ವಳಾಲು: ‘ಟಾಟಾ ಇಂಡಿಕ್ಯಾಶ್ ಎಟಿಎಂ’ ಶುಭಾರಂಭ

0

ನೆಲ್ಯಾಡಿ: ಟಾಟಾ ಕಮ್ಯುನಿಕೇಶನ್ಸ್ ಪೇಮೆಂಟ್ ಸೊಲ್ಯುಷನ್ಸ್ ಲಿಮಿಟೆಡ್‌ನವರ ‘ಟಾಟಾ ಇಂಡಿಕ್ಯಾಶ್ ಎಟಿಎಂ’ ಜ.24ರಂದು ಬೆಳಿಗ್ಗೆ ಬಜತ್ತೂರು ಗ್ರಾಮದ ವಳಾಲು ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದಲ್ಲಿ ಶುಭಾರಂಭಗೊಂಡಿತು.


ಉಪ್ಪಿನಂಗಡಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ.ವಿ.ಪ್ರಸಾದ್‌ರವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಳಾಲುನಲ್ಲಿ ‘ಟಾಟಾ ಇಂಡಿಕ್ಯಾಶ್ ಎಟಿಎಂ’ ಆರಂಭಗೊಂಡಿರುವುದು ಇಲ್ಲಿನ ಗ್ರಾಮಸ್ಥರಿಗೆ ಬಹಳಷ್ಟು ಉಪಕಾರಿಯಾಗಿದೆ. ಗ್ರಾಮಸ್ಥರು ಇನ್ನು ಮುಂದೆ ಹಣ ಪಡೆಯಲು ತಮ್ಮ ಊರಿನಲ್ಲಿಯೇ ಇರುವ ಎಟಿಎಂ ಬಳಸುವಂತೆ ಹೇಳಿದರು. ಎಟಿಎಂನಿಂದ ಪ್ರಥಮ ನಗದೀಕರಿಸಿದ ಬಜತ್ತೂರು ಗ್ರಾ.ಪಂ.ಅಧ್ಯಕ್ಷೆ ಪ್ರೇಮಾ ಬಿ.ಯವರು ಮಾತನಾಡಿ, ಉಪ್ಪಿನಂಗಡಿಗೆ ಸಮೀಪದಲ್ಲೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ವಳಾಲು ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದೆ. ಇಲ್ಲಿಗೆ ಎಟಿಎಂ ಸೇವೆ ಅಗತ್ಯವಾಗಿತ್ತು. ಇದನ್ನು ಮನಗಂಡ ಟಾಟಾ ಕಮ್ಯನಿಕೇಶನ್ಸ್ ಪೇಮೆಂಟ್ ಸೊಲ್ಯುಷನ್ಸ್ ಕಂಪನಿಯವರು ಎಟಿಎಂ ಆರಂಭಿಸಿರುವುದರಿಂದ ಊರಿನ ಜನರಿಗೆ ಬಹಳಷ್ಟ ಸಹಕಾರಿಯಾಗಿದೆ. ಜನರು ಇದರ ಸದ್ಬಳಕೆ ಮಾಡಿಕೊಳ್ಳುವಂತೆ ಹೇಳಿದರು.\


ಮುಖ್ಯ ಅತಿಥಿಯಾಗಿದ್ದ ತಾ.ಪಂ.ಮಾಜಿ ಸದಸ್ಯ ಮುಕುಂದ ಗೌಡ ಬಜತ್ತೂರು ಮಾತನಾಡಿ, ಜನರಿಗೆ ಬೇಕಾದ ಸೌಲಭ್ಯಗಳು ಊರಿನಲ್ಲೇ ಸಿಗುವುದರಿಂದ ಜನರ ಸಮಯ,ಹಣದಲ್ಲೂ ಉಳಿತಾಯವಾಗಲಿದೆ. ಇಂತಹ ವ್ಯವಸ್ಥೆಗಳು ಊರಿನ ಅಭಿವೃದ್ಧಿಗೂ ಪೂರಕವಾಗಿರುತ್ತವೆ. ಪೇಟೆಗಳಲ್ಲಿ ಕಾಣಿಸುತ್ತಿದ್ದ ‘ಎಟಿಎಂ’ ಮಿಷನ್ ವಳಾಲು ನಂತಹ ಗ್ರಾಮೀಣ ಪ್ರದೇಶದಲ್ಲಿಯೂ ಆರಂಭಗೊಂಡಿರುವುದು ಊರಿನ ಅಭಿವೃದ್ಧಿಗೆ ಸಹಕಾರಿಯಾಗಿದೆ. ಇಲ್ಲಿ ಶಾಲೆ, ಪಂಚಾಯತ್, ಹಾಲಿನ ಸೊಸೈಟಿ, ಸಿ.ಎ.ಬ್ಯಾಂಕ್‌ಗಳು ಇವೆ. ಆದರೆ ಈ ಊರಿನ ಜನರು ತುರ್ತಾಗಿ ಬ್ಯಾಂಕ್‌ನಿಂದ ಹಣ ಪಡೆಯಬೇಕಾದಲ್ಲಿ ಉಪ್ಪಿನಂಗಡಿಗೆ ಹೋಗಬೇಕಾಗಿದೆ. ಬ್ಯಾಂಕ್‌ಗಳಲ್ಲಿ ಸರದಿ ಸಾಲಿನಲ್ಲಿ ನಿಂತು ಹಣ ಪಡೆಯಬೇಕಾದ ಸಂದರ್ಭವಿದೆ. ಇದಕ್ಕೆಲ್ಲಾ ಪರಿಹಾರವಾಗಿ ಈಗ ವಳಾಲುನಲ್ಲಿ ಎಟಿಎಂ ಆರಂಭಗೊಂಡಿರುವುದರಿಂದ ಜನರು ಇಲ್ಲಿಯೇ ಸುಲಭದಲ್ಲಿ ಹಣ ಪಡೆಯಲು ಅವಕಾಶ ದೊರೆತಿದೆ.ಗ್ರಾಮೀಣ ಪ್ರದೇಶದ ಜನರಿಗೆ ಇಂತಹ ಅವಕಾಶ ಮಾಡಿಕೊಟ್ಟ ಸಂಸ್ಥೆಯವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಇನ್ನೋರ್ವ ಅತಿಥಿ ವಳಾಲು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಸಂತ ಗೌಡ ಪಿಜಕ್ಕಳ ಮಾತನಾಡಿ, ಗ್ರಾಮಸ್ಥರು ಅಗತ್ಯ ಸಹಕಾರ ನೀಡುವಂತೆ ಹೇಳಿದರು.


ವಳಾಲು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಪೌಲ್ ಡಿ’ಸೋಜಾರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹರಿಕೃಷ್ಣ ವಂದಿಸಿದರು. ಗ್ರಾಮಸ್ಥರಾದ ಸುಧಾಕರ್ ಎನ್, ಯಮುನಾ, ಯೋಗೀಶ ಜಿ, ಗಣೇಶ, ಪದ್ಮಾ, ಹರಿಯಪ್ಪ ಗೌಡ, ಉಮೇಶ್ ಓಡ್ರಪಾಲ್, ಶಬೀರ್, ಅನಂತನಾಭ, ಮೋಹನಗೌಡ, ಪುರಂದರ, ವಸಂತ ಬಿ, ನಿತಿನ್, ಶ್ರೀಧರ ಗೌಡ, ಇಸಾಕ್, ವಿಶ್ವನಾಥ ಪುರುಷ, ರೋಹಿತಪ್ಪ ಗೌಡ, ರಜಾಕ್, ಸಿದ್ದಾರ್ಥ ಮತ್ತಿತರರು ಉಪಸ್ಥಿತರಿದ್ದರು.

ವಿಶೇಷತೆಗಳು
‘ಟಾಟಾ ಇಂಡಿಕ್ಯಾಶ್ ಎಟಿಎಂ’ನಲ್ಲಿ ಎಲ್ಲಾ ಬ್ಯಾಂಕ್‌ಗಳ ಎಟಿಎಂ ಕಾರ್ಡುಗಳನ್ನು ಸ್ವೀಕರಿಸಲಾಗುತ್ತದೆ. ಯಾವುದೇ ಯೂಸೇಜ್ ಶುಲ್ಕಗಳಿಲ್ಲ ಹಾಗೂ ಇದು ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಅಧಿಕೃತಗೊಂಡಿದೆ.

LEAVE A REPLY

Please enter your comment!
Please enter your name here