ಕಡಬ: ದ.ಕ ಜಿಲ್ಲಾ ಯುವ ಕಾಂಗ್ರೆಸ್ ಹಾಗೂ ಕಡಬ ಬ್ಲಾಕ್ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಮಂಗಳೂರು ಬ್ಲಡ್ ಡೋನರ್ಸ್ ಆಶ್ರಯದಲ್ಲಿ ಜನವರಿ 26ನೇ ಗಣರಾಜ್ಯೋತ್ಸವದಂದು ದೇಶಕ್ಕಾಗಿ ಸಂವಿಧಾನ ಜೀವಕ್ಕಾಗಿ ರಕ್ತದಾನ ಎಂಬ ಧ್ಯೇಯದೊಂದಿಗೆ ಕಡಬ ಅಂಬೇಡ್ಕರ್ ಭವನದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಕಡಬ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್ ಪಿ.ಕೆ ಹೇಳಿದರು.
ಅವರು ಸೋಮವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಾಂಗ್ರೆಸ್ ಪಕ್ಷ ಜಾತ್ಯಾತೀತ ಚಿಂತನೆಯಡಿ ದೇಶದ ಎಲ್ಲಾ ವರ್ಗದ ಜನರರನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತಾ ಬಂದಿದೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಕೂಡಾ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಬಡವರ ಕಷ್ಟಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿದೆ. ಇದೇ ಸಮಾಜಮುಖಿ ಚಿಂತನೆಯೊಂದಿಗೆ ಗಣರಾಜ್ಯೋತ್ಸವದಂದು ಕಡಬ ಅಂಬೇಡ್ಕರ್ ಸಭಾಭವನದಲ್ಲಿ ರಕ್ತದಾನ ಶಿಭಿರವನ್ನು ಆಯೋಜಿಸಲಾಗಿದೆ. ಬೆಳಿಗ್ಗೆ ೮.೩೦ ರಿಂದ ಮಧ್ಯಾಹ್ನ ೧.೦೦ ಗಂಟೆಯ ತನಕ ನಡೆಯುವ ಶಿಬಿರವನ್ನು ಹಿರಿಯ ಕಾಂಗ್ರೆಸ್ ಮುಖಂಡ ಶೀನಪ್ಪ ಗೌಡ ಬೈತಡ್ಕ ಉದ್ಘಾಟಿಸಲಿದ್ದು, ಈ ಶಿಬಿರದಲ್ಲಿ ಯುವಕ, ಯುವತಿಯರು ಹಾಗೂ ಆರೋಗ್ಯವಂತ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡಿ ಆ ಮೂಲಕ ಸಾವಿರಾರು ಜನರ ಪ್ರಾಣ ಉಳಿಸುವ ಪುಣ್ಯದ ಕಾರ್ಯದಲ್ಲಿ ಪಾಲು ಪಡೆಯಬೇಕೆಂದು ವಿನಂತಿಸಿದ ಅಭಿಲಾಷ್ ಯಾವುದೇ ಸಂದರ್ಭದಲ್ಲಿ ರಕ್ತ ಅಗತ್ಯ ಬಿದ್ದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಇಲ್ಲಿಗೆ ಕರೆ ಮಾಡಿದರೆ ತಕ್ಷಣ ಸ್ಪಂದಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ದ.ಕ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಫೈಝಲ್ ಎಸ್.ಇ.ಎಸ್, ಕಡಬ ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಶ್ರಫ್ ಶೇಡಿಗುಂಡಿ, ಕಡಬ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸತೀಶ್ ನಾಕ್ ಮೇಲಿನಮನೆ, ಯುವ ಕಾಂಗ್ರೆಸ್ ಮುಖಂಡರಾದ ಮನೋಜ್ ಕೃಷ್ಣ ಬಳ್ಳೇರಿ, ಸತೀಶ್ ಮೀನಾಡಿ ಮತ್ತಿತರರು ಉಪಸ್ಥಿತರಿದ್ದರು.