ರರಾಗಿರಲಿಲ್ಲ. ಆಡಳಿತದಲ್ಲಿ ನಮ್ಮ ಪಾಲು, ಹೇಳಿಕೆ ಇರಲಿಲ್ಲ. ಶತಶತಮಾನಗಳ ಕಾಲ ರಾಜರುಗಳ, ಸಾಮಂತರುಗಳ, ಜಮೀನ್ದಾರರ, ದಬ್ಬಾಳಿಕೆದಾರರ ನಂತರ ಬ್ರಿಟೀಷರ ಗುಲಾಮರಾಗಿಯೇ ಬಾಳಿದವರು. ಜಾತಿ, ಧರ್ಮವಾರು ಮೇಲು ಕೀಳೆಂಬ ಶೋಷಣೆಯಲ್ಲಿ ಬದುಕಿದವರು. ಯಾಕೆಂದರೆ ಅಂದಿನ ಕಾಲದಲ್ಲಿ ಭೂಮಿಯ, ಊರಿನ ಎಲ್ಲಾ ಸಂಪತ್ತಿನ ಒಡೆತನ, ಜನರ ಒಡೆತನವೂ ರಾಜರುಗಳದಾಗಿತ್ತು. 1947ರ ಆ.15 ದೇಶಕ್ಕೆ ಬ್ರಿಟೀಷರ ಆಡಳಿತದಿಂದ ಸ್ವಾತಂತ್ರ ಸಿಕ್ಕಿದರೂ ಜನರಿಗೆ ಆಡಳಿತ ಸಿಕ್ಕಿರಲಿಲ್ಲ. 1950 ಜ.26 ಪ್ರಜಾಪ್ರಭುತ್ವದ ದಿನವಾಗಿ ಘೋಷಣೆಯಾಗಿ ನಮ್ಮಿಂದ ನಾವೇ ನಮಗಾಗಿ ಆಡಳಿತ ನಡೆಸುವ ಅಧಿಕಾರ ಸಿಕ್ಕಿದ ಚರಿತ್ರಾರ್ಹ ದಿನ. ಗುಲಾಮಗಿರಿ ಇಲ್ಲದ, ಯಾವುದೇ ರಾಜರುಗಳ ಹಂಗಿಲ್ಲದೆ ನಮಗೆ ಬೇಕಾದ ಆಡಳಿತವನ್ನು ಓಟಿನ ಮೂಲಕ ಆಯ್ಕೆ ಮಾಡುವ ಹಕ್ಕನ್ನು ನೀಡಿದ, ದೇಶದ ಪ್ರತಿಯೊಬ್ಬ ನಾಗರಿಕನಿಗೂ ಜಾತಿ, ಧರ್ಮ, ಬಡವ, ಶ್ರೀಮಂತ, ಅಧಿಕಾರಿ, ದಿನಕೂಲಿಯವ, ಅಕ್ಷರಸ್ಥ, ಅನಕ್ಷರಸ್ಥ ಎಂದು ನೋಡದೆ ಸಮಾನ ಅವಕಾಶ, ಹಕ್ಕು ನೀಡಿದ ಮಹತ್ವದ ದಿನ. ಅಂದರೆ ದೇಶದಲ್ಲಿ ಪ್ರಧಾನಿ ಮೋದೀಜಿಯವರಿಗೂ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೂ, ಮುಖ್ಯಮಂತ್ರಿ ಬೊಮ್ಮಾಯಿಯವರಿಗೂ, ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯರಿಗೂ, ಕುಮಾರಸ್ವಾಮಿಯವರಿಗೂ, ಯಾವುದೇ ಪಕ್ಷದ ಕಾರ್‍ಯಕರ್ತನಿಗೂ, ಯಾವುದೇ ಪಕ್ಷವಿಲ್ಲದವನಿಗೂ ವೋಟಿನ ಹಕ್ಕು ಒಂದೇ ಆಗಿರುತ್ತದೆ.

ದೇಶದ ಶ್ರೀಮಂತ ವ್ಯಕ್ತಿ ಅಂಬಾನಿಗೂ, ದೇಶದ ಅತ್ಯಂತ ಬಡವ ವ್ಯಕ್ತಿಗೂ, ರಾಷ್ಟ್ರಪತಿಯವರಿಗೂ, ಜಿಲ್ಲಾಧಿಕಾರಿಯವರಿಗೂ, ದಿನನಿತ್ಯ ದುಡಿಯುವ ರಿಕ್ಷಾ ಚಾಲಕರಿಗೂ ಓಟಿನ ಹಕ್ಕು ಒಂದೇ ಆಗಿರುತ್ತದೆ. ಶಾಸಕರಾಗುವ, ಮಂತ್ರಿಗಳಾಗುವ, ಮುಖ್ಯಮಂತ್ರಿಯಾಗುವ, ದೇಶದ ಪ್ರಧಾನಿ, ರಾಷ್ಟ್ರಪತಿಯೂ ಆಗುವ ಅವಕಾಶ ಎಲ್ಲರಿಗೂ ಇದೆ. ಜನರ ಓಟು ಸಿಕ್ಕಿದರೆ ಯಾರೂ ಆಗಬಹುದು. ಜನರು ಓಟಿನ ಮುಖಾಂತರ ಆಯ್ಕೆ ಮಾಡಿದರೆ ಪಕ್ಷಗಳು, ಪಕ್ಷವಿಲ್ಲ ದವರೂ ಗೆಲ್ಲುತ್ತಾರೆ. ಇಲ್ಲದಿದ್ದರೆ ಎಷ್ಟೇ ಪ್ರಭಾವಿ ವ್ಯಕ್ತಿಯಾದರೂ ಸೋಲುತ್ತಾರೆ. ಅಂದರೆ ನಾವು ರಾಜರುಗಳು, ನಮ್ಮ ಸೇವೆಗಾಗಿ ಜನಪ್ರತಿನಿಧಿಗಳ ಆಯ್ಕೆಯಾಗುತ್ತದೆ. ನಮ್ಮ ಜನಪ್ರತಿನಿಧಿ ನಮ್ಮ ರಾಜನಲ್ಲ. ನಮ್ಮ ಸೇವೆಗಾಗಿ ಇರುವ ಪ್ರತಿನಿಧಿ ಆಗಿರುತ್ತಾರೆ. ನಮ್ಮ ಪ್ರತಿನಿಧಿಗಳ ಬಹುಮತದಲ್ಲಿ ಸರಕಾರವಾಗುತ್ತದೆ. ಅವರೆಲ್ಲರೂ ಪ್ರಜಾರಾಜರುಗಳಾದ ನಮ್ಮ ಸೇವೆಗಾಗಿ ಸೌಲಭ್ಯವನ್ನು ತೆರಿಗೆಯ ಹಣದಿಂದ ಪಡೆಯುತ್ತಾರೆ. ಆಡಳಿತದ ಅವಕಾಶ, ಹಕ್ಕನ್ನು ಪಡೆದಿದ್ದಾರೆ. ಸರಕಾರ ರಚನೆಯಾಗಿದೆ. ಇಲಾಖೆಗಳು ರಚಿತವಾಗಿವೆ, ಸಿಬ್ಬಂದಿಗಳು ನೇಮಕಗೊಂಡಿದ್ದಾರೆ. ಅವರೆಲ್ಲರಿಗೂ ಇರುವ ಕೆಲಸ, ಜವಾಬ್ಧಾರಿ, ಸವಲತ್ತು ಜನರ ಸೇವೆ ಮಾಡುವುದಕ್ಕೆ ಆಗಿದೆ. ಇಲಾಖೆಗಳು ಅದರ ಆಡಳಿತದಲ್ಲಿ ಬರುವ ವ್ಯವಸ್ಥೆ ಅವರದ್ದಲ್ಲ, ನಮಗಾಗಿ ಇರುವಂತದ್ದು. ಉದಾ: ರೆವೆನ್ಯು ಭೂಮಿ ಅಥವಾ ನಮ್ಮ ಭೂಮಿ ರೆವೆನ್ಯು ಇಲಾಖೆಯದಲ್ಲ. ಇಲಾಖೆಯ ಸಿಬ್ಬಂದಿಗಳದಲ್ಲ. ಕಾಡಿನ ಅರಣ್ಯ ಸಂಪತ್ತು ಮತ್ತು ನಮ್ಮ ಮರ ಅರಣ್ಯ ಇಲಾಖೆಯ ಅಧಿಕಾರಿಗಳದಲ್ಲ. ವಿದ್ಯುತ್ ಅದರ ಮಂಡಳಿಯ ಅಧಿಕಾರಿಗಳದಲ್ಲ. ರಸ್ತೆ ಕಾಮಗಾರಿ, ಪಿಡಬ್ಲ್ಯೂಡಿ ಅಧಿಕಾರಿಗಳದಲ್ಲ. ಆಸ್ಪತ್ರೆ, ಅಲ್ಲಿರುವ ವೈದ್ಯರುಗಳು, ನರ್ಸ್‌ಗಳದ್ದಲ್ಲ. ಆ ಎಲ್ಲಾ ಇಲಾಖೆಗಳನ್ನು ನಮಗಾಗಿ ನಮ್ಮ ಸೇವೆಗಾಗಿ ನೋಡಿಕೊಳ್ಳುವುದಕ್ಕಾಗಿ ಮಾಡಲಾಗಿದೆ. ಅದಕ್ಕಾಗಿ ಅಲ್ಲಿ ಸಿಬ್ಬಂದಿಗಳ ನೇಮಕವಾಗಿದೆ. ನಮ್ಮ ದೇಶದ ಸಂಪತ್ತಿನಿಂದ, ತೆರಿಗೆಯ ಹಣದಿಂದ ಅವರ ಇಲಾಖೆ ನಡೆಯುತ್ತದೆ, ಇಲಾಖೆಗಳ ಸಿಬ್ಬಂದಿಗಳ ಸಂಬಳ ಪಾವತಿಯಾಗುತ್ತದೆ. ಅದು ಹೌದಾಗಿದ್ದರೆ ನಮ್ಮ ಸೇವೆಗಾಗಿ ಇರುವ ಇಲಾಖೆಯ ಅಧಿಕಾರಿ ಒಡೆಯರಾದ ನಮ್ಮ ಕೆಲಸಕ್ಕೆ ಲಂಚ ತೆಗೆದುಕೊಳ್ಳಬಹುದೇ? ನಮ್ಮನ್ನು ಸತಾಯಿಸಬಹುದೇ? ತೊಂದರೆಕೊಡಬಹುದೇ? ಅವರ ಸೇವೆಗಾಗಿ ನಾವು ಅಂಗಲಾಚಬೇಕೇ? ನಮ್ಮ ಸೇವೆಗಾಗಿ ನಾವು ಆರಿಸಿದ ಜನಪ್ರತಿನಿಧಿ ಇರುವುದು ಹೌದಾದರೆ ಇಲಾಖೆಗಳಿಂದ ನಮಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಡವೇ? ತೊಂದರೆಯಾದಾಗ ನಮ್ಮ ಕಡೆ ನಿಂತು ಅದನ್ನು ಸರಿಪಡಿಸಬೇಡವೇ? ಅಧಿಕಾರಿಗಳು ಏನು ಮಾಡಿದರೂ ಲಂಚ, ಭ್ರಷ್ಟಾಚಾರ ಮಾಡಿದರೂ ಮಾಡಲಿ ಎಂದು ಸುಮ್ಮನಿರುವುದೇ? ಅಥವಾ ನಾವು ಓಟಿಗಾಗಿ ಮಾತ್ರ ಬೇಕಾದವರೆಂದು ಪರಿಗಣಿಸಿ ನಂತರ ಕಡೆಗಣಿಸುವುದೇ?

ಓಟಿನ ದಿವಸ ನಾವು ರಾಜರಾಗುತ್ತೇವೆ ನಂತರ ಗುಲಾಮರಾಗಿ ಬದುಕುತ್ತೇವೆ
ಈ ಮೇಲಿನ ವಿಷಯ ಅರ್ಥವಾಗಬೇಕಾದರೆ ೫ವರ್ಷಕ್ಕೊಮ್ಮೆ ಬರುವ ಚುನಾವಣೆಯನ್ನು ಗಮನಿಸಬೇಕು. ಇಲೆಕ್ಷನ್ ಬಂದಾಗ ಓಟಿಗೆ ನಿಂತವರು, ಅವರ ಪಕ್ಷದವರು, ಬೆಂಬಲಿಗರು ಏನು ಹೇಳುತ್ತಾರೆ, ಏನು ಮಾಡುತ್ತಾರೆ ಎಂದು ನೆನಪಿಸಿಕೊಳ್ಳಿ. ನಿಮ್ಮ ಸೇವೆಗಾಗಿ ಜೀವನ ಮುಡಿಪು. ಜನಸೇವಕನಾಗಲು ಅವಕಾಶಕೊಡಿ ಎಂದು ಕೇಳುತ್ತಾರೆ. ನೀವು ಯಾರೇ ಆದರು, ಯಾವುದೇ ಮೂಲೆಯಲ್ಲಿ ಗುರುತು, ಸೌಲಭ್ಯವಿಲ್ಲದೆ ಕುಳಿತವನಾಗಿದ್ದರೂ, ನಿಮಗೆ ಓಟು ಇದೆ ಎಂದಾದರೆ ನಿಮ್ಮ ಪರಿಚಯ ಮಾಡಿಕೊಳ್ಳುತ್ತಾರೆ. ಪ್ರತಿಯೊಂದು ಮತದಾರನ ಗುರುತು ಪರಿಚಯವು ಪ್ರತಿಯೊಬ್ಬ ಅಭ್ಯರ್ಥಿಯ ಕಡೆಯವರಿಗೆ ಇರುತ್ತದೆ. ಮಾತನಾಡಿಸುತ್ತಾರೆ. ನಿಮ್ಮ ಓಟು ಪಡೆಯಲು ಸಮಯ, ಹಣ, ಶ್ರಮ ಖರ್ಚು ಮಾಡುತ್ತಾರೆ. ಹಲವಾರು ಬಾರಿ ನಿಮ್ಮಲ್ಲಿಗೆ ಬರುತ್ತಾರೆ. ಓಟಿನ ದಿವಸವಂತು ನಿಮಗೆ ಊಟ, ಉಪಹಾರ, ವಾಹನದ ವ್ಯವಸ್ಥೆ ಎಲ್ಲಾ ಒದಗಿಸುತ್ತಾರೆ. ಆರೋಗ್ಯವಿಲ್ಲದಿದ್ದರೆ ಕೈ ಹಿಡಿದುಕೊಂಡು ಎತ್ತಿಕೊಂಡಾದರೂ ಬರುತ್ತಾರೆ. ನಿಮ್ಮ ಒಂದು ಓಟಿಗಾಗಿ ಅಲ್ಲಿಯವರೆಗೆ ದಾರಿಯಲ್ಲಿ ಕಂಡರೂ ಮಾತನಾಡಿಸದವರು ಕೈಮುಗಿಯುತ್ತಾರೆ. ಹಿರಿಯರಾದರೆ ಕಾಲು ಹಿಡಿಯುತ್ತಾರೆ. ಆ ಸಮಯದಲ್ಲಿ ನಿಮಗೆ ಏನಾದರು ಅಸಮಾಧಾನ, ಬೇಡಿಕೆಯಿದ್ದರೆ ಅದನ್ನು ತಿಳಿದುಕೊಂಡು ಸರಿಪಡಿಸಲು ಪ್ರಯತ್ನಿಸುತ್ತಾರೆ. ಮನೆ ಮನೆಗೆ ಹೆಂಡ, ಹಣ, ಬಟ್ಟೆ ಅಥವಾ ಬೇರೆ ಏನಾದರು ಕೇಳಿದರೆ ಅದನ್ನೂ ಕೊಡಲು ಪ್ರಯತ್ನಿಸುತ್ತಾರೆ. ಉತ್ತರದ ರಾಜ್ಯಗಳ ಚುನಾವಣೆಯನ್ನು ನೋಡಿ. ಜನ ಸೇವೆಗಾಗಿ ಪುರುಸೊತ್ತೇ ಇಲ್ಲದ, ಜನರ ಭೇಟಿಗೆ, ಬಿಡುವಿಲ್ಲದ ಕೆಲಸವಿರುವವರು ಆಗಿದ್ದರೂ ಪ್ರಧಾನಿಯವರು, ಗೃಹಮಂತ್ರಿಗಳು, ಎಲ್ಲಾ ಪಕ್ಷದ ನಾಯಕರು, ಗಣ್ಯರ ದಂಡೇ ಓಟಿಗಾಗಿ ಹಲವಾರು ಬಾರಿ ಪ್ರವಾಸ ಮಾಡುತ್ತಿದ್ದಾರೆ. ಮನೆಮನೆ ಭೇಟಿಗೂ ಪ್ರಯತ್ನಿಸುತ್ತಿದಾರೆ. ಒಟ್ಟಿನಲ್ಲಿ ನಿಮ್ಮನ್ನು (ಮತದಾರರನ್ನು) ರಾಜರಂತೆ ನೋಡಿಕೊಳ್ಳುತ್ತಾರೆ. ಅವರು ಜನಸೇವಕನೆಂದು ಹೇಳಿಕೊಳ್ಳುತ್ತಾರೆ. ಯಾಕೆ ಹೇಳಿ? ನಿಮ್ಮ ಒಂದು ಓಟಿನ ಬೆಲೆ ಅಷ್ಟಿದ್ದರೆ ಊರಿನ ಎಲ್ಲರ ಓಟಿನ ಬೆಲೆ ಎಷ್ಟಾಗಬಹುದು. ಅದೆಲ್ಲ ಆದಮೇಲೆ, ಗೆದ್ದಮೇಲೆ ಮುಂದಿನ ೫ ವರ್ಷ ನೀವು ಯಾರು? ಏನು ಮಾಡುತ್ತಿದ್ದೀರಿ? ನಿಮ್ಮ ಪರಿಸ್ಥಿತಿ ಏನು ಎಂದು ಅವರು ತಿಳಿಯುವುದಿಲ್ಲ. ತಿಳಿದರೂ ಅದರ ಬಗ್ಗೆ ಸಾಕಷ್ಟು ಗಮನ ಕೊಡುವುದಿಲ್ಲ. (ಇದು ನಮ್ಮ ಶಾಸಕರಿಗೆ ಮಾತ್ರವಲ್ಲ ಇನ್ನೂ ಹಲವರಿಗೆ ಅನ್ವಯವಾಗುವುದಿಲ್ಲ) ಯಾಕಿಲ್ಲವೆಂದರೆ ಗೆದ್ದವರು ರಾಜರುಗಳು, ಓಟುಕೊಟ್ಟವರು ಗುಲಾಮರು ಆಗಿಬಿಡುತ್ತಾರೆ. ಬಲಿಚಕ್ರವರ್ತಿಯಾದರೂ ವರ್ಷಕ್ಕೊಮ್ಮೆ ರಾಜನಾಗುತ್ತಾನೆ. ನೀವು 5ವರ್ಷಕ್ಕೊಮ್ಮೆ ಅಥವಾ ಓಟು ಬಂದಾಗ ರಾಜರಾಗುತ್ತೀರಿ ನಂತರ ಏನೂ ಇಲ್ಲದವರು ಆಗುತ್ತೀರಿ. ನಮ್ಮ ಜನಪ್ರತಿನಿಧಿಗಳನ್ನು, ಸರಕಾರದವರನ್ನು ರಾಜರುಗಳಂತೆ ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ಅವರ ಸೇವೆಗಾಗಿ ಕಾನೂನುಗಳನ್ನು ಬೇಕಾದಂತೆ ಅಳವಡಿಸುತ್ತಾರೆ. ಜನರನ್ನು ಗುಲಾಮರಂತೆ, ಕ್ರಿಮಿನಲ್‌ಗಳಂತೆ, ಹಣ ವಸೂಲಿಮಾಡುವ ಸರಕುಗಳಂತೆ ನೋಡಿಕೊಳ್ಳುತ್ತಾರೆ. (ಇದು ಎಲ್ಲಾ ಅಧಿಕಾರಿಗಳಿಗೆ ಅನ್ವಯವಾಗುವುದಿಲ್ಲ. ಜನರಿಗೆ ಉತ್ತಮ ಸೇವೆ ನೀಡುವ ಅಧಿಕಾರಿಗಳೂ ಇದ್ದಾರೆ) ಅದಕ್ಕಾಗಿ ಬೇಕಾದ ಕಾನೂನುಗಳನ್ನು ರಚಿಕೊಳ್ಳುತ್ತಾರೆ. ಉದಾ: ಕರ್ಫ್ಯೂ, ಲಾಕ್‌ಡೌನ್ ಸಂದರ್ಭದಲ್ಲಿ ಸರಕಾರ ಮತ್ತು ಅಧಿಕಾರಿಗಳು ಕಾಂಗ್ರೆಸಿನ ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಕಣ್ಣುಕಟ್ಟಿನ ಕೇಸ್ ಮಾಡಿ ರಾಜಾತೀಥ್ಯವನ್ನು ನೀಡಿದ್ದನ್ನು ನೋಡಿದ್ದೀರಿ. ಬಿ.ಜೆ.ಪಿ ಶಾಸಕರುಗಳಾದ ರೇಣುಕಾಚಾರ್ಯ ಮತ್ತಿತರರು ಸಭೆ ಸಮಾರಂಭ ಮಾಡಿದ್ದು ನೋಡಿದ್ದೀರಿ. ಅವರ ಮೇಲೆ ಯಾವ ಕೇಸು ಆಗಲಿಲ್ಲ, ಲಾಠಿಚಾರ್ಜ್, ವಾಹನ ಸೀಝ್ ಆಗಲಿಲ್ಲ. ಆದರೆ ಅದೇ ಸಂದರ್ಭದಲ್ಲಿ ರಾಜ್ಯದಾದ್ಯಂತ ಜೀವನೋಪಾಯಕ್ಕಾಗಿ ವ್ಯಾಪಾರ ವ್ಯವಹಾರ ಮಾಡಿದವರಿಗೆ, ರಸ್ತೆಗಿಳಿದ ಅಮಾಯಕರಿಗೆ, ಬಡವರಿಗೆ ಮಾಡಿದ ಲಾಠಿ ಚಾರ್ಜ್, ವಾಹನ ಸೀಝ‍್ ಗಳನ್ನು , ಕೇಸ್‌ಗಳನ್ನು ನೋಡಿದರೆ ರಾಜರು ಯಾರು, ಗುಲಾಮರು ಯಾರು, ಅಧಿಕಾರಿಗಳು, ಕಾನೂನು ಇರುವುದು ಯಾರಿಗಾಗಿ ಎಂದು ಅರ್ಥಮಾಡಿಕೊಳ್ಳಬಹುದು.

3 ತಿಂಗಳಲ್ಲಿ ಜಿಲ್ಲೆ ಲಂಚ, ಭ್ರಷ್ಟಾಚಾರ ಮುಕ್ತವಾಗಲಿದೆ. ಸುದ್ದಿಯ ಆಂದೋಲನ ರಾಜ್ಯ, ದೇಶಕ್ಕೆ ಹರಡಲಿ. ಅದು ಬದಲಾಗಬೇಕಾದರೆ ನಾವು ಬದಲಾಗಬೇಕು. ನಾವು ಜಾತಿ, ಧರ್ಮ, ಪಕ್ಷ, ಅಧಿಕಾರ, ಹಣಕ್ಕೆ ನಮ್ಮನ್ನು ಮಾರಿಕೊಳ್ಳದೆ. ಓಟಿನ ಒಂದು ದಿವಸಕ್ಕೆ ಮಾತ್ರ ರಾಜರಾಗದೆ. ೫ವರ್ಷವೂ ರಾಜರಂತೆ ಒಗ್ಗಟ್ಟಿನಲ್ಲಿ ಇರಬೇಕು. ನಾವು ರಾಜರಾಗದಿದ್ದರೆ, ನಮ್ಮ ಜನಪ್ರತಿನಿಧಿಯನ್ನು ನಮ್ಮ ಸೇವಕನೆಂದು ಪರಿಗಣಿಸದಿದ್ದರೆ, ಇಲಾಖೆಗಳು ಸಿಬ್ಬಂದಿಗಳು ನಮ್ಮ ಸೇವೆಗಾಗಿ ಇರುವುದು ಎಂದು ಅರ್ಥಮಾಡಿಕೊಳ್ಳದಿದ್ದರೆ ಯಾವ ಪಕ್ಷ ಆಡಳಿತಕ್ಕೆ ಬಂದರೂ ಒಂದೇ. ಯಾಕೆಂದರೆ ಇಂದು ಒಂದು ಪಕ್ಷದಲ್ಲಿದ್ದವನು ನಾಳೆ ಇನ್ನೊಂದು ಪಕ್ಷದಲ್ಲಿ ಅಧಿಕಾರ ಹಿಡಿಯುತ್ತಾರೆ. ಜನರ ಓಟಿನ ಬಲವಿರುವ ಯಾವುದೇ ಗೆಲ್ಲುವ ಕುದುರೆಗೆ ಎಷ್ಟೇ ಭ್ರಷ್ಟಾಚಾರ ಮಾಡಿದ್ದರೂ ಎಲ್ಲಾ ಪಕ್ಷಗಳಲ್ಲಿ ಸ್ವಾಗತವಿರುತ್ತದೆ. ಆದರೆ ನಾವು ರಾಜರಂತೆ ವರ್ತಿಸಿದರೆ ಯಾರು ಆಯ್ಕೆಯಾಗಿ ಬಂದರೂ ನಮ್ಮದೇ ಆಡಳಿತವಿರುತ್ತದೆ. ಯಾರೇ, ಯಾವ ಪಕ್ಷವೇ ಅಧಿಕಾರದಲ್ಲಿದ್ದರೂ ನಮಗೇನೂ ತೊಂದರೆಯಾಗುವುದಿಲ್ಲ. ಯಾಕೆಂದರೆ ಅವರು ಮತ್ತು ಅವರ ಅಧೀನದಲ್ಲಿರುವ ಅಧಿಕಾರಿಗಳು ನಮ್ಮ ಓಟಿನ ಶಕ್ತಿಗಾಗಿ ನಮಗೆ ಬೇಕಾದಂತೆ ಕೆಲಸಮಾಡಲೇಬೇಕಾಗುತ್ತದೆ. ಇಲ್ಲದಿದ್ದರೆ ಜನವಿರೋಧಿಯಾಗಿ ಸೋತು, ಅಧಿಕಾರ ಕಳೆದುಕೊಂಡು ಮನೆಯಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಅದಕ್ಕಾಗಿ ನಾವು ರಾಜರಂತೆ ನಮ್ಮ ಕರ್ತವ್ಯವನ್ನು ನಿಭಾಯಿಸಬೇಕು. ಈ ಊರು, ಇಲ್ಲಿಯ ರಸ್ತೆ, ಕಟ್ಟಡ, ಇಲ್ಲಿಯ ಸಂಪತ್ತು, ಇಲಾಖೆ ಎಲ್ಲವೂ ನಮ್ಮದು, ನಮ್ಮದೇ ಆಡಳಿತ. ಒಳಿತು, ಕೆಡುಕುಗಳ ಜವಾಬ್ಧಾರಿ ನಮ್ಮದು ಎಂದು ಘೋಷಿಸಬೇಕು. ಉತ್ತಮ ಕೆಲಸ ಮಾಡಿದವರನ್ನು ಜನಸೇವೆಗಾಗಿ ಗುರುತಿಸಬೇಕು. ಪುರಸ್ಕರಿಸಬೇಕು. ಲಂಚ ಭ್ರಷ್ಟಾಚಾರ ಮಾಡಿದರೆ ದರೋಡೆ ಮತ್ತು ದೇಶದ್ರೋಹ ಎಂದು ಪರಿಗಣಿಸಿ ತಿರಸ್ಕರಿಸಬೇಕು. ಬಹಿಷ್ಕರಿಸಬೇಕು. ಈ ಆಂದೋಲನವನ್ನು ಮನೆಮನೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಕಛೇರಿಗಳಲ್ಲಿ, ತಾಲೂಕಿನಲ್ಲಿ, ಜಿಲ್ಲೆಯಲ್ಲಿ ಎಲ್ಲಾ ಕಡೆಯಲ್ಲಿ ಮಾಡಬೇಕು. ಇದೇ ಜ.26ರಂದು ಪ್ರಜಾಪ್ರಭುತ್ವದ ದಿನದಂದು ನಾವು ಸ್ವತಂತ್ರರು, ನಮ್ಮದೇ ಆಡಳಿತ ಎಂದು ಘೋಷಣೆ ಕೂಗುತ್ತಾ ಜನಪ್ರತಿನಿಧಿಗಳನ್ನು, ಸರಕಾರವನ್ನು, ಅಧಿಕಾರಿಗಳನ್ನು ಎಚ್ಚರಿಸುತ್ತಾ `ಉತ್ತಮ ಸೇವೆಗೆ ಪುರಸ್ಕಾರ, ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ. ಲಂಚ ಅಂದರೆ ದರೋಡೆ, ಭ್ರಷ್ಟಾಚಾರ ಅಂದರೆ ದೇಶದ್ರೋಹ’ ಎಂಬ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿ ಊರಿನ ಪ್ರಮುಖ ಸ್ಥಳಗಳಲ್ಲಿ ಸೇರಿ, ಒಟ್ಟಾಗಿ ಈ ಮೇಲಿನ ಘೋಷಣೆಗಳನ್ನು ಕೂಗುತ್ತಾ ಉತ್ತಮ ಸೇವೆ ಮಾಡಿದವರನ್ನು ಗುರುತಿಸಬೇಕು. ಲಂಚ ಭ್ರಷ್ಟಾಚಾರದ ಮೇಲಿನ ನಮ್ಮಲ್ಲಿರುವ ದ್ವೇಷವನ್ನು, ತಿರಸ್ಕಾರವನ್ನು ಬಹಿರಂಗಪಡಿಸಲಿಕ್ಕಾಗಿ ಲಂಚ ಭ್ರಷ್ಟಾಚಾರದ ಪ್ರತಿಕೃತಿಯನ್ನು ಸಾಮೂಹಿಕವಾಗಿ ಅಲ್ಲಲ್ಲಿ ದಹಿಸಬೇಕು. ನಮ್ಮ ಊರು, ತಾಲೂಕು, ಜಿಲ್ಲೆ ಲಂಚ ಭ್ರಷ್ಟಾಚಾರ ಮುಕ್ತವಾಗಲಿ ಎಂದು ಘೋಷಿಸಿ ಪ್ರತಿಜ್ಞೆ ಮಾಡಬೇಕು. ಈ ಆಂದೋಲನ ನಿರಂತರ ಮುಂದುವರಿಯಬೇಕು. ಹಾಗೆ ಮಾಡಿದರೆ ಜನಪ್ರತಿನಿಧಿ ನಮ್ಮವರಾಗುತ್ತಾರೆ. ಸರಕಾರ ನಮ್ಮೆಲ್ಲರದ್ದಾಗುತ್ತದೆ. ಇಲಾಖೆಗಳು, ಅಧಿಕಾರಿಗಳು ಉತ್ತಮ ಸೇವೆ ನೀಡಿ ಜನಸೇವಕರಾಗಿ ನಮ್ಮವರಾಗುತ್ತಾರೆ. ಈ ಜನಾಂದೋಲನಕ್ಕೆ `ಸುದ್ದಿ ಮಾದ್ಯಮ’ ಧ್ವನಿಯಾಗಲಿದೆ, ಸಾರ್ವಜನಿಕ ವೇದಿಕೆಯಾಗಲಿದೆ. ಆ ಧ್ವನಿ ಊರಿನ ಪ್ರತಿಯೊಂದು ಮನೆಯಲ್ಲಿ ಮೊಳಗಿದರೆ ಅದಕ್ಕೆ ಜನರ ಬೆಂಬಲ ದೊರಕಿದರೆ 3ತಿಂಗಳ ಒಳಗಡೆ ನಮ್ಮ ಊರು, ತಾಲೂಕು, ಜಿಲ್ಲೆ ಉತ್ತಮ ಜನಸೇವೆ ನೀಡುವ, ಲಂಚ ಭ್ರಷ್ಟಾಚಾರ ಮುಕ್ತ ಜಿಲ್ಲೆಯಾಗಲಿದೆ. ಲಂಚವಾಗಿ ಹಣಕೊಟ್ಟರೂ ಅದನ್ನು ಅಧಿಕಾರಿಗಳು ನಿರಾಕರಿಸುವಂತ ಜಿಲ್ಲೆಯಾಗಲಿದೆ ಎಂದು ಘಂಟಾಘೋಷವಾಗಿ ಹೇಳಬಯಸುತ್ತೇವೆ. ಈ `ಸುದ್ದಿಜನಾಂದೋಲನ’ ಮಹಾತ್ಮಗಾಂಧಿಯವರ ಗ್ರಾಮ ಸ್ವರಾಜ್ಯದ ಜನರ ಭಾಗವಹಿಸುವಿಕೆಯ ಸ್ವಯಂ ಆಡಳಿತದ ಆಶಯ ಹೊಂದಿರುವುದರಿಂದ ಅದನ್ನು ಜಿಲ್ಲೆ, ರಾಜ್ಯ, ದೇಶದ ಎಲ್ಲಾ ಕಡೆ ವಿಸ್ತರಿಸಬೇಕೆಂದಿದ್ದೇವೆ. ಇದಕ್ಕೆ ಮುಖ್ಯವಾಗಿ ಮಾಧಮದವರು ಮತ್ತು ಎಲ್ಲಾ ಕಡೆಯ ಜನರು ಬೆಂಬಲ ನೀಡಿ, ಈ ಆಂದೋಲನದಲ್ಲಿ ಭಾಗಗಳಾಗಬೇಕಾಗಿ ಆಶಿಸುತ್ತೇನೆ.

LEAVE A REPLY

Please enter your comment!
Please enter your name here