ಟೆಂಡರ್ ಷರತ್ತುಪಾಲಿಸದೆ ಕಾಮಗಾರಿ; ಆರೋಪ

0

  • ಹಿರೇಬಂಡಾಡಿಯಲ್ಲಿ ರಸ್ತೆ ಕಾಂಕ್ರಿಟ್ ಕಾಮಗಾರಿಗೆ ಗ್ರಾಮಸ್ಥರ ತಡೆ

 

ಹಿರೇಬಂಡಾಡಿ: ಹಿರೇಬಂಡಾಡಿ ಗ್ರಾಮದ ಮುರ ಕ್ವಾಟ್ರಾಸ್ ಅಡ್ಕರೆಗುರಿ ಎಂಬಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರುರವರ 15 ಲಕ್ಷ ರೂ.,ಅನುದಾನದಲ್ಲಿ ನಡೆಯುತ್ತಿರುವ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಕಾಮಗಾರಿಗೆ ತಡೆಯೊಡ್ಡಿರುವ ಘಟನೆ ಜ.23ರಂದು ನಡೆದಿದೆ.


ರಸ್ತೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ಕಾಮಗಾರಿಯ ಟೆಂಡರ್‌ನಲ್ಲಿ ನಮೂದಿಸಿದ ಷರತ್ತುಗಳನ್ನು ಸರಿಯಾಗಿ ಪಾಲಿಸದೇ ಬೇಕಾಬಿಟ್ಟಿಯಾಗಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಗ್ರಾಮಸ್ಥರು ಕಾಮಗಾರಿ ನಡೆಸುವುದಕ್ಕೆ ತಡೆಯೊಡ್ಡಿ ಜಿಲ್ಲಾ ಪಂಚಾಯತ್ ಇಂಜಿನಿಯರ್‌ರವರು ಸ್ಥಳಕ್ಕೆ ಬಂದು ಕಾಮಗಾರಿ ಗುಣಮಟ್ಟ ಪರಿಶೀಲಿಸಿದ ಬಳಿಕವೇ ಕಾಮಗಾರಿ ಮುಂದುವರಿಸುವಂತೆ ಪಟ್ಟು ಹಿಡಿದರು. ಬಳಿಕ ಈ ವಿಚಾರವನ್ನು ದೂರವಾಣಿ ಮೂಲಕ ಇಂಜಿನಿಯರ್‌ರವರ ಗಮನಕ್ಕೆ ತರಲಾಯಿತು. ಜ.೨೪ರಂದು ಸ್ಥಳಕ್ಕೆ ಬಂದು ಕಾಮಗಾರಿ ಗುಣಮಟ್ಟ ಪರಿಶೀಲನೆ ನಡೆಸುತ್ತೇನೆ. ಅಲ್ಲಿಯ ತನಕ ಕಾಮಗಾರಿ ಸ್ಥಗಿತಗೊಳಿಸುವಂತೆ ಇಂಜಿನಿಯರ್‌ರವರು ಸೂಚನೆ ನೀಡಿದರು. ಗ್ರಾಮಸ್ಥರಾದ ಅಶೋಕ್ ಕುಮಾರ್ ಪಡ್ಪು, ಮಾಧವ ಗೌಡ ಹೆನ್ನಾಳ, ರಾಮಕೃಷ್ಣ ಹೊಸಮನೆ, ನವೀನ ಪಡ್ಪು, ಸಲೀಂ ಮುರ ಕೋಟ್ರಾಸ್, ರಿಯಾಝ್, ರಶೀದ್, ಸತ್ತಾರ್, ರಫೀಕ್, ರಹೀಮ್, ಉನೈಸ್, ಷರೀಫ್, ಉಮ್ಮರ್ ಮತ್ತಿತರರು ಸ್ಥಳಕ್ಕೆ ಆಗಮಿಸಿ ಕಾಮಗಾರಿ ಅಸಮರ್ಪಕವಾಗಿ ನಡೆಯುತ್ತಿದೆ ಎಂದು ಆರೋಪಿಸಿ ಕಾಮಗಾರಿ ನಡೆಸುವುದಕ್ಕೆ ತಡೆಯೊಡ್ಡಿದರು. ಹಿರೇಬಂಡಾಡಿ ಗ್ರಾ.ಪಂ. ಉಪಾಧ್ಯಕ್ಷೆ ಭವಾನಿ, ಸದಸ್ಯರಾದ ಶೌಕತ್ ಅಲಿ , ನಿತಿನ್ ತಾರಿತ್ತಡಿ, ಸತೀಶ್ ಶೆಟ್ಟಿ ಹೆನ್ನಾಳ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

ಪ್ರತಿಭಟನೆ ಎಚ್ಚರಿಕೆ:
ಈ ಹಿಂದೆ ಉಳತ್ತೋಡಿ ಷಣ್ಮುಖ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಮಗಾರಿ ಸಹ ಕಳಪೆಯಾಗಿರುವ ಬಗ್ಗೆ ಪತ್ರಿಕೆಯಲ್ಲಿ ವರದಿ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಅಲ್ಲಿ ಆದ ಸಮಸ್ಯೆಯನ್ನು ಸರಿಪಡಿಸಿದ್ದರು. ಇದೀಗ ಮುರ ಕ್ವಾಟ್ರಾಸ್‌ನಲ್ಲಿ ನಡೆಯುತ್ತಿರುವ ಕಾಮಗಾರಿಯೂ ಟೆಂಡರ್‌ನಲ್ಲಿ ಕಾಣಿಸಿದ ಷರತ್ತಿನಂತೆ ನಡೆಯುತ್ತಿಲ್ಲ. ಟೆಂಡರ್‌ನಲ್ಲಿ ಕಾಣಿಸಿದ ಷರತ್ತಿನ ಪ್ರಕಾರವೇ ಕಾಮಗಾರಿ ನಡೆಸಬೇಕು. ಇಲ್ಲದೇ ಇದ್ದಲ್ಲಿ ಪಕ್ಷಾತೀತವಾಗಿ ಪ್ರತಿಭಟನೆ ನಡೆಸುತ್ತೇವೆ ಎಂದು ಗ್ರಾಮಸ್ಥರು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

LEAVE A REPLY

Please enter your comment!
Please enter your name here