ಮಣ್ಣಾಪು ಕೊರಗಜ್ಜ ದೈವಸ್ಥಾನದ ನೇಮೋತ್ಸವಕ್ಕೆ ಕ್ಷಣಗಣನೆ

0

  • ಶಾಶ್ವತ ನರ್ತನ ಚಾವಡಿ, ಪಾಕಶಾಲೆ, ಶೌಚಾಲಯ ಉದ್ಘಾಟನೆ 
  • 380 ವರ್ಷಗಳ ಇತಿಹಾಸವಿರುವ ದೈವಸ್ಥಾನ

ಪುತ್ತೂರು: ಸರಿಸುಮಾರು 380 ವರ್ಷಗಳ ಇತಿಹಾಸವಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಶ್ರೀ ಕೊರಗಜ್ಜ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದ ಶ್ರೀ ಕ್ಷೇತ್ರ ಮಣ್ಣಾಪು ಕೊರಗಜ್ಜ ದೈವಸ್ಥಾನದ ವಾರ್ಷಿಕ ನೇಮೋತ್ಸವವು ಜ.೨೫ ರಂದು ಮಣ್ಣಾಪು ಶ್ರೀ ಕ್ಷೇತ್ರದಲ್ಲಿ ವಿಜ್ರಂಭಣೆಯಿಂದ ನಡೆಯಲಿದೆ. ನೇಮೋತ್ಸವಕ್ಕೆ ಶ್ರೀ ಕ್ಷೇತ್ರದಲ್ಲಿ ಭರದ ಸಿದ್ಧತೆ ನಡೆಯುತ್ತಿದ್ದು, ಭಕ್ತರ ದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಷಿ ಪದ್ಮಭೂಷಣ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಇಲ್ಲಿನ ಕಾರಣಿಕ ಕೊರಗಜ್ಜ ದೈವಸ್ಥಾನದ ಜೀರ್ಣೋದ್ಧಾರ, ಮೂಲ ಶಿಲಾ ಪುನರ್ ಪ್ರತಿಷ್ಠೆಯು ನಿರ್ಮಾಣವಾಗಿದೆ. ಪ್ರಶ್ನಾಚಿಂತನೆಯಲ್ಲಿ ಕಂಡು ಬಂದ ಪ್ರಕಾರ ಶ್ರೀ ಕೊರಗಜ್ಜ ದೈವದ ನೂತನ ಕಟ್ಟೆ ನಿರ್ಮಾಣ ಸೇರಿದಂತೆ ಎಲ್ಲಾ ಕಾರ್ಯಗಳು ಈಗಾಗಲೇ ಪೂರ್ಣಗೊಂಡಿದ್ದು ಹೆಚ್ಚೆಚ್ಚು ಭಕ್ತರನ್ನು ಸೆಳೆಯುವಂತೆ ಮಾಡುತ್ತಿದೆ. ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಸುಲಭವಾಗಿ ದಾರಿ ಸಿಗುವ ಸಲುವಾಗಿ ಮೊಟ್ಟೆತ್ತಡ್ಕ ಜಂಕ್ಷನ್‌ನಲ್ಲಿನ ಬಸ್‌ಸ್ಟ್ಯಾಂಡ್ ಎದುರು `ಮಣ್ಣಾಪು ನೇಮೋತ್ಸವ’ ಎಂಬ ಬೃಹತ್ ದ್ವಾರವನ್ನು ಅಳವಡಿಸಲಾಗಿದೆ. ಅಲ್ಲದೆ ಪುತ್ತೂರಿನ ವಿವಿಧ ಪ್ರಮುಖ ಭಾಗಗಳಲ್ಲಿ ಕಟೌಟ್‌ಗಳನ್ನು ಅಳವಡಿಸಲಾಗಿದೆ.


ಮಣ್ಣಾಪು ಶ್ರೀ ಕ್ಷೇತ್ರದಲ್ಲಿ ನಡೆದ ಜೀರ್ಣೋದ್ಧಾರ, ಮೂಲ ಶಿಲಾ ಪುನರ್ ಪ್ರತಿಷ್ಠೆ ಹಾಗೂ ನೇಮೋತ್ಸವ ಕಾರ್ಯಕ್ರಮವು ಅದ್ದೂರಿಯಿಂದ ನಡೆಯಲು ಹಾಗೂ ಯಶಸ್ವಿಯಾಗಿ ಸಂಪನ್ನಗೊಳ್ಳಲು ಗೌರವಾಧ್ಯಕ್ಷರಾದ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರೇ ಪ್ರಮುಖ ಕಾರಣರಾಗಿದ್ದಾರೆ. ಕಾಲಕಾಲಕ್ಕೆ ಅವರು ನಮಗೆ ನೀಡಿರುವ ಸೂಕ್ತ ಮಾರ್ಗದರ್ಶನ, ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಹೃದಯಾಂತರಾಳದ ಮಾತುಗಳು ನಮ್ಮನ್ನು ಬಹಳ ಪ್ರೇರೇಪಿಸಿತ್ತು. ರವೀಂದ್ರ ಶೆಟ್ಟಿಯವರ ಪ್ರೇರೇಪಣೆಯ ಮಾತುಗಳಿಂದ ಈ ಕ್ಷೇತ್ರದಲ್ಲಿ ನಡೆಯುವ ಪ್ರತಿ ಕಾರ್ಯಕ್ರಮ ಎಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಿಸಿದೆ ಎಂದು ಕೆಮ್ಮಿಂಜೆ-ಮಣ್ಣಾಪು ಶ್ರೀ ಕೊರಗಜ್ಜ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದ ಅಧ್ಯಕ್ಷ ವಿಶ್ವನಾಥ್ ಮಣ್ಣಾಪು-ಕೆಮ್ಮಿಂಜೆರವರು ಹೇಳಿದರು.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ಆಗಮನ ನಿರೀಕ್ಷೆ:
ಶ್ರೀ ಕ್ಷೇತ್ರದಲ್ಲಿ ಈಗಾಗಲೇ ಶಾಶ್ವತ ನರ್ತನ ಚಾವಡಿ, ಪಾಕಸಾಲೆ ಹಾಗೂ ಶೌಚಾಲಯ ಕಾರ್ಯಗಳು ಮುಗಿದಿದ್ದು ನೇಮೋತ್ಸವ ದಿನದಂದು ಉದ್ಘಾಟನೆಗೊಳ್ಳಲಿದೆ ಮಾತ್ರವಲ್ಲದೆ ಶ್ರೀ ಕ್ಷೇತ್ರವು ರಾತ್ರಿ ಹೊತ್ತು ಬಣ್ಣಬಣ್ಣದ ಲೈಟಿಂಗ್ಸ್ ಹಾಗೂ ಬಂಟಿಂಗ್ಸ್‌ಗಳಿಂದ ಅಲಂಕೃತಗೊಳ್ಳುವ ಮೂಲಕ ಕಂಗೊಳಿಸುತ್ತಿದೆ. ಶ್ರೀ ಕ್ಷೇತ್ರಕ್ಕೆ ಸಂಬಂಧಪಟ್ಟ ಸ್ಥಳೀಯರು ಅಲ್ಲದೆ ಆಸುಪಾಸಿನ ಭಕ್ತರು ಶ್ರೀ ಕ್ಷೇತ್ರದ ಮಹಿಮೆಯನ್ನು ಎಲ್ಲೆಡೆ ಪಸರಿಸಲು ಕೈಜೋಡಿಸುತ್ತಿದ್ದಾರೆ. ಪುರಾತನ ಕಾಲದ ಇಲ್ಲಿನ ಶ್ರೀ ಕೊರಗಜ್ಜ ದೈವಕ್ಕೆ ವಿಶೇಷ ಶಕ್ತಿಯಿದೆ ಎಂದು ಈ ಭಾಗಕ್ಕೆ ಭೇಟಿ ನೀಡಿದ ಭಕ್ತರು ಹೇಳಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಮೂಲ ಶಿಲಾ ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವಕ್ಕೆ ಸುಮಾರು ಐದು ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಮೂಲಕ ಶ್ರೀ ಕ್ಷೇತ್ರದ ಮಹಿಮೆಯನ್ನು ಎಲ್ಲೆಡೆ ಪಸರಿಸಲಾಗಿತ್ತು. ಈ ಬಾರಿಯೂ ಅಂಥಹುದೇ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೇವೆ ಶ್ರೀ ಕ್ಷೇತ್ರದ ಗೌರವಾಧ್ಯಕ್ಷರಾದ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರು `ಸುದ್ದಿ’ಗೆ ತಿಳಿಸಿದ್ದಾರೆ.

ಇಂದು ನೇಮೋತ್ಸವ...
ಮಧ್ಯಾಹ್ನ ೧ ಗಂಟೆಯಿಂದ ಭಜನಾ ಕಾರ್ಯಕ್ರಮ, ಸಂಜೆ ೬.೩೦ ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ ೭.೩೦ ಗಂಟೆಗೆ ಕೊರಗಜ್ಜ ದೈವದ ಭಂಡಾರ ತೆಗೆಯುವುದು ಹಾಗೂ ಶ್ರೀ ದೈವಕ್ಕೆ ಎಣ್ಣೆ ಕೊಡುವುದು, ರಾತ್ರಿ ೮.೩೦ಕ್ಕೆ ಶ್ರೀ ಕೊರಗಜ್ಜ ದೈವದ ನೇಮೋತ್ಸವ ಬಳಿಕ ಅನ್ನಸಂತರ್ಪಣೆ ಜರಗಲಿದೆ. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶಾಸಕ ಸಂಜೀವ ಮಠಂದೂರುರವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಸಭಾಧ್ಯಕ್ಷತೆಯನ್ನು ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಪುತ್ತೂರು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ತಾ.ಪಂ ಸಾಮಾಜಿಕ ನ್ಯಾಯ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಕ್ಯಾನ್ಸರ್ ತಜ್ಞ ಡಾ.ರಘು ಬೆಳ್ಳಿಪ್ಪಾಡಿ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಸ್ವಾಗತ ಮತ್ತು ಪ್ರಸ್ತಾವನೆಯನ್ನು ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರು ನಿರ್ವಹಿಸಲಿದ್ದಾರೆ.

LEAVE A REPLY

Please enter your comment!
Please enter your name here